ಸಾರಾಂಶ
ಪ್ರತಿ ಹೆಕ್ಟೇರ್ ಗೆ 22,500 ರುಪಾಯಿನಂತೆ 30.65 ಕೋಟಿ ರು.ಗಳಲ್ಲಿ ಪರಿಹಾರದ ಮೊತ್ತ ರೈತರಿಗೆ ನೀಡಬೇಕಾಗಿದೆ. ಜೀವನೋಪಾಯಕ್ಕಾಗಿ ತೆಂಗನ್ನು ಅವಲಂಬಿಸಿರುವ ರೈತರು ಆರ್ಥಿಕ ನಷ್ಟ ಅನುಭವಿಸಿದ್ದಾರೆ. ಪ್ರಕೃತಿ ವಿಕೋಪದಡಿ ತೆಂಗು ಇಳುವರಿ ಹಾನಿಯನ್ನು ಬೆಳೆ ಹಾನಿಯೆಂದು ಪರಿಗಣಿಸಿ ಎನ್ ಡಿಆರ್ ಎಫ್ ನಲ್ಲಿ ಪರಿಹಾರ ದೊರಕಿಸಿಕೊಟ್ಟು ರೈತರ ಹಿತ ಕಾಪಾಡುವಂತೆ ಜಿಲ್ಲಾಡಳಿತ ಮೂಲಕ ರಾಜ್ಯಸರ್ಕಾರಕ್ಕೆ ವರದಿ ಸಲ್ಲಿಸಿ ಮನವಿ ಮಾಡಲಾಗಿದೆ
ಕನ್ನಡಪ್ರಭ ವಾರ್ತೆ ರಾಮನಗರ
ಹವಾಮಾನ ವೈಪರಿತ್ಯದಿಂದಾಗಿ ಜಿಲ್ಲೆಯಲ್ಲಿ ಪ್ರಸ್ತುತ ಹಂಗಾಮಿನಲ್ಲಿ ಶೇಕಡ 60ರಷ್ಟು ತೆಂಗು ಬೆಳೆಯ ಇಳುವರಿ ನಷ್ಟ ಸಂಭವಿಸಿದ್ದು, ಇದರಿಂದ 109.01 ಕೋಟಿ ರುಪಾಯಿ ನಷ್ಟ ಉಂಟಾಗಿದೆ. ಜಿಲ್ಲಾಡಳಿತದ ಸೂಚನೆಯಂತೆ ತೋಟಗಾರಿಕೆ ಇಲಾಖೆ ತಾಲೂಕು ಮಟ್ಟದಲ್ಲಿ ಜಂಟಿ ಸಮೀಕ್ಷೆ ತಂಡವನ್ನು ರಚಿಸಿತ್ತು. ಆ ತಂಡದ ಸದಸ್ಯರು ತಾಲೂಕುಗಳ ವಿವಿಧ ತಾಕುಗಳಿಗೆ ಭೇಟಿ ನೀಡಿ ಸಮೀಕ್ಷೆ ನಡೆಸಿ ಇಲಾಖೆಗೆ ವರದಿ ಸಲ್ಲಿಸಿದ್ದು, ಅದರಲ್ಲಿ ತೆಂಗು ಬೆಳೆಯ ಇಳುವರಿಯ ನಷ್ಟ ಸರಾಸರಿ ಪ್ರಮಾಣವು ಶೇಕಡ 60ರಷ್ಟೆಂದು ಅಂದಾಜಿಸಿದ್ದಾರೆ. ಪ್ರಕೃತಿ ವಿಕೋಪದಡಿ ತೆಂಗು ಇಳುವರಿ ಹಾನಿಯನ್ನು ಬೆಳೆ ಹಾನಿಯೆಂದು ಪರಿಗಣಿಸಿ ಎನ್ ಡಿಆರ್ ಎಫ್ ನಲ್ಲಿ ಪರಿಹಾರ ದೊರಕಿಸಿಕೊಟ್ಟು ರೈತರ ಹಿತ ಕಾಪಾಡುವಂತೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಜಿಲ್ಲೆಯಲ್ಲಿ ಬೆಳೆ ಸಮೀಕ್ಷೆ ಪ್ರಕಾರ ಒಟ್ಟಾರೆ 27,959 ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆ ಬೆಳೆಯಲಾಗುತ್ತಿದ್ದು, ಪ್ರತಿ ವರ್ಷ ಸರಾಸರಿ 1,50,000 ರಿಂದ 1,63,000 ಲಕ್ಷ ಕಾಯಿಗಳ ತೆಂಗು ಉತ್ಪಾದನೆಯಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ ತೆಂಗು ಬೆಳೆಯಲ್ಲಿ ಹೂವು ಬಿಡುವ ಹಾಗೂ ಕಾಯಿ ಕಚ್ಚುವ ಸಂದರ್ಭದಲ್ಲಿ ವಾಡಿಕೆಯಂತೆ ಮಳೆಯಾಗದ ಕಾರಣ, ವಾತಾವರಣದ ತಾಪಮಾನ ಹೆಚ್ಚಾಗಿದ್ದರಿಂದ ಹಾಗೂ ಕಪ್ಪು ತಲೆ ಹುಳು, ನುಸಿ ಬಾಧೆ ಹೆಚ್ಚಾಗಿರುವ ಕಾರಣ ಕಚ್ಚಿದ ಹೂವು ಹಾಗೂ ಕಾಯಿಗಳು ಅವಧಿ ಪೂರ್ವದಲ್ಲಿ ಉದುರಿ ಹೋಗಿದ್ದವು.ವರದಿಯಲ್ಲಿ ಏನಿದೆ ?:
ಜಿಲ್ಲೆಯಲ್ಲಿ ತೆಂಗು ಬೆಳೆಯನ್ನು ಹೆಚ್ಚಾಗಿ ಮಳೆಯಾಶ್ರಿತ ಪ್ರದೇಶದಲ್ಲಿ ಬೆಳೆಯಲಾಗುತ್ತಿದ್ದು, ಧೀರ್ಘಾವಧಿ ಮಳೆಯ ಅಭಾವದಿಂದ ಇಳುವರಿಯು ಕುಂಠಿತಗೊಂಡಿದೆ. ವಾತಾವರಣದ ತಾಪಮಾನ ಹೆಚ್ಚಾಗಿರುವುದರಿಂದ ಹಾಗೂ ಮುಂಗಾರಿನಲ್ಲಿ ಮಳೆಯ ಕೊರತೆಯಿಂದಾಗಿ ಮಣ್ಣಿನಲ್ಲಿ ತೇವಾಂಶ ಕಡಿಮೆಯಾಗಿ ಕಚ್ಚಿದ ಹೂವುಗಳು ಹಾಗೂ ಕಾಯಿಗಳು ಅವಧಿ ಪೂರ್ವದಲ್ಲಿ ಉದಿರಿರುವುದು ಕಂಡು ಬಂದಿದೆ. ಮಳೆಯ ಕೊರತೆಯಿಂದ ತೆಂಗಿನ ಕಪ್ಪು ತಲೆ ಹುಳುವಿನ ಭಾದೆ ಮತ್ತು ನುಸಿ ಭಾದೆಯಿಂದಾಗಿ ತೆಂಗಿನ ಕಾಯಿಗಳ ಗಾತ್ರ ಮತ್ತು ಇಳುವರಿ ಕಡಿಮೆಯಾಗಿದೆ. ಧೀರ್ಘಾಕಾಲದ ಮಳೆಯ ಕೊರತೆಯಾದ್ದರಿಂದ ಈಗಿನ ಪರಿಸ್ಥಿತಿಯಲ್ಲಿ ಮಳೆಯಾದರೂ ಸಹ ಗಿಡಗಳು ಪುನಶ್ಚೇತನಗೊಳ್ಳಲು ಬಹಳ ಸಮಯ ಬೇಕಾಗಿರುವುದರಿಂದ ರೈತರಿಗೆ ತಕ್ಷಣದಲ್ಲಿ ಇಳುವರಿ ಪಡೆದುಕೊಳ್ಳುವುದು ಸಾಧ್ಯವಾಗದ ಕಾರಣ ಆರ್ಥಿಕವಾಗಿ ನಷ್ಟ ಅನುಭವಿಸುವ ಸಂಭವ ಇದೆ. ಈ ಕಾರಣಗಳಿಂದಾಗಿ ಪ್ರಸ್ತುತ ಹಂಗಾಮಿನಲ್ಲಿ ತೆಂಗು ಬೆಳೆಯ ಇಳುವರಿಯ ನಷ್ಟ ಸರಾಸರಿ ಪ್ರಮಾಣವು ಶೇಕಡ 60ರಷ್ಟು ಮಾತ್ರ ಅಂದಾಜಿಸಬಹುದಾಗಿದೆ. ತಾಪಮಾನ ಹೆಚ್ಚಾಗಿ ಮಳೆ ಬಾರದೇ ಇರುವುದರಿಂದ ಸಮಸ್ಯೆ ಉಲ್ಪಣಿಸಿ ಹೆಚ್ಚು ನಷ್ಟ ಉಂಟಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.ಪ್ರಸ್ತುತ ಹಂಗಾಮಿನಲ್ಲಿ ಒಟ್ಟಾರೆ ಕೇವಲ 1,789 ಲಕ್ಷ ಕಾಯಿಗಳ ತೆಂಗಿನ ಇಳುವರಿಯನ್ನು ಮಾತ್ರ ನಿರೀಕ್ಷಿಸಲಾಗಿದ್ದು, ಅಂದಾಜು ಒಟ್ಟು 1090 ಲಕ್ಷ ಕಾಯಿಗಳ ತೆಂಗಿನ ಇಳುವರಿ ಪ್ರತಿಕೂಲ ಹವಾಮಾನದಿಂದ ನಷ್ಟವಾಗಿದ್ದು, ಒಟ್ಟು 109.01 ಕೋಟಿ ರು.ಗಳು ನಷ್ಟವಾಗಿದೆಯೆಂದು ಅಂದಾಜಿಸಲಾಗಿದೆ. ಎನ್ ಡಿಆರ್ ಎಫ್ ಮಾರ್ಗಸೂಚಿಯಂತೆಪ್ರತಿ ಹೆಕ್ಟೇರ್ ಗೆ 22,500 ರುಪಾಯಿನಂತೆ 30.65 ಕೋಟಿ ರು.ಗಳಲ್ಲಿ ಪರಿಹಾರದ ಮೊತ್ತ ರೈತರಿಗೆ ನೀಡಬೇಕಾಗಿದೆ. ಜೀವನೋಪಾಯಕ್ಕಾಗಿ ತೆಂಗನ್ನು ಅವಲಂಬಿಸಿರುವ ರೈತರು ಆರ್ಥಿಕ ನಷ್ಟ ಅನುಭವಿಸಿದ್ದಾರೆ. ಪ್ರಕೃತಿ ವಿಕೋಪದಡಿ ತೆಂಗು ಇಳುವರಿ ಹಾನಿಯನ್ನು ಬೆಳೆ ಹಾನಿಯೆಂದು ಪರಿಗಣಿಸಿ ಎನ್ ಡಿಆರ್ ಎಫ್ ನಲ್ಲಿ ಪರಿಹಾರ ದೊರಕಿಸಿಕೊಟ್ಟು ರೈತರ ಹಿತ ಕಾಪಾಡುವಂತೆ ಜಿಲ್ಲಾಡಳಿತ ಮೂಲಕ ರಾಜ್ಯಸರ್ಕಾರಕ್ಕೆ ವರದಿ ಸಲ್ಲಿಸಿ ಮನವಿ ಮಾಡಲಾಗಿದೆ
ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಎಂ.ಎಸ್.ರಾಜು ''''''''ಕನ್ನಡಪ್ರಭ''''''''ಕ್ಕೆ ಪ್ರತಿಕ್ರಿಯೆ ನೀಡಿದರು.ತೆಂಗು ಬೆಳೆಗಾರರಿಗೆ ಪರಿಹಾರ ವಿತರಣೆಗೆ ಆಗ್ರಹ:
ಬಿಸಿಲ ಬೇಗೆಯು ಮಾವು ಬೆಳೆ ಜೊತೆಗೆ ತೆಂಗಿನ ಬೆಳೆಯನ್ನು ಆಪೋಷನ ತೆಗೆದುಕೊಂಡಿದೆ. ತೆಂಗಿಗೆ ನುಸಿ ಪೀಡೆ, ಕಪ್ಪು ತಲೆ ಹುಳುವಿನ ಭಾದೆ ತಗುಲಿದ ಮೇಲೂ ರೈತರು ಹೋರಾಟ ನಡೆಸಿ ಮರಗಳನ್ನು ಉಳಿಸಿಕೊಂಡಿದ್ದಾರೆ. ಈಗ ಮಳೆ ಕೊರತೆ ಜೊತೆಗೆ ತಾಪಮಾನ ಹೆಚ್ಚಳ ರೈತರ ಬದುಕನ್ನು ಬೀದಿಗೆ ತಂದು ನಿಲ್ಲಿಸಿದೆ. ಉತ್ತಮ ಇಳುವರಿ ನೀಡುವ ಮರ ಸರಾಸರಿ ವಾರ್ಷಿಕವಾಗಿ 2 ಸಾವಿರ ರು. ವರಮಾನ ನೀಡುತ್ತಿತ್ತು. ಆದರೆ, ಈಗ ಮರಗಳು ಸಾಯುತ್ತಿರುವುದು ರೈತರು ಕಣ್ಣೀರು ಹಾಕುವಂತೆ ಆಗಿದೆ. ಪ್ರಕೃತಿ ವಿಕೋಪದಡಿ ತೆಂಗು ಬೆಳೆಗಾರರಿಗೆ ತೆಂಗು ಇಳುವರಿ ಹಾನಿಯನ್ನು ಬೆಳೆ ಹಾನಿಯೆಂದು ಪರಿಗಣಿಸಿ ಪರಿಹಾರ ವಿತರಣೆ ಮಾಡಲು ರಾಜ್ಯಸರ್ಕಾರ ಕ್ರಮ ವಹಿಸಬೇಕೆಂದು ರೈತ ಮುಖಂಡರು ಆಗ್ರಹ ಪಡಿಸಿದ್ದಾರೆ.