ವಾಹನ ಮಾರಾಟ ಬಳಿಕವೂ ಅದರ ನೋಂದಣಿ ಪ್ರಮಾಣ ಪತ್ರದಲ್ಲಿ (ಆರ್ಸಿ) ಮಾಲೀಕನ ಹೆಸರು ಅಧಿಕೃತವಾಗಿ ಬದಲಿಸುವವರೆಗೂ ಆ ವಾಹನದ ಜವಾಬ್ದಾರಿ ನೋಂದಾಯಿತ ಮಾಲೀಕನ ಮೇಲಿರಲಿದೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಬೆಂಗಳೂರು : ವಾಹನ ಮಾರಾಟ ಬಳಿಕವೂ ಅದರ ನೋಂದಣಿ ಪ್ರಮಾಣ ಪತ್ರದಲ್ಲಿ (ಆರ್ಸಿ) ಮಾಲೀಕನ ಹೆಸರು ಅಧಿಕೃತವಾಗಿ ಬದಲಿಸುವವರೆಗೂ ಆ ವಾಹನದ ಜವಾಬ್ದಾರಿ ನೋಂದಾಯಿತ ಮಾಲೀಕನ ಮೇಲಿರಲಿದೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ವಾಹನ ಅಪಘಾತದಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟ ಪ್ರಕರಣದಲ್ಲಿ ಆ ವಾಹನದ ಮಾಲೀಕ ಮತ್ತು ಖರೀದಿದಾರರು ಸಮನಾಗಿ ಪರಿಹಾರ ಪಾವತಿಸಲು ನಿರ್ದೇಶಿಸಿದ್ದ ವಾಹನ ಅಪಘಾತಗಳ ಪರಿಹಾರ ಕ್ಲೇಮು ನ್ಯಾಯಾಧಿಕರಣದ ಆದೇಶ ಪ್ರಶ್ನಿಸಿ ವಾಹನದ ಮಾಲೀಕ ವಿ.ಸುನೀಲ್ ಕುಮಾರ್ ಮತ್ತು ಖರೀದಿದಾರ ಶಬ್ರೀಜ್ ಮತ್ತು ಪರಿಹಾರ ಹೆಚ್ಚಳ ಕೋರಿ ಮೃತರ ಕುಟುಂಬಸ್ಥರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಪರಿಹಾರ ಪಾವತಿ ಜವಾಬ್ದಾರಿ ಅವರದ್ದೇ
ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಜಿ. ಪಂಡಿತ್ ಅವರ ನೇತೃತ್ವದ ವಿಭಾಗೀಯ ಪೀಠ, ಅಪಘಾತವಾದ ಬೈಕ್ ನೋಂದಣಿ ಇನ್ನೂ ಸುನೀಲ್ ಕುಮಾರ್ ಅವರ ಹೆಸರಲ್ಲೇ ಇದೆ. ಇದರಿಂದ ಪರಿಹಾರ ಪಾವತಿ ಜವಾಬ್ದಾರಿ ಅವರದ್ದೇ ಆಗುತ್ತದೆ ಎಂದು ತಿಳಿಸಿದೆ.
ಅಲ್ಲದೆ, ಮೃತನ ಕುಟುಂಬಕ್ಕೆ ನ್ಯಾಯಾಧಿಕರಣ ನಿಗದಿಪಡಿಸಿದ್ದ 33.07 ಲಕ್ಷ ರು. ಅನ್ನು 47.15 ಲಕ್ಷ ರು.ಗೆ ಹೆಚ್ಚಳ ಮಾಡಿರುವ ಹೈಕೋರ್ಟ್, ಆ ಮೊತ್ತವನ್ನು ವಾಹನದ ಮೂಲ ಮಾಲೀಕ ಸುನೀಲ್ ಕುಮಾರ್ ಅವರೇ ಪಾವತಿಸಬೇಕು ಎಂದು ಆದೇಶಿಸಿದೆ.
ಪ್ರಕರಣದ ವಿವರ:
ಮಾರತ್‌ಹಳ್ಳಿ ನಿವಾಸಿ ಸುನೀಲ್ ಕುಮಾರ್ ಎಂಬವರು ಖರೀದಿಸಿದ್ದ ಬೈಕ್ ಅನ್ನು ಬಳಿಕ ಶಬ್ರೀಜ್ ಎಂಬುವರಿಗೆ ಮಾರಾಟ ಮಾಡಿದ್ದರು. 2020ರ ಜೂ.18ರಂದು ಬೈಕ್ ಡಿಕ್ಕಿ ಆಗಿ ಹನುಮಂತ ಎಂಬುವರು ಮೃತಪಟ್ಟಿದ್ದರು. ಮೃತರ ಕುಟುಂಬಕ್ಕೆ ನ್ಯಾಯಾಧಿಕರಣ 33 ಲಕ್ಷ ರು. ಅನ್ನು ಸುನೀಲ್ ಕುಮಾರ್ ಮತ್ತು ಶಬ್ರೀಜ್ ಜಂಟಿಯಾಗಿ ಪಾವತಿಸಬೇಕು ಎಂದು ಆದೇಶಿಸಿತ್ತು.
ಅದನ್ನು ಪ್ರಶ್ನಿಸಿ ಸುನೀಲ್ ಕುಮಾರ್ ಮತ್ತು ಶಬ್ರೀಜ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅಲ್ಲದೆ, ಮೃತ ಹನುಮಂತ ಅವರ ಕುಟುಂಬದವರು ಮೃತರ ಆದಾಯ ತೆರಿಗೆ ವಿವರಗಳನ್ನು ಉಲ್ಲೇಖಿಸಿ ಹೆಚ್ಚಿನ ಪರಿಹಾರ ಕೋರಿ ಪ್ರತ್ಯೇಕ ಮೇಲ್ಮನವಿ ಸಲ್ಲಿಸಿದ್ದರು.
ವಿಚಾರಣೆ ವೇಳೆ ಸುನೀಲ್ ಕುಮಾರ್ ಪರ ವಕೀಲರು, ವಾಹನವನ್ನು ಶಬ್ರೀಜ್ ಎಂಬುವವರಿಗೆ ಮಾರಾಟ ಮಾಡಿರುವುದಾಗಿ ಹೇಳಿದ್ದರು. ಆದರೆ, ಈ ಬೈಕ್ ಖರೀದಿ ವ್ಯವಹಾರವನ್ನು ಶಬ್ರೀಜ್ ನಿರಾಕರಿಸಿದ್ದರು. ಇದರಿಂದ ಸುನೀಲ್ ಕುಮಾರ್ ಒಬ್ಬರೇ ಪರಿಹಾರ ಪಾವತಿಸಬೇಕಿದೆ.
