ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಹೊರಗೆ ಅಥವಾ ಒಳಗೆ 20 ಎಕರೆ ಪ್ರದೇಶ ಗುರುತಿಸಿ ಅಶೋಕಪುರಂನಲ್ಲಿ ವಾಸಿಸುತ್ತಿರುವ ಜನರಿಗೆ ಪ್ರತ್ಯೇಕ ಟೌನ್ ಶಿಪ್ ನಿರ್ಮಿಸುವ ಸಂಬಂಧ ತಹಸೀಲ್ದಾರ್ ಮತ್ತು ಎಂಡಿಎ ಆಯುಕ್ತರ ಜತೆ ಚರ್ಚಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ತಿಳಿಸಿದರು.ನಗರದ ಅಶೋಕಪುರಂ 13ನೇ ಕ್ರಾಸ್ ನಲ್ಲಿ ವಿಶ್ವಮಾನವ ಡಾ.ಬಿ.ಆರ್. ಅಂಬೇಡ್ಕರ್ ಭವನ ಎದುರು ಆಯೋಜಿಸಿದ್ದ ನೂತನ ಸಂಘದ ಉದ್ಘಾಟನೆ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಅಶೋಕಪುರಂ ಪ್ರದೇಶದ ಜನರು ಶ್ರಮ ಜೀವಿಗಳು. ಅಂದಿನ ಜನಸಂಖ್ಯೆಗೆ ತಕ್ಕಂತೆ ಮನೆಗಳು ಇದ್ದವು. ಈಗ ಜನಸಂಖ್ಯೆ ಹೆಚ್ಚಿರುವ ಕಾರಣ ಮನೆಗಳಲ್ಲಿ ವಾಸ ಮಾಡಲು ತೊಂದರೆಯಾಗಿದೆ. ಹಾಗಾಗಿ, ಭೂಮಿ ಇದ್ದರೆ ಟೌನ್ ಶಿಪ್ ನಿರ್ಮಿಸಿ ಅನುಕೂಲ ಮಾಡಿಕೊಡಲಾಗುವುದು ಎಂದು ಹೇಳಿದರು.ನಗರದ ಹೃದಯ ಭಾಗದಲ್ಲಿ ಸಿಕ್ಕರೆ ಹುಡುಕಲಾಗುವುದು. ಇಲ್ಲದಿದ್ದರೆ ಹೊರ ವಲಯದಲ್ಲಿ ಕಂದಾಯ ಭೂಮಿ ಇದ್ದರೆ ಮಾಹಿತಿ ಪಡೆಯುತ್ತೇನೆ. ಅಶೋಕಪುರಂ ಬಡಾವಣೆಯ ಅಭಿವೃದ್ಧಿ ವಿಚಾರ ಬಂದಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಲ್ಲ ಎನ್ನುವುದಿಲ್ಲ. ಅದಕ್ಕಾಗಿ ಮುಂದೆಯೂ ಅನುದಾನ ಕೊಡಲು ಹಿಂಜರಿಯುವುದಿಲ್ಲ. ನಮಗೆ ಅಂಬೇಡ್ಕರ್ ಶಕ್ತಿ ಕೊಟ್ಟಿದ್ದಾರೆ. ಅದರಂತೆ ಕೆಲಸ ಮಾಡುತ್ತೇನೆ ಎಂದರು.
ಅಶೋಕಪುರಂನ ನಿವಾಸಿಗಳ ಮನೆಯ ವಿದ್ಯುತ್ ಬಿಲ್ ಹೆಚ್ಚು ಬಂದಿದ್ದರಿಂದ ಒಂದೇ ಬಾರಿ ಎಸ್.ಇ.ಪಿ- ಟಿ.ಎಸ್.ಪಿ ಅನುದಾನದಿಂದ ಮನ್ನಾ ಮಾಡಿಸಿಕೊಡಲಾಗಿದೆ. ಇದರಿಂದಾಗಿ ಇಂದು ಗೃಹಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ಪಡೆಯುತ್ತಿದ್ದಾರೆ ಎಂದರು.ಅಶೋಕಪುರಂ ಅಂದರೆ ನಮಗೆ ಅತಿಯಾದ ಪ್ರೀತಿ, ಗೌರವ. ಮೈಸೂರು, ಕರ್ನಾಟಕ, ದೇಶಕ್ಕೆ ರಕ್ಷಣಾ ಕವಚ ಅಂಬೇಡ್ಕರ್ ಸಂವಿಧಾನ ಆಗಿದೆ. ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದರೆ ಉಳಿಯದೆ ಸುಟ್ಟು ಹೋಗುತ್ತಾರೆ ಎಂದರು.
ಇಂದು ಜನರಿಗೆ ಮುಖ್ಯವಾಗಿ ಬೇಕಿರುವುದು ಅನ್ನ, ಆರೋಗ್ಯ ಮತ್ತು ಸಮಾನತೆ. ಅದಕ್ಕೆ ಸಂವಿಧಾನದಲ್ಲಿ ಅವಕಾಶ ಮಾಡಿಕೊಟ್ಟಿದೆ. ಜೀವನದಲ್ಲಿ ಬೆಳಕು ಕೊಡುವ ಕೆಲಸ ಆಗಬೇಕು. ಸಮುದಾಯ ಭವನ ನವೀಕರಣಕ್ಕೆ ಒಂದು ಕೋಟಿ ರುಪಾಯಿ ಅನುದಾನ ಕೊಡಲಾಗುವುದು. ನಗರದ ಅಂಬೇಡ್ಕರ್ ಭವನ ನಿರ್ಮಾಣ ಪೂರ್ಣಕ್ಕೆ 20 ಕೋಟಿ ರು. ಮಂಜೂರು ಮಾಡಿಸಿ ಟೆಂಡರ್ ಕರೆದು ಒಪ್ಪಿಗೆ ಕೊಡಲಾಗಿದೆ ಎಂದು ಅವರು ನುಡಿದರು.ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ಮಾತನಾಡಿ, ಡಾ.ಬಿ.ಆರ್. ಅಂಬೇಡ್ಕರ್ ಕೊಟ್ಟ ಸಂವಿಧಾನ ಜಗತ್ತಿನಲ್ಲೇ ಶ್ರೇಷ್ಠ ಸಂವಿಧಾನ. ಬಹಳಷ್ಟು ವರ್ಷಗಳ ಕಾಲದಿಂದ ಅಲಿಖಿತ ಸಂವಿಧಾನದ ಆಡಳಿತದ ವಿರುದ್ಧ ಅಂಬೇಡ್ಕರ್ ಸಂವಿಧಾನ ಕೊಟ್ಟು ಸಮಾನತೆ ಸಮಾಜ ನಿರ್ಮಾಣದ ಆಶಯವನ್ನು ಕಂಡರು. ಕೇಂದ್ರದ ನರೇಂದ್ರ ಮೋದಿ ಸರ್ಕಾರ ಮತ್ತೊಮ್ಮೆ ಮನುಸ್ಮ್ತ್ಯೃತಿ ಆಡಳಿತವನ್ನು ತರಲು ಮುಂದಾಗಿದ್ದಾರೆ ಎಂದು ಅವರು ಕಿಡಿಕಾರಿದರು.
ಮಾಜಿ ಮೇಯರ್ ಪುರುಷೋತ್ತಮ್ ಮಾತನಾಡಿ, ಕಳೆದ ಎರಡು ವರ್ಷಗಳಿಂದ ಕಟ್ಟಕಡೆಯ ಮನುಷ್ಯನಿಗೆ ಸರ್ಕಾರದ ಸೌಲಭ್ಯ ಹೊಂದಿ ಆರ್ಥಿಕವಾಗಿ ಅಭಿವೃದ್ಧಿ ಹೊಂದುವಂತೆ ಮಾಡಿದರು. ಎಸ್.ಇ.ಪಿ ಮತ್ತು ಟಿ.ಎಸ್.ಪಿ ಯೋಜನೆಯಡಿ ಹಲವು ಕಾರ್ಯಕ್ರಮ ರೂಪಿಸಿ ದಲಿತರ ಏಳಿಗೆಗೆ ಶ್ರಮಿಸಿದ್ದಾರೆ ಎಂದು ಹೇಳಿದರು.ನಗರ ಪಾಲಿಕೆ ಮಾಜಿ ಸದಸ್ಯರಾದ ಭುವನೇಶ್ವರಿ, ಪಲ್ಲವಿ ಬೇಗಂ, ವಿಶ್ಚಮಾನವ ಡಾ.ಬಿ.ಆರ್. ಅಂಬೇಡ್ಕರ್ ಸಮುದಾಯ ಭವನ ಅಧ್ಯಕ್ಷ ಎಂ. ದೊಡ್ಡ ಸಿದ್ದಯ್ಯ, ಆದಿ ಕರ್ನಾಟಕ ಮಹಾಸಂಸ್ಥೆ ಅಧ್ಯಕ್ಷ ಪಿ. ಸಿದ್ದರಾಜು, ಚಿಕ್ಕಗರಡಿ ಸಂಘದ ಅಧ್ಯಕ್ಷ ಬಿ. ನಾಗರಾಜು, ದೊಡ್ಡ ಗರಡಿ ಸಂಘದ ಅಧ್ಯಕ್ಷ ಆರ್.ಸಿ. ಮಹೇಶ್, ಪಿ.ಟಿ. ಕೃಷ್ಣ, ಅಶೋಕಪುರಂ ರವಿ ಮೊದಲಾದವರು ಇದ್ದರು.