ಕನ್ನಡಪ್ರಭ ವಾರ್ತೆ, ತುಮಕೂರುಪರಿಶ್ರಮದ ದುಡಿಮೆ ಮಾಡುತ್ತಾ ಸ್ವಾಭಿಮಾನದಿಂದ ಬದುಕುತ್ತಿರುವ ಶ್ರಮಜೀವಿ ತಿಗಳ ಸಮಾಜದವರು ಇತರರಿಗೆ ಮಾದರಿಯಾಗಿದ್ದಾರೆ. ತಿಗಳ ಜನಾಂಗದವರು ಇತ್ತೀಚೆಗೆ ತಮ್ಮ ಮಕ್ಕಳಿಗೆ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿರುವುದು ಒಳ್ಳೆಯ ಬೆಳವಣಿಗೆ. ಇನ್ನೂ ಹೆಚ್ಚಿನ ಒತ್ತು ನೀಡಿ ಮಕ್ಕಳು ಉನ್ನತ ಶಿಕ್ಷಣ ಪಡೆಯಲು ಪ್ರೋತ್ಸಾಹಿಸಬೇಕು ಎಂದು ಶಾಸಕ ಜಿ.ಬಿ. ಜ್ಯೋತಿಗಣೇಶ್ ಹೇಳಿದರು.ಶನಿವಾರ ನಗರದ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಅಗ್ನಿಬನ್ನಿರಾಯಸ್ವಾಮಿ ಜಯಂತಿ ಆಚರಣೆ ಅಂಗವಾಗಿ ಅಗ್ನಿಬನ್ನಿರಾಯಸ್ವಾಮಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿ ಮಾತನಾಡಿದ ಶಾಸಕರು, ಶಿಕ್ಷಣದಿಂದ ಆರ್ಥಿಕ ಸಬಲತೆ, ಸಾಮಾಜಿಕ ಮಾನ್ಯತೆ ಹೆಚ್ಚಾಗುತ್ತದೆ ಎಂದರು.ತಿಗಳ ಸಮಾಜದವರು ಜೊತೆಗಿದ್ದು ತಮಗೆ ಶಕ್ತಿ ತುಂಬಿದ್ದಾರೆ. ತಾವೂ ಸಹ ಅವರ ಶ್ರೇಯೋಭಿವೃದ್ಧಿಗೆ ಶ್ರಮಿಸುವುದಾಗಿ ಹೇಳಿದ ಶಾಸಕರು, ಅಗ್ನಿಬನ್ನಿರಾಯಸ್ವಾಮಿ ಜಯಂತಿ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಮಾಜಮುಖಿ ಕೆಲಸ ಮಾಡುತ್ತಿರುವ ತಿಗಳ ಸಮಾಜದ ಸಾಧಕರನ್ನು ಸನ್ಮಾನಿಸಿ ಗೌರವಿಸುತ್ತಿರುವುದು ಒಳ್ಳೆಯ ಸಂಪ್ರದಾಯ. ಇದರಿಂದ ಮತ್ತಷ್ಟು ಜನರಿಗೆ ಪ್ರೇರಣೆಯಾಗುತ್ತದೆ ಎಂದು ತಿಳಿಸಿದರು.ತಿಗಳ ಸಮಾಜ ಮುಖಂಡ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಹನುಮಂತಪುರ ಹನುಂತರಾಜು ಮಾತನಾಡಿ, ನಮ್ಮ ಸಮಾಜಕ್ಕೆ ಯಾವ ಪಕ್ಷ ನೀಡಿರುವುದ್ದಕ್ಕಿಂತ ಹೆಚ್ಚಿನ ಸಹಕಾರವನ್ನು ಬಿಜೆಪಿ ನೀಡಿದೆ. ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದಾಗ ಸರ್ಕಾರದಿಂದ ಅಗ್ನಿಬನ್ನಿರಾಯಸ್ವಾಮಿ ಜಯಂತಿ ಆಚರಣೆಗೆ ಅವಕಾಶ ನೀಡಿದರು. ತಿಗಳರ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿದರು. ತುಮಕೂರು ವಿಶ್ವವಿದ್ಯಾಲಯದಲ್ಲಿ ತಿಗಳ ಕುಲಶಾಸ್ತ್ರ ಅಧ್ಯಯನಪೀಠ ಸ್ಥಾಪನೆಗೆ ಕಾರಣರಾದರು. ಶಾಸಕ ಜ್ಯೋತಿಗಣೇಶ್ ಅವರು ತಿಗಳ ಸಮಾಜದ ಶೇಯಸ್ಸಿಗಾಗಿ ಹೆಚ್ಚಿನ ಪ್ರಮಾಣದಲ್ಲಿ ಶಾಸಕರ ಅನುದಾನ ನೀಡಿ ಸಹಕರಿಸಿದ್ದಾರೆ ಎಂದರು.ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಏಕಲವ್ಯ ಪ್ರಶಸ್ತಿ ಪುರಸ್ಕೃತ ವಾಲಿಬಾಲ್ ಆಟಗಾರ ಟಿ.ಆರ್. ರವೀಂದ್ರ ಸಂಗೀತ ನಿರ್ದೇಶಕ ಸಂಗೀತ್ ಶ್ರೀನಿವಾಸ್, ಸಮಾಜ ಸೇವೆಗಾಗಿ ಯಶೋಧಮ್ಮ, ಶಿಲ್ಪಕಲಾ ಮಂದಿರದ ಹಿರಿಯ ಕಲಾವಿದ ಚಂದ್ರಶೇಖರ ಬಾಬು, ತುಮಕೂರು ವಿವಿಯಲ್ಲಿ ಚಿನ್ನದ ಪದಕ ಪಡೆದ ಗಿರೀಶ್ ಅವರನ್ನು ಶಾಸಕ ಜ್ಯೋತಿಗಣೇಶ್ ಸನ್ಮಾನಿಸಿ ಗೌರವಿಸಿದರು.ಬಿಜೆಪಿಯ ಹಿರಿಯ ಕಾರ್ಯಕರ್ತರಾದ ರಾಮಾಂಜನಪ್ಪ, ಟೈಲರ್ ಗಂಗಣ್ಣ, ಟಿ.ಡಿ. ಕೃಷ್ಣಮೂರ್ತಿ, ಪ್ರೇಮಲತಾ, ಟೊಮೆಟೊ ವಾಸು ಅವರನ್ನು ಶಾಸಕರು ಸನ್ಮಾನಿಸಿದರು.ನಗರಸಭೆ ಮಾಜಿ ಅಧ್ಯಕ್ಷೆ ಎಲ್. ಕಮಲಮ್ಮ, ನಗರ ಬಿಜೆಪಿ ನಿಕಟಪೂರ್ವ ಅಧ್ಯಕ್ಷ ಟಿ.ಎಚ್. ಹನುಮಂತರಾಜು, ಮುಖಂಡರಾದ ಅಣೆತೋಟ ಶ್ರೀನಿವಾಸ್, ಭರತ್, ಹರಿಪ್ರಸಾದ್, ಉಮೇಶ್, ಶಿವಕುಮಾರ್, ವೆಂಕಟೇಶ್, ಕೇಬಲ್ ಕುಮಾರ್ ಮೊದಲಾದವರು ಭಾಗವಹಿಸಿದ್ದರು.