ಈ ಬಾರಿ ನಿರೀಕ್ಷೆಗೂ ಮೀರಿ ಕಾಂಗ್ರೆಸ್‌ಗೆ ವೋಟ್ ಬಂದಿವೆ: ಬಿ.ಎಲ್. ಶಂಕರ್

| Published : Oct 19 2023, 12:45 AM IST

ಈ ಬಾರಿ ನಿರೀಕ್ಷೆಗೂ ಮೀರಿ ಕಾಂಗ್ರೆಸ್‌ಗೆ ವೋಟ್ ಬಂದಿವೆ: ಬಿ.ಎಲ್. ಶಂಕರ್
Share this Article
  • FB
  • TW
  • Linkdin
  • Email

ಸಾರಾಂಶ

ಈ ಬಾರಿ ನಿರೀಕ್ಷೆಗೂ ಮೀರಿ ಕಾಂಗ್ರೆಸ್‌ಗೆ ವೋಟ್ ಬಂದಿವೆ: ಬಿ.ಎಲ್. ಶಂಕರ್
- ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಹಾಗೂ ಅಭಿನಂದನಾ ಸಮಾರಂಭ ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು ನಾನಾ ಕಾರಣಗಳಿಂದ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕದಿರುವ ಜನ ಈ ಬಾರಿ ಮತ ನೀಡಿದ್ದಾರೆ. ಬಡವರು ನಿರೀಕ್ಷೆ ಮೀರಿ ಮತ ನೀಡಿದ್ದು ಅದಕ್ಕೆ ಪೂರಕವಾಗಿ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಡಾ. ಬಿ.ಎಲ್. ಶಂಕರ್ ಹೇಳಿದರು. ನಗರದ ಕುವೆಂಪು ಕಲಾಮಂದಿರದಲ್ಲಿ ಬುಧವಾರ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಹಾಗೂ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲುವ ಬಗ್ಗೆ ರಾಜ್ಯ ಮತ್ತು ರಾಷ್ಟ್ರ ನಾಯಕರು ಮೂಗು ಮುರಿಯುವ ಕಾಲ ಇತ್ತು. ಆದರೆ, ಈ ಬಾರಿ ಚುನಾವಣೆಯಲ್ಲಿ 5 ಕ್ಕೆ 5 ಸ್ಥಾನ ಗೆಲ್ಲಿಸುವ ಮೂಲಕ ವಿಶೇಷ ಗೌರವ ತಂದು ಕೊಟ್ಟಿರುವ ಕಾರ್ಯ ಕರ್ತರಿಗೆ ಅಭಿನಂದನೆ ಎಂದು ಹೇಳಿದರು. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಅದರಲ್ಲೂ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಗೆಲ್ಲಲು ಸಾಧ್ಯವಿಲ್ಲ. ಬಿಜೆಪಿ ಶಾಸಕ ಆಳವಾಗಿ ಬೇರು ಬಿಟ್ಟಿದ್ದಾರೆ ಎಂದು ನಾಯಕರೇ ಹೇಳುತ್ತಿದ್ದರು, ಸಾವಿರಾರು ಕಾರ್ಯಕರ್ತರು ಗಟ್ಟಿ ನಿರ್ಧಾರ ಮಾಡಿ ಎಲ್ಲಾ ರೀತಿಯ ಬೆದರಿಕೆ, ಆಮಿಷ ಅಧಿಕಾರ ಶಾಹಿಯ ಒತ್ತಡಗಳನ್ನು ತಡೆದು ಗೆಲವು ತಂದುಕೊಟ್ಟಿದ್ದಾರೆ ಎಂದರು. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಸಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಂಡಿದೆ. ಪ್ರಧಾನಿಯವರು ಒಂದು ಚುನಾವಣೆಗೆ ಹೆಚ್ಚು ಸಮಯ ನೀಡಿದ ಮೊದಲಿಗರಾಗಿದ್ದಾರೆ. ಈ ಕುರಿತು ಸಿಎಂ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಜೋಡೆತ್ತಿನ ರೀತಿ ಕೆಲಸ ಮಾಡಿ ಬಿಜೆಪಿ ಜನ ವಿರೋಧಿ ನೀತಿಗಳನ್ನು ಜನರಿಗೆ ಮನಮುಟ್ಟುವಂತೆ ಮಾಡಿದ ಪರಿಣಾಮ ಇಂದು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ಸಾಧ್ಯವಾಯಿತು ಎಂದು ಹೇಳಿದರು. ಮಹಿಳೆಯರನ್ನು ಆರ್ಥಿಕವಾಗಿ ಸದೃಢಗೊಳಿಸಲು ಹಾಗೂ ಬೆಲೆ ಏರಿಕೆ ಸರಿದೂಗಿಸಲು 5 ಗ್ಯಾರಂಟಿ ಘೋಷಣೆ ಮಾಡಿ, ಗೃಹಲಕ್ಷ್ಮಿ ಯೋಜನೆ ಹಣವನ್ನು ನೇರವಾಗಿ ಫಲಾನುಭವಿ ಮಹಿಳೆಯರ ಖಾತೆಗೆ ಜಮಾ ಮಾಡುತ್ತಿದೆ. ಬಡತನದಲ್ಲಿರುವವರಿಗೆ ಮಾತ್ರ ಯೋಜನೆಗಳು ತಲುಪಬೇಕೆಂದು ಸರ್ಕಾರ ಶ್ರಮಿಸುತ್ತಿದೆ ಎಂದು ಶ್ಲಾಘಿಸಿದರು. ಶಾಸಕ ಎಚ್.ಡಿ. ತಮ್ಮಯ್ಯ ಮಾತನಾಡಿ, ಮೊದಲು ಮತದಾರರಿಗೆ ಕೃತಜ್ಞತೆ ಸಲ್ಲಿಸುವ ಕಾರ್ಯಕ್ರಮ ಮಾಡಿದ್ದು ಈಗ ಕಾರ್ಯಕರ್ತರಿಗೆ ಗೌರವ ಮತ್ತು ಸಮಸ್ಯೆಗೆ ಸ್ಪಂದಿಸುವ ಕೆಲಸ ಇನ್ನು ಮುಂದೆ ಆಗುತ್ತದೆ. ಕಾರ್ಯಕರ್ತರ ಅಹವಾಲು ಸ್ವೀಕರಿಸಿದ್ದು ಪಕ್ಷ ಕೊಟ್ಟಿರುವ ಜವಾಬ್ದಾರಿ ಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ನಿರ್ವಹಿಸಲು ಬದ್ಧ ಎಂದರು. ಕಾಂಗ್ರೆಸ್ ಪಕ್ಷದ ಗೌರವ ಹೆಚ್ಚಾಗಬೇಕಾದರೆ ರಾಷ್ಟ್ರ ಮಟ್ಟದಲ್ಲಿ ಗೆಲ್ಲಬೇಕು, ರಾಜ್ಯದಲ್ಲಿ ಲೋಕಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನ ಗೆಲ್ಲಿಸಲು ಕಾರ್ಯಕರ್ತರು ಶ್ರಮಿಸಬೇಕು. ಸರ್ಕಾರದ ಜನಪರ ಯೋಜನೆಗಳ ಬಗ್ಗೆ ಸಾರ್ವಜನಿಕರಿಗೆ ಮನವರಿಕೆ ಮಾಡಬೇಕೆಂದು ಕರೆ ನೀಡಿದರು. ಪ್ರತಿ ಬುಧವಾರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿದ್ದು ಸಮಸ್ಯೆ ಆಲಿಸುವ ಕೆಲಸ ಮಾಡುತ್ತೇನೆ. ಸಧ್ಯದಲ್ಲೇ ಸಖರಾಯ ಪಟ್ಟಣದಲ್ಲಿ ಶಾಸಕರ ಜನಸ್ಪಂದನ ಕಚೇರಿ ತೆರೆದು ಪ್ರತಿ ಎರಡನೇ ಮಂಗಳವಾರ ತಾವು ಸಹ ಇದ್ದು ಸಮಸ್ಯೆಗಳಿಗೆ ಸ್ಪಂದಿಸುವುದಾಗಿ ಭರವಸೆ ನೀಡಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಕೆ.ಪಿ ಅಂಶುಮಂತ್ ಮಾತನಾಡಿ, ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರ ಸಂಘಟಿತ ಹೋರಾಟ ಫಲವಾಗಿ ಜಿಲ್ಲೆಯ 5 ಕ್ಷೇತ್ರಗಳಲ್ಲೂ ಗೆಲ್ಲಲು ಸಾಧ್ಯವಾಗಿದೆ. ಪ್ರತಿ ಬೂತ್‌ನಲ್ಲಿ ಕಾರ್ಯಕರ್ತರು ತಳಮಟ್ಟದಲ್ಲಿ ಗಟ್ಟಿಯಾಗಿ ನಿಂತು ಸಂಘಟನೆ ಮಾಡಿದ ಪರಿಣಾಮ ಗೆಲುವು ಸಾಧ್ಯವಾಯಿತು ಎಂದರು. ಶಾಸಕ ಎಚ್.ಡಿ ತಮ್ಮಯ್ಯ ಚುನಾವಣಾ ಪೂರ್ವದಲ್ಲಿ ಮತದಾರರಿಗೆ ಕೊಟ್ಟ ಭರವಸೆಯಂತೆ ಹಾಗೂ ಕಾರ್ಯಕರ್ತರು, ಮುಖಂಡರಿಗೆ ನೀಡಿದ ವಾಗ್ದಾನದಂತೆ ಕೆಲಸ ಮಾಡುತ್ತಿದ್ದಾರೆ. ಜಿಲ್ಲೆಯ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿ, ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಸಂಪರ್ಕ ದಲ್ಲಿದ್ದು ಸಾರ್ವಜನಿಕರ ಧ್ವನಿಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು. ಎಐಸಿಸಿ ಕಾರ್ಯದರ್ಶಿ ಬಿ.ಎಂ. ಸಂದೀಪ್, ಪಕ್ಷದ ಮಾಜಿ ಜಿಲ್ಲಾಧ್ಯಕ್ಷ ಎಂ.ಎಲ್. ಮೂರ್ತಿ ಮಾತನಾಡಿದರು. ಎಚ್.ಎಚ್. ದೇವರಾಜ್, ಎ.ಎನ್. ಮಹೇಶ್, ರೇಖಾ ಹುಲಿಯಪ್ಪಗೌಡ, ಸಯದ್ ಹನೀಫ್‌, ನಯಾಜ್ ಅಹಮದ್, ರೂಬಿನ್ ಮೊಸೆಸ್, ಮಹಡಿಮನೆ ಸತೀಶ್, ಎಚ್.ಪಿ ಮಂಜೇಗೌಡ ಹಾಗೂ ನಗರಸಭೆ ಸದಸ್ಯರುಗಳಾದ ಲಕ್ಷ್ಮಣ್, ಶಾದಬ್ ಆಲಂಖಾನ್, ಲಕ್ಷ್ಮಣ್, ಇಂದಿರಾ ಶಂಕರ್ ಉಪಸ್ಥಿತರಿದ್ದರು. ವಿಧಾನಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ ಸ್ವಾಗತಿಸಿದರು. 18 ಕೆಸಿಕೆಎಂ 2 ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರದಲ್ಲಿ ಬುಧವಾರ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಹಾಗೂ ಅಭಿನಂದನಾ ಸಮಾರಂಭವನ್ನು ಡಾ. ಬಿ.ಎಲ್. ಶಂಕರ್ ಉದ್ಘಾಟಿಸಿದರು. ಶಾಸಕ ಎಚ್.ಡಿ. ತಮ್ಮಯ್ಯ, ಗಾಯತ್ರಿ ಶಾಂತೇಗೌಡ, ಸಂದೀಪ್ ಹಾಗೂ ಪಕ್ಷದ ಮುಖಂಡರು ಇದ್ದರು.