ದ.ಕ.: ಈ ಬಾರಿ ಮಾದರಿ ಮತಗಟ್ಟೆಗಳಿಗೆ ಜಾನಪದ ಟಚ್‌!

| Published : Mar 30 2024, 12:46 AM IST

ದ.ಕ.: ಈ ಬಾರಿ ಮಾದರಿ ಮತಗಟ್ಟೆಗಳಿಗೆ ಜಾನಪದ ಟಚ್‌!
Share this Article
  • FB
  • TW
  • Linkdin
  • Email

ಸಾರಾಂಶ

ದಕ್ಷಿಣ ಕನ್ನಡ ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆ ಆರಂಭಗೊಂಡಿದೆ. ಈ ಬಾರಿ ಕರಾವಳಿಯ ಜಾನಪದ ಸೊಗಡನ್ನು ಮತಗಟ್ಟೆಗಳಲ್ಲಿ ಚಿತ್ರಿಸಲು ಉದ್ದೇಶಿಸಲಾಗಿದ್ದು, ಈ ಮೂಲಕ ಮಾದರಿ ಮತಗಟ್ಟೆ ಸಿದ್ಧಪಡಿಸಲಾಗುತ್ತಿದೆ.

ಆತ್ಮಭೂಷಣ್‌

ಕನ್ನಡಪ್ರಭ ವಾರ್ತೆ ಮಂಗಳೂರು

ದಕ್ಷಿಣ ಕನ್ನಡ ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆ ಆರಂಭಗೊಂಡಿದೆ. ರಾಜಕೀಯ ಪಕ್ಷಗಳ ಪ್ರಚಾರ ಭರಾಟೆಗಿಂತ ಈಗ ಎಲ್ಲರ ಗಮನ ಸೆಳೆಯುತ್ತಿರುವುದು ‘ಸ್ವೀಪ್‌’ ಅಭಿಯಾನ. ಈ ಬಾರಿ ಕರಾವಳಿಯ ಜಾನಪದ ಸೊಗಡನ್ನು ಮತಗಟ್ಟೆಗಳಲ್ಲಿ ಚಿತ್ರಿಸಲು ಉದ್ದೇಶಿಸಲಾಗಿದ್ದು, ಈ ಮೂಲಕ ಮಾದರಿ ಮತಗಟ್ಟೆ ಸಿದ್ಧಪಡಿಸಲಾಗುತ್ತಿದೆ. ದ.ಕ. ಜಿಲ್ಲೆಯಲ್ಲಿ ಏ.26ರಂದು ಚುನಾವಣೆ ನಡೆಯಲಿದ್ದು, ಮತದಾರರನ್ನು ಆಕರ್ಷಿಸಲು ಆಯ್ದ ಮತಗಟ್ಟೆಗಳನ್ನು ಮಾದರಿ ಮತಗಟ್ಟೆಯಾಗಿ ಪರಿವರ್ತಿಸುವ ಕೆಲಸ ನಡೆಯುತ್ತಿದೆ. ಇನ್ನು ಒಂದು ವಾರದಲ್ಲಿ ಮಾದರಿ ಮತಗಟ್ಟೆಗಳು ಸಿದ್ಧಗೊಳ್ಳುವ ನಿರೀಕ್ಷೆ ಇದೆ. ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸುವ ಮೂಲಕ ಅತ್ಯಧಿಕ ಮತದಾನದ ದಾಖಲೆ ನಿರ್ಮಿಸುವ ಗುರಿಯನ್ನು ಸ್ವೀಪ್‌ ತಂಡ ಹೊಂದಿದೆ.

ಮತಗಟ್ಟೆಗಳಿಗೆ ಜಾನಪದ ರಂಗು: ಕರಾವಳಿ ಎಂದರೆ ಜಾನಪದ ಸೊಗಡು, ಹಾಗಾಗಿ ಈ ಬಾರಿ ಯಕ್ಷಗಾನ, ಕಂಬಳ, ಭೂತಕೋಲ ಸೇರಿ ಜಾನಪದ ಆಯಾಮಗಳ ಚಿತ್ರಣ ಸಾಂಪ್ರದಾಯಿಕ ಮಾದರಿ ಮತಗಟ್ಟೆಗಳಲ್ಲಿ ಕಾಣಬಹುದು.ಭಾರತದ ಚುನಾವಣಾ ಆಯೋಗದ ನಿರ್ದೇಶನದಂತೆ ‘ಸ್ವೀಪ್‌’(ವ್ಯವಸ್ಥಿತ ಮತದಾರರ ಶಿಕ್ಷಣ ಮತ್ತು ಚುನಾವಣಾ ಭಾಗವಹಿಸುವಿಕೆ) ತಂಡ ಮಾದರಿ ಮತಗಟ್ಟೆಗಳನ್ನು ರಚಿಸಲಾಗುತ್ತದೆ. ದ.ಕ.ಲೋಕಸಭಾ ಕ್ಷೇತ್ರದಲ್ಲಿ ಎಂಟು ಅಸೆಂಬ್ಲಿ ಕ್ಷೇತ್ರಗಳಿದ್ದು, ಪ್ರತಿ ಕ್ಷೇತ್ರದಲ್ಲೂ ತಲಾ ಒಂದು ಮಾದರಿ ಮತಗಟ್ಟೆ ರೂಪಿಸಲಾಗುತ್ತದೆ. ಈ ಬಾರಿ ಐದು ವಿಭಾಗಗಳಲ್ಲಿ ಮಾದರಿ ಮತಗಟ್ಟೆ ರಚನೆಯಾಗಲಿದೆ. ಸಾಂಪ್ರದಾಯಿಕ ಮತಗಟ್ಟೆ, ಸಖಿ ಮತಗಟ್ಟೆ, ಅಂಗವಿಕಲರ ಮತಗಟ್ಟೆ, ಯುವ ಮತಗಟ್ಟೆ ಹಾಗೂ ಧ್ಯೇಯ ಆಧಾರಿತ ಮತಗಟ್ಟೆಗಳು ಇರಲಿದೆ. ಈ ಮತಗಟ್ಟೆಗಳನ್ನು ಆಯಾ ವಿಭಾಗದ ಪ್ರಾತಿನಿಧ್ಯ ಹೆಚ್ಚಾಗಿರುವಲ್ಲಿ ರಚಿಸುವಂತೆ ಸೂಚಿಸಲಾಗಿದೆ.

ಸಖಿ, ಅಂಗವಿಕಲ, ಯುವ ಹಾಗೂ ಧ್ಯೇಯ ಆಧಾರಿತ ಮತಗಟ್ಟೆಗಳಲ್ಲಿ ಆಯಾ ವಿಭಾಗಕ್ಕೆ ಸಂಬಂಧಿಸಿದ ಮಾಹಿತಿ ಚಿತ್ರಣ ನೀಡುವ ಕೆಲಸ ಮಾಡಲಿವೆ. ಮಹಿಳಾ ಪ್ರಾಬಲ್ಯ, ಕ್ರೀಡಾ ಸಾಧನೆ, ಅಂಗವಿಕಲಸ್ನೇಹಿ ಕಾರ್ಯ ಹಾಗೂ ಪರಿಸರ ಸಹ್ಯ ಮತ್ತು ಕಡಲು ಸಂರಕ್ಷಣೆ ಧ್ಯೇಯಗಳ ಚಿತ್ರಣ ಮತದಾನಕ್ಕೆ ತೆರಳುವಾಗ ಮತಗಟ್ಟೆಯಲ್ಲಿ ರಾರಾಜಿಸಲಿವೆ. ಈಗ ಶಾಲೆಗಳಲ್ಲಿ ರೂಪಿಸುವ ಮಾದರಿ ಮತಗಟ್ಟೆಗಳ ಚಿತ್ರಣ ಮುಂದಿನ ದಿನಗಳಲ್ಲಿ ಹಾಗೆಯೇ ಇರಲಿದೆ. ಈ ಮೂಲಕ ಶಾಲೆ ಕೂಡ ಜನಾಕರ್ಷಣೆಗೆ ಕಾರಣವಾಗಲಿದೆ.

72 ಮಾದರಿ ಮತಗಟ್ಟೆಗಳು: ಮಹಿಳಾ ಆಕರ್ಷಣೆಯ ಸಖಿ ಮತಗಟ್ಟೆಗಳಿದ್ದು, ಅವುಗಳನ್ನು ಸಂಪೂರ್ಣವಾಗಿ ಮಹಿಳಾ ಅಧಿಕಾರಿ, ಸಿಬ್ಬಂದಿಯೇ ನಿರ್ವಹಿಸುವಂತೆ ನೋಡಿಕೊಳ್ಳಲಾಗುತ್ತದೆ. ಅದೇ ರೀತಿ ವಿಕಲಚೇತನ ಮತಗಟ್ಟೆಗಳಲ್ಲಿ ವಿಕಲಚೇತನ ಸಿಬ್ಬಂದಿ, ಯುವ ಮತಗಟ್ಟೆಗಳಲ್ಲಿ ಯುವ ಸಿಬ್ಬಂದಿಯೇ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಲಾಗಿದೆ. 40 ಸಖಿ ಮತಗಟ್ಟೆ 40 ಹೊರತುಪಡಿಸಿ ಬೇರೆಲ್ಲ ಮಾದರಿ ಮತಗಟ್ಟೆಗಳು ತಲಾ 8 ಇರಲಿದೆ. ಒಟ್ಟು 72 ಮಾದರಿ ಮತಗಟ್ಟೆಗಳನ್ನು ರಚಿಸಲಾಗುತ್ತದೆ.

----------

ಈ ಬಾರಿಯೂ ಅಪಾರ್ಟ್‌ಮೆಂಟ್‌ಗಳಿಗೆ ಕಣ್ಣು!

ಕಳೆದ ಲೋಕಸಭಾ ಚುನಾವಣೆಯಲ್ಲಿ ದ.ಕ.ಜಿಲ್ಲೆಯಲ್ಲಿ ಅತಿ ಕಡಿಮೆ(ಮತದಾನ ದಾಖಲಾದ ಮಂಗಳೂರು ನಗರ ಪ್ರದೇಶದ ಅಪಾರ್ಟ್‌ಮೆಂಟ್‌ಗಳನ್ನು ಕೇಂದ್ರೀಕರಿಸಿ ಈ ಬಾರಿಯೂ ಸ್ವೀಪ್‌ ತಂಡ ಮತದಾನ ಜಾಗೃತಿ ಅಭಿಯಾನ ನಡೆಸಲಿದೆ. ಮಂಗಳೂರು ನಗರದಲ್ಲಿ ಸುಮಾರು 25ಕ್ಕೂ ಅಧಿಕ ದೊಡ್ಡ ಅಪಾರ್ಟ್‌ಮೆಂಟ್‌ಗಳನ್ನು ಸ್ವೀಪ್‌ ತಂಡ ಗುರುತಿಸಿದೆ. ಮಹಾನಗರ ಪಾಲಿಕೆ ಸಿಬ್ಬಂದಿ ಜತೆ ಸ್ವೀಪ್‌ ತಂಡ ಈ ಅಪಾರ್ಟ್‌ಮೆಂಟ್‌ಗಳಲ್ಲಿ ಮತದಾನ ಜಾಗೃತಿ ಮೂಡಿಸಲಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಶೇ.70ರಷ್ಟು ಮಾತ್ರ ಮತದಾನವಾಗಿತ್ತು. ಈ ಬಾರಿ ಮಂಗಳೂರು ದಕ್ಷಿಣ, ಉತ್ತರ ಹಾಗೂ ಮಂಗಳೂರು ಕ್ಷೇತ್ರಗಳಲ್ಲಿ ಹೆಚ್ಚು ಮಾತದಾನಕ್ಕೆ ಸ್ವೀಪ್‌ ತಂಡ ಟೊಂಕಕಟ್ಟಿದೆ.

------------

-ಕೋಟ್‌-

ದ.ಕ.ಜಿಲ್ಲೆಯ 1,876 ಮತಗಟ್ಟೆ ಪೈಕಿ 72 ಮತಗಟ್ಟೆಗಳನ್ನು ಮಾದರಿ ಮತಗಟ್ಟೆಯಾಗಿ ರೂಪಿಸಲಾಗುತ್ತಿದೆ. ಈ ಬಾರಿ ಕರಾವಳಿಯ ಜಾನಪದ ಶೈಲಿಯಲ್ಲಿ ಮತಗಟ್ಟೆ ರಚನೆಗೆ ಸೂಚನೆ ನೀಡಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಆಗಮಿಸಿ ಮತ ಚಲಾಯಿಸುವ ಮೂಲಕ ಅತ್ಯಧಿಕ ಮತದಾನ ನಡೆದ ಜಿಲ್ಲೆ ಎಂಬ ಹೆಗ್ಗಳಿಕೆಗೆ ದ.ಕ. ಪಾತ್ರವಾಗಬೇಕು. -ಡಾ.ಆನಂದ್‌, ಸಿಇಒ, ಅಧ್ಯಕ್ಷರು, ಸ್ವೀಪ್‌ ಸಮಿತಿ, ದ.ಕ