ಸ್ವ ದುಡಿಮೆಯ ದಾನ ಧರ್ಮ ಸದಾಕಾಲ ಶ್ರೇಷ್ಠ

| Published : Jul 09 2024, 12:46 AM IST

ಸಾರಾಂಶ

ಪರರನ್ನು ವಂಚಿಸದೇ ಸ್ವಂತದ ದುಡಿಮೆಯಿಂದ- ಸ್ವ ಶ್ರಮದಿಂದ ಮಾಡಿದ ಸಂಪಾದನೆಯಿಂದ ಆ ಕುಟುಂಬದಲ್ಲಿ ಸದಾಕಾಲ ಆಹ್ಲಾದಕರ ವಾತಾವರಣ ಇರಲಿದೆ.

ಬಳ್ಳಾರಿ: ಸ್ವಂತದ ದುಡಿಮೆಯಿಂದ ಮಾಡಿದ ದಾನ-ಧರ್ಮ, ಸೇವೆಗಳು ಸದಾಕಾಲ ಶ್ರೇಷ್ಠವಾಗಿರುತ್ತವೆ ಎಂದು ಬಳಗಾನೂರು ಸುಕ್ಷೇತ್ರದ ಶಿವಶಾಂತವೀರ ಶರಣರು ಹೇಳಿದರು.

ನಗರದ ಬಸವಭವನದಲ್ಲಿ ನಡೆದ ಚಿಕೇನಕೊಪ್ಪದ ಶ್ರೀಚನ್ನವೀರ ಶರಣದ 29ನೇ ಪುಣ್ಯಸ್ಮರಣೆ ಹಾಗೂ 1008 ಮುತ್ತೈದೆಯರಿಗೆ ಉಡಿತುಂಬುವ ಕಾರ್ಯಕ್ರಮ ಮತ್ತು ಶಿವಶಾಂತವೀರ ಶರಣರ ತುಲಾಭಾರ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಪರರನ್ನು ವಂಚಿಸದೇ ಸ್ವಂತದ ದುಡಿಮೆಯಿಂದ- ಸ್ವ ಶ್ರಮದಿಂದ ಮಾಡಿದ ಸಂಪಾದನೆಯಿಂದ ಆ ಕುಟುಂಬದಲ್ಲಿ ಸದಾಕಾಲ ಆಹ್ಲಾದಕರ ವಾತಾವರಣ ಇರಲಿದೆ. ಗೃಹಿಣಿಯ ಶಾಂತಿ-ಸಹನೆ ಸಮಾಜಕ್ಕೆ ಶ್ರೀರಕ್ಷೆಯಿದ್ದಂತೆ. ಕುಟುಂಬದಲ್ಲಿ ಶಾಂತಿ - ನೆಮ್ಮದಿ ಮತ್ತು ಸಂತೋಷಗಳು ನೆಲೆಸಿ ಕುಟುಂಬವು ಸಂತೃಪ್ತವಾಗಿರಲು ಗೃಹಿಣಿಯ ಕಾರ್ಯ ಅನನ್ಯವಾದದ್ದು ಎಂದರು.

ಈ ಲೋಕದಲ್ಲಿ ಪಡೆದ ಅಲೌಕಿಕ ಅನುಭವಗಳ ಮೂಲಕ ಸಮಾಜದಲ್ಲಿ ಕಾಯಕತತ್ವ ಮತ್ತು ಕಾಯಕಯೋಗಿಯಾಗಿ ಜೀವಿಸಿದವರು ಚನ್ನವೀರ ಶರಣರು. ನುಡಿದಂತೆ ನಡೆದವರು, ನಡೆದಂತೆ ನುಡಿದವರು ಚನ್ನವೀರ ಶರಣರು. ಕಾಯಕದ ಮೂಲಕ ಕೈವಲ್ಯವನ್ನು ಸಾಧಿಸಿದವರು ಎಂದು ತಿಳಿಸಿದರು.

ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಹರ್ಲಾಪುರದ ಕೊಟ್ಟೂರೇಶ್ವರ ಮಠದ ಕೊಟ್ಟೂರೇಶ್ವರ ಮಹಾಸ್ವಾಮಿಗಳು, ಚನ್ನವೀರ ಶರಣರ ನಾಮಸ್ಮರಣೆಯಿಂದ ಪುಣ್ಯ ಪ್ರಾಪ್ತಿಯಾಗಲಿದೆ. ಸತ್ ಚಿಂತನೆಯಿಂದ ಜೀವನ ಪಾವನವಾಗಲಿದೆ. ಮುತ್ತೈದೆಯರಿಗೆ ಉಡಿ ತುಂಬುವ ಮೂಲಕ ನಾಡಿನ ಒಳಿತನ್ನು ಬಯಸುವ ಆಧ್ಯಾತ್ಮ ಶಕ್ತಿ ಹೆಚ್ಚಲಿದೆ ಎಂದರು.

ಶ್ರೀ ಚನ್ನವೀರ ಶರಣರು ಮೌನತಪಸ್ವಿಗಳಾಗಿ ಮಾಡಿದ ಸಾಧನೆ ಅಗಾಧವಾದದ್ದು. ಚನ್ನವೀರ ಶರಣರ ಆಧ್ಯಾತ್ಮ ಶಕ್ತಿ, ದೈವೀ ಸಂಕಲ್ಪ ಮತ್ತು ಮಾತೆಯರಿಗೆ ಗೌರವಿಸುವ ಪರಿ ಮಹತ್ತರವಾದದ್ದು. ಸಮಾಜದಲ್ಲಿ ಮುತ್ತೈದೆಯರಿಗೆ ಉಡಿ ತುಂಬುವ ಮೂಲಕ ಸಮಾಜದಲ್ಲಿ ಮಹಿಳೆಯರ ಗೌರವವನ್ನು ಶರಣರು ಹೆಚ್ಚಿಸಿದರು ಎಂದರು.

ಚನ್ನವೀರ ಶರಣರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಕೊತ್ತಲಚಿಂತೆಯ ಶರಣಕುಮಾರ್ ಪ್ರಾರ್ಥನೆ ಸಲ್ಲಿಸಿದರು. ಸುಧಾಕರ ತಬಲಾ ಸಾಥ್ ನೀಡಿದರು.

ಪ್ರಾಸ್ತಾವಿಕ ಮಾತನಾಡಿದ ಶಿಕ್ಷಕ ಅಮಾತಿ ಬಸವರಾಜ್, ಚಿಕೇನಕೊಪ್ಪ ಚನ್ನವೀರಶರಣರ ಮೌನ ಅಗಾಧವಾದ ಶಕ್ತಿಯನ್ನು ಹೊಂದಿತ್ತು. ಚನ್ನವೀರ ಶರಣರು ಮೌನಾಚರಣೆಯಲ್ಲೇ ಸಮಾಜದ ಅಂಕು-ಡೊಂಕುಗಳನ್ನು ತಿದ್ದುತ್ತಿದ್ದರು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಕೆ.ಬಿ. ಸಿದ್ದಲಿಂಗಪ್ಪ ಕಾರ್ಯಕ್ರಮ ನಿರ್ವಹಿಸಿದರು.

13ಕ್ಕೂ ಹೆಚ್ಚಿನ ಭಕ್ತರು ಕುಟುಂಬ ಸಮೇತರಾಗಿ ಶಿವಶಾಂತವೀರ ಶರಣರ ತುಲಾಭಾರ ಸೇವೆ ನೆರವೇರಿಸಿ, ಭಕ್ತಿಯನ್ನು ಸಮರ್ಪಿಸಿದರು.

ಗಣ್ಯರಾದ ಅಲ್ಲಂ ಪ್ರಶಾಂತ್, ಸಿದ್ದಮ್ಮನಹಳ್ಳಿ ಎಚ್.ತಿಮ್ಮನಗೌಡ, ರಾವೂರ್ ಸುನೀಲ್, ಎಂ. ಸಿದ್ಧರಾಮನಗೌಡ, ಕೆ.ಎ.ರಾಮಲಿಂಗಪ್ಪ, ಚಾನಾಳ್ ಶೇಖರ್, ರಾಜಗೋಪಾಲರೆಡ್ಡಿ, ಹರಹುಣಸಿಗಿಯ ಸಂಗನಗೌಡ ಪಾಟೀಲ್ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಿದ್ಧಾಂತ ಶಿಖಾಮಣಿ ಪಠಣ ಸಮಿತಿಯ ಸ್ವಯಂ ಸೇವಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಿದ್ಧಾಂತ ಶಿಖಾಮಣಿಯನ್ನು ಪಠಣ ಮಾಡಿದರು.