ಸಾರಾಂಶ
ಕೆಲ ರಿಯಲ್ ಎಸ್ಟೇಟ್‌ನವರ ಭೂಮಾಫೀಯಕ್ಕೆ ಅರಣ್ಯ ಇಲಾಖೆಯ ನೂರಾರು ಮರಗಳನ್ನು ಕಡಿದು ಹಾಕಲಾಗಿದೆ
ಕನ್ನಡಪ್ರಭ ವಾರ್ತೆ ಕೊರಟಗೆರೆ
ಅಮಾಯಕ ರೈತರ ಹೆಸರು ಹೇಳಿಕೊಂಡು ಪಟ್ಟಣದ ಕೆಲ ರಿಯಲ್ ಎಸ್ಟೇಟ್‌ನವರ ಭೂಮಾಫೀಯಕ್ಕೆ ಅರಣ್ಯ ಇಲಾಖೆಯ ನೂರಾರು ಮರಗಳನ್ನು ಕಡಿದು ಹಾಕಲಾಗಿದೆ. ಸಾಕಷ್ಟು ಅರಣ್ಯ ಭೂಮಿಯನ್ನು ನಾಶ ಮಾಡಲಾಗಿದೆ. ಸರ್ಕಾರದ ಹಳ್ಳ, ಕಾಲುವೆ, ಕೆರೆ ಜಾಗವನ್ನುಹಾಳು ಮಾಡಿದ್ದು, ತಾಲೂಕಿನ ಬಲಾಡ್ಯ ಭೂಮಾಫಿಯದವರ ಕೆಂಗಣ್ಣಿನಿಂದ ನೈಸರ್ಗಿಕ ಸಂಪತ್ತನ್ನು ಉಳಿಸಿಕೊಳ್ಳಲು ಇಲಾಖೆಗಳು ಅಸಮರ್ಥವಾಗುತ್ತಿವೆ ಎಂದು ಸಾರ್ವಜನಿಕರು ಅರೋಪಿಸಿದ್ದಾರೆ.ಪಟ್ಟಣದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭೂಮಾಫೀಯ ಅಕ್ರಮದಲ್ಲಿ ಬೆಂಗಳೂರನ್ನೇ ಮೀರಿಸುತ್ತಿದೆ. ಹೀರೆಬೆಟ್ಟದ ತಪ್ಪಲಿನಲ್ಲಿ ಸರ್ಕಾರಿ ಗೋಮಾಳದ ಭೂಮಿ ಮತ್ತು ಅರಣ್ಯಪ್ರದೇಶದ ಜಾಗಗಳ ಮೇಲೆ ಭೂಮಾಫೀದವರ ಕಣ್ಣು ಬಿದಿದೆ. ಕೊರಟಗೆರೆ ಗ್ರಾಮದ ಸ.ನಂ 181ರ ಸರ್ಕಾರಿ ಗೋಮಾಳದಲ್ಲಿ ಹಲವು ರೈತರು ಜಮೀನುಗಳನ್ನು ಉಳುಮೆ ಮಾಡಿಕೊಂಡಿದ್ದಾರೆ. ಇದರಲ್ಲಿ ಹಲವರಿಗೆ ಪಹಣಿ ಬಂದಿದ್ದು, ಇನ್ನು ಕೆಲವರು ಉಳುಮೆ ಮಾಡುತ್ತಿದ್ದು, ಬೆಟ್ಟದ ತಪ್ಪಿನಲ್ಲಿ ಸರ್ಕಾರಿ ಭೂಮಿಯು ಇದೆ. ಇತ್ತೀಚೆಗೆ ರಿಯಲ್ ಎಸ್ಟೇಟ್ ಮಾಡುವ ವ್ಯಕ್ತಿ ಈ ಭಾಗದಲ್ಲಿ ಸರ್ಕಾರಿ ಮತ್ತು ಅರಣ್ಯ ಭೂಮಿಯನ್ನು ಕಬಳಿಸುವ ಹುನ್ನಾರದಿಂದ ಕೆಲವು ರೈತರ ಬಳಿ ಅತಿ ಕಡಿಮೆ ಬೆಲೆಗೆ ಜಮೀನನ್ನು ಖರೀಸಿದ್ದಾನೆ. ನಂತರ ಆ ಜಮೀನುಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಸಲುವಾಗಿ ಈ ಜಮೀನುಗಳಿಗೆ ಖಾಸಗಿಯಾಗಿ ರಸ್ತೆ ನಿರ್ಮಿಸಲು ಹುನ್ನಾರ ಮಾಡಿದ್ದಾನೆ. ಇದನ್ನು ಮರೆಮಾಚಿ ಕೆಲವು ಅಮಾಯಕ ರೈತರ ಹತ್ತಿರ ರಸ್ತೆ ಮಾಡಿಸುವುದಾಗಿ ಹಣ ವಸೂಲಿ ಮಾಡಿದ್ದು, ರಸ್ತೆ ಮಾಡುವಾಗ ಅಧಿಕಾರಿ, ಸಂಬಂಧಿಸಿದ ಇಲಾಖೆಗಳಿಗಾಗಲಿ ತಿಳಿಸದೇ ಜೆಸಿಬಿ ಹಿಟಾಚಿ ಬಳಸಿ ರಸ್ತೆ ನಿರ್ಮಿಸಿದ್ದಾನೆ. ಈ ಭೂಮಾಫೀಯದಿಂದ ಹಳ್ಳ, ರಾಜಕಾಲುವೆ, ನೀರಿನ ಹೊಂಡ, ಕೆರೆ ಸಂಪೂರ್ಣ ಹಾಳಾಗಿವೆ. ಇವೆಲ್ಲದರ ಮೇಲು ಮಣ್ಣನ್ನು ಸುರಿಯಲಾಗಿದ್ದು, ಸ್ವಾಭಾವಿಕವಾಗಿ ಹರಿಯಬೇಕಿದ್ದ ಹಳ್ಳಗಳು ಹರಿಯದೇ ಮತ್ತೆ ಮಣ್ಣು ತುಂಬಿದ ರಸ್ತೆ ಸಂಪೂರ್ಣ ಹಾಳಾಗಿದೆ. ಉಳಿದ ಕಡೆ ನೀರುಗಳು ಇತರೆ ಹೊಲಗಳಿಗೆ ನುಗ್ಗಿದ್ದು, ಸಮೀಪವಿರುವ ಗಂಗಾಧರೇಶ್ವರ ಕೆರೆಗೆ ನೀರು ಹೋಗದೇ ಆ ನೀರು ಹೊಸಕೆರೆಗೆ ನುಗ್ಗಿದೆ. ಈ ಬಗ್ಗೆ ರೈತರು ಈ ಭೂಮಾಫೀಯ ವ್ಯಕ್ತಿಯ ಮದ್ಯೆ ಜಗಳವು ನಡೆದು ನಂತರ ಜನಪ್ರತಿನಿದಿಗಳಿಂದ ರಾಜಿ ಸಂದಾನ ನಡೆದಿದೆ.ನಾಶವಾದ ಅರಣ್ಯ ಪ್ರದೇಶ: ಭೂಮಾಫೀಯದವರ ಹಣದಾಸೆಗೆ ಹೀರೆಬೆಟ್ಟದ ಸಮೀಪದ ಅರಣ್ಯ ಭೂಮಿಯನ್ನುಒತ್ತುವರಿ ಮಾಡಿ ನೂರಾರು ಮರಗಳನ್ನು ಕಡಿದು ರಸ್ತೆ ಮಾಡಿದ್ದರೂ ಆರೋಪಿ ವಿರುದ್ದ ಕಾನೂನು ಕ್ರಮ ಕೈಗೊಳ್ಳದೇ ಇರುವುದು ಆಶ್ಚರ್ಯಕರವಾಗಿದೆ. ಹಿರೇಬೆಟ್ಟದಲ್ಲಿ ಕರಡಿಗಳು ವಾಸವಾಗಿದ್ದು ಅವುಗಳು ಜೀವಕ್ಕೂ ಸಂಚುಕಾರ ಉಂಟಾಗಿದೆ.15 ದಿನಗಳಿಂದ ಈ ವಿವಾದದ ಬಗ್ಗೆ ಕೆಲ ರೈತರು ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದ್ದರು. ಅಧಿಕಾರಿಗಳು ನೆಪ ಮಾತ್ರಕ್ಕೆ ಸ್ಥಳ ಪರಿಶೀಲನೆ ನಡೆಸಿದರು. ಈ ಬಗ್ಗೆ ಕಂದಾಯ ,ಅರಣ್ಯ, ಹಾಗೂ ಕಿರು ನೀರಾವರಿ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು.ಕೊರಟಗೆರೆ ಗೃಹ ಸಚಿವ ಡಾ ಜಿ. ಪರಮೇಶ್ವರ್ ಕ್ಷೇತ್ರವಾಗಿದ್ದು, ಕೆಡಿಪಿ ಸಭೆಗಳಲ್ಲಿ ಅರಣ್ಯ ಬೆಳಸುವಂತೆ ಹಾಗೂ ಅಕ್ರಮವಾಗಿ ಮರಕಡಿದವರ ವಿರುದ್ದ ಕಾನೂನು ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದರು. ಅದು ಸಭೆಗೆ ಮಾತ್ರ ಸೀಮಿತವಾದ ಆದೇಶವಾಗಿದ್ದು, ಸಚಿವರ ಆದೇಶವನ್ನು ಅಧಿಕಾರಿಗಳು ಪಾಲಿಸುತ್ತಿಲ್ಲ.ಪ್ರಭಾವಿಗಳ ಒತ್ತಡ: ಈ ಎಲ್ಲಾ ಘಟನೆಗೆ ಸಂಬಂಧಿಸಿದಂತೆ, ಕೊರಟಗೆರೆಯ ಕೆಲ ರಾಜಕೀಯ ವ್ಯಕ್ತಿಗಳು ಅಮಾಯಕ ರೈತರನ್ನು ಮುಂದಿಟ್ಟುಕೊಂಡು ಸರ್ಕಾರಿ ಜಾಗವನ್ನು ಹೊಡೆಯುವ ಹುನ್ನಾರ ಮಾಡಿರುವ ಭೂಮಾಫಿಯದವರನ್ನು ರಕ್ಷಿಸುವ ಕೆಲಸ ಮಾಡುತ್ತಿದ್ದು, ಅಧಿಕಾರಿಗಳ ಮೇಲೆ ಒತ್ತಡ ಹಾಕಿಸುತ್ತಿದ್ದಾರೆ.ಅರಣ್ಯ ಭೂಮಿ ಮತ್ತು ಮರಗಳನ್ನು ಕಾಪಾಡುವುದು ನಮ್ಮೆಲ್ಲರ ಕರ್ತವ್ಯ, ಮರ ಕಡಿಯುವುದು ಅಪರಾಧ. ರೈತರಿಗೆ ರಸ್ತೆ ಮಾಡಿಕೊಡುವುದು ಸರ್ಕಾರದ ಕೆಲಸ ಖಾಸಗಿಯವರದಲ್ಲ.
ಡಾ.ಜಿ.ಪರಮೇಶ್ವರ್, ಗೃಹ ಸಚಿವಈ ಹಿಂದೆ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಹೆಚ್ಚು ಮಳೆ ಇದ್ದ ಕಾರಣ ಪರಿಶೀಲಿಸಲು ಆಗಿಲ್ಲ. ಖಾಸಗಿ ವ್ಯಕ್ತಿಯಿಂದ ಸರ್ಕಾರಿ ಹಳ್ಳ ಮತ್ತು ಜಾಗಗಳು ಹಾಳಾಗಿದ್ದರೆ ಅಂತಹವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲಾಗುವುದು.ಮಂಜುನಾಥ್ ಕೆ, ತಹಸೀಲ್ದಾರ್
ಹೀರೆಬೆಟ್ಟದ ತಪ್ಪಲಿನಲ್ಲಿ ಅರಣ್ಯ ಭೂಮಿ ನಾಶದ ಬಗ್ಗೆ ದೂರು ಬಂದ ಹಿನ್ನಲೆ ಸ್ಥಳಕ್ಕೆ ಭೇಟಿ ನೀಡಲಾಗಿತ್ತು, ಸುಮಾರು ಅರಣ್ಯದ ಮರಗಳನ್ನು ಕಡಿದು ನಾಶ ಮಾಡಲಾಗಿತ್ತು. ಅರಣ್ಯ ಭೂಮಿಯನ್ನುಅನುಮತಿ ಇಲ್ಲದೇ ಹಾಳು ಮಾಡಿರುವುದು ಕಂಡು ಬಂದಿದ್ದು, ಈ ಸಂಬಂಧ ಹಾಳು ಮಾಡಿದ್ದ ವ್ಯಕ್ತಿಯ ಮೇಲೆ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು.ರವಿ, ವಲಯ ಅರಣ್ಯಾಧಿಕಾರಿ