ಸಾರಾಂಶ
ಕಳ್ಳರ ಕೈಚಳಕ । ಬೀದರ್ ಹಣ ಲೂಟಿ, ಮಂಗ್ಳೂರು ಗೋಲ್ಡ್ ದರೋಡೆ ತಂಡದ ಕೃತ್ಯ ಶಂಕೆ । ಕಳ್ಳರ ತಂಡ ಪತ್ತೆಗೆ ರಚಿಸಿದ್ದ 5 ತಂಡ ಅವಿರತ ಪ್ರಯತ್ನ । ಶೋಧಕ್ಕೆ ಸಿಗದ ಫಲ
ನಾಗರಾಜ ಎಸ್.ಬಡದಾಳ್ಕನ್ನಡಪ್ರಭ ವಾರ್ತೆ ದಾವಣಗೆರೆ
ಬೀದರ್‌ನಲ್ಲಿ ಎಟಿಎಂಗೆ ಹಣ ಸಾಗಿಸುತ್ತಿದ್ದ ಸಿಬ್ಬಂದಿ ಮೇಲೆ ಗುಂಡು ಹಾರಿಸಿ, ಒಬ್ಬನನ್ನು ಕೊಂದು, 83 ಲಕ್ಷ ಲೂಟಿ ಮಾಡಿದ್ದು, ಮಂಗಳೂರಿನ ಬ್ಯಾಂಕ್ ನಲ್ಲಿ ಐದೇ ನಿಮಿಷದಲ್ಲಿ 5 ಕೋಟಿ ರು. ಲೂಟಿ ಮಾಡಿದ್ದ ತಂಡವೇ ದಾವಣಗೆರೆ ಜಿಲ್ಲೆಯ ನ್ಯಾಮತಿ ಪಟ್ಟಣದ ಎಸ್ಬಿಐ ಬ್ಯಾಂಕ್‌ನಲ್ಲಿ 12.95 ಕೋಟಿ ರು. ಮೌಲ್ಯದ ಚಿನ್ನಾಭರಣ ಕಳವು ಮಾಡಿತ್ತಾ ಎಂಬ ಶಂಕೆ ಈಗ ಸಹಜವಾಗಿಯೇ ಜನರಿಗೂ ಕಾಡುತ್ತಿದೆ.ನ್ಯಾಮತಿ ಪಟ್ಟಣದಲ್ಲಿ ಕಳೆದ ಅ.28ರಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಕಿಟಕಿ ಮುರಿದು, 12.95 ಕೋಟಿ ರು. ಮೌಲ್ಯದ ಚಿನ್ನಾಭರಣ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಾಗಿ, 5 ತಂಡಗಳನ್ನು ರಚಿಸಿದ್ದನ್ನು ಬಿಟ್ಟರೆ ಕಳ್ಳರ ಸುಳಿವಿನಲ್ಲಿ ಅಂತಹ ಪ್ರಗತಿ ಕಂಡಿಲ್ಲ ಎನ್ನಲಾಗುತ್ತಿದೆ. ಈ ವರೆಗೂ ಕೃತ್ಯ ಎಸಗಿದ ಗ್ಯಾಂಗ್ ಬಗ್ಗೆ ಸುಳಿವಿಲ್ಲ. ಗ್ಯಾಸ್ ಕಟರ್ ಬಳಸಿ, ಕಿಟಕಿ ಮೂಲಕ ಒಳ ನುಗ್ಗಿ, ಸಿಸಿ ಕ್ಯಾಮೆರಾದ ಡಿವಿಆರ್ ಸಮೇತ ಕಳ್ಳರು ಕದ್ದೊಯ್ದಿದ್ದು, ಸುಳಿವು ಸಿಗದಂತೆ ಬ್ಯಾಂಕ್‌ನಲ್ಲಿ ಕಳ್ಳರ ತಂಡ ಖಾರದ ಪುಡಿ ಎರಚಿ ಹೋಗಿತ್ತು.
ಸುಮಾರು 509 ಗ್ರಾಹಕರಿಗೆ ಸೇರಿದ್ದ 12.95 ಕೋಟಿ ರು. ಮೌಲ್ಯದ ಚಿನ್ನಾಭರಣ ಕಳ್ಳರು ಕದ್ದೊಯ್ದಿದ್ದರು. ಈ ಜಾಲ ಭೇದಿಸಲು 5 ತಂಡಗಳು ಎಎಸ್ಪಿ ನೇತೃತ್ವದಲ್ಲಿ ಹಗಲು ರಾತ್ರಿ ಎನ್ನದೆ ಕಳೆದ 3 ತಿಂಗಳಿನಿಂದಲೂ ತನಿಖೆ ನಡೆಸಿದೆ. ನ್ಯಾಮತಿ ಪಟ್ಟಣದ ಎಲ್ಲಾ ಸಿಸಿ ಕ್ಯಾಮೆರಾಗಳನ್ನೂ ಕ್ಷಣಕ್ಷಣವೂ ಬಿಡದೇ ಸುಳಿವಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ.ಕೃತ್ಯಕ್ಕೆ ಮುನ್ನ ಸಾಕಷ್ಟು ಇಲ್ಲೆಲ್ಲಾ ಸ್ಥಿತಿಗತಿ ಗಮನಿಸಿ, ಅಧ್ಯಯನ ಮಾಡಿಯೇ ಅ.28ರ ರಾತ್ರಿ ಕೃತ್ಯ ಎಸಗಿರುವ ಸಾಧ್ಯತೆ ಇದೆ. ನ್ಯಾಮತಿ ಪಟ್ಟಣದಲ್ಲಿ ಸಾವಿರಾರು ಮೊಬೈಲ್‌ಗಳ ಸಿಡಿಆರ್ ಪರಿಶೀಲಿಸಿರುವ ಪೊಲೀಸರಿಗೆ ತನಿಖೆ ಸವಾಲಾಗಿದೆ.
ನ್ಯಾಮತಿ ಎಸ್ಐಬಿನಲ್ಲಿ ಅಂದು ಆಗಿದ್ದೇನು? :ನ್ಯಾಮತಿ ಪಟ್ಟಣದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ಸತತ ಮೂರು ದಿನ ಸರ್ಕಾರಿ ರಜೆ ಇದ್ದುದನ್ನು ಗಮನಿಸಿ ಅ.25ರಿಂದ 26ರ ಮಧ್ಯರಾತ್ರಿ ಅವದಿಯಲ್ಲಿ ಅದೂ ತಡರಾತ್ರಿಯೇ ಬ್ಯಾಂಕ್‌ನ ಕಿಟಕಿ ಸರಳುಗಳನ್ನು ಗ್ಯಾಸ್ ಕಟರ್‌ನಿಂದ ಕತ್ತರಿಸಿ ಒಳಗೆ ಪ್ರವೇಶಿಸಿದ್ದ ಕಳ್ಳರ ತಂಡವು ಮೊದಲು ಬ್ಯಾಂಕ್ ನ ಸೈರನ್ ಸಂಪರ್ಕವನ್ನು ಕಿತ್ತು ಹಾಕಿತ್ತು. ನಂತರ ಸಿಸಿ ಕ್ಯಾಮೆರಾದ ಡಿವಿಆರ್ ಎತ್ತಿಕೊಂಡು ಹೋಗಿದೆ. ನಂತರ ಬ್ಯಾಂಕ್‌ನ ಭದ್ರವಾದ ಲಾಕರ್ ಅನ್ನು ಸಹ ಕಳ್ಳರು ತಂಡವು ಅದೇ ಗ್ಯಾಸ್ ಕಟರ್‌ನಿಂದ ತುಂಡರಿಸಿ, ಅಲ್ಲಿದ್ದ ಸುಮಾರು 12.95 ಕೋಟಿ ರು. ಮೌಲ್ಯದ ಚಿನ್ನಾಭರಣ ಹೊತ್ತೊಯ್ದಿತ್ತು.