ಹನೂರು ತಾಲೂಕಿನಲ್ಲಿ ಗಂಗನದೊಡ್ಡಿ ಗ್ರಾಮದ ಕಬ್ಬಿನ ತೋಟದಲ್ಲಿ ಜೀತ ಪದ್ಧತಿ ಪ್ರಕರಣ ಬೆಳಕಿಗೆ ಬಂದಿದ್ದು, 30ಕ್ಕೂ ಹೆಚ್ಚು ಜನರನ್ನು ಜೀತದಾಳುಗಳಾಗಿ ಇರಿಸಿಕೊಂಡಿದ್ದ ತಮಿಳುನಾಡು ಮೂಲದ ಮೇಸ್ತ್ರಿ ಷಣ್ಮುಗ ಎಂಬಾತನಿಂದ ಕಾರ್ಮಿಕರನ್ನು ರಕ್ಷಿಸಲಾಗಿದೆ.

ಕನ್ನಡಪ್ರಭ ವಾರ್ತೆ ಹನೂರು

ಹನೂರು ತಾಲೂಕಿನಲ್ಲಿ ಗಂಗನದೊಡ್ಡಿ ಗ್ರಾಮದ ಕಬ್ಬಿನ ತೋಟದಲ್ಲಿ ಜೀತ ಪದ್ಧತಿ ಪ್ರಕರಣ ಬೆಳಕಿಗೆ ಬಂದಿದ್ದು, 30ಕ್ಕೂ ಹೆಚ್ಚು ಜನರನ್ನು ಜೀತದಾಳುಗಳಾಗಿ ಇರಿಸಿಕೊಂಡಿದ್ದ ತಮಿಳುನಾಡು ಮೂಲದ ಮೇಸ್ತ್ರಿ ಷಣ್ಮುಗ ಎಂಬಾತನಿಂದ ಕಾರ್ಮಿಕರನ್ನು ರಕ್ಷಿಸಲಾಗಿದೆ.

ತಮಿಳುನಾಡು ಹಾಗೂ ಆಂಧ್ರಪ್ರದೇಶ ಬಿಹಾರ ಸೇರಿದಂತೆ ವಿವಿಧ ಭಾಗದ ರೈಲ್ವೆ ಸ್ಟೇಷನ್‌ನಲ್ಲಿ ಭಿಕ್ಷಾಟನೆ ಮಾಡುತ್ತಿದ್ದ ನಿವಾಸಿಗಳನ್ನು ಕೆಲಸ ಕೊಡುವುದಾಗಿ ಕರತಂದು ಇಲ್ಲಿ ಕಬ್ಬು ಕಟಾವು ಮಾಡಿಸುತ್ತಿದ್ದುದ್ದನ್ನು ರೈತ ಮುಖಂಡರು ಪತ್ತೆ ಹಚ್ಚಿ ಕಾರ್ಮಿಕರನ್ನು ಬಂಧಮುಕ್ತ ಮಾಡುದ್ದಾರೆ .

ಷಣ್ಮುಗ ತಮಿಳುನಾಡಿನಿಂದ ಕನ್ನಡ ಭಾಷೆ ತಿಳಿಯದ ಬಡ ಕಾರ್ಮಿಕರನ್ನು ಹನೂರು ಭಾಗಕ್ಕೆ ಕರೆತಂದು, ಹೆದರಿಸಿ ಬೆದರಿಸಿ ಜೀತದಾಳುಗಳಾಗಿ ಮಾಡಿಕೊಂಡಿದ್ದ. ಅವರನ್ನು ಸ್ಥಳೀಯ ತೋಟಗಳು, ಜಮೀನುಗಳಲ್ಲಿ ಕೂಲಿ ಕೆಲಸಕ್ಕೆ ಕಳುಹಿಸಿ, ಅವರ ದುಡಿಮೆಯ ಹಣವನ್ನು ತಾನೇ ಗುಳುಂ ಮಾಡಿ ಐಷಾರಾಮಿ ಜೀವನ ನಡೆಸುತ್ತಿದ್ದ ಎಂದು ತಿಳಿದು ಬಂದಿದೆ.

ಕಾರ್ಮಿಕರಿಗೆ ಸರಿಯಾದ ಕೂಲಿ ನೀಡದೆ, ಊಟ-ವಸತಿಯನ್ನೂ ಸರಿಯಾಗಿ ನೀಡದೆ ದೌರ್ಜನ್ಯ ಎಸಗುತ್ತಿದ್ದ ಬಗ್ಗೆ ಮಾಹಿತಿ ತಿಳಿದ ರೈತ ಮುಖಂಡರು ಹಾಗೂ ಸಾಮಾಜಿಕ ಹೋರಾಟಗಾರರು ಗಂಗನ ದೊಡ್ಡಿ ಗ್ರಾಮಕ್ಕೆ ತೆರಳಿ, ಅಲ್ಲಿನ ಸ್ಥಿತಿಗತಿಯ ಬಗ್ಗೆ ಪರಿಶೀಲಿಸಿ ಪೊಲೀಸರಿಗೆ ಮಾಹಿತಿ ತಿಳಿಸಿ ಎಲ್ಲ ಕಾರ್ಮಿಕರನ್ನು ಮುಕ್ತಗೊಳಿಸಲಾಗಿದೆ.

ಜೀತದಿಂದ ಹೊರಬಂದ ಕಾರ್ಮಿಕರಿಗೆ ಸೂಕ್ತ ಪುನರ್ವಸತಿ ಕಲ್ಪಿಸಬೇಕು ಮತ್ತು ಆರೋಪಿ ಮೇಸ್ತ್ರಿ ಷಣ್ಮುಗನ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ರೈತ ಸಂಘದ ಮುಖಂಡರು ಒತ್ತಾಯಿಸಿದ್ದಾರೆ.

ಕಳೆದ ಒಂದು ವರ್ಷದಿಂದ ವಿವಿಧಡೆ ಕಬ್ಬು ಕಟಾವು ಮಾಡಲು ಬಳಸಿಕೊಂಡು ಕೂಲಿ ನೀಡದೆ ಸರಿಯಾದ ಸಮಯಕ್ಕೆ ಊಟ ಸಹ ನೀಡದೆ ತಮಿಳುನಾಡು ಮೂಲದ ವ್ಯಕ್ತಿ ಕಾರ್ಮಿಕರಿಗೆ ವಂಚನೆ ಮಾಡಿದ್ದಾನೆ. ಹೀಗಾಗಿ ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಪರಿಶೀಲಿಸಿ, ಕೂಲಿ ಕಾರ್ಮಿಕರಿಗೆ ಗ್ರಾಮಗಳಿಗೆ ತೆರಳಲು ಅನುವು ಮಾಡಿಕೊಡಬೇಕು

ಅಮ್ಜದ್ ಖಾನ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ, ಕರ್ನಾಟಕ ರಾಜ್ಯ ರೈತ ಸಂಘ.

ಗಂಗನ ದೊಡ್ಡಿ ಗ್ರಾಮದಲ್ಲಿ ವಿವಿಧಡೆ ಭಿಕ್ಷೆ ಬೇಡುತ್ತಿದ್ದ ಕಾರ್ಮಿಕ ಕಾರ್ಮಿಕರನ್ನು ಕರೆತಂದು ಕಬ್ಬು ಕಟಾವು ಮಾಡಲು ತಮಿಳುನಾಡಿನ ವ್ಯಕ್ತಿ ಷಣ್ಮುಗಂ ಬಳಸಿಕೊಂಡಿರುವದಾಗಿ ತಿಳಿಸಿದ್ದಾರೆ. ವ್ಯಕ್ತಿಗೆ ಬರಲು ತಿಳಿಸಿದ್ದೇವೆ ನಂತರ ಕಾರ್ಮಿಕರನ್ನು ಅವರ ರಾಜ್ಯಗಳಿಗೆ ಕಳಿಸುವ ವ್ಯವಸ್ಥೆ ಮಾಡಲಾಗುವುದು.

ಮಂಜುನಾಥ್ ಪ್ರಸಾದ್ ಸಬ್ ಇನ್‌ಸ್ಪೆಕ್ಟರ್, ರಾಮಪುರ.