ಸಮಗ್ರ ಅಭಿವೃದ್ಧಿಗೆ ₹5 ಕೋಟಿ ಅನುದಾನ

| Published : Jul 09 2024, 12:46 AM IST

ಸಾರಾಂಶ

ನಾಲತವಾಡ ಪಟ್ಟಣದ ಸಮಗ್ರ ಅಭಿವೃದ್ಧಿಗೆ ₹5 ಕೋಟಿ ಅನುದಾನ ನೀಡುವುದಾಗಿ ಕರ್ನಾಟಕ ಸಾಬೂನು ಹಾಗೂ ಮಾರ್ಜಕ ನಿಗಮದ ಅಧ್ಯಕ್ಷ ಶಾಸಕ ಸಿ.ಎಸ್.ನಾಡಗೌಡ(ಅಪ್ಪಾಜಿ) ಭರವಸೆ ನೀಡಿದರು.

ಕನ್ನಡಪ್ರಭ ವಾರ್ತೆ ನಾಲತವಾಡ

ಪಟ್ಟಣದ ಸಮಗ್ರ ಅಭಿವೃದ್ಧಿಗೆ ₹5 ಕೋಟಿ ಅನುದಾನ ನೀಡುವುದಾಗಿ ಕರ್ನಾಟಕ ಸಾಬೂನು ಹಾಗೂ ಮಾರ್ಜಕ ನಿಗಮದ ಅಧ್ಯಕ್ಷ ಶಾಸಕ ಸಿ.ಎಸ್.ನಾಡಗೌಡ(ಅಪ್ಪಾಜಿ) ಭರವಸೆ ನೀಡಿದರು.

ಇಲ್ಲಿಯ ಪಟ್ಟಣ ಪಂಚಾಯತಿ ಆವರಣದಲ್ಲಿ ನೂತನವಾಗಿ ಖರೀದಿಸಲಾದ ಘನತ್ಯಾಜ ವಸ್ತುಗಳ ವಿಲೇವಾರಿ ವಾಹನಗಳಿಗೆ ಚಾಲನೆ ಹಾಗೂ ಅಧಿಕಾರಿಗಳ ಸಿಬ್ಬಂದಿ ಕರೆಯಲಾದ ಸಭೆಯಲ್ಲಿ ಮಾತನಾಡಿದ ಅವರು, ಪಟ್ಟಣದಲ್ಲಿ ಎಲ್ಲೆಂದರಲ್ಲಿ ಚರಂಡಿಗಳ ಸ್ವಚ್ಛತೆ, ರಸ್ತೆಗಳ ದುರಸ್ತಿ, ಬೀದಿ ದೀಪಗಳ ಅಳವಡಿಕೆ ಸೇರಿದಂತೆ ಅನೈರ್ಮಲ್ಯತೆ ಹೋಗಲಾಡಿಸಲು ಶ್ರಮಿಸಬೇಕು ಎಂದರು. ಪ.ಪಂ.ಯ ಎಸ್‌ಎಫ್ಸಿ ಹಾಗೂ ಟಿಎಸ್ಪಿ ಉಳಿದ ₹34 ಲಕ್ಷಗಳ ಅನುದಾನಲ್ಲಿ ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಸುಮಾರು ₹10 ಲಕ್ಷ ವೆಚ್ಚದಲ್ಲಿ ನೀರಿನ ಟ್ಯಾಂಕ್ ನಿರ್ಮಿಸಬೇಕು. ಇನ್ನುಳಿದ ₹24 ಲಕ್ಷಗಳಲ್ಲಿ ಸಣ್ಣ ಪುಟ್ಟ ಅಭಿವೃದ್ಧಿಗೆ ಬಳಸಬೇಕು. ಶೀಘ್ರದಲ್ಲೇ ಪ್ರತಿ ಮನೆ ಮನೆಗೂ ಜೆಜೆಎಂ ಅಮೃತ ಯೋಜನೆಯಡಿ ನೀರು ಪೂರೈಸುವ ನಿಟ್ಟಿನಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಿ ಕಾಮಗಾರಿ ಕೈಗೆತ್ತಿಕೊಳ್ಳಬೇಕು ಎಂದು ತಿಳಿಸಿದರು.ಅಹವಾಲು ಸ್ವೀಕಾರ:

ನಂತರ ಶಾಸಕ ನಾಡಗೌಡ ಸ್ಥಳದಲ್ಲಿದ್ದ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿದರು. ಕಳೆದ ಹಲವು ವರ್ಷಗಳಿಂದ ಪಟ್ಟಣದ ನಿರ್ಗತಿಕ ಎಸ್ಸಿ, ಎಸ್ಟಿ ಕುಟುಂಬಗಳ ಆಸರೆ ಮನೆಗಳ ಜಿಪಿಎಸ್ ಮಾಡಬೇಕು ಎಂದು ಸ್ಥಳದಲ್ಲಿದ್ದ ಸಿಒ ಈರಣ್ಣ ಕೊಣ್ಣೂರ ಅವರಿಗೆ ಸೂಚಿಸಿದರು. ಸ್ಪಂದಿಸಿದ ಅಧಿಕಾರಿಗಳು ಶೀಘ್ರವೇ ತಹಸೀಲ್ದಾರರೊಂದಿಗೆ ಮತ್ತೊಮ್ಮೆ ಚರ್ಚಿಸಿ ಇನ್ನೆರಡು ದಿನಗಳಲ್ಲಿ ಜಿಪಿಎಸ್ ಮಾಡುತ್ತೇವೆ ಎಂದು ಆಗಮಿಸಿದ್ದ ಡಿಎಸ್‌ಎಸ್ ಮುಖಂಡ ಗುಂಡಣ್ಣ ಚಲವಾದಿ ಹಾಗೂ ಮುತ್ತಣ್ಣ ಯರಗೋಡಿ ಸಮ್ಮುಖದಲ್ಲಿ ಮಹಿಳೆಯರಿಗೆ ಭರವಸೆ ನೀಡಿದರು. ಈ ವೇಳೆ ತಹಸೀಲ್ದಾರ್‌ ಬಲರಾಮ ಕಟ್ಟಿಮನಿ, ಪಪಂ ಮಾಜಿ ಅಧಕ್ಷ ಹಾಗೂ ಹಾಲಿ ಸದಸ್ಯರಾದ ಪೃತ್ವಿರಾಜ್ ನಾಡಗೌಡ, ಸಿಒ ಈರಣ್ಣ ಕೊಣ್ಣೂರ, ಕಂದಾಯ ನಿರೀಕ್ಷಕ ವಿ.ಎ.ಅಂಬಿಗೇರ ಸೇರಿದಂತೆ ಪಟ್ಟಣ ಪಂಚಾಯತಿ ಸದಸ್ಯರಿದ್ದರು.