ಸಾರಾಂಶ
ಕನ್ನಡಪ್ರಭ ವಾರ್ತೆ, ತುಮಕೂರುಮೂರು ಉಪಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದ ಹಿನ್ನೆಲೆಯಲ್ಲಿ ತುಮಕೂರಿನ ಟೌನ್ ಹಾಲ್ ವೃತ್ತದಲ್ಲಿ ಮುಖಂಡರು ಹಾಗೂ ಕಾರ್ಯಕರ್ತರು ಸಂಭ್ರಮಾಚರಣೆ ನೆರವೇರಿಸಿದರು.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ಗೌಡ ನೇತೃತ್ವದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಮುಖಂಡರು, ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮವನ್ನು ಆಚರಿಸಿದರು.ಬಳಿಕ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ ಇದೊಂದು ಅಭೂತಪೂರ್ವ ಗೆಲುವು ಎಂದು ವ್ಯಾಖ್ಯಾನಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಗೃಹ ಸಚಿವ ಡಾ. ಜಿ. ಪರಮೇಶ್ವರ್ ಸೇರಿದಂತೆ ಮುಂತಾದ ನಾಯಕರ ಸಂಘಟಿತ ಹೋರಾಟದ ಫಲವಾಗಿ ಕಾಂಗ್ರೆಸ್ ಮೂರು ಉಪಚುನಾವಣೆಯಲ್ಲಿ ಗೆದ್ದಿದೆ ಎಂದರು.ಚುನಾವಣಾ ಪ್ರಕ್ರಿಯೆ ಆರಂಭವಾದಾಗಿನಿಂದಲೂ ಜೆಡಿಎಸ್ ಹಾಗೂ ಬಿಜೆಪಿ ಮುಖಂಡರು ಕಾಂಗ್ರೆಸ್ ವಿರುದ್ಧ ಒಂದಲ್ಲಾ ಒಂದು ಸುಳ್ಳು ಆರೋಪಗಳನ್ನು ಮಾಡುತ್ತಲೇ ಬಂದಿದ್ದರು. ಆದರೆ ಮೂರು ಕ್ಷೇತ್ರಗಳಲ್ಲೂ ಗೆಲ್ಲುವ ಮೂಲಕ ಮತದಾರರೇ ಟೀಕಾಕಾರರಿಗೆ ಉತ್ತರ ಕೊಟ್ಟಿದ್ದಾರೆ ಎಂದರು.ಕಾಂಗ್ರೆಸ್ ನ ಗ್ಯಾರಂಟಿ ಯೋಜನೆಗಳು, ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸೇರಿದಂತೆ ಎಲ್ಲಾ ಮುಖಂಡರ ಕೆಲಸಗಳು ಜನರ ಮನಸ್ಸನ್ನು ಗೆದ್ದಿದೆ ಎಂಬುದು ಈ ಫಲಿತಾಂಶದಿಂದ ತಿಳಿಯುತ್ತದೆ ಎಂದರು.2023 ರ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಚಂಡ ಬಹುಮತದಿಂದ ಗೆದ್ದು ಅಧಿಕಾರದ ಗದ್ದುಗೆ ಏರಿದ್ದ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸಲು ವಿರೋಧ ಪಕ್ಷಗಳು ನಿರಂತರವಾಗಿ ಮಾಡುತ್ತಿದ್ದ ಪ್ರಯತ್ನಗಳು ಈ ಉಪಚುನಾವಣೆ ಫಲಿತಾಂಶದ ಮೂಲಕ ವಿಫಲವಾದಂತಿದೆ ಎಂದರು.ಎಲ್ಲಾ ವರ್ಗದವರ ಏಳಿಗೆಗೆ ಶ್ರಮಿಸುತ್ತಿರುವ ಕಾಂಗ್ರೆಸ್ ಗೆ ಈ ಫಲಿತಾಂಶ 2028 ರ ಸಾರ್ವತ್ರಿಕ ಚುನಾವಣೆಗೆ ದಿಕ್ಸೂಚಿ ಎಂದು ಬಣ್ಣಿಸಿದರು. ಚುನಾವಣೆ ಪ್ರಕ್ರಿಯೆ ಆರಂಭವಾದಾಗ ವಿರೋಧ ಪಕ್ಷಗಳು ಕಾಂಗ್ರೆಸ್ ಪಕ್ಷ ಮೂರರಲ್ಲಿ ಒಂದೂ ಕ್ಷೇತ್ರವನ್ನು ಗೆಲ್ಲುವುದಿಲ್ಲ ಎಂದು ಅಪಪ್ರಚಾರ ಮಾಡುತ್ತಿತ್ತು. ಆದರೆ ಪಕ್ಷದ ಕಾರ್ಯಕರ್ತರು ಕಾಂಗ್ರೆಸ್ ಗೆ ಅಭೂತಪೂರ್ವ ಗೆಲುವನ್ನು ತಂದು ಕೊಟ್ಟಿದ್ದಾರೆ ಎಂದರು.
ಮಧ್ಯ ಕರ್ನಾಟಕ, ಕಲ್ಯಾಣ ಕರ್ನಾಟಕ ಹಾಗೂ ಮೈಸೂರು ಕರ್ನಾಟಕ ಹೀಗೆ ಮೂರು ಕಡೆ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲುವುದರೊಂದಿಗೆ ಜನ ಕಾಂಗ್ರೆಸ್ ಸರ್ಕಾರದ ಪರವಾಗಿ ಇದ್ದಾರೆ ಎಂಬುದನ್ನು ತೋರಿಸುತ್ತದೆ ಎಂದು ತಿಳಿಸಿದರು.ಗೆಲುವಿನ ಬಳಿಕ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಕಚೇರಿಯಲ್ಲಿ ಮಾತನಾಡಿದ ಹಿರಿಯ ಮುಖಂಡ ಅತೀಕ್ ಅಹಮದ್ ಅವರು ಉಪ ಚುನಾವನೆಯಲ್ಲಿ ಬಿಜೆಪಿಗೆ ರಾಜ್ಯದ ಜನ ತಕ್ಕ ಪಾಠ ಕಲಿಸಿದ್ದಾರೆ ಎಂದರು. ರಾಜ್ಯದಲ್ಲಿ ಡಾ. ಜಿ ಪರಮೇಶ್ವರ್ ನೇತೃತ್ವದ ಕಾಂಗ್ರೆಸ್ ಪ್ರಣಾಳಿಕಾ ಸಮಿತಿ ನೀಡಿರುವ ಪಂಚ ಗ್ಯಾರಂಟಿ ಯೋಜನೆಗಳಿಗೆ ರಾಜ್ಯದ ಜನರಿಂದ ಉತ್ತಮ ಪ್ರತಿಕ್ರಿಯ ವ್ಯಕ್ತವಾಗಿರುವುದು ಈ ಚುನಾವಣೆಯಿಂದ ತಿಳಿದು ಬಂದಿದ್ದು, ರಾಜ್ಯದಲ್ಲಿ ಮುಂದೆ ನಡೆಯುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಇದು ದಿಕ್ಸೂಚಿಯಾಗಲಿದೆ ಎಂದರು. ತುಮಕೂರು ಮಹಾನಗರ ಪಾಲಿಕೆ ಚುನಾವಣೆಗೆ ಈಗಾಗಲೇ ಪಕ್ಷವನ್ನು ಸಂಘಟಿಸುತ್ತಿದ್ದು, ಪ್ರತಿ ವಾರ್ಡ್ ಳಲ್ಲಿಯೂ ಸಹ ಸಂಘಟನೆಗೆ ಒತ್ತು ನೀಡಲಾಗುತ್ತಿದೆ. ಚುನಾವಣೆಯ ಫಲಿತಾಂಶದ ನಂತರ ಮತ್ತಷ್ಟು ಉತ್ಸಾಹ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಲ್ಲಿ ಬಂದಿದ್ದು ಈ ಬಾರಿಯ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಖಚಿತವಾಗಿ ಅಧಿಕಾರಕ್ಕೆ ಬರುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.