ಸಾರಾಂಶ
- ಕಡೂರಿನ ಗಿರಿಯಾಪುರದ ಶಿವಾನುಭವ ಸಮ್ಮೇಳನ- ಅಮೃತ ಮಹೋತ್ಸವದಲ್ಲಿ ಡಾ.ಬಿ.ಎಲ್.ಶಂಕರ್
ಕನ್ನಡಪ್ರಭ ವಾರ್ತೆ, ಕಡೂರುನನ್ನ ಧರ್ಮ ದೊಡ್ಡದು, ನನ್ನ ಧರ್ಮ ದೊಡ್ಡದು ಎಂದು ಜಗತ್ತಿನಾದ್ಯಂತ ನಡೆಯುತ್ತಿರುವ ಧರ್ಮ ಸಂಘರ್ಷಕ್ಕೆ ಹಾಗೂ ಯುದ್ಧಗಳಿಗೆ ಇತಿಶ್ರೀ ಹಾಡಲು ಮಾನವೀಯತೆ ಮೂಡಬೇಕಾಗಿದೆ ಎಂದು ಮಾಜಿ ಸಭಾಪತಿ, ಕರ್ನಾಟಕ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷ ಡಾ.ಬಿ.ಎಲ್.ಶಂಕರ್ ಹೇಳಿದರು.
ಕಡೂರು ವಿಧಾನಸಭಾ ಕ್ಷೇತ್ರದ ಗಿರಿಯಾಪುರದಲ್ಲಿ ನಡೆದ ಶಿವಾನುಭವ ಸಮ್ಮೇಳನ- ಅಮೃತ ಮಹೋತ್ಸವ ಮತ್ತು ಲಿ. ಸದಾಶಿವಾಚಾರ್ಯರ 50ನೇ ಲಿಂಗೈಕ್ಯ ಮಹೋತ್ಸವದಲ್ಲಿ ಸಂಭ್ರಮ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿದರು.ಧರ್ಮ ದೇವರು, ಮಂದಿರಗಳ-ಮಸೀದಿಗಳ ಬಗ್ಗೆ ಮಾತನಾಡುವ ನಾವು ಮಾನವೀಯತೆ, ಮಹಿಳಾ ದೌರ್ಜನ್ಯದ ಬಗ್ಗೆ ಮಾತನಾಡುವುದಿಲ್ಲ. ರಾಜಕಾರಣ ಸೇರಿದಂತೆ ಪ್ರತಿಯೊಂದು ಕ್ಷೇತ್ರಗಳು ವ್ಯಾಪಾರೀಕರಣಗೊಳ್ಳುತ್ತಿರುವುದು ವಿಪರ್ಯಾಸ ಎಂದ ಅವರು, ಹಳ್ಳಿಗಳು ಕೂಡ ವೃದ್ಧಾಶ್ರಮವಾಗುತ್ತಿರುವ ಇಂದಿನ ಪರಿಸ್ಥಿತಿ ಹೀಗೆ ಮುಂದುವರಿದರೆ ವಿಶ್ವವನ್ನು ಕಾಪಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.
ಕೃಷಿಕ,ಸೈನಿಕ, ಶಿಕ್ಷಕ ಮತ್ತು ಕಾರ್ಮಿಕರಿಗೆ ಗೌರವ ನೀಡದಂತಹ ರಾಷ್ಟ್ರ ಎಂದಿಗೂ ಅಭಿವೃದ್ಧಿಯಾಗುವುದಿಲ್ಲ. ಅತ್ಯಂತ ಆತಂಕದ ಸಂಕೀರ್ಣ ಪರಿಸ್ಥಿತಿ ಎದುರಿಸುತ್ತಿರುವ ಸಂದರ್ಭದಲ್ಲಿ ವಿಶ್ವಕ್ಕೆ ಪ್ರಸ್ತುತ ಆಧ್ಯಾತ್ಮಿಕ ಶಕ್ತಿಯೊಂದೆ ನವಚೇತನ ನೀಡಬಲ್ಲದು ಎಂಬ ನಂಬಿಕೆ ನನ್ನದಾಗಿದೆ ಎಂದರು.ಸಮ್ಮೇಳನ ಉದ್ಘಾಟಿಸಿದ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ನ ರಾಜ್ಯ ಆಯುಕ್ತ ಪಿ.ಜಿ.ಆರ್.ಸಿಂಧ್ಯಾ ಮಾತನಾಡಿ, ವೀರ ಶೈವ ಧರ್ಮ ಜಾತಿ ಸೂಚಕವಲ್ಲ. ಅದು ಒಂದು ಜೀವನ ಪದ್ಧತಿ. ಭಾರತದ ಸಮಗ್ರತೆ ಪ್ರತಿನಿಧಿಸುವ ಸಂವಿಧಾನ ದಂತೆಯೇ ವೀರಶೈವ ಧರ್ಮ ಮಾನವೀಯತೆಯನ್ನು ಪ್ರತಿನಿಧಿಸುತ್ತದೆ. ಅಂತಹ ಪರಂಪರೆಯಲ್ಲಿ ಬಂದ ಸದಾಶಿವ ಶಿವಾಚಾರ್ಯ ಸ್ವಾಮೀಜಿಯವರು ಆರಂಭಿಸಿದ ಶಿವಾನುಭವ ಸಮ್ಮೇಳನ 75 ವರ್ಷ ನಿರಂತರವಾಗಿ ನಡೆದಿರುವುದು ಆಧ್ಯಾತ್ಮಿಕ ಪವಾಡವೆಂದೇ ಪರಿಗಣಿಸಬಹುದು ಎಂದರು.
ಸದಾಶಿವ ಸಭಾಭವನ ಉದ್ಘಾಟಿಸಿದ ನಾಡೋಜ ಡಾ.ಗೊ.ರು.ಚೆನ್ನಬಸಪ್ಪ ಮಾತನಾಡಿ, ಶಿವಾನುಭವ ಎಂಬುದೇ ವಿನೂತನ ಕಲ್ಪನೆ. ಧರ್ಮಾಧಾರಿತ ಸತ್ಯ ಮಾರ್ಗ ನಮಗೆ ತೋರಿಸಿಕೊಟ್ಟವರು ಶರಣರು. ಆ ಪರಂಪರೆಯಲ್ಲಿ ಬಂದ ಹಾನಗಲ್ಲ ಕುಮಾರ ಶಿವಯೋಗಿ ಸ್ವಾಮಿಗಳ ಶಿಷ್ಯರಾದ ಸದಾಶಿವ ಶಿವಯೋಗಿ ಸ್ವಾಮೀಜಿ ಗಿರಿಯಾಪುರದಲ್ಲಿ ಆರಂಭಿಸಿದ ಶಿವಾನುಭವ ತತ್ವ ಪ್ರಸಾರ ಕೇಂದ್ರ ಸಮ್ಮೇಳನವನ್ನು ಪ್ರತೀವರ್ಷ ಸಂಪ್ರದಾಯದಂತೆ ನಡೆದುಕೊಂಡು ಬಂದಿದೆ.ಆಧುನಿಕ ಸಮಾಜದಲ್ಲಿ ಆಧ್ಯಾತ್ಮಿಕ ಅನುಭವ ನೀಡುವ ಈ ಕಾರ್ಯಕ್ರಮಕ್ಕೆ ಇದೀಗ 75 ವರ್ಷ ಸಂದಿರುವುದು ಸಂತೋಷದ ಸಂಗತಿ ಎಂದರು. ಆಧ್ಯಕ್ಷತೆವಹಿಸಿದ್ದ ಶಾಸಕ ಕೆ.ಎಸ್.ಆನಂದ್ ಮಾತನಾಡಿ, ಬಹುಶಃ ಆಧ್ಯಾತ್ಮ ಎಂಬುವುದು ನಮ್ಮಲ್ಲಿ ಅಂತರ್ಗತವಾಗುಳಿದಿದೆ. ಅದಕ್ಕೆಂದೂ ಅಳಿವಿಲ್ಲ ಎಂಬುದು ಗಿರಿಯಾಪುರದಲ್ಲಿ ಸಾಕಾರವಾಗಿದೆ. ಆಧ್ಯಾತ್ಮಿಕ ಕಾರ್ಯಕ್ರಮಗಳ ಜೊತೆಯಲ್ಲೆ ವಿದ್ಯಾದಾನದಂತಹ ಪುಣ್ಯಕಾರ್ಯ ಮಾಡುತ್ತಿರುವ ಶಿವಾದ್ವೈತ ತತ್ವ ಪ್ರಸಾರ ಕೇಂದ್ರದ ಚಟುವಟಿಕೆಗಳು ಅನುಕರಣೀಯ. ನಿತ್ಯ ಜೀವನದ ಜಂಜಾಟದಲ್ಲಿ ಆಧ್ಯಾತ್ಮ ಮತ್ತು ಧರ್ಮದ ದಾರಿ ತೋರುವ ಚಟುವಟಿಕೆಗಳನ್ನು ನಿರಂತರ ನಡೆಸುವ ಜೊತೆಗೆ ಶೈಕ್ಷಣಿಕ ಕೇಂದ್ರವಾಗಿ ಹೆಸರಾದ ಗಿರಿಯಾಪುರದ ಸಮಗ್ರ ಅಭಿವೃದ್ಧಿಗೆ ನನ್ನ ಸಹಕಾರ ಸದಾ ಇರುತ್ತದೆ ಎಂದರು.
ಮೈಸೂರು ಕುಂದೂರು ಮಠದ ಶ್ರೀ ಶರತ್ ಚಂದ್ರ ಸ್ವಾಮೀಜಿ ವಿಭೂತಿ ಗ್ರಂಥ ಲೋಕಾರ್ಪಣೆ ಮಾಡಿದರು. ಆನಂದ ಪುರಂ ಮಠದ ಡಾ.ಮಲ್ಲಿಕಾರ್ಜುನ ಮುರುಘಾ ರಾಜೇಂದ್ರ ಸ್ವಾಮೀಜಿ, ನವಲಗುಂದ ಗವಿಮಠದ ಶ್ರೀ ಬಸವಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಅಮೃತ ಮಹೋತ್ಸವ ಸಮಿತಿ ಅಧ್ಯಕ್ಷ ಜಿ.ಸಿ.ಶಿವಲಿಂಗಪ್ಪ, ಭಾರತೀಯ ಸೇನೆ ನಿವೃತ್ತ ಜನರಲ್ ಬಿ.ಎಸ್.ರಾಜು ಮತ್ತು ಜಾನಪದ ಶ್ರೀ ಪ್ರಶಸ್ತಿ ಪುರಸ್ಕೃತ ಜಿ.ಪಿ.ಜಗದೀಶ್ ಅವರನ್ನು ಗೌರವಿಸಲಾಯಿತು. ಜಿ.ಎಂ.ಪ್ರಭುಕುಮಾರ್, ಜಿ.ಎಸ್.ಗುರುಶಾಂತಪ್ಪ,ಡಾ.ಜಿ.ಎಂ.ವಾಮದೇವ,ಜಿ.ಎಂ.ಪ್ರಸಾದ್, ಗ್ರಾಪಂ ಸದಸ್ಯ ಉಮಾ ಮಹೇಶ್ವರಪ್ಪ,ನೀಲಲೋಚನ ಸ್ವಾಮಿ, ಮಹೋತ್ಸವ ಸಮಿತಿ ಪದಾಧಿಕಾರಿಗಳು ಇದ್ದರು.