ಜ. 5, 6, 7ರಂದು ನಡೆಯುವ ದಕ್ಷಿಣ ಭಾರತದ ಕುಂಭಮೇಳ ಖ್ಯಾತಿಯ ಶ್ರೀ ಗವಿಸಿದ್ಧೇಶ್ವರ ಜಾತ್ರಾಮಹೋತ್ಸವಕ್ಕೆ ಸಕಲ ಸಿದ್ಧತೆಗಳು ಭರದಿಂದ ಸಾಗಿದ್ದು, ಮಹಾದಾಸೋಹದ ಎರಡನೇ ದಿನ 5 ಲಕ್ಷ ಮಿರ್ಚಿ ಭಜ್ಜಿ ಮಾಡಲು ಈ ವರ್ಷವೂ ತೀರ್ಮಾನ ಮಾಡಲಾಗಿದೆ.

ಸೋಮರಡ್ಡಿ ಅಳವಂಡಿ

ಕೊಪ್ಪಳ: ಜ. 5, 6, 7ರಂದು ನಡೆಯುವ ದಕ್ಷಿಣ ಭಾರತದ ಕುಂಭಮೇಳ ಖ್ಯಾತಿಯ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವಕ್ಕೆ ಸಕಲ ಸಿದ್ಧತೆಗಳು ಭರದಿಂದ ಸಾಗಿದ್ದು, ಮಹಾದಾಸೋಹದ ಎರಡನೇ ದಿನ 5 ಲಕ್ಷ ಮಿರ್ಚಿ ಭಜ್ಜಿ ಮಾಡಲು ಈ ವರ್ಷವೂ ತೀರ್ಮಾನ ಮಾಡಲಾಗಿದೆ.

ಮಿರ್ಚಿ ಬಳಗ ಈ ಕುರಿತು ಕೊಪ್ಪಳ ನಗರದಲ್ಲಿರುವ ಅನುಪಮಾ ಟ್ರೇಡಿಂಗ್ ಕಂಪನಿಯ ಆವರಣದಲ್ಲಿ ಸಭೆ ಸೇರಿ ಈ ತೀರ್ಮಾನ ಮಾಡಿದೆ. ಮಿರ್ಚಿ ಬಳಗದಿಂದ ಅಗತ್ಯ ಸಿದ್ಧತೆ ಕೈಗೊಳ್ಳುವ ಕುರಿತು ಜವಾಬ್ದಾರಿಗಳನ್ನು ಹಂಚಿಕೆ ಮಾಡಲಾಯಿತು.

ಪ್ರತಿ ವರ್ಷವೂ ಗವಿಸಿದ್ಧೇಶ್ವರ ಜಾತ್ರಾಮಹೋತ್ಸವ ಎರಡನೇ ದಿನ ಮಹಾದಾಸೋಹದಲ್ಲಿ ಪ್ರಸಾದ ಸವಿಯುವ ಲಕ್ಷ ಲಕ್ಷ ಭಕ್ತರಿಗೆ ಮಿರ್ಚಿ ಭಜ್ಜಿ ನೀಡುವುದು ರಾಜ್ಯದ ದಾಸೋಹ ಪರಂಪರೆಯಲ್ಲಿಯೇ ದಾಖಲೆಯಾಗಿದೆ. ಇಷ್ಟೊಂದು ಮಿರ್ಚಿ ಭಜ್ಜಿಯನ್ನು ಖಾಸಗಿಯಾಗಿಯೂ ಮತ್ತು ದಾಸೋಹದಲ್ಲಿ ಎಲ್ಲಿಯೂ ಮಾಡಿ ಬಡಿಸುವ ಉದಾಹರಣೆ ಇಲ್ಲ.

ಏನೇನು ಎಷ್ಟೆಷ್ಟು ವೆಚ್ಚ?: 25 ಕ್ವಿಂಟಲ್ ಹಸಿಕಡ್ಲಿ ಹಿಟ್ಟು, 20 ಕ್ವಿಂಟಲ್ ಹಸಿ ಮೆಣಸಿನಕಾಯಿ, 15 ಬ್ಯಾರೇಲ್ ಶೇಂಗಾ ಎಣ್ಣೆ, 60 ಕೆಜಿ ಅಜ್ವಾನ್ ಹಾಗೂ ಅಗತ್ಯಕ್ಕೆ ತಕ್ಕಷ್ಟು ಉಪ್ಪು ಹಾಕಿ ಸಿದ್ಧ ಮಾಡಲಾಗುತ್ತದೆ. 15 ಬೃಹತ್ ಕಡಾಯಿಯಲ್ಲಿ ಸಿದ್ಧ ಮಾಡಲಾಗುತ್ತದೆ. ಇದಕ್ಕಾಗಿ 400 ಬಾಣಸಿಗರು ಸುಮಾರು 24 ಗಂಟೆಗಳ ನಿರಂತರವಾಗಿ ಸರದಿಯಲ್ಲಿ ಶ್ರಮಿಸುತ್ತಾರೆ.

ಮಹಾದಾಸೋಹದ ಎರಡನೇ ದಿನ 2 ಲಕ್ಷಕ್ಕೂ ಅಧಿಕ ಭಕ್ತರು ಪ್ರಸಾದ ಸ್ವೀಕಾರ ಮಾಡುತ್ತಾರೆ. ಅವರೆಲ್ಲರಿಗೂ ಮಿರ್ಚಿ ಭಜ್ಜಿ ಬಡಿಸಲಾಗುತ್ತದೆ.

ನೋಡುವುದೇ ಸಂಭ್ರಮ: ಸುಮಾರು 5 ಲಕ್ಷ ಮಿರ್ಚಿ ಭಜ್ಜಿ ಮಾಡುವುದು ಮತ್ತು ಅದನ್ನು ನೋಡುವುದೇ ಒಂದು ಸಂಭ್ರಮ. ಹೀಗಾಗಿ, ಮಿರ್ಚಿ ಭಜ್ಜಿ ಮಾಡುವುದನ್ನು ನೋಡಲು ಭಕ್ತರು ಮುಗಿಬಿದ್ದಿರುತ್ತಾರೆ. ಅಷ್ಟೇ ಅಲ್ಲ, ಮಾಡುವುದಕ್ಕೂ ಪೈಪೋಟಿ ಇರುತ್ತದೆ. ಜಾತ್ರೆಯ ಮಹಾದಾಸೋಹದಲ್ಲಿ ಹತ್ತು ವರ್ಷಗಳಿಂದ ಮಿರ್ಚಿ ಭಜ್ಜಿ ಮಾಡುವ ಸಂಪ್ರದಾಯ ಬೆಳೆದುಬಂದಿದೆ.

ಮಿರ್ಚಿ ಭಜ್ಜಿ ಹಾಕುವ ಗವಿಶ್ರೀ: ಗವಿಸಿದ್ಧೇಶ್ವರ ಮಹಾಸ್ವಾಮೀಜಿಗಳು ಸಹ ಮಿರ್ಚಿ ಭಜ್ಜಿ ಹಾಕುತ್ತಾರೆ. ಮಿರ್ಚಿ ಹಾಕುವ ಸ್ಥಳಕ್ಕೆ ಭೇಟಿ ನೀಡಿ, ಎಲ್ಲರೊಂದಿಗೆ ಕುಶಲೋಪಹರಿ ಚರ್ಚೆ ಮಾಡಿ, ಬಳಿಕ ಮಿರ್ಚಿ ಭಜ್ಜಿ ಹಾಕುತ್ತಾರೆ.

ಪ್ರಸಕ್ತ ವರ್ಷ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದಲ್ಲಿ ನಡೆಯುತ್ತಿರುವ ವಿದ್ಯಾರ್ಥಿಗಳ ಜಾಗೃತಿ ರ್ಯಾಲಿ ನಡೆಸದಿರಲು ತೀರ್ಮಾನ ಮಾಡಲಾಗಿದೆ. ವಿದ್ಯಾರ್ಥಿಗಳನ್ನು ಯಾವುದೇ ಕಾರ್ಯಕ್ರಮಗಳಿಗೆ ಬಳಸದಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ಗವಿಮಠ ವಿದ್ಯಾರ್ಥಿಗಳ ರ್ಯಾಲಿ ಮಾಡದಿರಲು ತೀರ್ಮಾನಿಸಿದೆ ಎಂದು ಮೂಲಗಳು ತಿಳಿಸಿವೆ.

ಪ್ರತಿ ವರ್ಷದಂತೆ ಈ ವರ್ಷ ಗವಿಸಿದ್ಧೇಶ್ವರ ಜಾತ್ರಾಮಹೋತ್ಸವದ ಮಹಾದಾಸೋಹದಲ್ಲಿ 5 ಲಕ್ಷ ಮಿರ್ಚಿ ಭಜ್ಜಿ ತಯಾರಿಸಲು ಪೂರ್ವಭಾವಿ ಸಭೆ ನಡೆಸಿ, ತೀರ್ಮಾನ ಮಾಡಲಾಗಿದೆ ಎಂದು ಉಸ್ತುವಾರಿ ಮಂಜುನಾಥ ಅಂಗಡಿ ಹೇಳಿದರು.

ಗವಿಸಿದ್ಧೇಶ್ವರ ಜಾತ್ರಾಮಹೋತ್ಸವದಲ್ಲಿ ನಡೆಯುವ ಮಹಾದಾಸೋಹದಲ್ಲಿ ಐದು ಲಕ್ಷ ಮಿರ್ಚಿ ಭಜ್ಜಿ ತಯಾರಿಸಲು ಅಗತ್ಯ ತಯಾರಿಯನ್ನು ಈಗಾಗಲೇ ಮಾಡಿಕೊಳ್ಳಲಾಗುತ್ತಿದೆ. ಅಗತ್ಯಬಿದ್ದರೆ ಈ ವರ್ಷ ಪ್ರಮಾಣ ಹೆಚ್ಚಿಸಲು ತಯಾರಿ ಮಾಡಿಕೊಳ್ಳಲಾಗಿದೆ ಎಂದು ಉಸ್ತುವಾರಿ ರಮೇಶ ತುಪ್ಪದ ಹೇಳಿದರು.