ಮಣಿಪಾಲ: ಲೋಕಾಯುಕ್ತಕ್ಕೆ ಸುಳ್ಳು ದೂರು ನೀಡಿದರೆ ಅಂತಹವರ ವಿರುದ್ಧವೂ ಪ್ರಕರಣ ದಾಖಲಿಸಿ, ಮೂರು ವರ್ಷ ಜೈಲು ಶಿಕ್ಷೆ ಹಾಗೂ ದಂಡ ವಿಧಿಸುವ ಅವಕಾಶವಿದೆ ಎಂದು ರಾಜ್ಯ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಹೇಳಿದ್ದಾರೆ. ಗುರುವಾರ ರಜತಾದ್ರಿ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿ ಲೋಕಾಯುಕ್ತ ಸಂಸ್ಥೆಯಲ್ಲಿ ಬಾಕಿ ಇರುವ ಪ್ರಕರಣಗಳ ವಿಚಾರಣೆ ಹಾಗೂ ವಿಲೇವಾರಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಈಗಾಗಲೇ ರಾಜ್ಯದ ಪ್ರತಿಯೊಂದೂ ಜಿಲ್ಲೆಗೂ ಭೇಟಿ ನೀಡಿ, ಅಲ್ಲಿರುವ ಲೋಕಾಯುಕ್ತ ಸಂಸ್ಥೆಯಲ್ಲಿ ದಾಖಲಾಗಿರುವ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗುತ್ತಿದ್ದು, ಉಡುಪಿ ಜಿಲ್ಲೆಯಲ್ಲಿ 150 ಪ್ರಕರಣಗಳು ಬಾಕಿ ಇದ್ದು, ಅವುಗಳನ್ನು ವಿಚಾರಣೆ ನಡೆಸಲಾಗುತ್ತಿದೆ. ಸಾರ್ವಜನಿಕರು ಹಾಗೂ ಅಧಿಕಾರಿಗಳ ಅವುಗಳನ್ನು ಪೂರ್ಣಗೊಳಿಸಲು ಸಹಕಾರ ನೀಡಬೇಕು. ಭ್ರಷ್ಟಾಚಾರವನ್ನು ಸಂಪೂರ್ಣವಾಗಿ ನಿಯಂತ್ರಿಸಲು ಸಾರ್ವಜನಿಕರು ಕೂಡ ಬದಲಾಗುವ ಅನಿವಾರ್ಯತೆ ಇದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕಿರಣ್ ಗಂಗಣ್ಣನವರ್ ಮಾತನಾಡಿ, ಅಧಿಕಾರಿಗಳಿಗೆ ತಮ್ಮ ವಿರುದ್ಧ ಬಂದ ದೂರುಗಳು ಹಾಗೂ ಪತ್ರ ಮುಖೇನ ಬರುವ ಅಸಮಾನತೆಯ ನ್ಯೂನ್ಯತೆಗಳನ್ನು ಸರಿಪಡಿಸಿಕೊಳ್ಳಲು ಈ ಸಭೆಯು ಉತ್ತಮ ಮಾರ್ಗವಾಗಬೇಕು ಎಂದರು.
ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಸ್ವಾಗತಿಸಿದರು. ಲೋಕಾಯುಕ್ತ ಉಪನಿಬಂಧಕ ಅರವಿಂದ್ ಎನ್.ವಿ., ಜಿಪಂ ಸಿಇಓ ಪ್ರತೀಕ್ ಬಾಯಲ್, ಎಸ್ಪಿ ಹರಿರಾಮ್ ಶಂಕರ್, ಮಂಗಳೂರು ವಿಭಾಗದ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಬಿ. ಪಿ. ದಿನೇಶ್ ಕುಮಾರ್ , ಡಿಎಫ್ಓ ರುಥ್ರೇನ್ ಪಿ., ವನ್ಯಜೀವಿ ಡಿಎಫ್ಓ ಶಿವರಾಮ್ ಎಂ ಬಾಬು, ಉಪಸ್ಥಿತರಿದ್ದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರೋಶನ್ ಕುಮಾರ್ ಶೆಟ್ಟಿ ನಿರೂಪಿಸಿ, ಹಿರಿಯ ಸಿವಿಲ್ ನ್ಯಾಯಾಧೀಶ ಮನು ಪಟೇಲ್ ಬಿ.ವೈ. ವಂದಿಸಿದರು.ಆರ್‌ಟಿಓ - ಎಸ್‌ಆರ್‌ಓ ಗೈರುಹಾಜರಿ: ಪೊಲೀಸ್ ಮಿರರ್ ವಾರಪತ್ರಿಕೆಯಲ್ಲಿ ಆರ್ ಟಿಒ ಮತ್ತು ಉಪ ನೋಂದಣಾಧಿಕಾರಿಗಳ ವಿರುದ್ಧ ಭ್ರಷ್ಠಾಚಾರದ ಕುರಿತು ದೂರು, ಹಿರಿಯ ಉಪ ನೋಂದಣಾಧಿಕಾರಿ ಮತ್ತು ವಿವಾಹ ನೋಂದಣಾಧಿಕಾರಿಯವರ ಭ್ರಷ್ಠಾಚಾರ ಕುರಿತು ನೀಡಿದ ದೂರುದಾರರು ಹಾಜರಿರದ ಕಾರಣ ವಿಚಾರಣೆಯನ್ನು ಮುಂದೂಡಲಾಯಿತು.ಉಡುಪಿ ಜಿಲ್ಲೆ ಪ್ರಥಮ: ಉಡುಪಿ ಜಿಲ್ಲೆಯು ಜನರ ಅರ್ಜಿಗಳಿಗೆ ಇತ್ಯರ್ಥಪಡಿಸುವಲ್ಲಿ ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದೆ. ಶಿಕ್ಷಣದಲ್ಲಿ ಎರಡನೇ ಸ್ಥಾನ ಪಡೆದಿದೆ. ಜಿಲ್ಲೆಯ ನ್ಯಾಯಾಲಯದಲ್ಲಿನ ಪ್ರಕರಣಗಳು ಸಹ ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ತುಂಬಾ ಕಡಿಮೆ ಪ್ರಮಾಣದಲ್ಲಿ ಇದೆ ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಹೇಳಿದರು.