ಸಾರಾಂಶ
ಅಂಕೋಲಾ: ಕೃಷಿ ಹವ್ಯಕರ ಮೂಲ ಬೇರು. ಅದನ್ನು ಗಟ್ಟಿಗೊಳಿಸುವ ಬಗ್ಗೆ ಚಿಂತನೆ ನಡೆಸಬೇಕಿದೆ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಉಪಾಧ್ಯಕ್ಷ ಶಶಿಭೂಷಣ ಹೆಗಡೆ ಹೇಳಿದರು.
ಅಂಕೋಲಾ ತಾಲೂಕು ಹವ್ಯಕ ಸಂಘಟಿತ ಸಾಂಸ್ಕೃತಿಕ ಸಂಘದಿಂದ ಶನಿವಾರ ತಾಲೂಕಿನ ಕಟ್ಟಿನ ಹಕ್ಕಲ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಆಯೋಜಿಸಿದ್ದ ಸ್ನೇಹ ಸಮ್ಮೇಳನ, ಪ್ರತಿಭಾ ಪುರಸ್ಕಾರ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ಕೋವಿಡ್ ಕಾಲಘಟ್ಟದಲ್ಲಿ ವರ್ಕ್ ಫ್ರಂ ಹೋಂ ಸಂಸ್ಕೃತಿ ಆರಂಭವಾಯಿತು.ಈಗಲೂ ಅದೇ ಸಂಸ್ಕೃತಿ ಮುಂದುವರಿದಲ್ಲಿ ಕೃಷಿಯ ಜತೆಗೆ ಉದ್ಯೋಗವೂ ಮುಂದುವರಿಯುತ್ತದೆ ಎಂದು ಸಲಹೆ ನೀಡಿದರು.
ರಾಮಚಂದ್ರಾಪುರ ಮಠದ ಹವ್ಯಕ ಮಹಾ ಮಂಡಲದ ಮೋಹನ ಹೆಗಡೆ ಹಾಗೂ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ವಿ.ಎನ್. ಹೆಗಡೆ ಬೊಮ್ಮನಹಳ್ಳಿ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು. ಅಧ್ಯಕ್ಷತೆ ವಹಿಸಿದ ಅಖಿಲ ಹವ್ಯಕ ಮಹಾಸಭಾ ಉಪಾಧ್ಯಕ್ಷ ಶ್ರೀಧರ ಭಟ್ ಕೆಕ್ಕಾರ, ಆಡಳಿತಾತ್ಮಕ ಸೇವೆಯಲ್ಲಿ ಹವ್ಯಕರು ಹಿಂದಿದ್ದಾರೆ. ಆ ಕ್ಷೇತ್ರದಲ್ಲೂ ಸಾಧನೆ ಮಾಡಬೇಕು ಎಂದರು.ಹವ್ಯಕ ಮಹಾ ಸಭಾ ಕಾರ್ಯದರ್ಶಿ ಪ್ರಶಾಂತ ಭಟ್ ಮಲವಳ್ಳಿ, ಹವ್ಯಾಸಿ ಬರಹಗಾರ್ತಿ ಪ್ರಿಯಾ ಎಂ.ಭಟ್ಟ ಕಲ್ಲಬ್ಬೆ ಮಾತನಾಡಿದರು.
ಪ್ರತಿಭಾ ಪುರಸ್ಕಾರ:ಶಿಕ್ಷಣದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳು ಹಾಗೂ ಪಾಲಕರನ್ನು ಸನ್ಮಾನಿಸಲಾಯಿತು. ಆರ್ಥಿಕವಾಗಿ ಸಬಲರಲ್ಲದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಹಾಯಧನ ನೀಡಲಾಯಿತು. ಅಲ್ಲದೆ, ತೇಜಸ್ವಿ ರಾಮಕೃಷ್ಣ ಗಾಂವಕರ್, ಪ್ರಚೇತ ಭಟ್ ಸುಂಕಸಾಳ ಎಂಬ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹವ್ಯಕ ಕಣ್ಮಣಿ, ಡಾ. ಅಶೋಕ ಕುಮಾರ ಎ. ಅವರಿಗೆ ಗಣಿತ ಸೌರಭ, ಶತಾಯುಶಿ ವಿಶ್ವೇಶ್ವರ ಹೆಗಡೆ ಹಳವಳ್ಳಿ ಅವರಿಗೆ ಯಕ್ಷ ಸೌರಭ, ಗೋವಿಂದ ಗಣಪಯ್ಯ ಹೆಗಡೆ ಕರಿಕಲ್ ಅವರಿಗೆ ಕೃಷಿ ಸೌರಭ, ಶಿವರಾಮ ಭಾಗವತ ಅವರಿಗೆ ಸಂಗೀತ ಸೌರಭ, ಡಾ. ವಿಶ್ವನಾಥ ಸುಂಕಸಾಳ ಅವರಿಗೆ ಶಿಕ್ಷಣ ಸೌರಭ, ಸಿಂಧು ವೈದ್ಯ ಅವರಿಗೆ ನಾಟ್ಯ ಸೌರಭ, ಕೃಷಿಕ ವರರನ್ನು ವರಿಸಿದ ಸ್ವಾತಿ ಗಜಾನನ ಭಟ್, ರಮ್ಯಾ ಶಶಾಂಕ ಹೆಗಡೆ ಅವರಿಗೆ ಹವ್ಯಕ ಪಾರಿಜಾತೆ, ರಾಮಚಂದ್ರ ಗೋವಿಂದ ಭಟ್ ಕೋಟೆಮನೆ ಅವರಿಗೆ ಪುರೋಹಿತ ಪಾರಂಗತ, 29 ಸದಸ್ಯರಿರುವ ಶಿವರಾಮ ಗೋವಿಂದ ಭಟ್ ಕುಂಟಗಣಿ ಕುಟುಂಬಕ್ಕೆ, ಆದರ್ಶ ಕುಟುಂಬ, ಸಂಘದ ಉಪಾಧ್ಯಕ್ಷ ವಿ.ಎನ್. ಭಟ್ ಅವರಿಗೆ ವಿಶೇಷ ಪುರಸ್ಕಾರ ನೀಡಿ ಗೌರವಿಸಲಾಯಿತು.
ಎಂ.ಎನ್. ಹೆಗಡೆ ಹಬ್ಬಣಮನೆ ಅವರಿಗೆ ಹವ್ಯಕ ಅಗ್ರಣಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಂಘದ ಅಧ್ಯಕ್ಷ ಎಂ.ಪಿ. ಭಟ್ಟ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಘವೇಂದ್ರ ಭಟ್ಟ ಸುಂಕಸಾಳ ಸ್ವಾಗತಿಸಿದರು. ವಿಶ್ವನಾಥ ಸುಂಕಸಾಳ ಕಾರ್ಯಕ್ರಮ ನಿರೂಪಿಸಿದರು. ವಿ.ಬಿ. ಭಟ್ಟ ವಂದಿಸಿದರು.ಸಭಾ ಕಾರ್ಯಕ್ರಮಕ್ಕೂ ಪೂರ್ವದಲ್ಲಿ ಗಣ ಹವನ, ಸತ್ಯನಾರಾಯಣ ಪೂಜೆಗಳು ಜರುಗಿದವು. ಮಧ್ಯಾಹ್ನದ ನಂತರ ನೃತ್ಯ, ಸಂಗೀತ, ಯಕ್ಷಗಾನ ಮುಂತಾದ ಸಾಂಸ್ಕೃತಿಕ ಕಾಯಕ್ರಮಗಳು ಗಮನ ಸೆಳೆದವು.