ದಾಬಸ್‍ಪೇಟೆ: ಮಹಿಳೆಯ ಮಾಂಗಲ್ಯಸರ ಕಿತ್ತುಕೊಳ್ಳುವ ವೇಳೆ ಸಿಕ್ಕಿಬಿದ್ದು, ಧರ್ಮದೇಟು ತಿಂದು ಆ್ಯಂಬುಲೆನ್ಸ್‌ನಲ್ಲಿ ಹೋಗುವಾಗ ಅದರ ಗ್ಲಾಸ್ ಹೊಡೆದು ಸಿಬ್ಬಂದಿ ಮೇಲೆ ಹಲ್ಲೆ ಮಾಡಿ ಪರಾರಿಯಾದ ಘಟನೆ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ

ದಾಬಸ್‍ಪೇಟೆ: ಮಹಿಳೆಯ ಮಾಂಗಲ್ಯಸರ ಕಿತ್ತುಕೊಳ್ಳುವ ವೇಳೆ ಸಿಕ್ಕಿಬಿದ್ದು, ಧರ್ಮದೇಟು ತಿಂದು ಆ್ಯಂಬುಲೆನ್ಸ್‌ನಲ್ಲಿ ಹೋಗುವಾಗ ಅದರ ಗ್ಲಾಸ್ ಹೊಡೆದು ಸಿಬ್ಬಂದಿ ಮೇಲೆ ಹಲ್ಲೆ ಮಾಡಿ ಪರಾರಿಯಾದ ಘಟನೆ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ತ್ಯಾಮಗೊಂಡ್ಲು ಹೋಬಳಿಯ ಮಹಿಮಾಪುರದ ಸಮೀಪ ಭಾನುವಾರ ಸಂಜೆ ಮಹಿಳೆಯೊಬ್ಬರು ಕೆಲಸ ಮುಗಿಸಿಕೊಂಡು ಮನೆಗೆ ಹೋಗುವಾಗ, ಮಾಗಡಿ ತಾಲೂಕಿನ ಆಲೂರು ಮೂಲದ ರೌಡಿ ಶೀಟರ್ ಬ್ಯಾಟರಿ ಜಯಂತ್(28) ಹಾಗೂ ಆತನ ಸ್ನೇಹಿತ ಬಿಡದಿ ಮೂಲದ ಯತೀಶ್(28) ಬೈಕ್‌ನಲ್ಲಿ ಬಂದು ಮಹಿಳೆ ಮೇಲೆ ಹಲ್ಲೆ ಮಾಡಿ ಸರ ಕಿತ್ತುಕೊಳ್ಳಲು ಯತ್ನಿಸಿದ್ದು, ಮಹಿಳೆ ಕಿರುಚುತ್ತಿದ್ದಂತೆ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದಾರೆ. ಸ್ಥಳೀಯರು ಇಬ್ಬರನ್ನು ಹಿಂಬಾಲಿಸಿ ಹಿಡಿದು ಸುತ್ತಲಿದ್ದವರೆಲ್ಲಾ ಸೇರಿ ಧರ್ಮದೇಟು ನೀಡಿದ್ದಾರೆ. ಇಬ್ಬರು ಅಸ್ವಸ್ಥಗೊಂಡಂತೆ ಹೈಡ್ರಾಮಾ ಮಾಡಿದ್ದಲ್ಲದೆ ರಸ್ತೆಯಲ್ಲಿ ಸತ್ತವರಂತೆ ಬಿದ್ದು, ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ನೆಲಮಂಗಲ ಗ್ರಾಮಾಂತರ ಪೊಲೀಸರು ಆ್ಯಂಬುಲೆನ್ಸ್‌ನಲ್ಲಿ ಜಯಂತ್ ಹಾಗೂ ಯತೀಶ್‌ನನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಕುಲುವನಹಳ್ಳಿ ಸಮೀಪ ಆ್ಯಂಬುಲೆನ್ಸ್‌ ಸಿಬ್ಬಂದಿ ಮೇಲೆ ಹಲ್ಲೆ ಮಾಡಿ, ಗ್ಲಾಸ್ ಹೊಡೆದು ಪರಾರಿಯಾಗಿದ್ದಾರೆ.

ಆರೋಪಿ ಜಯಂತ್ ಮೇಲೆ ಬೆಂಗಳೂರು ಸೇರಿದಂತೆ ರಾಜ್ಯದ ಹಲ ಜಿಲ್ಲೆಗಳಲ್ಲಿ 50ಕ್ಕೂ ಪ್ರಕರಣಗಳಿದ್ದು, ಅದಲ್ಲದೆ ಎರಡು ಬಾರಿ ನೆಲಮಂಗಲ ಉಪವಿಭಾಗದ ಪೊಲೀಸರಿಂದ ಗುಂಡೇಟು ತಿಂದು, ಜೈಲಿಗೂ ಹೋಗಿ ಬಂದಿದ್ದಾನೆ. ಯತೀಶ್ ಮೇಲೂ ಹಲ ಪ್ರಕರಣಗಳಿವೆ. ಹಲ್ಲೆಗೊಳಗಾದ ಮಹಿಳೆ ಪ್ರಾಣಾಪಾಯದಿಂದ ಪಾರಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ದೂರು ದಾಖಲಿಸಿದ್ದಾರೆ. ನೆಲಮಂಗಲ ಗ್ರಾಮಾಂತರ ಪೊಲೀಸರು ಕಳ್ಳರ ಬಂಧನಕ್ಕೆ ವಿಶೇಷ ತಂಡ ರಚಿಸಿ ಬಲೆ ಬೀಸಿದ್ದಾರೆ.

ಪೋಟೋ 8 : ಸಾರ್ವಜನಿಕರಿಂದ ಥಳಿತಕ್ಕೊಳಗಾದ ಜಯಂತ್ ಹಾಗೂ ಯತೀಶ್