ಸಾರಾಂಶ
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಪ್ರಸಕ್ತ ಸಾಲಿಗೆ ಕನಿಷ್ಠ ಬೆಂಬಲ ಬೆಲೆಯಡಿ ಗುಣಮಟ್ಟದ ರಾಗಿ ಖರೀದಿಗಾಗಿ ತಾಲೂಕಿನ ರೈತರು ಡಿ.೩೧ರೊಳಗೆ ನೋಂದಣಿ ಮಾಡಿಸಿಕೊಳ್ಳಬೇಕು ಎಂದು ಶಾಸಕ ಸಿ.ಎನ್.ಬಾಲಕೃಷ್ಣ ತಿಳಿಸಿದರು.ಕೇಂದ್ರ ಸರ್ಕಾರವು ಪ್ರತಿ ಕ್ವಿಂಟಾಲ್ ರಾಗಿಗೆ ೪,೨೯೦ ರು. ದರವನ್ನು ಕನಿಷ್ಠ ಬೆಂಬಲ ಬೆಲೆಯಡಿ ನಿಗದಿಪಡಿಸಿದ್ದು, ಇದರ ಲಾಭ ಪಡೆದುಕೊಳ್ಳಲು ತಾಲೂಕಿನ ರೈತರು ಮುಂದಾಗಬೇಕು. ಪ್ರಸಕ್ತ ವರ್ಷ ಉತ್ತಮ ಮಳೆಯಿಂದಾಗಿ ತಾಲೂಕಿನಲ್ಲಿ ಶೇ.೭೦ರಷ್ಟು ರಾಗಿ ಉತ್ಕೃಷ್ಟವಾಗಿದೆ. ಈಗಾಗಲೇ ರಾಗಿ ಕಟಾವಿಗೆ ಬಂದಿದ್ದು, ಕಟಾವಿಗೆ ವಾತಾವರಣವೂ ಉತ್ತಮವಾಗಿದೆ. ರೈತರು ತಾಲೂಕು ಕೇಂದ್ರ ಸೇರಿದಂತೆ ನುಗ್ಗೇಹಳ್ಳಿ, ಉದಯಪುರ, ಶ್ರವಣಬೆಳಗೊಳ, ಬಾಗೂರು, ಮತ್ತು ಹಿರೀಸಾವೆಯ ಹೋಬಳಿಗಳಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣ ಮತ್ತು ರೈತಸಂಪರ್ಕ ಕೇಂದ್ರಗಳಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕು. ಈಗಾಗಲೇ ೫೦೭ ರೈತರು ನೋಂದಣಿ ಮಾಡಿಸಿಕೊಂಡಿದ್ದು, ಡಿ.೩೧ರವರೆಗೂ ನೋಂದಣಿಗೆ ಅವಕಾಶವಿದ್ದು, ಶೀಘ್ರು ನೋಂದಣಿಗೆ ಮುಂದಾಗಬೇಕು ಎಂದರು.
ಸಣ್ಣ ಮತ್ತು ದೊಡ್ಡ ರೈತರಿಗೆ ರಾಗಿಯನ್ನು ಮಾರುಕಟ್ಟೆಗೆ ಬಿಡಲು ಅವಕಾಶವಿದ್ದು, ಪ್ರತಿ ಎಕರೆಗೆ ೧೦ ಕ್ವಿಂಟಲ್, ದೊಡ್ಡ ರೈತರಿಗೆ ಗರಿಷ್ಠ ೨೦ ಕ್ವಿಂಟಲ್ ಖರೀದಿಗೆ ಅವಕಾಶವಿದ್ದು, ರೈತರು ಆಧಾರ್‌ನೊಂದಿಗೆ ಫ್ರೂಟ್ ಐಡಿ ಸಲ್ಲಿಕೆ ಮಾಡಿ ನೋಂದಣಿಗೆ ಮುಂದಾಗಬೇಕು. ರಾಗಿಯೊಂದಿಗೆ ಭತ್ತ ಖರೀದಿಗೂ ಅವಕಾಶವಿದ್ದು, ಪ್ರತಿ ಕ್ವಿಂಟಲ್ ಭತ್ತಕ್ಕೆ ೨೩೨೦ ರು. ಬೆಂಬಲ ಬೆಲೆ ನಿಗದಿಪಡಿಸಲಾಗಿದೆ. ಭತ್ತ ಬೆಳೆದಿರುವ ರೈತರು ನೋಂದಣಿ ಮಾಡಿಸಿಕೊಳ್ಳುವಂತೆ ತಿಳಿಸಿದ ಅವರು, ತಾಲೂಕಿನಲ್ಲಿ ಈಗಿರುವ ೬ ಖರೀದಿ ಕೇಂದ್ರಗಳೊಂದಿಗೆ ಹೆಚ್ಚುವರಿಯಾಗಿ ದಿಡಗ ಮತ್ತು ಅಣತಿ ಗ್ರಾಮಗಳಲ್ಲಿ ಹೆಚ್ಚುವರಿ ಖರೀದಿ ಕೇಂದ್ರ ತೆರೆಯುವಂತೆ ಜಿಲ್ಲಾಧಿಕಾರಿಗೆ ಮನವಿ ಮಾಡಲಾಗಿದೆ ಎಂದರು. ಇದೇ ಮನವಿ ವೇಳೆ ಕಲಸಿಂದ ಕೃಷಿಪತ್ತಿನ ಸಹಕಾರ ಸಂಘದಲ್ಲಿ ಸಾಲ ಪಡೆದಿದ್ದ ಕಲಸಿಂದ ಗ್ರಾಮದ ಲಕ್ಷ್ಮೀಗೌಡ ಅಪಘಾತದಿಂದ ಮೃತಪಟ್ಟ ಹಿನ್ನೆಲೆಯಲ್ಲಿ ಜಿಲ್ಲಾ ಸಹಕಾರ ಬ್ಯಾಂಕಿನ ವಿಮಾ ಸೌಲಭ್ಯದಡಿ ೧ ಲಕ್ಷ ರೂ. ಗಳ ಚೆಕ್‌ನ್ನು ಮೃತರ ಪತ್ನಿ ಗೌರಮ್ಮನಿಗೆ ಹಸ್ತಾಂತರಿಸಲಾಯಿತು.ರಾಜ್ಯ ಮಾರಾಟ ಮಹಾ ಮಂಡಳದ ನಿರ್ದೇಶಕ ಸಿ.ಎನ್ ಪುಟ್ಟಸ್ವಾಮಿಗೌಡ, ಟಿಎಪಿಸಿಎಂಎಸ್ ಉಪಾಧ್ಯಕ್ಷ ಸ್ವಾಮಿ, ನಿರ್ದೇಶಕ ಅನಿಲ್ ಕುಮಾರ್, ಹಿರಿಯ ಸಹಕಾರಿ ವಿ.ಎನ್. ರಾಜಣ್ಣ, ಮುಖಂಡರಾದ ಪರಮದೇವರಾಜೇಗೌಡ, ಸಿಂಹಾದ್ರಿ ಮಂಜಣ್ಣ, ಫೆಡರೇಷನ್ ಅಧಿಕಾರಿ ಕಾವ್ಯ, ಆಹಾರ ಶಿರಸ್ತೇದಾರ್ ಹೇಮಂತ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮೋಹನ್, ಎಪಿಎಂಸಿ ಕಾರ್ಯದರ್ಶಿ ಸೋಮಶೇಖರ್ ಇತರರು ಇದ್ದರು.
;Resize=(128,128))
;Resize=(128,128))
;Resize=(128,128))