ಎಸ್ಐಆರ್ ಅನ್ನು ಅನೇಕ ಸಾರಿ ನಡೆದಿದೆ. ನೆಹರು, ಇಂದಿರಾಗಾಂಧಿ, ರಾಜೀವ್ ಗಾಂಧಿ, ನರಸಿಂಹರಾವ್ ಸೇರಿದಂತೆ ಅನೇಕರ ಅವಧಿಯಲ್ಲಿ ಎಸ್ಐಆರ್ ಪ್ರಕ್ರಿಯೆ ನಡೆದಿದೆ. ಆದರೆ, ಆಗ ವಿರೋಧಿಸದವರು ಈಗ ವಿರೋಧಿಸುತ್ತಿದ್ದಾರೆ. ಇವರು ಆರಂಭದಿಂದಲೂ ಸತ್ತವರ ಹೆಸರಲ್ಲಿ, ಬಾಂಗ್ಲಾ ವಲಸಿಗರ ಹೆಸರಿನಲ್ಲಿ ಮತ ಹಾಕುತ್ತ ಬಂದಿದ್ದಾರೆ. ಈಗಲೂ ಅದೇ ಚಾಳಿ ಮುಂದುವರೆಸಲು ಎಸ್‌ಐಆರ್‌ ವಿರೋಧಿಸುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಮೈಸೂರು

ದೇಶದ ಪೌರತ್ವವನ್ನೇ ಸ್ವೀಕರಿಸದೆ ಮತ ಹಾಕಿದವರು ಮತಚೋರಿಗಳು, ಇವಿಎಂನಿಂದ ಗೆದ್ದು ಅದನ್ನೇ ಸರಿ ಇಲ್ಲ ಎನ್ನುವವರು ಗುಗ್ಗುಗಳು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರು ಕಾಂಗ್ರೆಸ್ ನಾಯಕರನ್ನು ಟೀಕಿಸಿದರು.

ನಗರದ ಪುರಭವನ ಆವರಣದಲ್ಲಿ ಶುಕ್ರವಾರ ರಾಜ್ಯ ಬಿಜೆಪಿ ಆಯೋಜಿಸಿದ್ದ ಪ್ರಜಾಪ್ರಭುತ್ವ ಉಳಿಸಿ ಅರಾಜಕತೆಯನ್ನು ಅಳಿಸಿ ಅಭಿಯಾನದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಎಸ್ಐಆರ್ ಅನ್ನು ಅನೇಕ ಸಾರಿ ನಡೆದಿದೆ. ನೆಹರು, ಇಂದಿರಾಗಾಂಧಿ, ರಾಜೀವ್ ಗಾಂಧಿ, ನರಸಿಂಹರಾವ್ ಸೇರಿದಂತೆ ಅನೇಕರ ಅವಧಿಯಲ್ಲಿ ಎಸ್ಐಆರ್ ಪ್ರಕ್ರಿಯೆ ನಡೆದಿದೆ. ಆದರೆ, ಆಗ ವಿರೋಧಿಸದವರು ಈಗ ವಿರೋಧಿಸುತ್ತಿದ್ದಾರೆ. ಇವರು ಆರಂಭದಿಂದಲೂ ಸತ್ತವರ ಹೆಸರಲ್ಲಿ, ಬಾಂಗ್ಲಾ ವಲಸಿಗರ ಹೆಸರಿನಲ್ಲಿ ಮತ ಹಾಕುತ್ತ ಬಂದಿದ್ದಾರೆ. ಈಗಲೂ ಅದೇ ಚಾಳಿ ಮುಂದುವರೆಸಲು ಎಸ್‌ಐಆರ್‌ ವಿರೋಧಿಸುತ್ತಿದ್ದಾರೆ ಎಂದರು.

ಹಳ್ಳಿಜನ ಗುಗ್ಗುಗಳಲ್ಲ, ಅವರು ಬಹಳ ಬುದ್ಧಿವಂತರಿದ್ದಾರೆ. ಇವಿಎಂನಿಂದ ಚುನಾವಣೆ ಗೆದ್ದು, ಅದನ್ನೇ ಸರಿ ಇಲ್ಲ ಎನ್ನುವವರು ಗುಗ್ಗುಗಳು. ಹಾಗಾದರೆ ಗೆದ್ದವರೆಲ್ಲರೂ ರಾಜೀನಾಮೆ ಕೊಟ್ಟು ಮತ್ತೆ ಚುನಾವಣೆ ಎದುರಿಸಲಿ ನೋಡೋಣ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕರ್ನಾಟಕದಿಂದಲೇ ಆ ಕೆಲಸ ಆರಂಭಿಸಲಿ ಎಂದು ಸವಾಲು ಹಾಕಿದರು.

ಆದ್ದರಿಂದ ಇವಿಎಂ ಸರಿ ಇಲ್ಲ ಎನ್ನುವವರು ಗುಗ್ಗುಗಳು, ಬೆಳಗ್ಗೆ ಇರೋದನ್ನು ಕಪ್ಪು ಅನ್ನುವವರು ಗುಗ್ಗುಗಳು. ಮತದಾರರ ಪಟ್ಟಿಯಿಂದ ಅರ್ಹರ ಹೆಸರು ಗಿಡಿಲ್‌ಆಗಿದ್ದರೆ ಬಿ.ಎಲ್‌.ಒ ಗಳು ತಪ್ಪು ಮಾಡಿದ್ದಾರೆ ಎಂದರ್ಥ. ಒಂದು ವೇಳೆ ಹಾಗೆ ಆಗಿದ್ದರೆ ಅವರನ್ನು ಕೆಲಸದಿಂದ ವಜಾಗೊಳಿಸಿ ನೋಡೋಣ ಎಂದು ಸವಾಲು ಹಾಕಿದರು.

ಮದುವೆಯಾಗಿ ಭಾರತಕ್ಕೆ ಬಂದವರು ಪೌರತ್ವವನ್ನೇ ಸ್ವೀಕರಿಸದೆ ಮತ ಚಲಾಯಿಸಿದ್ದಾರೆ. ಅವರು ಮತಚೋರರು. ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಧಿಕಾರದಿಂದ ಕೆಳಗಿಳಿಸುವ ಮಾತು ಆಡಲಾಗುತ್ತಿದೆ. ಆದರೆ ಮೋದಿ ಅವರು ಜನರ ಹೃದಯದಲ್ಲಿ ಇದ್ದಾರೆ. ಅವರನ್ನು ಅಲ್ಲಿಂದ ಇಳಿಸಲು ಸಾಧ್ಯವಿಲ್ಲ. ಇವಿಎಂ ಅನ್ನು ಸುಪ್ರಿಂ ಕೋರ್ಟ್‌ಮತ್ತು ಚುನಾವಣಾ ಆಯೋಗ ಒಪ್ಪಿಕೊಂಡಿದೆ. ಆದರೆ ಅದನ್ನು ಅರ್ಥಮಾಡಿಕೊಳ್ಳದವರು ಗುಗ್ಗುಗಳು ಎಂದು ಟೀಕಿಸಿದರು.

ಕಾಂಗ್ರೆಸ್‌ಬಳಿ ಹಾರ್ಡ್‌ವೇರೂ ಇಲ್ಲ, ಸಾಫ್ಟ್‌ವೇರೂ ಇಲ್ಲ. ಜಿಹಾದಿ ಹಾರ್ಡ್‌ವೇರ್‌, ನಾಕ್ಸಲ್‌ನ ಸಾಫ್ಟ್‌ವೇರ್‌ಬಳಸಿಕೊಂಡು ದೇಶದ ವ್ಯವಸ್ಥೆಯನ್ನು ಬುಡಮೇಲು ಮಾಡುತ್ತಿದೆ. ರಾಜ್ಯದಲ್ಲಿ ಸ್ಟಿಂಗು, ಡಿಂಗು ಎಂಬ ನಾಟಕವಾಡುತ್ತಿದೆ. ಕೆಲವರು ವಾಟ್ಸಾಪ್‌ನಲ್ಲಿ ಓಟ್‌ಚೋರಿ ಆಗಿಲ್ಲ, ಕಾಂಗ್ರೆಸ್‌ಚೋರರಿಗೆ ಓಟ್‌ಹಾಕುವುದು ಬಿಟ್ಟಿರುವುದಾಗಿ ಹೇಳಿದ್ದಾರೆ ಎಂದು ಅವರು ವ್ಯಂಗ್ಯವಾಡಿದರು.

ಲಕ್ಷಾಂತರ ಮಂದಿ ಅರ್ಹ ಮತದಾರರನ್ನು ಪಟ್ಟಿಯಿಂದ ಕೈಬಿಟ್ಟಿರುವುದಾಗಿ ಕಾಂಗ್ರೆಸ್‌ನವರು ಆರೋಪಿಸಿದ್ದಾರೆ. ಅಷ್ಟು ಮತದಾರರನ್ನು ನೀವು ನಮಗೆ ತೋರಿಸಿದರೆ ನಾವು ಚುನಾವಣೆಗೆ ಸ್ಪರ್ಧಿಸದೆಯೇ ಅಧಿಕಾರ ಬಿಟ್ಟುಕೊಡುತ್ತೇವೆ. ಇಲ್ಲವಾದರೆ ನಮಗೆ ಚುನಾವಣೆಯಲ್ಲಿ ಗೆಲ್ಲಲು ಯೋಗ್ಯತೆ ಇಲ್ಲ ಎಂದು ಕ್ಷಮೆಯಾಚಿಸಿ ಎಂದು ಅವರು ಸವಾಲು ಹಾಕಿದರು.

ಬೆಲೆ ಏರಿಕೆಯ ಚಾಟಿ ಏಟು:

ಬಳಿಕ ಮಾತನಾಡಿದ ವಿಧಾನಪರಿಷತ್ತಿನ ವಿಪಕ್ಷ ಮುಖ್ಯ ಸಚೇತಕ ಎನ್. ರವಿಕುಮಾರ್, ಜನರಿಗೆ ಬೆಲೆ ಏರಿಕೆಯ ಚಾಟಿ ಏಟು ಬೀಸುವ ಸರ್ಕಾರ ಕರ್ನಾಟಕದ್ದು ಎಂದು ಟೀಕಿಸಿದರು.

ಈ ಸರ್ಕಾರದ ವಿರುದ್ಧ ಜನರು ರೋಸಿ ಹೋಗಿದ್ದಾರೆ. ಹಾಲಿನ ದರ ಏರಿಕೆ ದಸರಾ ಗಿಫ್ಟ್, ಬಸ್ ದರ ಏರಿಕೆ ದೀಪಾವಳಿಯ ಉಡುಗೊರೆ ಎಂದು ಆಕ್ಷೇಪಿಸಿದರು. ಸಾಯಂಕಾಲದ ಹಾಲು, ಆಲ್ಕೋಹಾಲಿನ ದರ ಇದಕ್ಕಿಂತ ಭಯಂಕರವಾಗಿದೆ ಎಂದು ದೂರಿದರು.

ಬೆಲೆ ಏರಿಕೆಯಿಂದ ಜೇಬು ಖಾಲಿ ಆಗುತ್ತಿದೆ. ಸರ್ಕಾರದ ಖಜಾನೆಯನ್ನು ದಿವಾಳಿ ಮಾಡಿದ್ದಾರೆ. ಈ ಸರ್ಕಾರ ತೊಲಗುವವರೆಗೆ ನಾವು ವಿರಮಿಸುವುದಿಲ್ಲ ಎಂದು ಎಚ್ಚರಿಸಿದರು. ನಮ್ಮ ಮೊದಲ ಪ್ರಧಾನಿ ನೆಹರೂ ಅವರು ನಮ್ಮ ದೇಶದ ಇತಿಹಾಸ, ಸಂಸ್ಕೃತಿ ಹಾಳು ಮಾಡಿದ ಭ್ರಷ್ಟರು ಎಂದು ಅವರು ಟೀಕಿಸಿದರು.

ನರೇಂದ್ರ ಮೋದಿಯವರು ಸ್ಚಚ್ಛ, ಆರ್ಥಿಕವಾಗಿ ಬಲಿಷ್ಠ ಭಾರತ ನಿರ್ಮಾಣಕ್ಕೆ ಹೊರಟಿದ್ದಾರೆ. ಇದನ್ನು ರಾಹುಲ್ ಗಾಂಧಿಯವರಿಗೆ ಸಹಿಸಲು ಆಗುತ್ತಿಲ್ಲ ಎಂದು ಆರೋಪಿಸಿದರು. ರಾಹುಲ್ ಗಾಂಧಿಯವರಿಗೆ ಬುದ್ಧಿಭ್ರಮಣೆ ಆಗಿದೆ ಎಂದು ಆಕ್ಷೇಪಿಸಿದರು.

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಯಡಿಯೂರಪ್ಪ, ಮಾಜಿ ಸಚಿವ ಸಿ.ಟಿ. ರವಿ, ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಮ್ ಗೌಡ, ವಿಧಾನಪರಿಷತ್ತಿನ ವಿಪಕ್ಷ ಮುಖ್ಯ ಸಚೇತಕ ಎನ್.ರವಿಕುಮಾರ್, ಶಾಸಕ ಶ್ರೀವತ್ಸ, ಪಕ್ಷದ ಚುನಾಯಿತ ಪ್ರತಿನಿಧಿಗಳು, ರಾಜ್ಯ ಪದಾಧಿಕಾರಿಗಳು, ಜಿಲ್ಲಾಧ್ಯಕ್ಷರು, ಪ್ರಮುಖರು ಮತ್ತು ಕಾರ್ಯಕರ್ತರು ಇದ್ದರು.