ಸ್ನೇಹಿತನ ಸೋದರಿ ಮದುವೆಗೆ ಬಂದವರು ಮಸಣ ಹಾದಿ ಹಿಡಿದರು!

| Published : Oct 27 2024, 02:29 AM IST

ಸಾರಾಂಶ

ಸ್ನೇಹಿತನ ಸಹೋದರಿಯ ಮದುವೆ ಸಮಾರಂಭಕ್ಕೆಂದು ಬೆಂಗಳೂರಿನಿಂದ ಬಂದ ಯುವಕರ ತಂಡವೊಂದು ಸಮುದ್ರದಲ್ಲಿ ಈಜಲು ತೆರಳಿದ ವೇಳೆ ನೀರಿನ ಸೆಳೆತಕ್ಕೆ ಸಿಲುಕಿ ಇಬ್ಬರು ಮೃತಪಟ್ಟಿರುವ ದಾರುಣ ಘಟನೆ ಶನಿವಾರ ಬೆಳಿಗ್ಗೆ ಬೀಜಾಡಿ ಕಡಲತೀರದಲ್ಲಿ ಸಂಭವಿಸಿದೆ.

ಕನ್ನಡಪ್ರಭ ವಾರ್ತೆ ಕುಂದಾಪುರ

ಸ್ನೇಹಿತನ ಸಹೋದರಿಯ ಮದುವೆ ಸಮಾರಂಭಕ್ಕೆಂದು ಬೆಂಗಳೂರಿನಿಂದ ಬಂದ ಯುವಕರ ತಂಡವೊಂದು ಸಮುದ್ರದಲ್ಲಿ ಈಜಲು ತೆರಳಿದ ವೇಳೆ ನೀರಿನ ಸೆಳೆತಕ್ಕೆ ಸಿಲುಕಿ ಇಬ್ಬರು ಮೃತಪಟ್ಟಿರುವ ದಾರುಣ ಘಟನೆ ಶನಿವಾರ ಬೆಳಿಗ್ಗೆ ಬೀಜಾಡಿ ಕಡಲತೀರದಲ್ಲಿ ಸಂಭವಿಸಿದೆ. ಬೆಂಗಳೂರಿನ ಖಾಸಗಿ ಕಂಪನಿಯ ಉದ್ಯೋಗಿಗಳಾದ ಬೆಂಗಳೂರು ಟಿ. ದಾಸರಹಳ್ಳಿ ಮೂಲದ ಸಂತೋಷ್ (25) ಹಾಗೂ ಕುಂದಾಪುರದ ಆನಗಳ್ಳಿ ನಿವಾಸಿ ಅಜಯ್ (25) ಮೃತರು. ಸ್ನೇಹಿತ ಅರ್ಜುನ್ ಸಹೋದರಿಯ ಮದುವೆ ಕಾರ್ಯಕ್ರಮಕ್ಕೆಂದು ನಾಲ್ವರು ಸ್ನೇಹಿತರಾದ ಸಂತೋಷ್, ಅಜಯ್, ಮೋಕ್ಷಿತ್ ಹಾಗೂ ಅರ್ಜುನ್ ಶುಕ್ರವಾರ ಬೆಂಗಳೂರಿನಿಂದ ಬಂದಿದ್ದು, ರಾತ್ರಿ ಬ್ರಹ್ಮಾವರದಲ್ಲಿ ಮೆಹಂದಿ ಕಾರ್ಯಕ್ರಮ ಮುಗಿಸಿ ಕುಂದಾಪುರದ ಬೀಜಾಡಿಯಲ್ಲಿರುವ ಬೀಚ್ ಪಕ್ಕದಲ್ಲಿನ ಖಾಸಗಿ ರೆಸಾರ್ಟ್‌ನಲ್ಲಿ ತಂಗಿದ್ದರು. ಶನಿವಾರ ಬೆಳಗ್ಗೆ ನಾಲ್ವರಲ್ಲಿ ಮೂವರು ಸಮುದ್ರದಲ್ಲಿ ಈಜಲು ತೆರಳಿದ ವೇಳೆ ಅವರ ಪೈಕಿ ಇಬ್ಬರು ಸಮುದ್ರಪಾಲಾಗಿದ್ದಾರೆ.

ಸ್ನೇಹಿತ ಮೋಕ್ಷಿತ್ ಮುಂದೆ ಹೋಗಬೇಡಿ ಎಂದು ಹೇಳಿದರೂ ಕೇಳದೇ ನೀರಿನಲ್ಲಿ ಮುಂದೆ ಸಾಗಿರುವ ಸಂತೋಷ್ ಹಾಗೂ ಅಜಯ್ ನೀರಿನ ಸೆಳೆತಕ್ಕೆ ಸಿಲುಕಿದ್ದರು. ಯುವಕರನ್ನು ಮೋಕ್ಷಿತ್ ಹಾಗೂ ಸ್ಥಳೀಯರು ರಕ್ಷಿಸಲು ಮುಂದಾಗಿದ್ದು, ಈ ವೇಳೆ ಸಂತೋಷ್ ಅವರನ್ನು ದಡಕ್ಕೆ ತಂದು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯದಲ್ಲೇ ಅವರು ಕೊನೆಯುಸಿರೆಳೆದಿದ್ದಾರೆ. ಕುಂದಾಪುರ ಮೂಲದ ಅಜಯ್ ನೀರಿನ ಸೆಳೆತಕ್ಕೆ ಸಿಲುಕಿ ನೀರುಪಾಲಾಗಿದ್ದು, ಸತತ ಐದು ಗಂಟೆಗಳ ಕಾರ್ಯಾಚರಣೆಯ ಬಳಿಕ ಬಿದ್ದ ಸ್ಥಳದಿಂದ ಅನತಿ ದೂರದಲ್ಲೇ ಮೃತದೇಹ ಪತ್ತೆಯಾಗಿದೆ. ಅಜಯ್‌ಗಾಗಿ ತೀವ್ರ ಹುಡುಕಾಟ: ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಕುಂದಾಪುರದ ಅಗ್ನಿಶಾಮಕ ದಳ, ಗಂಗೊಳ್ಳಿಯ ಕರಾವಳಿ ಕಾವಲು ಪಡೆ, ಮುಳುಗು ತಜ್ಞರ ತಂಡ, ಅಜಯ್‌ಗಾಗಿ ತೀವ್ರ ಹುಡುಕಾಟ ನಡೆಸಿತು. ಗಂಗೊಳ್ಳಿಯ ಕರವಾಳಿ ಕಾವಲು ಪಡೆ ಬೋಟ್ ಮೂಲಕ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಯುವಕರು ನೀರುಪಾಲಾದ ಸ್ಥಳದ ಅನತಿ ದೂರದಲ್ಲೇ ಸರಿಸುಮಾರು ಐದು ಗಂಟೆಗಳ ಬಳಿಕ 2 ಗಂಟೆಯ ಆಸುಪಾಸಿಗೆ ಅಜಯ್ ಮೃತದೇಹ ಪತ್ತೆಯಾಗಿದೆ. ಇತ್ತೀಚೆಗಷ್ಟೇ ತಿಪಟೂರು ಮೂಲದ ಯುವಕನೊಬ್ಬ ಸ್ನೇಹಿತನ ಮದುವೆಗೆ ಬಂದ ವೇಳೆ ಬೀಜಾಡಿ ಸಮುದ್ರದಲ್ಲಿ ಈಜಲು ಹೋಗಿ ಸಾವನ್ನಪ್ಪಿದ ಘಟನೆ ನೆನಪು ಮಾಸುವ ಮುನ್ನವೇ ಇದೀಗ ಇನ್ನೊಂದು ದುರ್ಘಟನೆ ಇದೇ ಸ್ಥಳದಲ್ಲಿ ನಡೆದಿದೆ. ಕುಂದಾಪುರ ನಗರ ಠಾಣೆಯ ಇನ್ಸ್‌ಪೆಕ್ಟರ್‌ ನಂಜಪ್ಪ, ಎಎಸ್ಐ ಸುರೇಶ್ ಭಟ್ ಹಾಗೂ ಸಿಬ್ಬಂದಿ, ಕರಾವಳಿ ಕಾವಲು ಪಡೆಯ ಪಿಎಸ್ಐ ಸುಬ್ರಹ್ಮಣ್ಯ, ಅಗ್ನಿಶಾಮಕ ದಳ ಸಿಬ್ಬಂದಿ, ಮುಳುಗು ತಜ್ಙ ದಿನಶ್ ಖಾರ್ವಿ ತಂಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

.........

ಅಮ್ಮಾ…ಮಧ್ಯಾಹ್ನ ಊಟಕ್ಕೆ ಬರ್ತೇವೆ.. ಊಟ ರೆಡಿ ಮಾಡಿ ಇಡು!:ಬಾಲ್ಯದಿಂದಲೂ ಕಲಿಕೆಯಲ್ಲಿ ಮುಂದಿದ್ದ ಅಜಯ್ ವಿದ್ಯಾಭ್ಯಾಸವೆಲ್ಲಾ ಬೆಂಗಳೂರಿನಲ್ಲೇ ಮುಗಿಸಿ ಅಲ್ಲಿಯೇ ಖಾಸಗಿ ಕಂಪನಿಯಲ್ಲಿ ಉದ್ಯೋಗ ಆರಂಭಿಸಿದ್ದರು. ಶುಕ್ರವಾರ ರಾತ್ರಿ ಬ್ರಹ್ಮಾವರದಲ್ಲಿ ಮೆಹಂದಿ ಕಾರ್ಯಕ್ರಮ ಮುಗಿಸಿ ಅಮ್ಮನಿಗೆ ಕರೆ ಮಾಡಿ ಇಲ್ಲೇ ಸಮೀಪದ ವಸತಿಗೃಹದಲ್ಲಿ ಉಳಿದುಕೊಂಡು ನಾಳೆ (ಶನಿವಾರ) ಮಧ್ಯಾಹ್ನ ವೇಳೆಗೆ ಬರುತ್ತೇವೆ. ಊಟಕ್ಕೆ ತಯಾರಿ ಮಾಡಿ ಇಡು ಎಂದು ಹೇಳಿದ್ದರು. ಬೆಳಗ್ಗೆ ಮಗನಿಗೆ ಅಮ್ಮ ಕರೆ ಮಾಡಿದಾಗ ಕರೆ ಸ್ವೀಕರಿಸದ ಹಿನ್ನೆಲೆ ವಿಚಾರಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಬೆಂಗಳೂರಿನಿಂದ ಮಗ ಮನೆಗೆ ಬರುತ್ತಾನೆಂದು ಸಂಭ್ರಮದಿಂದಲೇ ಮಗನಿಗೆ ಇಷ್ಟವಾದ ಊಟ ತಯಾರಿಸಿ ಕಾಯುತ್ತಿದ್ದ ತಾಯಿಗೆ ಅಜಯ್ ಸಾವಿನ ಸುದ್ದಿ ಬರಸಿಡಿಲಿನಂತೆ ಅಪ್ಪಳಿಸಿದ್ದು, ಕುಟುಂಬಿಕರ ಆಕ್ರಂದನ ಮುಗಿಲು ಮುಟ್ಟಿದೆ.