ಸಾರಾಂಶ
ನ್ಯಾಯಾಲಯಕ್ಕೆ ಸಾಕ್ಷಿ ಹೇಳಲು ಬಂದ ಕುಟುಂಬದವರ ಮೇಲೆ ಸಿನಿಮೀಯ ಶೈಲಿಯಲ್ಲಿ ಹಲ್ಲೆ ಮಾಡಿರುವ ಘಟನೆ ಚನ್ನರಾಯಪಟ್ಟಣದ ನ್ಯಾಯಾಲಯದ ಮುಂಭಾಗ ನಡೆದಿದೆ. ತಾಲೂಕಿನ ಹಿರಿಸಾವೆ ಹೋಬಳಿ ಅಂಕನಹಳ್ಳಿ ಗ್ರಾಮದಿಂದ ಬಂದ ಕುಟುಂಬದ ಮೇಲೆ ಚನ್ನರಾಯಪಟ್ಟಣ ಮೂಲದ ದಿನೇಶ್ ಎಂಬುವವರು ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಪಟ್ಟಣದಲ್ಲಿರುವ ಜೆ.ಎಂ.ಎಫ್.ಸಿ ನ್ಯಾಯಾಲಯದ ಮುಂಭಾಗ ಘಟನೆ ನಡೆದಿದ್ದು, ನ್ಯಾಯ ದೇವತೆಯ ಆವರಣದಲ್ಲಿಯೇ ಮಾರಾಣಾಂತಿಕ ಹಲ್ಲೆ ನಡೆಸಿರುವುದು ಸಮಾಜವೇ ತಲೆತಗ್ಗಿಸುವಂತಾಗಿದ್ದು, ಈ ಘಟನಾವಳಿಯ ವಿಡಿಯೋ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ನ್ಯಾಯಾಲಯಕ್ಕೆ ಸಾಕ್ಷಿ ಹೇಳಲು ಬಂದ ಕುಟುಂಬದವರ ಮೇಲೆ ಸಿನಿಮೀಯ ಶೈಲಿಯಲ್ಲಿ ಹಲ್ಲೆ ಮಾಡಿರುವ ಘಟನೆ ಚನ್ನರಾಯಪಟ್ಟಣದ ನ್ಯಾಯಾಲಯದ ಮುಂಭಾಗ ನಡೆದಿದೆ.ತಾಲೂಕಿನ ಹಿರಿಸಾವೆ ಹೋಬಳಿ ಅಂಕನಹಳ್ಳಿ ಗ್ರಾಮದಿಂದ ಬಂದ ಕುಟುಂಬದ ಮೇಲೆ ಚನ್ನರಾಯಪಟ್ಟಣ ಮೂಲದ ದಿನೇಶ್ ಎಂಬುವವರು ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಪಟ್ಟಣದಲ್ಲಿರುವ ಜೆ.ಎಂ.ಎಫ್.ಸಿ ನ್ಯಾಯಾಲಯದ ಮುಂಭಾಗ ಘಟನೆ ನಡೆದಿದ್ದು, ನ್ಯಾಯ ದೇವತೆಯ ಆವರಣದಲ್ಲಿಯೇ ಮಾರಾಣಾಂತಿಕ ಹಲ್ಲೆ ನಡೆಸಿರುವುದು ಸಮಾಜವೇ ತಲೆತಗ್ಗಿಸುವಂತಾಗಿದ್ದು, ಈ ಘಟನಾವಳಿಯ ವಿಡಿಯೋ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಘಟನೆ ವಿವರ:ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಅಂಕನಹಳ್ಳಿ ಗ್ರಾಮದ ವೆಂಕಟೇಶ್ ಮತ್ತು ಇವರ ದಾಯಾದಿಗಳ ನಡುವೆ ಕೋರ್ಟ್‌ನಲ್ಲಿ ಕೇಸ್ ನಡೆಯುತ್ತಿತ್ತು. ಜಮೀನು ವ್ಯಾಜ್ಯದ ವಿಚಾರಣೆಗಾಗಿ ಕುಟುಂಬ ಸಮೇತ ಆಗಮಿಸಬೇಕೆಂದು ನ್ಯಾಯಾಧೀಶರು ಆದೇಶ ನೀಡಿದ್ದರು. ಅದರಂತೆ ವೆಂಕಟೇಶ್, ಆತನ ಭಾವ ಮಂಜುನಾಥ್, ಅಕ್ಕ ಮಧುಕುಮಾರಿ, ಪತ್ನಿ ರಮ್ಯ ಸೇರಿದಂತೆ ೭ ತಿಂಗಳ ಹಸುಗೂಸಿನೊಂದಿಗೆ ತಮ್ಮ ಕಾರಿನಲ್ಲಿ ಚನ್ನರಾಯಪಟ್ಟಣದ ನ್ಯಾಯಾಲಯಕ್ಕೆ ಸೋಮವಾರ ಬೆಳಿಗ್ಗೆ ಆಗಮಿಸಿದ್ದರು.
ನ್ಯಾಯಾಲಯದ ಮುಂಭಾಗ ಕಾರು ನಿಲ್ಲಿಸಿ ಕಾರಿನ ಬಾಗಿಲು ತೆರೆದು ಇಳಿಯುವ ಸಂದರ್ಭದಲ್ಲಿ ಅಪರಿಚಿತ ವ್ಯಕ್ತಿಗಳು ಏಕಾಏಕಿ ಮಾರಾಕಾಸ್ತ್ರಗಳಿಂದ ಕುಟುಂಬಸ್ಥರ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ವೆಂಕಟೇಶ್, ಮಂಜುನಾಥ್ ಮೇಲೆ ಹಲ್ಲೆ ನಡೆಸಿ ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದಾರೆ. ಈ ವೇಳೆ ಸ್ಥಳೀಯರು ಹಿಡಿದು ಹಿಗ್ಗಾಮುಗ್ಗಾ ಥಳಿಸಿದ್ದಾರೆ.ಹಲ್ಲೆಗೆ ಕಾರಣವಾದವರನ್ನು ಚನ್ನರಾಯಪಟ್ಟಣ ಮೂಲದ ದಿನೇಶ್, ಚೇತನ್, ಬೆಂಗಳೂರು ಮೂಲದ ಪ್ರಕಾಶ್ ಎಂದು ಗುರ್ತಿಸಲಾಗಿದ್ದು, ಸದ್ಯ ಸಾರ್ವಜನಿಕರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.ಗಾಯಾಳುಗಳಾದ ಮಂಜುನಾಥ್ ಮತ್ತು ವೆಂಕಟೇಶ್ ಎಂಬುವರನ್ನು ಚನ್ನರಾಯಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.