ಸಾರಾಂಶ
ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವು ಸಚಿವರು ನಮ್ಮ ಮನೆಯಲ್ಲಿ ಊಟಕ್ಕೆ ಸೇರಿದ್ದು ಇದೇ ಮೊದಲೇನಲ್ಲ. ಕಳೆದ ಇಪ್ಪತ್ತು ತಿಂಗಳಲ್ಲಿ ಹತ್ತಾರು ಬಾರಿ ಸೇರಿದ್ದೇವೆ. ಇದಕ್ಕೆ ಮಹತ್ವ ನೀಡುವ ಅಗತ್ಯಇಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಬೆಳಗಾವಿ : ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವು ಸಚಿವರು ನಮ್ಮ ಮನೆಯಲ್ಲಿ ಊಟಕ್ಕೆ ಸೇರಿದ್ದು ಇದೇ ಮೊದಲೇನಲ್ಲ. ಕಳೆದ ಇಪ್ಪತ್ತು ತಿಂಗಳಲ್ಲಿ ಹತ್ತಾರು ಬಾರಿ ಸೇರಿದ್ದೇವೆ. ಇದಕ್ಕೆ ಮಹತ್ವ ನೀಡುವ ಅಗತ್ಯಇಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ನಗರದಲ್ಲಿ ಶುಕ್ರವಾರ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವು ಸಚಿವರು ಬೆಂಗಳೂರಿನ ಮನೆಯಲ್ಲಿ ಊಟಕ್ಕೆ ಸೇರಿದ್ದು, ಊಟದೊಂದಿಗೆ ಕೆಲ ವಿಚಾರಗಳನ್ನು ಚರ್ಚಿಸಿದ್ದೇವೆ. ರಾಜಕೀಯ, ಪಕ್ಷ ಸಂಘಟನೆ ಹಾಗೂ 2028ರಲ್ಲಿ ಮತ್ತೆ ನಮ್ಮ ಸರ್ಕಾರವನ್ನೇ ಅಧಿಕಾರಕ್ಕೆ ತರಬೇಕೆಂಬ ಚರ್ಚೆಗಳನ್ನು ಮಾಡಿದ್ದೇವಷ್ಟೇ. ಇನ್ನು ಸಿಎಂ ಬದಲಾವಣೆ ಬಗ್ಗೆ ನನಗೆ ಮಾಹಿತಿ ಇಲ್ಲ. ಬದಲಾವಣೆ ಮಾಡುವ ವ್ಯಾಪ್ತಿಯೂ ನಮ್ಮ ಬಳಿ ಬರಲ್ಲ. ಈ ಕುರಿತು ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಹೇಳಿದರು.
ಉದ್ಯಮಿದಾರರು, ಪತ್ರಕರ್ತರು ಸೇರಿದ ಹಾಗೇ ನಾವು ಕುಡಿದಿದ್ದಿವಿ ಅಷ್ಟೆ. ಇನ್ನೂ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತು ಚರ್ಚೆಯೇ ನಡೆದಿಲ್ಲ ಎಂದ ಅವರು, ಒಬ್ಬರಿಗೆ ಒಂದೇ ಹುದ್ದೆ ಎಂಬ ನಿಯಮವಿದೆ. ಆಯಾ ನಾಯಕನ ಸಾಮರ್ಥ್ಯ ಮತ್ತು ಅನಿವಾರ್ಯತೆಗೆ ಅನುಗುಣವಾಗಿ ಕರ್ನಾಟಕ ಮಾತ್ರವಲ್ಲ, ಬೇರೆ ರಾಜ್ಯಗಳಲ್ಲಿಯೂ 2 ಹುದ್ದೆ ಕೊಟ್ಟ ಉದಾಹರಣೆಗಳಿವೆ. ಯಾರಿಗೆ ಎಷ್ಟು ಹುದ್ದೆ ಕೊಡಬೇಕೆಂದು ಪಕ್ಷ ತೀರ್ಮಾನಿಸುತ್ತದೆ. ಈಗಾಗಲೇ ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ ಇದ್ದಾರೆ. ಹೀಗಿದ್ದಾಗ ನಾವು ಅಧ್ಯಕ್ಷರಾಗುತ್ತೇವೆ ಅನ್ನುವುದು ಸೂಕ್ತವಲ್ಲ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಸಮಯ ಬಂದಾಗ ನೊಡೋಣ ಎಂದರು.
ಸಂಪುಟ ಪುನಾರಚನೆ ಕುರಿತಾದ ಪ್ರಶ್ನೆಗೆ ಉತ್ತರಿಸಿದ ಅವರು, ಅನೇಕ ನಾಯಕರು ತಮ್ಮ ಅಭಿಪ್ರಾಯ ಹೇಳಿದ್ದಾರೆ. ಸಂಪುಟ ಪುನಾರಚನೆ ಹಾಗೂ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತು ಯಾವುದೇ ಚರ್ಚೆ ಆಗಿಲ್ಲ. ಪಕ್ಷದ ಹೈಕಮಾಂಡ್, ಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷರು ತೀರ್ಮಾನ ಮಾಡುತ್ತಾರೆ ಎಂದ ಅವರು, ಮುಖ್ಯಮಂತ್ರಿ ನಮ್ಮ ಮನೆಗೆ ಬರುವುದು ಹೊಸದೇನಲ್ಲ. ಅವರು ನಮ್ಮ ಮನೆಗೆ ಬರುತ್ತಾರೆ. ನಾವು ಅವರ ಮನೆಗೆ ಹೋಗುತ್ತೇವೆ. ಹೊಸ ವರ್ಷದ ಹಿನ್ನೆಲೆಯಲ್ಲಿ ನಾವೆಲ್ಲರೂ ನಮ್ಮ ಮನೆಯಲ್ಲಿ ಸೇರಿದ್ದೆವು. ನಮ್ಮ ಔತಣಕೂಟದಕ್ಕೆ ರಾಜಕೀಯ ಮಹತ್ವ ನೀಡುವ ಅಗತ್ಯ ಇಲ್ಲ ಎಂದು ಹೇಳಿದರು.ಬಸ್ ಪ್ರಯಾಣ ದರ ಏರಿಕೆ ಕುರಿತಾದ ಪ್ರಶ್ನೆಗೆ ಉತ್ತರಿಸಿದ ಅವರು, ಮಹಿಳೆಯರಿಗೆ ಉಚಿತವಾಗಿ ಬಸ್ ಸೌಕರ್ಯ ಕಲ್ಪಿಸಿದ್ದಕ್ಕಾಗಿ ಏನೂ ಹೆಚ್ಚಿಸಿಲ್ಲ. ಈಗ ವಿವಿಧ ವಸ್ತುಗಳ ದರ ಹೆಚ್ಚಾಗಿವೆ. ಹಾಗಾಗಿ ಬಸ್ ದರ ಹೆಚ್ಚಿಸಲಾಗಿದೆ ಎಂದರು.