ಸಾರಾಂಶ
ಕನ್ನಡಪ್ರಭ ವಾರ್ತೆ ಅಥಣಿ
ರಾಜ್ಯದ ಅತ್ಯುತ್ತಮ 10 ಸರ್ಕಾರಿ ಆಸ್ಪತ್ರೆಗಳಲ್ಲಿ ಅಥಣಿ ಸಾರ್ವಜನಿಕ ಆಸ್ಪತ್ರೆ ಇರುವುದು ನಮ್ಮೆಲ್ಲರಿಗೆ ಹೆಮ್ಮೆಯ ಸಂಗತಿಯಾಗಿದೆ. ಶಾಸಕರ ವಿಶೇಷ ಕಾಳಜಿಯಿಂದ ಆಸ್ಪತ್ರೆಗೆ ಹೈಟೆಕ್ ಸೌಲಭ್ಯಗಳು ದೊರಕಿವೆ. ಇದರಿಂದ ಬಡ ರೋಗಿಗಳಿಗೆ ಉತ್ತಮ ಗುಣಮಟ್ಟದ ಆರೋಗ್ಯ ಸೇವೆ ಉಚಿತವಾಗಿ ಒದಗಿಸಲು ಸಹಕಾರಿಯಾಗಿದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ.ಬಸಗೌಡ ಕಾಗೆ ಹೇಳಿದರು.ಪಟ್ಟಣದ ಹೆಸ್ಕಾಂ ಕಚೇರಿಯ ಆವರಣದಲ್ಲಿ ಸರ್ಕಾರಿ ಆಸ್ಪತ್ರೆಗೆ ದಿನದ 24 ಗಂಟೆಯ ವಿದ್ಯುತ್ ಸೇವೆಯ ಫೀಡರ್‌ಗೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು. ತಾಲೂಕಿನ ಬಡ ರೋಗಿಗಳಿಗೆ ಉತ್ತಮ ಗುಣಮಟ್ಟದ ಆರೋಗ್ಯ ಸೇವೆಗಳು ದೊರಕಬೇಕು ಮತ್ತು ಅತ್ಯಾಧುನಿಕ ಸೌಲಭ್ಯಗಳು ಕೂಡಾ ಉಚಿತವಾಗಿ ದೊರಕಬೇಕು ಎಂಬ ವಿಶೇಷ ಕಾಳಜಿಯೊಂದಿಗೆ ಶಾಸಕ ಲಕ್ಷ್ಮಣ ಸವದಿ ಅವರು ಸರ್ಕಾರದಿಂದ ವಿಶೇಷ ಅನುದಾನ ನೀಡುವ ಮೂಲಕ ಅಥಣಿ ಸಾರ್ವಜನಿಕ ಆಸ್ಪತ್ರೆಗೆ ಸೌಲಭ್ಯಗಳನ್ನು ಒದಗಿಸಿದ್ದಾರೆ ಎಂದರು.
ಅಥಣಿ ಹೆಸ್ಕಾಂ ಉಪ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರ ಜಿ.ವ್ಹಿ.ಸಂಪಣ್ಣವರ ಹಾಗೂ ಸಿಬ್ಬಂದಿ, ಲೈಮನ್‌ಗಳನ್ನು ಅಭಿನಂದಿಸಿದರು. ಅಧಿಕೃತ ಚಾಲನೆಗೆ ಶಾಸಕರು ಆಗಮಿಸಬೇಕಾಗಿತ್ತು. ಅನಿವಾರ್ಯ ಕಾರಣಗಳಿಂದ ಅವರ ಅನುಪಸ್ಥಿತಿಯಲ್ಲಿ ಅವರ ಸಲಹೆಯಂತೆ ನಾವಿಂದು ಈ ವಿದ್ಯುತ್ ಸಂಪರ್ಕಕ್ಕೆ ಚಾಲನೆ ನೀಡುತ್ತಿದ್ದೇವೆಂದರು.ಜಿ.ವಿ.ಸಂಪಣ್ಣವರ ಪ್ರಾಸ್ತಾವಿಕವಾಗಿ ಮಾತನಾಡಿ, ಶಾಸಕ ಸವದಿ ಅವರು ಆರೋಗ್ಯ ಇಲಾಖೆಯಂತೆ ಹೆಸ್ಕಾಂಗೂ ವಿಶೇಷ ಅನುದಾನ ಒದಗಿಸಿದ್ದಾರೆ. ಅವರ ಮಾರ್ಗದರ್ಶನನಂತೆ ತಾಲೂಕಿನ ಎಲ್ಲಾ ವಿದ್ಯುತ್ ಘಟಕಗಳಲ್ಲಿ ಅಗತ್ಯ ಸೌಲಭ್ಯ ಒದಗಿಸಿದ್ದೇವೆ. ರೈತಾಪಿ ಜನರಿಗೆ ಈಗ ಟ್ರಾನ್ಸ್‌ಫರ್ಮಗಳನ್ನು ಒದಗಿಸುವಲ್ಲಿ ಯಾವುದೇ ವಿಳಂಬ ಮಾಡದೇ, 24 ಗಂಟೆ ಒಳಗಾಗಿ ಒದಗಿಸುವ ವ್ಯವಸ್ಥೆ ಮಾಡಿಕೊಂಡಿದ್ದೇವೆ. ಮುಂದಿನ ದಿನಗಳಲ್ಲಿ ಸೋಲಾರ್ ಪಾರ್ಕ್ ನಿರ್ಮಿಸಲಾಗುವುದು. ಶೀಘ್ರ ಸಂಪರ್ಕ ಯೋಜನೆ, ಕುಸುಮ ಬಿ ಮತ್ತು ಸಿ ಯೋಜನೆಗಳಲ್ಲಿ ರೈತರು ಸೋಲಾರ್ ಪಂಪ್‌ಸೆಟ್ ಅಳವಡಿಸಿಕೊಳ್ಳಬೇಕು. ಈ ಯೋಜನೆಗೆ ರೈತರು ಕೇವಲ ಶೇ.20 ರಷ್ಟು ಹಣ ಸಂದಾಯ ಮಾಡಿದರೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಶೇ.80 ಸಬ್ಸಿಡಿ ಸೌಲಭ್ಯ ದೊರಕಲಿದೆಂದರು.
ಈ ವೇಳೆ ಹೆಸ್ಕಾಂ ಸಹಾಯಕ ಅಭಿಯಂತ ಸಿ.ಆರ್.ಗುರುಸ್ವಾಮಿ, ಎ.ಎಸ್.ಮಾಕಾಣಿ, ಆರ್.ವೈ.ಗುಗ್ರಿ, ಶಾಖಾಧಿಕಾರಿಗಳಾದ ಮಹಾಂತೇಶ ಅಂಬೋಳಿ, ಬಿ.ಜಿ. ಸನದಿ, ಎಸ್.ಎ.ಪಾರ್ಥನಹಳ್ಳಿ, ಬಿ.ಎಸ್.ಸನದಡ್ಡಿ ಸೇರಿ ಇತರರಿದ್ದರು. ಮಹಾಂತೇಶ ಅಂಬೋಳಿ ಸ್ವಾಗತಿಸಿ, ಅಶೋಕ ವಾಲೀಕಾರ ನಿರೂಪಿಸಿ, ಪಿ.ಬಿ ಸತ್ತಿ ವಂದಿಸಿದರು.ಅಥಣಿ ಸರ್ಕಾರಿ ಆಸ್ಪತ್ರೆಯಲ್ಲಿ ಬಡ ರೋಗಿಗಳಿಗೆ ಉತ್ತಮ ಆರೋಗ್ಯ ಸೇವೆಗಳು ದೊರಕುತ್ತಿವೆ. ರಾಜ್ಯದ ಮಾದರಿ ಆಸ್ಪತ್ರೆಗಳಲ್ಲಿ ಅಥಣಿ ಆಸ್ಪತ್ರೆ ಕೂಡ ಒಂದಾಗಿರುವುದು ಹೆಮ್ಮೆ ಎನಿಸುತ್ತದೆ. ಬಡ ರೋಗಿಗಳಿಗೆ ಆರೋಗ್ಯ ಸೇವೆಯಲ್ಲಿ ತೊಂದರೆ ಆಗಬಾರದು ಎಂಬ ಉದ್ದೇಶದಿಂದ ಹೆಸ್ಕಾಂ ಅಧಿಕಾರಿಗಳಿಗೆ ಪ್ರತ್ಯೇಕ ಕೇಬಲ್ ವ್ಯವಸ್ಥೆ ಮಾಡುವಂತೆ ಸೂಚನೆ ನೀಡಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಉತ್ತಮ ಕೆಲಸ ಮಾಡಿದ್ದಾರೆ. ಅವರ ಕಾರ್ಯ ಅಭಿನಂದಿಸುತ್ತೇನೆ. ಮುಂಬರುವ ದಿನಗಳಲ್ಲಿ ಆಸ್ಪತ್ರೆಗೆ ಅಗತ್ಯ ಸೌಲಭ್ಯ ಒದಗಿಸಲು ಪ್ರಯತ್ನಿಸುತ್ತೇನೆ. ಶೀಘ್ರದಲ್ಲಿ ತಾಯಿ, ಮಕ್ಕಳ ಆಸ್ಪತ್ರೆ ಕಾಮಗಾರಿಗೆ ಚಾಲನೆ ನೀಡಲಾಗುವುದು. ಲಕ್ಷ್ಮಣ ಸವದಿ, ಶಾಸಕರು ಅಥಣಿ
ಶಾಸಕರ ವಿಶೇಷ ಕಾಳಜಿ ಮತ್ತು ಆರೋಗ್ಯ ಇಲಾಖೆಯ ತಜ್ಞ ವೈದ್ಯರ ಮತ್ತು ಸಿಬ್ಬಂದಿ ಉತ್ತಮ ಸೇವೆಯಿಂದ ಅಥಣಿ ಸರ್ಕಾರಿ ಆಸ್ಪತ್ರೆ ರಾಜ್ಯದಲ್ಲಿಯೇ ಮಾದರಿ ಆಸ್ಪತ್ರೆಯಾಗಿದೆ. ದಿನದ 24 ಗಂಟೆ ಶುದ್ಧ ಕುಡಿವ ನೀರು ಮತ್ತು ವಿದ್ಯುತ್ ಸಂಪರ್ಕ ಹೊಂದಿರುವ ಜಿಲ್ಲೆಯ ಹೈಟೆಕ್ ಆಸ್ಪತ್ರೆಯಾಗಿದೆ. ತಾಲೂಕಿನ ಬಡ ರೋಗಿಗಳು ಆಸ್ಪತ್ರೆಯ ಅತ್ಯಾಧುನಿಕ ಸೇವೆ ಸದುಪಯೋಗ ಮಾಡಿಕೊಳ್ಳಬೇಕು. ಡಾ. ಬಸಗೌಡ ಕಾಗೆ, ತಾಲೂಕು ವೈದ್ಯಾಧಿಕಾರಿ ಅಥಣಿ