ಸಾರಾಂಶ
ಸಿದ್ದರಾಮಯ್ಯನವರು ಒಬ್ಬ ಮಾದರಿ ರಾಜಕಾರಣಿ. ವಿಧಾನಸಭೆ ಅಧಿವೇಶನ ನಡೆದಾಗಲೇ ಮುಡಾ ಸೈಟ್‌ಗಳನ್ನು ವಾಪಸ್ ಕೊಟ್ಟಿದ್ದರೆ ಮುಗಿದು ಹೋಗುತ್ತಿತ್ತು. ಆದರೆ, ಹಾಗೆ ಮಾಡದೇ ತಮ್ಮ ಕಾಲಿನ ಮೇಲೆ ತಾವೇ ಕಲ್ಲು ಹಾಕಿಕೊಂಡಿದ್ದಾರೆ.
ಹುಬ್ಬಳ್ಳಿ:
ಸಿದ್ದರಾಮಯ್ಯ ಅವರು ಮುಡಾ ಹಗರಣದ ಬಗ್ಗೆ ಆರಂಭದಲ್ಲಿಯೇ ತಪ್ಪು ಒಪ್ಪಿಕೊಂಡಿದ್ದರೆ ಈ ದುಸ್ಥಿತಿ ಬರುತ್ತಿರಲಿಲ್ಲ. ಈಗ ಅವರ ಮುಂದಿರುವುದು ರಾಜೀನಾಮೆ ಒಂದೇ ದಾರಿ ಎಂದು ಕೇಂದ್ರ ರೈಲ್ವೆ ಖಾತೆಯ ರಾಜ್ಯ ಸಚಿವ ವಿ. ಸೋಮಣ್ಣ ಸಲಹೆ ನೀಡಿದರು.ಅವರು ಇಲ್ಲಿನ ಶ್ರೀಸಿದ್ಧಾರೂಢಸ್ವಾಮಿ ಮಠಕ್ಕೆ ಗುರುವಾರ ಭೇಟಿ ನೀಡಿ ಉಭಯ ಶ್ರೀಗಳ ಗದ್ದುಗೆ ದರ್ಶನ ಪಡೆದ ನಂತರ ಸುದ್ದಿಗಾರರೊಂದಿಗೆ ಈ ಕುರಿತು ಮಾತನಾಡಿದರು.
ಸಿದ್ದರಾಮಯ್ಯನವರು ಒಬ್ಬ ಮಾದರಿ ರಾಜಕಾರಣಿ. ವಿಧಾನಸಭೆ ಅಧಿವೇಶನ ನಡೆದಾಗಲೇ ಮುಡಾ ಸೈಟ್‌ಗಳನ್ನು ವಾಪಸ್ ಕೊಟ್ಟಿದ್ದರೆ ಮುಗಿದು ಹೋಗುತ್ತಿತ್ತು. ಆದರೆ, ಹಾಗೆ ಮಾಡದೇ ತಮ್ಮ ಕಾಲಿನ ಮೇಲೆ ತಾವೇ ಕಲ್ಲು ಹಾಕಿಕೊಂಡಿದ್ದಾರೆ. ಈಗ ಸೈಟ್ ವಾಪಸ್ ನೀಡುವ ಮೂಲಕ ತಪ್ಪು ಮಾಡಿರುವುದನ್ನು ಒಪ್ಪಿಕೊಂಡಂತಾಗಿದೆ ಎಂದರು.ಮಾದರಿಯಾಗಲಿ:
ಸಿದ್ದರಾಮಯ್ಯನವರು ತಮ್ಮ ಇತಿಹಾಸವನ್ನು ಮುಂದಿನ ಪೀಳಿಗೆಗೆ ತಿಳಿಸಿಕೊಡಬೇಕಿದ್ದರೆ ರಾಜೀನಾಮೆ ನೀಡಿ ಮಾದರಿಯಾಗಬೇಕು. ತನಿಖೆಯ ನಂತರ ಆರೋಪ ಮುಕ್ತರಾಗಿ ಬಂದು ಮತ್ತೆ ಮುಖ್ಯಮಂತ್ರಿ ಹುದ್ದೆ ಅಲಂಕರಿಸಲಿ, ಆಗ ನಾವೇ ಅವರಿಗೆ ಅಭಿನಂದನೆ ಸಲ್ಲಿಸುತ್ತೇವೆ. ಅದನ್ನು ಬಿಟ್ಟು ಆತ್ಮಸಾಕ್ಷಿ ಅದು, ಇದು ಎಂದು ಕಾಗಕ್ಕ- ಗುಬ್ಬಕ್ಕನ ಕಥೆ ಹೇಳುತ್ತಿರುವುದು ಸರಿಯಲ್ಲ ಎಂದರು.ಒಳ್ಳೆಯ ಸ್ನೇಹಿತರು:
ನಾನು ಮತ್ತು ಸಿದ್ದರಾಮಯ್ಯನವರು ಜನತಾ ಪರಿವಾರದಿಂದ ಬಂದವರು. ನಾವಿಬ್ಬರು ಒಳ್ಳೆಯ ಸ್ನೇಹಿತರು. ಅವರಂತಹ ನಾಯಕರಿಗೆ ಇದು ಶೋಭೆ ತರುವುದಿಲ್ಲ. ಮುಖ್ಯಮಂತ್ರಿಗಳು ನನ್ನ ಸ್ನೇಹಿತರು ಅವರಿಗೆ ನಾನು ಕೈ ಮುಗಿದು ಹೇಳುವೆ, ಈಗಾಗಲೇ ಮುಡಾ ಹಗರಣದಲ್ಲಿ ಕೈ-ಕಾಲು ಹಾಗೂ ಬಾಯಿ ಸುಟ್ಟುಕೊಂಡಿದ್ದು ಸಾಕು. ಒಂದು ತಪ್ಪು ಮುಚ್ಚಲು ಅನೇಕ ತಪ್ಪು ಮಾಡಿದ್ದೀರಿ, ಇನ್ನಾದರೂ ರಾಜೀನಾಮೆ ನೀಡಿ ಮಾದರಿಯಾಗಿ ಎಂದು ಸಲಹೆ ನೀಡಿದರು.ಬಣ ರಾಜಕೀಯ ಇಲ್ಲ:
ಬಿಜೆಪಿಯಲ್ಲಿ ಬಣ ರಾಜಕೀಯ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ, ಬಿಜೆಪಿಯಲ್ಲಿ ಯಾವುದೇ ಬಣ ರಾಜಕೀಯ ಇಲ್ಲ. ಸಣ್ಣಪುಟ್ಟ ಭಿನ್ನಾಭಿಪ್ರಾಾಯಗಳು ಇರುವುದು ಸಹಜ, ಪಕ್ಷದ ವರಿಷ್ಠರು ಅದನ್ನು ಸರಿಪಡಿಸುತ್ತಾರೆ ಎಂದು ಪ್ರತಿಕ್ರಿಯಿಸಿದರು.ಸಂತರಿಂದಲೇ ಉಳಿದ ಜಗತ್ತು:ಪವಾಡ ಪುರುಷ ಸಿದ್ಧಾರೂಢರಂತಹ ಮಹಾನ್ ಸಂತರ ಆಶೀರ್ವಾದದ ಫಲವಾಗಿ ಇಂದು ಈ ಜಗತ್ತು ಉಳಿದಿದೆ ಎಂದು ಕೇಂದ್ರ ರೈಲ್ವೆ ಖಾತೆಯ ರಾಜ್ಯ ಸಚಿವ ವಿ. ಸೋಮಣ್ಣ ಹೇಳಿದರು.
ನಗರದ ಶ್ರೀ ಸಿದ್ಧಾರೂಢಸ್ವಾಮಿ ಮಠಕ್ಕೆ ಗುರುವಾರ ಭೇಟಿ ನೀಡಿ ದರ್ಶನ ಪಡೆದು ನಂತರ ಶ್ರೀಮಠದ ಟ್ರಸ್ಟ್ ಕಮೀಟಿ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿ, ಘಜನಿ ಮಹ್ಮದ್ ಅಂಥವರು ಭಾರತದ ಮೇಲೆ ಹಲವಾರು ಬಾರಿ ದಂಡೆತ್ತಿ ಬಂದರೂ ಸಿದ್ಧಾರೂಢರಂತಹ ಮಹಾನ್ ಸಂತರ ಆಶೀರ್ವಾದದಿಂದ ನಾವೆಲ್ಲ ಭಾರತೀಯರು ಬದುಕಿ ಉಳಿದಿದ್ದೇವೆ. ಪ್ರತಿಯೊಬ್ಬರು ದೇವರ ಮೇಲೆ ನಂಬಿಕೆ ಇಟ್ಟುಕೊಳ್ಳಬೇಕು. ನೈಋತ್ಯ ರೈಲ್ವೆ ಇಲಾಖೆ ಇರುವುದೇ ಸಿದ್ಧಾರೂಢರ ಆಶೀರ್ವಾದದಿಂದ, ಹುಬ್ಬಳ್ಳಿ ರೈಲ್ವೆ ನಿಲ್ದಾಣದ ಬಳಿ ಸಿದ್ಧಾರೂಢರ ಪ್ರತಿಮೆ ಇಡುವ ನಿಟ್ಟಿನಲ್ಲಿ ಕ್ರಮಕೈಗೊಳ್ಳುತ್ತೇನೆ ಎಂದರು.ಶಕ್ತಿ ತುಂಬುವ ಕೆಲಸ:
ಈಗಾಗಲೇ ರಾಜ್ಯದಲ್ಲಿ ₹43 ಸಾವಿರ ಕೋಟಿ ವೆಚ್ಚದ ರೈಲ್ವೆ ಯೋಜನೆಯನ್ನು ಕೈಗೆತ್ತಿಕೊಂಡಿದ್ದೇವೆ. ಜತೆಗೆ ಹಳೆಯ ರೈಲ್ವೆ ಯೋಜನೆ ಪೂರ್ಣಗೊಳಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳುತ್ತೇವೆ. ಸಾಮಾನ್ಯ ಜನರಿಗೆ ರೈಲ್ವೆ ಇಲಾಖೆಯಿಂದ ಶಕ್ತಿ ತುಂಬುವ ಕೆಲಸ ಮಾಡಲಾಗುವುದು ಎಂದರು.