ಗುಂಡಿ ಮುಚ್ಚಲಾಗದವರು ಎಐ ಸಿಟಿ ಮಾಡುತ್ತಾರಂತೆ: ನಿಖಿಲ್ ಕುಮಾರಸ್ವಾಮಿ

| Published : Sep 29 2025, 01:02 AM IST

ಗುಂಡಿ ಮುಚ್ಚಲಾಗದವರು ಎಐ ಸಿಟಿ ಮಾಡುತ್ತಾರಂತೆ: ನಿಖಿಲ್ ಕುಮಾರಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಈ ಟೌನ್‌ಶಿಪ್ ಯೋಜನಗೆ ನಿಮ್ಮ ಬಳಿ ಹಣ ಇದಿಯಾ. ರೈತರ ಜಮೀನನ್ನು ಖಾಸಗಿಯವರಿಗೆ ಅಡವಿಟ್ಟು ಹಣ ತರಲು ಹೋಗುತ್ತಿದ್ದೀರಿ.

ರಾಮನಗರ:

ನಿಮ್ಮ ಯೋಗ್ಯತೆಗೆ ಬೆಂಗಳೂರಿನ ರಸ್ತೆಗಳಲ್ಲಿ ಬಿದ್ದಿರುವ ಗುಂಡಿ ಮುಚ್ಚಲು ಆಗುತ್ತಿಲ್ಲ. ಬಿಡದಿಯಲ್ಲಿ ಅದೆಂತದೋ ಎಐ ಸಿಟಿ ಮಾಡುತ್ತೇವೆ ಅನ್ನುತ್ತಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ಬಿಡದಿ ಹೋಬಳಿ ಬೈರಮಂಗಲ ವೃತ್ತದಲ್ಲಿ ಬೈರಮಂಗಲ ಮತ್ತು ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿಗಳ ರೈತರ ಭೂ ಹಿತರಕ್ಷಣಾ ಸಂಘದ ನೇತೃತ್ವದಲ್ಲಿ ಭೂ ಸ್ವಾಧೀನ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಬೆಂಗಳೂರು ಗುಂಡಿ ಬಗ್ಗೆ ರಾಷ್ಟ್ರದ್ಯಂತ ಚರ್ಚೆ ಆಗುತ್ತಿದೆ. ಉಪಮುಖ್ಯಮಂತ್ರಿಗಳೇ ನಿಮ್ಮ ಯೋಗ್ಯತೆಗೆ ಮೊದಲು ಬೆಂಗಳೂರು ಗುಂಡಿ ಮುಚ್ಚಿ ಅದಕ್ಕೂ ಕೇಂದ್ರದಿಂದ ಹಣ ಕೊಡಿಸಬೇಕಾ ಹೇಳಿ ಕೊಡಿಸುತ್ತೇವೆ ಎಂದರು.

ಈ ಟೌನ್‌ಶಿಪ್ ಯೋಜನಗೆ ನಿಮ್ಮ ಬಳಿ ಹಣ ಇದಿಯಾ. ರೈತರ ಜಮೀನನ್ನು ಖಾಸಗಿಯವರಿಗೆ ಅಡವಿಟ್ಟು ಹಣ ತರಲು ಹೋಗುತ್ತಿದ್ದೀರಿ. 9 ಸಾವಿರ ಎಕರೆಯಲ್ಲಿ ಎರಡು-ಮೂರು ಸಾವಿರ ಎಕರೆ ಸರ್ಕಾರಿ ಜಮೀನು ಬರುತ್ತದೆ ಎಂದು ಹಾಕಿದ್ದ ಲೆಕ್ಕಾಚಾರ ಉಲ್ಟಾ ಆಗಿದೆ. ಡಿ.ಕೆ.ಶಿವಕುಮಾರ್ ಅವರು ಸೌಜನ್ಯಕ್ಕಾಗದರು ರೈತರ ಜೊತೆ ಒಂದು ಸಭೆ ಮಾಡಿಲ್ಲ. ಸಾಧಕ ಬಾಧಕಗಳ ಬಗ್ಗೆ ಚರ್ಚೆ ಮಾಡಿಲ್ಲ ಎಂದು ಕಿಡಿಕಾರಿದರು.

ಜಿಬಿಡಿಎಗೆ ನಿಮ್ಮ ಸಹೋದರನನ್ನು ಸದಸ್ಯನನ್ನಾಗಿ ಮಾಡಿದ್ದಾರೆ. ಈಗ ನಿಮ್ಮ ಸಹೋದರ ಜನಪ್ರತಿನಿಧಿಯಾ. ಹಾಲಿ ಸಂಸದರನ್ನು ಏಕೆ ಜಿಬಿಡಿಎಗೆ ಸದಸ್ಯರನ್ನಾಗಿ ಮಾಡಿಲ್ಲ. ಮುಂದೆ ಜಿಬಿಡಿಎಗೆ ನಿಮ್ಮ ಸಹೋದರನ ಅಧ್ಯಕ್ಷರನ್ನಾಗಿ ಮಾಡಲು ಹೀಗೆ ಮಾಡಿದ್ದೀರಿ. ನೀವು ಉದ್ದಾರ ಆಗೋದಕ್ಕೆ ಅಮಾಯಕ ರೈತರ ಹೊಟ್ಟೆಮೇಲೆ ಹೊಡೆಯಬೇಡಿ ಎಂದು ಹೇಳಿದರು.

ದೇವೇಗೌಡರು ಬದುಕಿದ್ದಾರೆ ಅನ್ನೋದನ್ನ ಮರೆಯಬೇಡಿ. ಅವರ ಪರವಾಗಿ ರೈತರಿಗೆ ನಾನು ಮಾತು ಕೊಡುತ್ತೇನೆ. ಯಾವುದೇ ಕಾರಣಕ್ಕೂ ಒಂದು ಇಂಚು ಜಮೀನನ್ನು ಸ್ವಾಧೀನ ಮಾಡಲು ಬಿಡುವುದಿಲ್ಲ. ನಿಮ್ಮ ಹೋರಾಟಕ್ಕೆ ನಾನು ಜೊತೆಯಾಗಿ ನಿಲ್ಲುತ್ತೇನೆ. ಈ ರಾಕ್ಷಸರ ವಿರುದ್ಧ ನಾವು ಒಟ್ಟಾಗಿ ಹೋರಾಟ ಮಾಡೋಣ.

ಮಾನ್ಯ ಉಪಮುಖ್ಯಮಂತ್ರಿಗಳೇ ಬಹಿರಂಗ ವೇದಿಕೆಯಲ್ಲಿ ಚರ್ಚೆಗೆ ಬನ್ನಿ. ಯೋಜನೆಗೆ ಒಪ್ಪಿಗೆ ಕೊಟ್ಟಿರುವ ರೈತರನ್ನೂ ಕರೆದುಕೊಂಡು ಬನ್ನಿ. ಬಹಿರಂಗ ಚರ್ಚೆ ಮಾಡಿ ಎಷ್ಟು ಜನರ ಒಪ್ಪಿಗೆ ಇದೆ ಎಷ್ಟು ಜನರ ವಿರೋಧ ಇದೆ ನೋಡೊಣ ಎಂದು ನಿಖಿಲ್ ಕುಮಾರಸ್ವಾಮಿ ಸವಾಲು ಹಾಕಿದರು.