ಈ ಬಾರಿಯೂ ಮಹಾ ನಗರ ಪಾಲಿಕೆ ವತಿಯಿಂದಲೇ ದಸರಾ ದೀಪಾಲಂಕಾರ: ಶಾಸಕ ವೇದವ್ಯಾಸ್‌ ಕಾಮತ್

| Published : Sep 10 2025, 01:04 AM IST

ಈ ಬಾರಿಯೂ ಮಹಾ ನಗರ ಪಾಲಿಕೆ ವತಿಯಿಂದಲೇ ದಸರಾ ದೀಪಾಲಂಕಾರ: ಶಾಸಕ ವೇದವ್ಯಾಸ್‌ ಕಾಮತ್
Share this Article
  • FB
  • TW
  • Linkdin
  • Email

ಸಾರಾಂಶ

ಮಂಗಳೂರು ದಸರಾ ವೇಳೆ ಇಡೀ ನಗರಕ್ಕೆ ಹಿಂದಿನಂತೆ ಪಾಲಿಕೆ ವತಿಯಿಂದಲೇ ದೀಪಾಲಂಕಾರಗೊಳ್ಳಬೇಕು ಎಂಬ ಮನವಿಗೆ ಜಿಲ್ಲಾಧಿಕಾರಿ ಹಾಗೂ ಪಾಲಿಕೆ ಆಯುಕ್ತರು ಸಕಾರಾತ್ಮಕವಾಗಿ ಸ್ಪಂದಿಸಿ ಈ ಬಗ್ಗೆ ಟೆಂಡರ್ ಪ್ರಕ್ರಿಯೆ ಪ್ರಾರಂಭಗೊಳಿಸಿರುವುದು ಸ್ವಾಗತಾರ್ಹ ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಹೇಳಿದ್ದಾರೆ.

ಮಂಗಳೂರು: ಮುಂಬರುವ ಪ್ರಸಿದ್ದ ಮಂಗಳೂರು ದಸರಾ ಹಬ್ಬವು ಇಡೀ ನಮ್ಮ ಜಿಲ್ಲೆಯ ಹೆಮ್ಮೆಯ ಸಂಕೇತವಾಗಿದ್ದು ದೇಶ ವಿದೇಶಗಳಿಂದ ಭಕ್ತರು, ಪ್ರವಾಸಿಗರ ದಂಡೇ ಹರಿದು ಬರಲಿದೆ. ಈ ವೇಳೆ ಇಡೀ ನಗರಕ್ಕೆ ಹಿಂದಿನಂತೆ ಪಾಲಿಕೆ ವತಿಯಿಂದಲೇ ದೀಪಾಲಂಕಾರಗೊಳ್ಳಬೇಕು ಎಂಬ ನಮ್ಮ ವಿಶೇಷ ಮನವಿಗೆ ಜಿಲ್ಲಾಧಿಕಾರಿ ಹಾಗೂ ಪಾಲಿಕೆ ಆಯುಕ್ತರು ಸಕಾರಾತ್ಮಕವಾಗಿ ಸ್ಪಂದಿಸಿ ಈ ಬಗ್ಗೆ ಟೆಂಡರ್ ಪ್ರಕ್ರಿಯೆಯನ್ನು ಪ್ರಾರಂಭಗೊಳಿಸಿರುವುದು ಸ್ವಾಗತಾರ್ಹ ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಹೇಳಿದರು.

ಮಂಗಳವಾರ ತಮ್ಮ ಕಚೇರಿಯಲ್ಲಿ ಪಾಲಿಕೆ ಅಧಿಕಾರಿಗಳ ಸಭೆ ನಡೆಸಿ ಅವರು ಮಾತನಾಡಿದರು.

ದಸರಾ ಸಂದರ್ಭದಲ್ಲಿ ನಗರದ ದೀಪಾಲಂಕಾರದ ಜವಾಬ್ದಾರಿಯನ್ನು ಪಾಲಿಕೆ ವಹಿಸಿಕೊಳ್ಳುವುದರಿಂದ ದೇವಸ್ಥಾನಗಳ ಮೇಲಿನ ಆರ್ಥಿಕ ಹೊರೆ ತಗ್ಗುತ್ತದೆ. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಇಂತಹ ಮಹತ್ವದ ನಿರ್ಧಾರವನ್ನು ಕೈಗೊಳ್ಳಲಾಗಿದ್ದು ಸಾರ್ವಜನಿಕರಿಂದ ಭಾರೀ ಪ್ರಶಂಸೆ ವ್ಯಕ್ತವಾಗಿತ್ತು. ಈಗ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಆಡಳಿತದ ಅವಧಿ ಅಂತ್ಯವಾಗಿದ್ದು ಜಿಲ್ಲಾಡಳಿತದ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತವಿದೆ. ಹಾಗಾಗಿ ಇದನ್ನು ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿ ಪಾಲಿಕೆಯ ಮೇಲಿದೆ ಎಂದರು.

ಅಲ್ಲದೆ, ಕುದ್ರೋಳಿ ದೇವಸ್ಥಾನದಿಂದ ದಸರಾ ಮೆರವಣಿಗೆ ಸಾಗುವ ರಸ್ತೆಗಳಾದ ಬ್ರಹ್ಮಶ್ರೀ ನಾರಾಯಣ ಗುರು ವೃತ್ತ, ಲಾಲ್‌ ಭಾಗ್, ಪಿ.ವಿ.ಎಸ್ ಮೊದಲಾದ ರಸ್ತೆಗಳ ದಾರಿ ದೀಪ ಸರಿಪಡಿಸಬೇಕು. ಮಂಗಳಾದೇವಿ, ಕಾರ್ ಸ್ಟ್ರೀಟ್ ಆಚಾರ್ಯ ಮಠ ವಠಾರ, ಉರ್ವ ಮಾರಿಗುಡಿ ಹೀಗೆ ದಸರಾ ಮೆರವಣಿಗೆ ಸಾಗುವ ಎಲ್ಲೆಡೆ ಸರ್ವ ರೀತಿಯಲ್ಲಿ ಅಗತ್ಯ ಕ್ರಮಗಳನ್ನು ಕೈಗೊಂಡು ಹಬ್ಬದ ಸಂಭ್ರಮಕ್ಕೆ ಯಾವುದೇ ತೊಂದರೆಯಾಗದಂತೆ ಕ್ರಮವಹಿಸುವಂತೆ ಶಾಸಕರು ಅಧಿಕಾರಿಗಳಿಗೆ ಸೂಚನೆ ನೀಡಿದರು.