ಸಾರಾಂಶ
ನಡೆ-ನುಡಿ ಸಮನ್ವಯತೆಯಿಂದ ಕೂಡಿದುದೇ ಶರಣ ತತ್ವವಾಗಿದೆ. ಹೀಗಾಗಿಯೇ, ಶರಣರು ನಡೆದಂತೆ ನುಡಿದರು ಎಂದು ಸಿದ್ಧಲಿಂಗೇಶ ಸಜ್ಜನಶೆಟ್ರ ಹೇಳಿದರು.
ಗದಗ: 12ನೇ ಶತಮಾನ ಈ ನಾಡಿನ ಸುವರ್ಣಯುಗವಾಗಿತ್ತು. ಬಸವಾದಿ ಶರಣರು ನಡೆದಂತೆ ನುಡಿದರು. ಈ ಪರಿಣಾಮವಾಗಿಯೇ ವಚನ ಸಾಹಿತ್ಯ ದೊಡ್ಡ ಪ್ರಮಾಣದಲ್ಲಿ ಜನಮನ್ನಣೆ ಗಳಿಸಿದೆ ಎಂದು ಮಹಿಳಾ ಸರ್ಕಾರಿ ಕಾಲೇಜಿನ ಉಪನ್ಯಾಸಕ ಸಿದ್ಧಲಿಂಗೇಶ ಸಜ್ಜನಶೆಟ್ರ ಹೇಳಿದರು.ಬೆಟಗೇರಿಯ ಒಕ್ಕಲಗೇರಿ ಓಣಿಯ ಬ್ರಹ್ಮದೇವರ ಭಜನಾ ಮಂಡಳಿ ಆವರಣದಲ್ಲಿ ನಡೆದ ವಚನ ಶ್ರಾವಣ-2024 ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಸವದಳ-ಬಸವಕೇಂದ್ರ, ಲಿಂಗಾಯತ ಪ್ರಗತಿಶೀಲ ಸಂಘಟನೆಗಳ ಆಶ್ರಯದಲ್ಲಿ ನೆಲನೊಂದೆ ಹೊಲಗೇರಿ ಶಿವಾಲಯಕ್ಕೆ, ಜಲವೊಂದೆ ಶೌಚಾಚಮನಕ್ಕೆ, ಕುಲವೊಂದೆ ತನ್ನ ತಾನರಿದವಂಗೆ, ಫಲವೊಂದೆ ಷಡುದರುಶನ ಮುಕ್ತಿಗೆ, ನಿಲವೊಂದೆ ಕೂಡಲಸಂಗಮದೇವಾ ನಿಮ್ಮನವರಿದವಂಗೆ ಎಂದು ವಚನ ಚಿಂತನೆ ನಡೆಸಿದರು. ಅರಿವು ಅಂತರಂಗದಲ್ಲಿ ಮೂಡಿದಾಗ ಆತನಿಗೆ ಅರಿವೇ ಗುರುವಾಗುತ್ತದೆ. ಅದೇ ದೇವನರಿವಾಗಿದೆ. ನಡೆ-ನುಡಿ ಸಮನ್ವಯತೆಯಿಂದ ಕೂಡಿದುದೇ ಶರಣ ತತ್ವವಾಗಿದೆ. ಹೀಗಾಗಿಯೇ, ಶರಣರು ನಡೆದಂತೆ ನುಡಿದರು ಎಂದರು.ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವಿ.ಕೆ. ಕರಿಗೌಡ್ರ ವಚನ ಶ್ರಾವಣ ಮಹತ್ವದ ಕುರಿತು ಮಾತನಾಡಿದರು.
ಷಟಸ್ಥಲ ಧ್ವಜಾರೋಹಣವನ್ನು ಓಣಿಯ ಹಿರಿಯರಾದ ಪ್ರಕಾಶ ಮಾಕಾಪೂರ ನೆರವೇರಿಸಿದರು. ಧರ್ಮಗೀತೆಯನ್ನು ಬಸವದಳದ ಶರಣೆಯರು ಹಾಡಿದರು. ನಂತರ ಎಸ್.ಎ. ಮುಗದ ಸಾಂವಿಧಾನ ಪೀಠಿಕೆ ಓದಿದರು. ನಗರಸಭೆ ಸದಸ್ಯ ಚಂದ್ರು ಕರಿಸೋಮನಗೌಡ್ರ ವಚನ ಶ್ರಾವಣ ಕಿರು ಹೊತ್ತಿಗೆ ಬಿಡುಗಡೆ ಮಾಡಿದರು.ಆನಂದಪ್ಪ ಕಟ್ಟಿಮನಿ, ಪ್ರಕಾಶ ಮಾಕಾಪೂರ, ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಶೇಖಣ್ಣ ಕಳಸಾಪೂರಶೆಟ್ರ, ಬಸವಕೇಂದ್ರದ ಅಧ್ಯಕ್ಷ ಕೆ.ಎನ್. ಚೆಟ್ಟಿ, ಶೇಖಣ್ಣ ಕವಳಿಕಾಯಿ ಹಾಗೂ ನ್ಯಾಯವಾದಿ ಎಸ್.ಸಿ. ಮಾಕಾಪೂರ ಉಪಸ್ಥಿತರಿದ್ದರು.
ಪ್ರಕಾಶ ಅಸುಂಡಿ ನಿರೂಪಿಸಿದರು. ನಾಗಪ್ಪ ಉಪ್ಪಿನ ವಂದಿಸಿದರು. ಬಸವದಳ, ಬಸವಕೇಂದ್ರ, ಲಿಂಗಾಯತ ಪ್ರಗತಿಶೀಲ ಸಂಘ, ಕನ್ನಡ ಸಾಹಿತ್ಯ ಪರಿಷತ್ತು, ಜಾಗತಿಕ ಲಿಂಗಾಯತ ಮಹಾಸಭೆ, ಒಕ್ಕಗೇರಿ ಓಣಿಯ ಮಹಾಜನತೆ ಪಾಲ್ಗೊಂಡಿದ್ದರು.