21 ನೇ ಸಮ್ಮೇಳನದ ಸರ್ವಾಧ್ಯಕ್ಷೆ ಎಂ.ಜಯಮ್ಮಗೆ ಜಿಲ್ಲಾ ಸ್ವಾಗತ ಸಮಿತಿಯಿಂದ ಆಹ್ವಾನ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಜಿಲ್ಲೆಯಲ್ಲೇ ಪ್ರಥಮ ಬಾರಿಗೆ 21 ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ 3 ದಿನಗಳ ನಡೆಯುತ್ತಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸೂರಿ ಶ್ರೀನಿವಾಸ್ ತಿಳಿಸಿದರು.
ಸೋಮವಾರ ಕಡೂರಿನಲ್ಲಿ ನಡೆಯುವ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆಯಾಗಿ ಆಯ್ಕೆಯಾಗಿರುವ ಅಗ್ರಹಾರದ ಸಾಹಿತಿ, ಅತ್ತಿ ಮಬ್ಬೆ ಪ್ರಶಸ್ತಿ ವಿಜೇತೆ ಎಂ.ಜಯಮ್ಮ ಅವರನ್ನು ಅವರ ಸ್ವಗೃಹದಲ್ಲಿ ಆಹ್ವಾನಿಸಿ ಮಾತನಾಡಿದರು. ಸಾಹಿತಿ ಎಂ.ಜಯಮ್ಮಅನೇಕ ಕಾದಂಬರಿ, ಕಥೆ, ಚುಟುಕು ಸಾಹಿತ್ಯ ರಚಿಸಿದ್ದಾರೆ. ಪ್ರಥಮ ಬಾರಿಗೆ ಉದಯ ಟಿ.ವಿ.ಯಲ್ಲಿ ಜಯಮ್ಮ ಅವರ ಸಂದರ್ಶನ ನಡೆದಿತ್ತು. ಬಹಳ ವರ್ಷಗಳ ಹಿಂದೆ ಎನ್.ಆರ್.ಪುರ ತಾಲೂಕು ಸಮ್ಮೇಳನಾಧ್ಯಕ್ಷ ರಾಗಿದ್ದ ಎಂ.ಜಯಮ್ಮ ಈ ಬಾರಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷೆಯಾಗಿ ಆಯ್ಕೆಯಾಗಿರುವುದು ಜಿಲ್ಲಾ ಕಸಾಪಗೆ ಸಂದ ಗೌರವ ಎಂದರು.ಏ.10,11 ಹಾಗೂ 12 ರಂದು ಕಡೂರಿನಲ್ಲಿ 21 ನೇ ಜಿಲ್ಲಾ ಸಮ್ಮೇಳನ ನಡೆಯಲಿದೆ. ಸಾಧಕರಿಗೆ ಪ್ರಶಸ್ತಿ, ಕನ್ನಡ ಸಿರಿ, ಸಾಹಿತ್ಯ ಸಿರಿ ಪ್ರಶಸ್ತಿ ನೀಡಲಾಗುವುದು. 20 ಮಳಿಗೆಗೆ ಈಗಾಗಲೇ ಸಿದ್ಧತೆ ಆಗಿದೆ ಎಂದರು.
ಜಿಲ್ಲಾ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಎಂ.ರಾಜಪ್ಪ ಮಾತನಾಡಿ, ಜಿಲ್ಲಾ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಎನ್.ಆರ್.ಪುರದ ಸಮಾಜ ಸೇವಕಿ ಜುಬೇದಾರನ್ನು ಸನ್ಮಾನಿಸುತ್ತಿದ್ದೇವೆ. ಎನ್.ಆರ್.ಪುರದಿಂದ ಎಲ್ಲಾ ಮಹಿಳೆಯರು ಸಮ್ಮೇಳನಕ್ಕೆ ಆಗಮಿಸಬೇಕು ಎಂದರು.
ಜಿಲ್ಲಾ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ,ಇದುವರೆಗೆ ಕಡೂರು ಪಟ್ಟಣ ದಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನ ನಡೆದಿರಲಿಲ್ಲ. ಇದೇ ಪ್ರಥಮ ಬಾರಿಗೆ ಕಡೂರಿನಲ್ಲಿ ಸಮ್ಮೇಳನ ನಡೆಸುತ್ತಿದ್ದೇವೆ. ಜಿಲ್ಲಾ ಕಾರ್ಯಾಕಾರಿ ಸಮಿತಿ ಸಭೆಯಲ್ಲಿ ಎನ್.ಆರ್.ಪುರ ತಾಲೂಕಿನ ಸಾಹಿತಿ ಎಂ.ಜಯಮ್ಮ ರನ್ನು ಸಮ್ಮೇಳಾಧ್ಯಕ್ಷರಾಗಿ ತೀರ್ಮಾನಿಸಲಾಗಿದೆ. ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಎಲ್ಲಾ ತಾಲೂಕಿನ ಕಸಾಪ ಪದಾಧಿಕಾರಿಗಳನ್ನು ಗೌರವಿಸುವ ಕೆಲಸ ಮಾಡುತ್ತೇವೆ. ಕನ್ನಡ ಭಾಷೆ, ಜಲ, ನೆಲದ ಬಗ್ಗೆ ಹೋರಾಟ ಮಾಡಿದವರನ್ನು ಒಳಗೊಂಡು ವಿಶೇಷ ಸಂಚಿಕೆ ತರಲು ಕಾರ್ಯಕಾರಿಣಿ ತೀರ್ಮಾನಿಸಿದೆ ಎಂದರು.
ತಾಲೂಕು ಕಸಾಪ ಅಧ್ಯಕ್ಷ ಪೂರ್ಣೇಶ್ ಮಾತನಾಡಿ, ಮುಂದಿನ ದಿನಗಳಲ್ಲಿ ಎನ್.ಆರ್.ಪುರ, ಕೊಪ್ಪ, ಶೃಂಗೇರಿ ಸೇರಿ 3 ತಾಲೂಕುಗಳ ಕಸಾಪ ಅಧ್ಯಕ್ಷರ ನೇತೃತ್ವದಲ್ಲಿ ಶೃಂಕೋನ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಚಿಂತನೆ ನಡೆಸಲಾಗಿದೆ ಎಂದರು.ತಾಲೂಕು ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ಭಾಗ್ಯ ನಂಜುಂಡಸ್ವಾಮಿ ಮಾತನಾಡಿ, ರಾಜ್ಯದಲ್ಲೇ ಮೊದಲ ಬಾರಿಗೆ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಜಿಲ್ಲೆಯಲ್ಲಿ ಕಸಾಪ ಮಹಿಳಾ ಘಟಕ ಪ್ರಾರಂಭಿಸಿದ್ದಾರೆ. ಜಿಲ್ಲಾ ಸಮ್ಮೇಳದ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಎಂ.ಜಯಮ್ಮ ಬಹುಮುಖ ಪ್ರತಿಭಾವಂತರು ಎಂದರು.
ಸಭೆಯಲ್ಲಿ ಸಮಾಜ ಸೇವಕಿ ಜುಬೇದ, ಕೊಪ್ಪ ತಾ.ಕಸಾಪ ಅಧ್ಯಕ್ಷ ಶ್ರೀ ಹರ್ಷ,ತರೀಕೆರೆ ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ಸುನೀತ, ಕಡೂರು ಮಹಿಳಾ ಘಟಕದ ಅಧ್ಯಕ್ಷೆ ಲತಾ, ಜಿಲ್ಲಾ ಪ್ರಧಾನ ಸಂಚಾಲಕ ಇಮ್ರಾನ್ ಅಹಮ್ಮದ್ ಬೇಗ್, ಜಿಲ್ಲಾ ಸಂಚಾಲಕ ಎಸ್.ಎಸ್.ಸಂತೋಷ್ ಕುಮಾರ್, ಎನ್.ಆರ್.ಪುರ ಕಸಾಪ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಶಶಿಕಲಾ, ತಾ.ಕನ್ನಡ ಜಾನಪದ ಪರಿಷತ್ತಿನ ಅಧ್ಯಕ್ಷೆ ಜಯಂತಿ, ಕಸಾಪ ಹಿರಿಯ ಸದಸ್ಯ ಪಿ.ಸಿ.ಮ್ಯಾಥ್ಯೂ,ಯುವ ಘಟಕದ ಅಧ್ಯಕ್ಷೆ ಸುಷ್ಮಾ ಯುಗಾಂಧರ್, ಜಿಲ್ಲಾ ಸಮಿತಿ ಸದಸ್ಯ ಪ್ರಕಾಶ್ ಇದ್ದರು.--- ಬಾಕ್ಸ್ಸ್--
ಸರ್ವಾಧ್ಯಕ್ಷೆಯಾಗಿರುವುದು ಸಂತಸ ತಂದಿದೆ: ಜಯಮ್ಮನನ್ನದು ತೆಲುಗು ಮಾತೃಭಾಷೆ. ಹಿರಿಯ ಸಾಹಿತಿ ಅಜ್ಜಂಪುರ ಸೂರಿ ಅವರು ನನ್ನನ್ನು ಮೊದಲ ಬಾರಿಗೆ ಗುರುತಿಸಿದ್ದರು. ನಾನು ಬರೆದ 2 ಪುಸ್ತಕ ಸಿನಿಮಾ ಆಗಿದೆ. ಅತ್ತಿ ಮಬ್ಬೆ ಪ್ರಶಸ್ತಿ ಬಂದಿದೆ. ಈಗ ಸೂರಿ ಶ್ರೀನಿವಾಸ್ ಅಧ್ಯಕ್ಷತೆಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನನ್ನನ್ನು ಗುರುತಿಸಿ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ನನಗೆ ಸಂತಸ ತಂದಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಆಹ್ವಾನ ಸ್ವೀಕರಿಸಿದ ಸಾಹಿತಿ ಎಂ.ಜಯಮ್ಮ ತಿಳಿಸಿದರು.