ಪಶ್ಚಿಮ ಘಟ್ಟ ಜೀವವೈವಿಧ್ಯ ಅರಣ್ಯ ಪರಿಸರದ ಅಧ್ಯಯನಗಳ ಕುರಿತು ಕಾರ್ಯಾಗಾರ

ಕನ್ನಡಪ್ರಭ ವಾರ್ತೆ ಯಲ್ಲಾಪುರ

ಪಶ್ಚಿಮ ಘಟ್ಟದಲ್ಲಿ ಅಪಾರ ವನಸ್ಪತಿ, ಪರಿಸರಕ್ಕೆ ಪೂರಕವಾದ ಗಿಡ-ಮರಗಳ ಸಮೃದ್ಧಿಯ ವೈಶಿಷ್ಟ್ಯವನ್ನು ಮುಂದಿನ ಪೀಳಿಗೆಗಾಗಿ ಉಳಿಸಿಕೊಂಡು ಹೋಗುವಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದು ಜೀವವೈವಿಧ್ಯ ಮಂಡಳಿಯ ಅಧ್ಯಕ್ಷ ವಡ್ನಾಳ ಜಗದೀಶ ಹೇಳಿದರು.

ಬುಧವಾರ ಪಟ್ಟಣದ ತಾಪಂ ಸಭಾಭವನದಲ್ಲಿ ಅಂತಾರಾಷ್ಟ್ರೀಯ ಜೀವವೈವಿಧ್ಯ ದಿನಾಚರಣೆಯ ಪ್ರಯುಕ್ತ ಪಶ್ಚಿಮ ಘಟ್ಟ ಜೀವವೈವಿಧ್ಯ ಅರಣ್ಯ ಪರಿಸರದ ಅಧ್ಯಯನಗಳ ಕುರಿತು ಹಮ್ಮಿಕೊಂಡಿದ್ದ ಕಾರ್ಯಾಗಾರ, ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನಮ್ಮ ಭಾಗದ ಔಷಧ ಸಸ್ಯಗಳು ಅವ್ಯಾಹತವಾಗಿ ಕದ್ದುಮುಚ್ಚಿ ದೊಡ್ಡ ಔಷಧ ಕಾರ್ಖಾನೆಗಳಿಗೆ ಹೋಗುತ್ತಿವೆ. ಅದನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಲು ಗ್ರಾಪಂಗಳು, ಸಾರ್ವಜನಿಕರು ಸಹಕರಿಸಬೇಕು. ಅಳಿವಿನಂಚಿನಲ್ಲಿರುವ ಔಷಧಿ ಸಸ್ಯಗಳು, ಪ್ರಾಣಿ, ಕೀಟ ಪ್ರಬೇಧಗಳನ್ನು ಗುರುತಿಸಿ, ಸಂರಕ್ಷಿಸಲು ಮಂಡಳಿ ಪ್ರಯತ್ನಿಸುತ್ತಿದೆ. ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಜೀವವೈವಿಧ್ಯ ವನ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ ಎಂದರು.


ಅಧ್ಯಕ್ಷತೆ ವಹಿಸಿದ್ದ ಶಾಸಕ ಶಿವರಾಮ ಹೆಬ್ಬಾರ ಮಾತನಾಡಿ, ಜಿಲ್ಲೆಯಲ್ಲಿ ಪರಿಸರದ ಉಳಿವಿಗಾಗಿ ಅನೇಕ ಹೋರಾಟಗಳು ನಡೆದಿವೆ. ಕಾಲಕಾಲಕ್ಕೆ ಬಂದ ಎಲ್ಲ ಸರ್ಕಾರಗಳು ಜನರ ಪ್ರತಿಭಟನೆಗಳ ಮೀರಿಯೂ ಜಿಲ್ಲೆಯಲ್ಲಿ ಹಲವು ದೊಡ್ಡ ಯೋಜನೆಗಳನ್ನು ಜಾರಿಗೆ ತಂದಿವೆ. ತ್ಯಾಗಕ್ಕೆ ಮತ್ತೊಂದು ಹೆಸರೇ ಉತ್ತರಕನ್ನಡ ಜಿಲ್ಲೆ. ರಾಜ್ಯ, ರಾಷ್ಟ್ರದ ಅಭಿವೃದ್ಧಿಗಾಗಿ ಜಿಲ್ಲೆಯ ಜನ ಮಾಡಿದ ತ್ಯಾಗಕ್ಕೆ ತಕ್ಕ ಪ್ರತಿಫಲ ಸಿಕ್ಕಲೇ ಇಲ್ಲ. ಈಗ ಮತ್ತೆ ಮುನ್ನೆಲೆಗೆ ಬಂದ ಬೇಡ್ತಿ-ಅಘನಾಶಿನಿ ನದಿ ಜೋಡಣೆ ಯೋಜನೆಯ ವಿರೋಧಿ ಹೋರಾಟ ಸ್ವರ್ಣವಲ್ಲೀ ಶ್ರೀಗಳ ನೇತೃತ್ವದಲ್ಲಿ ಯಶಸ್ಸು ಕಾಣಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಜಿಲ್ಲೆಯ ಅರಣ್ಯ ಕೇವಲ ಅರಣ್ಯ ಇಲಾಖೆಗೆ ಗುತ್ತಿಗೆಯಾಗಿಲ್ಲ. ಅರಣ್ಯ ಬೆಳೆಸುವುದು, ಉಳಿಸುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯ. ಆ ಕಾರ್ಯವನ್ನು ಜಿಲ್ಲೆಯ ಜನ ಮೊದಲಿನಿಂದಲೂ ಮಾಡಿಕೊಂಡು ಬಂದಿದ್ದಾರೆ. ವಿವಿಧ ಯೋಜನೆಗಳನ್ನು ಜಿಲ್ಲೆಗೆ ತರುವ ಮೂಲಕ ಪರಿಸರದ ಮೇಲೆ ಮಾಡುವ ಅತ್ಯಾಚಾರವನ್ನು ತಡೆಯಲು ಎಲ್ಲರೂ ಒಟ್ಟಾಗಿ ಶ್ರಮಿಸಬೇಕೆಂದರು.

ಜೀವವೈವಿಧ್ಯ ಮಂಡಳಿಯ ನಿಕಟಪೂರ್ವ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಮಾತನಾಡಿ, ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿ ಜೀವವೈವಿಧ್ಯಗಳ ಕುರಿತು ನಡೆದ ವೈಜ್ಞಾನಿಕ ಅಧ್ಯಯನಗಳ ಅವಲೋಕನ ಮಾಡಿದರು. ಎಲ್ಲ ವರದಿ ಅನುಷ್ಠಾನಗೊಳಿಸಲು ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದರು.

ನಾಟಿವೈದ್ಯರಾದ ನಾಗೇಂದ್ರ ಹೆಗಡೆ, ದತ್ತಾತ್ರೇಯ ದೇವಿಗುಡ್ಡೆ, ಸಾವಿತ್ರಿ ಹೆಗಡೆ, ಪ್ರಕಾಶ ನಾಯ್ಕ, ನಾರಾಯಣ ಭಟ್ಟ ಮರಿಯನಪಾಲ, ಕೃಷ್ಣ ಮರಾಠಿ ಲಾಲಗುಳಿ, ಲಕ್ಷ್ಮಣ ಮರಾಠಿ, ತೆರೆಜಾ, ಶಂಕರ ಭಟ್ಟ ವಜ್ರಳ್ಳಿ, ಪುಟ್ಟು ಗೌಡ, ಈರಪ್ಪ ಕಳಸೂರಕರ್, ಲಕ್ಷ್ಮೀ ಸಿದ್ದಿ; ಜೇನು ಸಾಕಣೆಯಲ್ಲಿ ಸಾಧನೆ ಮಾಡಿದ ಪರಮೇಶ್ವರ ಗಾಂವ್ಕರ ; ಪುಷ್ಪಕೃಷಿಯಲ್ಲಿ ಸಾಧನೆ ಮಾಡಿದ ರಾಜೀವ ಹೆಗಡೆ; ಸುಸ್ಥಿರ ಜೇನು ಕೊಯ್ಲು ಮಾಡುವ ರಾಮಾ ಮರಾಠಿ ಮತ್ತು ಮಾದರಿ ಶಾಲಾ ವನ ನಿರ್ಮಾಣ ಮಾಡಿದ ಭರತನಹಳ್ಳಿ ಹಾಗೂ ಬಂಕೊಳ್ಳಿ ಶಾಲೆಗಳನ್ನು ಗೌರವಿಸಲಾಯಿತು.

ಸಿಸಿಎಫ್ ಟಿ.ಹೀರಾಲಾಲ್, ಡಿಸಿಎಫ್ ಅಜೀಜ್ ಶೇಖ್, ತಾಪಂ ಆಡಳಿತಾಧಿಕಾರಿ ಕೆ.ಎಚ್. ಪಾಂಡು ಉಪಸ್ಥಿತರಿದ್ದರು. ಶ್ರೀಲತಾ ರಾಜೀವ ಪ್ರಾರ್ಥಿಸಿದರು. ತಾಪಂ ಇಒ ರಾಜೇಶ ಧನವಾಡಕರ್ ಸ್ವಾಗತಿಸಿದರು. ಕೆ.ಎಸ್. ಭಟ್ಟ ಆನಗೋಡ ನಿರ್ವಹಿಸಿದರು. ನರಸಿಂಹ ಸಾತೊಡ್ಡಿ ವಂದಿಸಿದರು.

ರಾಜ್ಯದ ವಿವಿಧೆಡೆಯಿಂದ ಬಂದ ವಿಜ್ಞಾನಿಗಳು ಪಶ್ಚಿಮ ಘಟ್ಟಗಳ ಕುರಿತಾದ ಅಧ್ಯಯನ ಕುರಿತು ವಿಷಯ ಮಂಡಿಸಿದರು. ಕಾರ್ಯಕ್ರಮದ ಪ್ರಯುಕ್ತ ವಿವಿಧ ಸ್ವಸಹಾಯ ಸಂಘಗಳಿಂದ ಕರಕುಶಲ ವಸ್ತುಗಳು, ವಿವಿಧ ಬಗೆಯ ಖಾದ್ಯಗಳ ಪ್ರದರ್ಶನ ಹಾಗೂ ಮಾರಾಟ ನಡೆಯಿತು.