ಕಡೂರು, ತಾಲೂಕು ಕಚೇರಿಗೆ ಗ್ರಾಮೀಣ ಜನರ ಅಲೆದಾಟ ತಪ್ಪಿಸಲು ಆಡಳಿತ ಯಂತ್ರವೇ ಗ್ರಾಮಗಳಿಗೆ ತೆರಳಿ ಜನರ ಕಷ್ಟಗಳನ್ನು ಅರಿತು ಪರಿಹರಿಸಲು ಇದೇ ಮೊದಲ ಬಾರಿಗೆ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಈ ಜನ ಸಂಪರ್ಕ ಸಭೆ ಆಯೋಜಿಸಲಾಗಿದೆ ಎಂದು ಶಾಸಕ ಕೆ.ಎಸ್. ಆನಂದ್ ಹೇಳಿದರು.
ಸಿಂಗಟಗೆರೆ ಗ್ರಾಮದಲ್ಲಿ ತಾಲೂಕು ಆಡಳಿತದಿಂದ ಆಯೋಜಿಸಿದ್ದ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ಕಡೂರುತಾಲೂಕು ಕಚೇರಿಗೆ ಗ್ರಾಮೀಣ ಜನರ ಅಲೆದಾಟ ತಪ್ಪಿಸಲು ಆಡಳಿತ ಯಂತ್ರವೇ ಗ್ರಾಮಗಳಿಗೆ ತೆರಳಿ ಜನರ ಕಷ್ಟಗಳನ್ನು ಅರಿತು ಪರಿಹರಿಸಲು ಇದೇ ಮೊದಲ ಬಾರಿಗೆ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಈ ಜನ ಸಂಪರ್ಕ ಸಭೆ ಆಯೋಜಿಸಲಾಗಿದೆ ಎಂದು ಶಾಸಕ ಕೆ.ಎಸ್. ಆನಂದ್ ಹೇಳಿದರು.
ಮಂಗಳವಾರ ಕ್ಷೇತ್ರದ ಸಿಂಗಟಗೆರೆ ಗ್ರಾಮದಲ್ಲಿ ತಾಲೂಕು ಆಡಳಿತದಿಂದ ಆಯೋಜಿಸಿದ್ದ ಗ್ರಾಮ ಪಂಚಾಯ್ತಿ ಮಟ್ಟದ ಜನ ಸಂಪರ್ಕ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಳೆದ ವರ್ಷ ಇದೇ ಸಿಂಗಟಗೆರೆಯಲ್ಲಿ ಹೋಬಳಿ ಮಟ್ಟದ ಜನ ಸಂಪರ್ಕ ಸಭೆ ನಡೆಸಲಾಗಿತ್ತು. ಆಡಳಿತ ಮತ್ತು ಅಭಿವೃದ್ಧಿ ಎಂದರೆ ಕೇವಲ ರಸ್ತೆ, ಚರಂಡಿ ನಿರ್ಮಾಣ ಅಲ್ಲ. ಗ್ರಾಮೀಣ ಜನರು ಕಚೇರಿ ಗಳಿಗೆ ತಮ್ಮ ಕೆಲಸಗಳಿಗೆ ಅಲೆದಾಡಿ ಸುಸ್ತಾಗುವುದನ್ನು ತಾವು ನೋಡಿರುವ ಹಿನ್ನೆಲೆಯಲ್ಲಿ ಪಂಚಾಯ್ತಿ ಮಟ್ಟದ ಈ ಸಭೆ ಆಯೋಜಿ ಸಲಾಗಿದೆ. ಸಿಂಗಟಗೆರೆ, ಎಸ್. ತಾಂಡ್ಯ , ಪಟ್ಟೇದೇವರ ಹಳ್ಳಿ ತಾಂಡ್ಯ, ಕಲ್ಲೇ ನಿಂಗನಹಳ್ಳಿ, ದಿಬ್ಬೂರು, ಮತ್ತೀಹಳ್ಳಿ ತಾಂಡ್ಯ, ಹನುಮಂತಪುರ ಸೇರಿದಂತೆ ಸುಮಾರು 15 ಜನ ಸದಸ್ಯರನ್ನು ಹೊಂದಿರುವ ಪಂಚಾಯ್ತಿ ಇದಾಗಿದೆ. ಈವ್ಯಾಪ್ತಿಯ ಜನರ ಸಮಸ್ಯೆ ಪರಿಹರಿಸಲು ಇದು ಸಹಕಾರಿ ಎಂದರು.ತಮ್ಮ ಎರಡೂವರೆ ವರ್ಷಗಳ ಶಾಸಕರ ಅನುದಾನದಲ್ಲಿ ಸಾಕಷ್ಟು ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಮುಖ್ಯವಾಗಿ ₹20 ಕೋಟಿ ವೆಚ್ಚದಲ್ಲಿ ಸಿಂಗಟಗೆರೆ- ಪಂಚನಹಳ್ಳಿ ರಸ್ತೆ ಅಭಿವೃದ್ಧಿ ಮಾಡಲಾಗಿದೆ. ಕಸುವನಹಳ್ಳಿಯಲ್ಲಿ ಉಗ್ರಾಣಕ್ಕಾಗಿ ₹5 ಲಕ್ಷ ಮತ್ತು ₹18 ಲಕ್ಷ ಸಮುದಾಯ ಭವನಕ್ಕೆ, ದಿಬ್ಬೂರು ಸಮುದಾಯಭವನಕ್ಕೆ ₹15 ಲಕ್ಷ, ಮತ್ತು ಎಸ್. ಟಿ. ಸಮುದಾಯ ಭವನಕ್ಕೆ ₹15 ಲಕ್ಷ, ಹನುಮಂತಪುರ ಭವನಕ್ಕೆ ₹5 ಲಕ್ಷ. ಮತ್ತೀಹಳ್ಳಿ ಕನ್ನಂಬಾಡಿ ಚೌಡೇಶ್ವರಿ ಅಮ್ಮ ನವರ ದೇವಾಲಯಕ್ಕೆ 5 ಲಕ್ಷ ರೂ, ಸಿಂಗಟಗೆರೆ ಸ್ಥಾನಿಕ ಬೀರಲಿಂಗೇಶ್ವರ ಸಮುದಾಯಭವನಕ್ಕೆ ₹4 ಲಕ್ಷ, ಸಿಂಗಟಗೆರೆ ಲಕ್ಕಮ್ಮ ದೇವಾಲಯಕ್ಕೆ ₹3 ಲಕ್ಷ, ಸಿಂಗಟಗೆರೆ ಗ್ರಾಮದಲ್ಲಿ ಶಾಶ್ವತ ಬಯಲು ರಂಗಮಂದಿರಕ್ಕೆ ₹15 ಲಕ್ಷ, ವಿವಿಧ ಗ್ರಾಮಗಳ ರಸ್ತೆ ಅಭಿವೃದ್ಧಿಗೆ ಸುಮಾರು ₹28 ಲಕ್ಷ ನೀಡಲಾಗಿದೆ. ದೇವಾಂಗ ಸಮುದಾಯಭವನಕ್ಕ ₹20 ಲಕ್ಷ ನೀಡಿದ್ದು, ಎಸ್ . ತಾಂಡ್ಯದ ಭವನಕ್ಕೆ ಇನ್ನಷ್ಟು ಹಣ ನೀಡುತ್ತೇನೆ. ಕ್ಷೇತ್ರದ ಅಭಿವೃದ್ಧಿಗೆ ಗ್ರಾಮಗಳ ಜನರು ಮತ್ತು ಜನಪ್ರತಿನಿಧಿಗಳ ಜೊತೆ ಸೇರಿ ಕೆಲಸ ಮಾಡುತ್ತಿದ್ದೇನೆ ಎಂದರು.
ಕಡೂರಿನಿಂದ 9ನೇ ಮೈಲಿನವರೆಗೆ ₹6 ಕೋಟಿಯಲ್ಲಿ ಮರು ಡಾಂಬರೀಕರಣ ಮಾಡಿದ್ದು, ಕಸುವನಹಳ್ಳಿಯಲ್ಲಿ ₹15 ಲಕ್ಷ ವೆಚ್ಚದಲ್ಲಿ ಚರಂಡಿ ನಿರ್ಮಿಸಿ ಕೊಟ್ಟಿದ್ದೇನೆ. ಮುಂದೆ ಮತ್ತಷ್ಟು ಅನುದಾನ ತಂದು ಅಬಿವೃದ್ಧಿಗೆ ಕೈ ಜೋಡಿಸುತ್ತೇನೆ ಎಂದರು.ಈ ವರ್ಷ ₹12 ಕೋಟಿ ವೆಚ್ಚದಲ್ಲಿ ಕಡೂರಿನ ಕೆ ಎಸ್ ಆರ್ ಟಿಸಿ ಬಸ್ ನಿಲ್ದಾಣದ ನಿರ್ಮಾಣ ನಡೆಯುತ್ತಿದೆ. ₹3 ಕೋಟಿ ವೆಚ್ಚದಲ್ಲಿ ಬೀರೂರಿನ ಬಸ್ ನಿಲ್ದಾಣ ಆಗಲಿದೆ. ₹1.50 ಕೋಟಿಯಲ್ಲಿ ಸಿಂಗಟಗೆರೆ ಬಸ್ ನಿಲ್ದಾಣ ಕಾಮಗಾರಿ ನಡೆಯಲಿದೆ. ಮುಖ್ಯವಾಗಿ ಬಾಣಾವರ ರಸ್ತೆಯಿಂದ ಪದವಿ ಕಾಲೇಜಿನವರೆಗೂ ಡಬಲ್ ರೋಡ್ ನಿರ್ಮಾಣ, ಯಗಟಿ, ಪಂಚನಹಳ್ಳಿಯಲ್ಲಿ ರಸ್ತೆಗಳನ್ನು ಡಬಲ್ ರೋಡ್ ಹಾಗೂ ವಿದ್ಯುತ್ ದೀಪ್ ಅಳವಡಿಸಿ ಜೋಡಿ ರಸ್ತೆ ಮಾಡಿಸಲಾಗುವುದು ಎಂದರು.
ಸಿಂಗಟಗೆರೆಗೆ ಕೆಇಬಿ ಇಲಾಖೆ ಸೆಕ್ಷನ್ ಕಚೇರಿ ಮಂಜೂರಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು. ನಮ್ಮ ಕಾಂಗ್ರೆಸ್ ಸರಕಾರವು ಅಭಿವೃದ್ದಿಗೆ ಆದ್ಯತೆ ನೀಡುತ್ತಿದೆ. ಬಡವರು ಸ್ವಾಭಿಮಾನಿಗಳಾಗಿ ಬದುಕಲು ಅನುವು ಮಾಡಿಕೊಟ್ಟಿದೆ ಎಂದರು.ತಹಸೀಲ್ದಾರ್ ಪೂರ್ಣಿಮಾ ಮಾತನಾಡಿ, ಗ್ರಾಮೀಣರ ಮನೆ ಬಾಗಿಲಿಗೆ ಸರ್ಕಾರದ ಆಡಳಿತ ಬರುವ ಮೂಲಕ ಜನರ ಸಮಸ್ಯೆ ಬಗೆಹರಿಸಲು ಆದ್ಯತೆ ನೀಡಿದೆ. ಜನರು ಇದರ ಸದುಪಯೋಗ ಪಡಿಸಿ ಕೊಳ್ಳಬೇಕು ಎಂದು ತಿಳಿಸಿದರು.
ತಾಪಂ ಕಾರ್ಯನಿರ್ವಹಣಾಧಿಕಾರಿ ಸಿ .ಆರ್. ಪ್ರವೀಣ್ ಮಾತನಾಡಿ, ತಾಲೂಕು ಆಡಳಿತ ನಿಮ್ಮ ಗ್ರಾಮಕ್ಕೇ ಬರುವ ಮೂಲಕ ಎಲ್ಲ ಇಲಾಖೆಗಳ ಅಧಿಕಾರಿಗಳು ಬಂದಿದ್ದು, ಸ್ವಳದಲ್ಲೇ ಗ್ರಾಮೀಣ ಜನರ ಸಮಸ್ಯೆಗಳಿಗೆ ಪರಿಹಾರ ಕಂಡು ಕೊಳ್ಳಲು ಈ ಜನ ಸಂಪರ್ಕಸಭೆಯನ್ನು ಶಾಸಕರ ಮಾರ್ಗದರ್ಶನದಲ್ಲಿ ಆಯೋಜಿಸಲಾಗಿದೆ ಎಂದರು.ಸಭೆಯಲ್ಲಿ ಸಿಂಗಟಗೆರೆ ಗ್ರಾಪಂ ಅಧ್ಯಕ್ಷೆ ಮಧುಮಾಲ, ಉಪಾಧ್ಯಕ್ಷೆ ಮಂಜುಳಾ, ಸದಸ್ಯರಾದ ಗಿರೀಶ್, ರಮೇಶ್ ,ರಘು, ರವಿ, ಶಾಂತ, ಸವಿತಾ, ಶಶಿಕಲಾ, ಸುಧಾ, ಜಯಮ್ಮ, ಶರತ್ ಮೋಹನ್ ಕುಮಾರ್, ಅಧಿಕಾರಿಗಳಾದ ದೇವರಾಜ್, ಕಲ್ಲೇಶಪ್ಪ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ವಿವಿಧ ಗ್ರಾಮಗಳ ಜನರು ಭಾಗವಹಿಸಿದ್ದರು.
-- ಬಾಕ್ಸ್ --ಸ್ಮಶಾನದ ಮಣ್ಣು ತೆಗೆಯಲು ಅವಕಾಶ ನೀಡದಂತೆ ಮನವಿ
ಸಿಂಗಟಗೆರೆ ಗ್ರಾಮದ ಸ್ಮಶಾನ ಜಾಗದಿಂದ ಮಣ್ಣು ಹೊಡೆದು ಹಾಳು ಮಾಡುತ್ತಿದ್ದಾರೆ. ಇದನ್ನು ತಪ್ಪಿಸುವಂತೆ ಮಾಡಿದ ಮನವಿಗೆ ಶಾಸಕ ಆನಂದ್ ಕೂಡಲೇ ಕ್ರಮ ವಹಿಸುವಂತೆ ಸೂಚಿಸಿದರು.ಸಿಂಗಟಗೆರೆ ವ್ಯಾಪ್ತಿಗೆ ಬರುವ 11 ಉಪ ಗ್ರಾಮಗಳ ರಚನೆಗೆ ಕ್ರಮ ವಹಿಸಿ ನಾವೇ ದಾಖಲಾತಿ ನೀಡೋಣ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಜೆಜೆಎಂ ಕಾಮಗಾರಿಯಿಂದ ಗ್ರಾಮಗಳಲ್ಲಿ ಆಗಿರುವ ಅವಾಂತರ ಸರಿಪಡಿಸುವಂತೆ, ಪಹಣಿಗಳ ತಿದ್ದುಪಡಿ, ರೇಶನ್ ಕಾರ್ಡ್, ಕುಡಿವ ನೀರು, ರಸ್ತೆಗಳ ತೆರವು ಸೇರಿದಂತೆ ವಿವಿಧ ಸಮಸ್ಯೆಗಳು ಸಭೆಯಲ್ಲಿ ಬಂದಾಗ ಶಾಸಕರು ಸಂಭಂಧಿಸಿದ ಅಧಿಕಾರಿಗಳು ಚರ್ಚಿಸಿ ಕ್ರಮ ವಹಿಸುವಂತೆ ಸೂಚಿಸಿದರು.
25ಕೆಕೆಡಿಯು1.ಕಡೂರು ತಾಲೂಕಿನ ಸಿಂಗಟಗೆರೆ ಗ್ರಾಮದಲ್ಲಿ ಜನಸಂಪರ್ಕ ಸಭೆ ನಡೆಯಿತು. ಶಾಸಕ ಕೆ. ಎಸ್. ಆನಂದ್ , ತಹಸೀಲ್ದಾರ್ ಪೂರ್ಣಿಮಾ, ಇಒ ಸಿ.ಆರ್ ಪ್ರವೀಣ್, ಗ್ರಾಮ ಪಂಚಾಯ್ತಿ ಸದಸ್ಯರು ಅಧಿಕಾರಿಗಳು ಜನರು ಇದ್ದರು.