ಭಾರತದ ಸುವರ್ಣಯುಗಕ್ಕೆ ಈ ಚುನಾವಣೆ ನಾಂದಿ: ಜೋಶಿ

| Published : May 01 2024, 01:22 AM IST

ಸಾರಾಂಶ

ಇಂದಿನ ಲೋಕಸಭಾ ಚುನಾವಣೆ ಕೇವಲ ಒಂದು ಚುನಾವಣೆಯಲ್ಲ. ದೇಶದ ಅಭಿವೃದ್ಧಿ, ಸ್ವಾವಲಂಬಿ ಮತ್ತು ಸ್ವಾಭಿಮಾನಕ್ಕೆ ಸವಾಲಾದದ್ದಾಗಿದೆ.

ಶಿಗ್ಗಾಂವಿ:

ಪ್ರಸಕ್ತ ಲೋಕಸಭಾ ಚುನಾವಣೆ ಭಾರತದ ಸುವರ್ಣ ಯುಗಕ್ಕೆ ನಾಂದಿಯಾಗಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.ಪಟ್ಟಣದ ಸಂತೆ ಮೈದಾನದಲ್ಲಿ ಮಂಗಳವಾರ ನಡೆದ ಬಹಿರಂಗ ಪ್ರಚಾರ ಸಭೆಯಲ್ಲಿ ಮಾತನಾಡಿದರು.

ಇಂದಿನ ಲೋಕಸಭಾ ಚುನಾವಣೆ ಕೇವಲ ಒಂದು ಚುನಾವಣೆಯಲ್ಲ. ದೇಶದ ಅಭಿವೃದ್ಧಿ, ಸ್ವಾವಲಂಬಿ ಮತ್ತು ಸ್ವಾಭಿಮಾನಕ್ಕೆ ಸವಾಲಾದದ್ದಾಗಿದೆ ಎಂದ ಅವರು. ಪ್ರಸ್ತುತ ಸನ್ನಿವೇಶದಲ್ಲಿ ದೇಶ ರಕ್ಷಣೆ ಮತ್ತು ಹಿಂದೂಗಳ ಸಂರಕ್ಷಣೆಗಾಗಿ ನರೇಂದ್ರ ಮೋದಿ ಅವರ ಆಡಳಿತ ಮತ್ತೆ ಮಹತ್ವ ಪಡೆದುಕೊಂಡಿದೆ. ಇದಕ್ಕಾಗಿ ಎಲ್ಲರೂ ಎಚ್ಚೆತ್ತುಕೊಂಡು ಮತದಾನ ಮಾಡಬೇಕಿದೆ ಎಂದು ಕರೆ ನೀಡಿದರು.

ಮೋದಿ ನೇತೃತ್ವದ ಸರ್ಕಾರ ಸದಾ ಜನರಿಗಾಗಿ ದುಡಿಯುವ ಸರ್ಕಾರ. ದೇಶದ ಎಲ್ಲ ಜನರ ಕ್ಷೇಮಕ್ಕಾಗಿ, ಅಭಿವೃದ್ಧಿಗಾಗಿ ಮತ್ತು ಸರ್ವತೋಮುಖ ಬೆಳವಣಿಗಾಗಿ ಕೆಲಸ ಮಾಡುತ್ತಿದೆ ಎಂದು ಪ್ರತಿಪಾದಿಸಿದರು.

ಜಗತ್ತಿಗೆ ಭಾರತ ಕೇವಲ ಒಂದು ದೇಶವಾಗಿ ಉಳಿದಿಲ್ಲ. ಪ್ರಪಂಚವೇ ಹಿರಿಯಣ್ಣನಾಗಿ ಸ್ವೀಕರಿಸಲು ಸಿದ್ಧವಾಗಿದೆ. ಆದ್ದರಿಂದ ದೇಶದ ಪ್ರತಿ ನಾಗರಿಕನೂ ಮೋದಿ ಬೆಂಬಲಿಸಿ ಮತ್ತೊಮ್ಮೆ ಪ್ರಧಾನಿಯನ್ನಾಗಿಸಬೇಕು ಎಂದು ಮನವಿ ಮಾಡಿದರು.

ಪ್ರಚಾರ ಸಭೆಗೂ ಮುನ್ನ ಶಿಗ್ಗಾಂವಿಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ರೋಡ್ ಶೋ ನಡೆಸಲಾಯಿತು. ಅಸಂಖ್ಯಾತ ಕಾರ್ಯಕರ್ತರು, ಅಭಿಮಾನಿಗಳು, ಬೆಂಬಲಿಗರು ನಗರದ ಸಂತೆ ಮೈದಾನದಲ್ಲಿನ ಬೃಹತ್ ಬಹಿರಂಗ ಸಭೆಯಲ್ಲಿ ಸಮಾವೇಶಗೊಂಡರು.

ಪ್ರಚಾರ ಸಭೆಯಲ್ಲಿ ವಿಧಾನಸಭಾ ವಿಪಕ್ಷ ನಾಯಕ ಆರ್. ಅಶೋಕ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಮಾಳವಿಕಾ ಅವಿನಾಶ, ಪ್ರಮುಖರಾದ ಶಿವಾನಂದ ಮ್ಯಾಗೇರಿ, ಶ್ರೀಕಾಂತ ದುಂಡಿಗೌಡರ, ಶಶಿಧರ ಯಲಿಗಾರ, ತಿಪ್ಪಣ್ಣ ಸಾತಣ್ಣವರ, ಪ್ರಸಾದ ಸುರಗಿಮಠ, ರವಿ ಕುಡೊಕ್ಕಲಿಗಾರ, ಬಸವರಾಜ ನಾರಾಯಣಪುರ, ಗಂಗಾಧರ ಬಾಣದ ಭಾಗವಹಿಸಿದ್ದರು.