ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಪರಿಶಿಷ್ಟ ಜಾತಿ-ಪಂಗಡದ ಮತಗಳು ನಿರ್ಣಾಯಕ ಪಾತ್ರ ವಹಿಸಲಿರುವುದಾಗಿ ಕೊಡಗು ಜಿಲ್ಲಾ ಬಿಜೆಪಿ ಎಸ್‌ಸಿ ಮೋರ್ಚಾದ ಅಧ್ಯಕ್ಷ ಪಿ.ಎಂ.ರವಿ ತಿಳಿಸಿದ್ದಾರೆ.ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರು-ಕೊಡಗು ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಸುಮಾರು 1.5 ಲಕ್ಷ ಮತಗಳಿದ್ದು, ಕಾಂಗ್ರೆಸ್ ಪಕ್ಷ ಪ್ರತಿ ಬಾರಿ ಈ ಸಮೂಹವನ್ನು ಮತ ಬ್ಯಾಂಕ್‌ಗೊಸ್ಕರ ಓಲೈಕೆ ಮಾಡುತ್ತ ಬಂದಿದೆಯೆ ಹೊರತು ಅವರ ಬಗ್ಗೆ ನೈಜ ಕಾಳಜಿ ತೋರಿಲ್ಲ. ಈ ಬಾರಿ ಪರಿಶಿಷ್ಟ ಸಮೂಹ ಬಿಜೆಪಿ ಪರ ವಿಶ್ವಾಸವನ್ನು ಹೊಂದಿರುವುದಾಗಿ ತಿಳಿಸಿದರು.
ನರೇಂದ್ರ ಮೋದಿ ಅವರು ಈ ರಾಷ್ಟ್ರದ ಪ್ರಧಾನಮಂತ್ರಿಗಳಾದ ಬಳಿಕ ಪರಿಶಿಷ್ಟ ಸಮೂಹದ ಏಳಿಗೆಗೆ ಹತ್ತು ಹಲವು ಶಾಶ್ವತ ಯೋಜನೆಗಳನ್ನು ನೀಡಿರುವುದಲ್ಲದೆ, ಹಿಂದುಳಿದ ಸಮೂಹಕ್ಕೆ ಸೇರಿದವರಿಗೆ ರಾಷ್ಟ್ರಪತಿ ಸ್ಥಾನವನ್ನು ನೀಡಿದೆ. ಬಿಜೆಪಿ ಪಕ್ಷ ದಲಿತ ಸಮೂಹದವರಿಗೆ ಮಹತ್ವದ ಸ್ಥಾನಗಳನ್ನು ನೀಡುವ ರಾಷ್ಟ್ರ ಸೇವೆಯಲ್ಲಿ ಅವರ ಮೂಲಕ ಪಾಲು ಹೆಚ್ಚಾಗಿರುವುವಂತೆ ನೋಡಿಕೊಂಡಿರುವುದಾಗಿ ತಿಳಿಸಿದರು.ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವ ಏಕೈಕ ಕಾರಣಕ್ಕಾಗಿ ಅಲ್ಪಾವಧಿ ಬಾಳಿಕೆ ಬರುವ ಭಾಗ್ಯಗಳನ್ನು
ನೀಡಿದೆ. ಈ ಭಾಗ್ಯಗಳು ಕೆಲವೇ ದಿನಗಳಲ್ಲಿ ಮುಚ್ಚಿ ಹೋಗುವ ಸಾಧ್ಯತೆ ಇರುವುದಾಗಿ ಗೇಲಿ ಮಾಡಿದರು. ಈ ಭಾಗ್ಯಗಳ ಘೋಷಣೆಯೊಂದಿಗೆ ಪರಿಶಿಷ್ಟರ ಕಲ್ಯಾಣಕ್ಕಾಗಿ ವಿವಿಧ ಇಲಾಖೆಗಳಲ್ಲಿ ಮೀಸಲಿದ್ದ 11 ,143 ಕೋಟಿ ರು. ಹಣವನ್ನು ಕಾಂಗ್ರೆಸ್ ಸರ್ಕಾರ ಬಳಕೆ ಮಾಡಿ ಅನ್ಯಾಯ ಮಾಡಿದೆ. ವಿವಿಧ ಇಲಾಖೆಗಳಲ್ಲಿ ಪ್ರಸ್ತುತಸರ್ಕಾರದ ಕಾರ್ಯಚಟುವಟಿಕೆಗಳಿಗೆ ಅಗತ್ಯವಾದ ಅನುದಾನದ ಕೊರತೆ ಇರುವುದಾಗಿ ಆರೋಪಿಸಿದರು. ಪ್ರಸ್ತುತ ಬುದ್ಧಿ ಇಲ್ಲದ ಬುದ್ಧಿಜೀವಿಗಳು ಮತ್ತು ಅಲ್ಪಸಂಖ್ಯಾತರನ್ನು ಎತ್ತಿಕಟ್ಟಿ ನಾಯಕರಾಗಿ ಬೆಳೆದವರು ಸಾಕಷ್ಟು ಆರೋಪಗಳನ್ನು ಮಾಡುತ್ತಿದ್ದು, ಈ ಬಗ್ಗೆ ಪರಿಶಿಷ್ಟ ಸಮೂಹ ಎಚ್ಚೆತ್ತುಕೊಳ್ಳಬೇಕೆಂದು ಪಿ.ಎಂ.ರವಿ ಮನವಿ ಮಾಡಿದರು.
ಮೈಸೂರು-ಕೊಡಗು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಅವರು ಗೆದ್ದು ಬಂದರೆ ಜನರ ಕೈಗೆ ಸಿಕ್ಕುವುದಿಲ್ಲ ಮೊದಲಾದ ಆರೋಪಗಳನ್ನು ಮಾಡಲಾಗುತ್ತಿದೆ. ಆದರೆ, ಮೈಸೂರು ಒಡೆಯರ್ ವಂಶದ ರಾಜರುಗಳು ಈ ನಾಡಿಗೆ ನೀಡಿದ ಕೊಡುಗೆ ಅಪಾರ, ಮೀಸಲಾತಿಯನ್ನು ಮೊಟ್ಟ ಮೊದಲ ಬಾರಿಗೆ ಜಾರಿಗೆ ತಂದ ಮೈಸೂರು ಸಂಸ್ಥಾನದ ರಾಜರು, ಕೆ.ಆರ್‌ಎಸ್ ನಿರ್ಮಾಣ, ಶಿವನ ಸಮುದ್ರದ ಜಲ ವಿದ್ಯುತ್ ಯೋಜನೆ, ಭದ್ರಾವತಿ ಉಕ್ಕಿನ ಕಾರ್ಖಾನೆ ಸ್ಥಾಪನೆ ಸೇರಿದಂತೆ ಕನ್ನಡ ಸಾಹಿತ್ಯ ಪರಿಷತ್ ಸ್ಥಾಪಿಸಿದವರು ಇದೇ ಮೈಸೂರು ರಾಜರುಗಳಾಗಿದ್ದಾರೆ. ರಾಜ್ಯಕ್ಕೆ ಬೆಂಗಳೂರು ವಿಧಾನಸೌಧ ಶಕ್ತಿ ಕೇಂದ್ರವಾಗಿದ್ದರೆ, ಈ ಕ್ಷೇತ್ರಕ್ಕೆ ಮೈಸೂರು ಅರಮನೆ ಶಕ್ತಿ ಕೇಂದ್ರವಾಗಿ ರೂಪುಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಕೊಡಗಿನ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದ್ದರು, ಇಂದಿಗೂ ಕೊಡಗು ಬಿಜೆಪಿಯ ಭದ್ರಕೋಟೆಯಾಗಿಯೇ ಉಳಿದಿದೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಯದುವೀರ್ ಅವರು 2 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದರು.
ಬಿಜೆಪಿ ಎಸ್ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಚೇತನ್ ಶಿವಪ್ಪ, ಮಡಿಕೇರಿ ಗ್ರಾಮಾಂತರ ಮಂಡಲ ಅಧ್ಯಕ್ಷ ಹೆಚ್.ಡಿ. ಚೆಂಗಯ್ಯ ಹಾಗೂ ಮಡಿಕೇರಿ ನಗರ ಮಂಡಲ ಅಧ್ಯಕ್ಷ ಹೆಚ್.ಜಿ.ಮುಕುಂದ್ ಸುದ್ದಿಗೋಷ್ಠಿಯಲ್ಲಿದ್ದರು.;Resize=(128,128))
;Resize=(128,128))