ಸಾರಾಂಶ
- ಸಖರಾಯಪಟ್ಟಣದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಯ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿ ಪರ ಪಕ್ಷದ ಚುನಾವಣಾ ಪ್ರಚಾರಕನ್ನಡ ಪ್ರಭ ವಾರ್ತೆ, ಕಡೂರು
ದೇಶ ಅಭಿವೃದ್ಧಿ ಪಥದತ್ತ ಸಾಗಲು ನಿರ್ಧರಿಸುವ ಈ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ನೀಡುವ ಮತ ದೇಶದ ಭವ್ಯ ಭವಿಷ್ಯಕ್ಕೆ ನೀಡುವ ಮತವಾಗುತ್ತದೆ. ಕಾಂಗ್ರೆಸ್ಸಿಗೆ ನೀಡುವ ಮತ ದೇಶದ ಅಭದ್ರತೆಗೆ, ಅರಾಜಕತೆಗೆ ಕಾರಣವಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.ತಾಲೂಕಿನ ಸಖರಾಯಪಟ್ಟಣದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿ ಪರ ಪಕ್ಷದ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ಭೀಕರ ಬರಗಾಲ ರಾಜ್ಯವನ್ನು ಆವರಿಸಿದೆ ಎಂದು ಮಾತು ಆರಂಭಿಸಿದ ಯಡಿಯೂರಪ್ಪ, ಭಾಗ್ಯಲಕ್ಷ್ಮಿ ಯೋಜನೆ, ಸುವರ್ಣ ಭೂಮಿ ಯೋಜನೆ, ಕಿಸಾನ್ ಸನ್ಮಾನ್, ಹಾಲು ಉತ್ಪಾದಕರ ಸಹಾಯ ಧನ ನೀಡಿಕೆ ಏನಾಯ್ತು? ಏಕೆ ಸ್ಥಗಿತವಾಯ್ತು? ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರ ದಿವಾಳಿ ಯಾಗಿದೆ. ಹಣ ಹೆಂಡದ ಬಲದಿಂದ ಮತ ಪಡೆಯುವ ಕಾಲವೊಂದಿತ್ತು. ಈಗ ಜನ ಜಾಗೃತರಾಗಿದ್ದಾರೆ. ಕಾಂಗ್ರೆಸ್ ನವರ ಆಟಾಟೋಪ ನಡೆಯುವುದಿಲ್ಲ. ಕೇಂದ್ರದಲ್ಲಿ ಮತ್ತೊಮ್ಮೆ ನರೇಂದ್ರ ಮೋದಿಯವರು ಪ್ರಧಾನಿಯಾಗಲು ತಾವೆಲ್ಲರೂ ಬಿಜೆಪಿ-ಜೆಡಿಎಸ್ ಪಕ್ಷದ ಮೈತ್ರಿ ಅಭ್ಯರ್ಥಿಗೆ ಮತ ನೀಡಿ ಎಂದು ಮನವಿ ಮಾಡಿದರು.
ಮಾಜಿ ಶಾಸಕ ಸಿ.ಟಿ.ರವಿ ಮಾತನಾಡಿ, ಕಾಂಗ್ರೆಸ್ ಅನ್ನು ಗೆಲ್ಲಿಸಿದರೆ ಪಂಚಾಯಿತಿಯಿಂದ ಪಾರ್ಲಿಮೆಂಟ್ ತನಕ ಪಾಕಿಸ್ತಾನ್ ಜಿಂದಾಬಾದ್ ಎಂಬ ಘೋಷಣೆ ಮೊಳಗುತ್ತದೆ. ಇಂತಹ ಕಾಲದಲ್ಲಿ ದೇಶ ವಾಸಿಗಳು ಮೈ ಮರೆತರೆ ಭಯೋತ್ಪಾದಕರು ನಿಮ್ಮ ಊರುಗಳಲ್ಲೂ ಹುಟ್ಟಿಕೊಳ್ಳುತ್ತಾರೆ. ಆ ಪರಿಸ್ಥಿತಿ ನಮಗೆ ಬರುವುದು ಬೇಡ. ದೇಶ ರಕ್ಷಣೆ ಹೊಣೆ ಹೊತ್ತ ನರೇಂದ್ರ ಮೋದಿಯವರ ಕೈಬಲಪಡಿಸಿ ಎಂದು ಕೋರಿದರು.ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿ ಮಾತನಾಡಿ, ತಾವು ನೀಡುವ ಒಂದೊಂದು ಮತವೂ ದೇಶ ರಕ್ಷಣೆಗೆ ನೀಡುವ ದೊಡ್ಡ ಕಾಣಿಕೆ. ಪ್ರಜಾಪ್ರಭುತ್ವದ ದೇಗುಲವಾದ ವಿಧಾನಸೌಧದಲ್ಲಿಯೇ ಮುಖ್ಯಮಂತ್ರಿಗಳ ಎದುರೇ ಶತ್ರು ದೇಶಕ್ಕೆ ಜೈಕಾರ ಘೋಷಣೆ ಮೊಳಗಿದರೂ ಅವರ ವಿರುದ್ಧ ಕ್ರಮ ಕೈಗೊಳ್ಳಲು ಕಾಂಗ್ರೆಸ್ ಸರಕಾರಕ್ಕೆ ಧೈರ್ಯವಿಲ್ಲ. ಇದು ಕರ್ನಾಟಕದ ಜನರ ದುರಂತ. ಭಯೋತ್ಪಾದನೆ ವಿಶ್ವವನ್ನು ಕಂಗೆಡಿಸಿರುವ ಈ ಸಮಯದಲ್ಲಿ ಆ ಎಲ್ಲ ಅಪಾಯಗಳಿಂದ ನಮ್ಮ ದೇಶವನ್ನು ಸಂರಕ್ಷಿಸುವ ಶಕ್ತಿಯಾಗಿರುವ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲು ಪೂರಕವಾಗಿ ತಮ್ಮ ಮತ ನೀಡಿ ಎಂದರು. ಇದು ರಾಷ್ಟ್ರಭಕ್ತರ ಮತ್ತು ರಾಷ್ಟ್ರ ವಿರೋಧಿಗಳ ನಡುವೆ ನಡೆಯುವ ಚುನಾವಣೆ ಎಂದರು.
ಮಾಜಿ ಸಚಿವರಾದ ಅರಗ ಜ್ಞಾನೇಂದ್ರ, ಬೈರತಿ ಬಸವರಾಜು, ರಾಜ್ಯ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಬೆಳ್ಳಿ ಪ್ರಕಾಶ್, ಮಾಜಿ ಶಾಸಕರಾದ ಡಿ.ಎನ್. ಜೀವರಾಜ್, ಡಿ.ಎಸ್. ಸುರೇಶ್, ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ, ಸಿ.ಆರ್.ಪ್ರೇಂ ಕುಮಾರ್, ಲಕ್ಷ್ಣಣನಾಯ್ಕ, ರಾಜ್ಯ ಬಿಜೆಪಿ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಎಸ್.ಕೆ. ಕಲ್ಮರುಡಪ್ಪ, ರವೀಂದ್ರ ಬೆಳವಾಡಿ, ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ ಶೆಟ್ಟಿ, ಗ್ರಾಮಾಂತರ ಬಿಜೆಪಿ ಮಂಡಲ ಅಧ್ಯಕ್ಷ ವಿಜಯ್ ಕುಮಾರ್, ಚಿಕ್ಕದೇವನೂರು ರವಿ ಮತ್ತಿತರರು ಇದ್ದರು.--
11ಕೆಕೆಡಿಯು1ಚಿಕ್ಕಮಗಳೂರು ಜಿಲ್ಲೆಯ ಸಖರಾಯಪಟ್ಟಣದಲ್ಲಿ ನಡೆದ ಬಿಜೆಪಿ-ಜೆಡಿಎಸ್ ಮೈತ್ರಿ ಚುನಾವಣಾ ಪ್ರಚಾರದ ಸಭೆಯನ್ನು ಮಾಜಿ ಸಿ ಎಂ. ಯಡಿಯೂರಪ್ಪ ಉದ್ಘಾಟಿಸಿದರು.
11ಕೆಕೆಡಿಯು1,ಎ, ಒಗ್ಗಟ್ಟು ಪ್ರದರ್ಶಿಸಿದ ಬಿಜೆಪಿ -ಜೆಡಿಎಸ್ ಮುಖಂಡರು.