ಸಾರಾಂಶ
ಹಾವೇರಿ: ಶಿಗ್ಗಾಂವಿ ಕ್ಷೇತ್ರದ ಚುನಾವಣೆಯ ಗೆಲುವು, ಈ ಕ್ಷೇತದ ಭವಿಷ್ಯ, ಅಭಿವೃದ್ಧಿ ಮತ್ತು ಕ್ಷೇತ್ರದ ಸಾಮರಸ್ಯದ ಬದುಕು ಕಾಪಾಡಲಿದೆ. ಈ ಕ್ಷೇತ್ರದಲ್ಲಿ ಸಾಮರಸ್ಯ ಕದಲುತ್ತಿದೆ. ದ್ವೇಷದ ರಾಜಕಾರಣ ಬರುತ್ತಿದೆ. ಪೊಲೀಸ್ ಸ್ಟೇಷನ್ ರಾಜಕಾರಣ ಮಾಡುತ್ತಿದೆ. ಇದು ಮುಂದುವರೆಯಬಾರದು. ನಮಗೆ ಜಾತಿ, ಮತ ಧರ್ಮ ಇಲ್ಲ. ನಮ್ಮಲ್ಲಿ ನ್ಯಾಯ, ನೀತಿ ಇದೆ. ಈ ಚುನಾವಣೆ ನಮ್ಮ ನಿಮ್ಮೆಲ್ಲರ ಭವಿಷ್ಯದ ಚುನಾವಣೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.ಅವರು ಸೋಮವಾರ ಶಿಗ್ಗಾಂವಿಯಲ್ಲಿ ನಡೆದ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಇವತ್ತು ಪಕ್ಷದ ವರಿಷ್ಠರು ಉಪ ಚುನಾವಣೆ ವಿಶೇಷ ಸಂದರ್ಭ, ಇದನ್ನು ಗೆಲ್ಲುವ ಅವಕಾಶ ಇದೆ. ಮೂರು ಸರ್ವೆ ಮಾಡಿದ್ದೇವೆ. ಇದು ನಮ್ಮ ನಿರ್ಣಯ, ನೀವು ಒಪ್ಪಿಕೊಳ್ಳಬೇಕು ಎಂದು ಹೇಳಿದ್ದರು. ನಾನು ಮಾತನಾಡುವ ಮೊದಲೇ ಪಟ್ಟಿ ಸಿದ್ಧಪಡಿಸಿಕೊಂಡು ಮಾಧ್ಯಮಗಳಿಗೆ ಬಿಡುಗಡೆ ಮಾಡಲು ಸಿದ್ಧರಾಗಿದ್ದರು. ನಾನು ಎಷ್ಟೇ ಪಯತ್ನ ಮಾಡಿದರೂ ನಿಮ್ಮ ಛಲ, ನಿಮ್ಮ ಹಠ ಜಯಗಳಿಸಿದೆ ಎಂದರು.
ನಾನು ಯಾರಿಗೂ ಮಾತು ಕೊಟ್ಟಿಲ್ಲ. ಮಾತು ತಪ್ಪಿಲ್ಲ. ನನಗೆ ಯಾವಾಗ ಅವಕಾಶ ಸಿಕ್ಕಿದೆ. ಎಲ್ಲ ಸಮುದಾಯಗಳ ಕಾರ್ಯಕರ್ತರಿಗೆ ರಾಜಕೀಯ ಶಕ್ತಿ ತುಂಬುವ ಕೆಲಸ ಮಾಡಿದ್ದೇನೆ. ನಾನು ಈ ಕ್ಷೇತಕ್ಕೆ ಬರುವ ಮೊದಲು ಇಲ್ಲಿಂದ ಯಾರೂ ವಿಧಾನ ಪರಿಷತ್ ಸದಸ್ಯರಾಗಿರಲಿಲ್ಲ. ನಿಗಮಗಳ ಅಧ್ಯಕ್ಷರಾಗಿರಲಿಲ್ಲ. ಯಾವುದೇ ಪ್ರಶಸ್ತಿಗಳು ಬಂದಿರಲಿಲ್ಲ. ಯಾರೂ ಗುರುತಿಸಿರಲಿಲ್ಲ. ಸಾಕಷ್ಟು ಹುದ್ದೆಗಳು ಸಿಕ್ಕಿವೆ. ಇದು ನನಗೆ ಸಮಾಧಾನ ಇದೆ. ನಾನು ಯಾರಿಗೂ ಅನ್ಯಾಯ ಮಾಡಿಲ್ಲ ಎಂದು ಹೇಳಿದರು.ನೀವು ನನ್ನ ವರಿಷ್ಠರು. ಪಕ್ಷದ ವರಿಷ್ಠರ ತೀರ್ಮಾನ ನಿಮ್ಮ ತೀರ್ಮಾನ ಒಂದೇ ಆಗಿದೆ. ನೀವು ಗೆದ್ದಿದ್ದೀರಿ, ಚುನಾವಣೆಯನ್ನು ಗೆಲ್ಲಿಸುವ ಜವಾಬ್ದಾರಿ ನಿಮ್ಮಮೇಲಿದೆ. ಪ್ರತಿಯೊಂದು ಬೂತ್‌ಗೆ ಹೋಗಿ, ಪ್ರತಿಯೊಂದು ಮನೆಗೂ ಹೋಗಿ ಮತ ಕೇಳಬೇಕು. ನಾವು ಅಧಿಕಾರದಲ್ಲಿದ್ದಾಗ ಅನೇಕ ಅಭಿವೃದ್ಧಿ ಕೆಲಸ ಮಾಡಿದ್ದೇವೆ. ಸ್ತ್ರೀ ಶಕ್ತಿ ಸಂಘಗಳಿಗೆ ಅನುದಾನ ನೀಡಿದ್ದೇವೆ. ನಮ್ಮ ಕ್ಷೇತ್ರದಲ್ಲಿ ಸುಮಾರು 5 ಸಾವಿರ ಹೆಣ್ಣು ಮಕ್ಕಳು ಕೆಲಸ ಮಾಡುತ್ತಿದ್ದಾರೆ. ಇನ್ನೊಂದು ವರ್ಷದಲ್ಲಿ ಹತ್ತು ಸಾವಿರ ಹೆಣ್ಣು ಮಕ್ಕಳು ಕೆಲಸ ಮಾಡುತ್ತಾರೆ. ಒಂದೇ ಒಂದು ಕೈಗಾರಿಕೆ ಇರಲಿಲ್ಲ. ಮೂಲಭೂತ ಸೌಕರ್ಯಗಳು ಇರಲಿಲ್ಲ. ಸಾವಿರಾರು ಕಿಮೀ ರಸ್ತೆಗಳ ಅಭಿವೃದ್ಧಿ, ಶಾಲಾ ಕೊಠಡಿಗಳ ನಿರ್ಮಾಣ, ಆರೋಗ್ಯ ಕೇಂದ್ರಗಳ ನಿರ್ಮಾಣ ಮಾಡಿದ್ದೇವೆ. ಆರೋಗ ಶಿಕ್ಷಣಕ್ಕೆ ಒತ್ತು ಕೊಟ್ಟು ಕೆಲಸ ಮಾಡಿದ್ದೇವೆ ಎಂದರು.ನಿಮ್ಮ ಮಡಿಲಿಗೆ ಹಾಕುತ್ತೇನೆ: ನಾನು ನಿಮ್ಮ ಸೇವೆ ಮಾಡಲು ಭರತನನ್ನು ನಿಮ್ಮ ಮಡಿಲಿಗೆ ಹಾಕುತ್ತೇನೆ. ನಿಮ್ಮ ಮಗನಾಗಿ, ನಿಮ್ಮ ಸಹೋದರನಾಗಿ ಅವನಿಗೆ ಆಶೀರ್ವಾದ ಮಾಡಿ, ನಿಮ್ಮ ಸೇವೆ ಮಾಡಲು ಅವನಿಗೆ ಅವಕಾಶ ಮಾಡಿಕೊಡಿ, ಒಂದು ಇತಿಹಾಸ ನಿರ್ಮಾಣ ಆಗಲಿದೆ ಎಂದರು.ಅಕ್ಟೋಬರ್ 25ರಂದು ನಾಮಪತ್ರ ಸಲ್ಲಿಸಲು ತೀರ್ಮಾನಿಸಿದ್ದೇನೆ. ಅಂದು ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರಬೇಕು. ಅಂದೇ ಈ ಚುನಾವಣೆಯ ಭವಿಷ್ಯ ಬರೆಯಬೇಕು. ಅವತ್ತೇ ವಿಜಯೋತ್ಸವ ಆಗಬೇಕು. ಅಧಿಕಾರ ''''ಇರಲಿ ಅಧಿಕಾರ ಇಲ್ಲದಿರಲಿ ನಾನು ನಿಮ್ಮೊಂದಿಗೆ ಇರುತ್ತೇನೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ಶಾಸಕ ಸಿ.ಸಿ. ಪಾಟೀಲ್, ಶಾಸಕ ಮಹೇಶ್ ಟೆಂಗಿನಕಾಯಿ ಹಾಗೂ ಅನೇಕ ಸ್ಥಳೀಯ ಮುಖಂಡರು ಹಾಜರಿದ್ದರು.