ಟಿಕೆಟ್ ಕೊಡಿ, ಮಂತ್ರಿ ಮಾಡಿ ಅನ್ನೋವ್ರು ಸ್ವಾಮೀಜಿಯೇ ಅಲ್ಲ: ಸಾಣೆಹಳ್ಳಿ ಶ್ರೀ

| Published : Sep 11 2025, 01:00 AM IST

ಟಿಕೆಟ್ ಕೊಡಿ, ಮಂತ್ರಿ ಮಾಡಿ ಅನ್ನೋವ್ರು ಸ್ವಾಮೀಜಿಯೇ ಅಲ್ಲ: ಸಾಣೆಹಳ್ಳಿ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ನಮ್ಮ ಸಮಾಜದ ಇಂತವರಿಗೆ ಟಿಕೆಟ್ ಕೊಡಿ, ಇಂತವರನ್ನೇ ಮಂತ್ರಿ ಮಾಡಿ ಎಂದು ಒತ್ತಡ ಹಾಕುವ ಸ್ವಾಮಿಗಳು ನಿಜವಾದ ಸ್ವಾಮಿಗಳೇ ಅಲ್ಲ. ಅವರು ಸ್ವಾಮಿ ಆಗಲು ಅರ್ಹರೇ ಅಲ್ಲ ಎಂದು ಸಾಣೆಹಳ್ಳಿ ತರಳಬಾಳು ಶಾಖಾಮಠದ ಪಂಡಿತಾರಾಧ್ಯ ಶಿವಾಚಾರ್ಯರು ಖಡಕ್ಕಾಗಿ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ನಮ್ಮ ಸಮಾಜದ ಇಂತವರಿಗೆ ಟಿಕೆಟ್ ಕೊಡಿ, ಇಂತವರನ್ನೇ ಮಂತ್ರಿ ಮಾಡಿ ಎಂದು ಒತ್ತಡ ಹಾಕುವ ಸ್ವಾಮಿಗಳು ನಿಜವಾದ ಸ್ವಾಮಿಗಳೇ ಅಲ್ಲ. ಅವರು ಸ್ವಾಮಿ ಆಗಲು ಅರ್ಹರೇ ಅಲ್ಲ ಎಂದು ಸಾಣೆಹಳ್ಳಿ ತರಳಬಾಳು ಶಾಖಾಮಠದ ಪಂಡಿತಾರಾಧ್ಯ ಶಿವಾಚಾರ್ಯರು ಖಡಕ್ಕಾಗಿ ಹೇಳಿದರು.

ನವನಗರದ ಕಲಾಭವನದಲ್ಲಿ ಬುಧವಾರ ಬಸವ ಸಂಸ್ಕೃತಿ ಅಭಿಯಾನದ ನಿಮಿತ್ತ ನಡೆದ ಸಂವಾದದಲ್ಲಿ ಸಚಿನ್ ಗಡಿಬಿಡಿ ಎನ್ನುವವರ ಕೇಳಿದ ಸ್ವಾಮೀಜಿ ಆದವರು ತಮ್ಮ ಸಮಾಜದ ಇಂತವರಿಗೆ ಟಿಕೆಟ್ ಕೊಡಬೇಕು. ಇಂತವರನ್ನೇ ಮಂತ್ರಿ ಮಾಡಬೇಕು ಎಂದು ಸರ್ಕಾರ ಮೇಲೆ ಒತ್ತಡ ಹಾಕುವುದು ಬಸವ ತತ್ವಕ್ಕೆ ವಿರೋಧವಲ್ಲವೆ ? ಎನ್ನುವ ಪ್ರಶ್ನೆಗೆ ಸ್ವಾಮೀಜಿ ಈ ಉತ್ತರ ನೀಡಿದರು.

ಅನರ್ಹರರನ್ನು ಅರ್ಹರು ಎಂದು ಹೇಳಿ ಒತ್ತಡ ಹಾಕುವವರು ಸ್ವಾಮೀಜಿ ಆಗಲ್ಲ. ಅವರು ಸಹ ಒಬ್ಬ ರಾಜಕಾರಣಿಯಂತೆ. ಮಠಕ್ಕೆ ಸ್ವಾಮಿ ಮಾಡುವಾಗ ಅವರಲ್ಲಿ ಯಾವೆಲ್ಲ ಅರ್ಹತೆಗಳು ಇರಬೇಕು ಎಂದು ಸಮಾಜ ಗುರುತಿಸಬೇಕು. ಅನರ್ಹರರನ್ನು ಪೀಠಕ್ಕೆ ಕೂಡಿಸಿದಾಗ ಅವರಿಂದ ಮಠ ಹಾಗೂ ಸಮಾಜ ಉದ್ಧಾರ ಆಗಲ್ಲ ಎಂದು ಸ್ಪಷ್ಟವಾಗಿ ಹೇಳಿದರು.

ಬಸವಣ್ಣ ಸಹ ಒಬ್ಬ ಅಪರೂಪದ ದಾರ್ಶನಿಕ ರಾಜಕಾರಣಿ. ಅಕಾರವನ್ನು ಅವರು ಕಸಕ್ಕಿಂತ ಕಡೆಯಾಗಿ ಕಿತ್ತು ಹೊಗೆದವರು, ಅವರು ನಮಗೆಲ್ಲ ಮಾದರಿ. ಮೂಢರನ್ನು ಸ್ವಾಮಿ ಮಾಡಿದರೆ ಅವರು ರಾಜಕಾರಣ ಮಾಡಲು ಮುಂದಾಗುತ್ತಾರೆ. ಎಲ್ಲ ಸ್ವಾಮಿಗಳು ಇದೇ ರೀತಿ ಇಲ್ಲ ಎನ್ನುವುದನ್ನು ನಾವು ಗಮನಿಸಬೇಕು. ಸ್ವಾಮಿ ಆದವರು ಭಕ್ತರಿಗೆ ಹೆದರಬೇಕು. ಸ್ವಾಮಿಯನ್ನು ಕಂಡು ಭಕ್ತರು ಹೆದರುವಂತಾಗಬಾರದು ಎಂದು ಹೇಳಿ ಸರ್ಜಜ್ಞನ ವಚನವೊಂದನ್ನು ಉಲ್ಲೇಖಿಸಿದರು.

ಭಾರತ ಏಕತೆ ಇರುವ ದೇಶ ಎನ್ನುತ್ತಾರೆ. ಆದರೆ, ವಿದ್ಯಾರ್ಥಿ, ಯುವಕರಲ್ಲಿ ಧರ್ಮ, ಜಾತಿಯ ವಿಷ ಬೀಜ ಬಿತ್ತುವ ರಾಜಕಾರಣಿಗಳಿಗೆ ತಮ್ಮ ಸಲಹೆ ಏನು ಎನ್ನುವ ಪ್ರಶ್ನೆಗೆ ಬಸವ ಭೃಂಗೀಶ್ವರ ಸ್ವಾಮೀಜಿ ಉತ್ತರಿಸಿ, ಸಮಾಜದ ಎಲ್ಲ ಕಲ್ಮಶಗಳು ಹಾಗೂ ಒಳಿತಿಗೂ ನಾವೇ ಕಾರಣರು. ಕ್ಷುಲ್ಲಕ ಆಸೆ ತೋರಿಸಿ ಜಾತಿ, ಧರ್ಮ ಎಂದು ಗುಂಪುಗಾರಿಕೆ ಮಾಡುವವರ ಬಗ್ಗೆ ವಿಶೇಷವಾಗಿ ಯುವ ಜನತೆ ಎಚ್ಚರಿಕೆಯಿಂದ ಇರಬೇಕು. ನಾವು ಪ್ರಜ್ಞಾವಂತಿಕೆ ಕಲಿಯಬೇಕು. ಜಾತಿ, ಧರ್ಮ, ರಾಜಕಾರಣದ ಬೆನ್ನು ಹತ್ತದೇ ದೇಶವೊಂದೇ ನಾವೆಲ್ಲವೂ ಒಂದೇ ಎನ್ನುವ ಉದಾತ್ತ ಭಾವನೆ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಜಾತಿ ನಿರ್ಮೂಲನೆಗೆ ಬಸವಾದಿ ಶರಣರು ಸಾಕಷ್ಟು ಕೆಲಸ ಮಾಡಿದರೂ ಇಂದಿಗೂ ಜಾತಿ ವ್ಯವಸ್ಥೆ ನಿರ್ಮೂಲನೆ ಯಾಕೆ ಸಾಧ್ಯ ಆಗಿಲ್ಲ ಎನ್ನುವ ಪ್ರಶ್ನೆಗೆ, ಗದುಗಿನ ತೋಂಟದಾರ್ಯ ಮಠದ ಶ್ರೀಗಳು, 12ನೇ ಶತಮಾನದಲ್ಲಿ ಜಾತಿ ವ್ಯವಸ್ಥೆ ಬಹಳಷ್ಟಿತ್ತು. ಆಗ ಅವರು ಕಾಯಕಗಳಿಗೆ ಪ್ರಾಶಸ್ತ್ಯ ನೀಡಿ, ಕಾಯಕದಲ್ಲಿ ಯಾವುದು ಮೇಲು, ಕೀಳಿಲ್ಲ ಎಂದು ತೋರಿಸಿಕೊಟ್ಟರು. ಮುಂಬರುವ ದಿನಗಳಲ್ಲಿ ಅದು ಬೇರೆ ಬೇರೆ ಧರ್ಮಗಳ ಪ್ರಭಾವದಿಂದ ಕಾಯಕಗಳು ಜಾತಿಗಳಾದವು. ಈಗ ಅದು ವಿಜೃಂಭಿಸುತ್ತಿವೆ. ಮೀಸಲಾತಿಗಾಗಿ ಜಾತಿ ವಿಜೃಂಬಣೆ ಮತ್ತಷ್ಟು ಹೆಚ್ಚಾಗಿದೆ. ಶರಣರು ಆರ್ಥಿಕ ಸಮಾನತೆಗಾಗಿ ಕಾಯಕ, ದಾಸೋಹ ಪದ್ಧತಿ ಜಾರಿಗೆ ತಂದಿದ್ದರು ಎಂದು ಹೇಳಿದರು.