ಸಮಾಜದಲ್ಲಿ ಜಾತಿ ಮತ್ತು ಧರ್ಮಗಳ ಮಧ್ಯೆ ದ್ವೇಷದ ವಿಷಬೀಜ ಬಿತ್ತುವವರೇ ನಿಜವಾದ ದೇಶದ್ರೋಹಿಗಳು ಎಂದು ರಾಜ್ಯದ ಗೃಹ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ಇ-ಆಡಳಿತ ಖಾತೆ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಕನ್ನಡಪ್ರಭ ವಾರ್ತೆ ಯಾದಗಿರಿ

ಸಮಾಜದಲ್ಲಿ ಜಾತಿ ಮತ್ತು ಧರ್ಮಗಳ ಮಧ್ಯೆ ದ್ವೇಷದ ವಿಷಬೀಜ ಬಿತ್ತುವವರೇ ನಿಜವಾದ ದೇಶದ್ರೋಹಿಗಳು ಎಂದು ರಾಜ್ಯದ ಗೃಹ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ಇ-ಆಡಳಿತ ಖಾತೆ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

2023-24ನೇ ಸಾಲಿನ ಸ್ಥಳೀಯ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿ, ಅಂದಾಜು ₹31 ಲಕ್ಷ ವೆಚ್ಚದಲ್ಲಿ, ವಡಗೇರಾ ತಾಲೂಕಿನ ನಾಯ್ಕಲ್ ಗ್ರಾಮದಲ್ಲಿ ಯಾದಗಿರಿ ಜಿಲ್ಲಾಡಳಿತ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ಪುತ್ಥಳಿ ಅನಾವರಣಗೊಳಿಸಿ ಮಾತನಾಡಿದರು.

ಸ್ವತಂತ್ರ ಭಾರತದಲ್ಲಿ ಸಂವಿಧಾನವೇ ಅತ್ಯುನ್ನತವಾಗಿದೆ. ಸಮಾಜದಲ್ಲಿ ವಿಷಬೀಜ ಬಿತ್ತಿ, ಧರ್ಮ ಮತ್ತು ಜಾತಿಗಳ ನಡುವೆ ಸಂಘರ್ಷ ಸೃಷ್ಟಿಸುವವರೇ ನಿಜವಾದ ದೇಶದ್ರೋಹಿಗಳು ಎಂಬ ಡಾ.ಬಿ.ಆರ್. ಅಂಬೇಡ್ಕರ್ ಅವರ ಆಶಯ ಪ್ರತಿಯೊಬ್ಬರೂ ಅರ್ಥಮಾಡಿಕೊಳ್ಳಬೇಕು. ಇಂದು ದೇಶದಲ್ಲಿ ಯಾರು ಸಮಾಜದಲ್ಲಿ ದ್ವೇಷ ಬಿತ್ತುತ್ತಿದ್ದಾರೆ ಎಂಬುದನ್ನು ಜನರು ಮನಗಾಣಬೇಕು ಎಂದರು.

ಸಮಾನತೆ ಮತ್ತು ಸ್ವಾಭಿಮಾನದ ಸಮಾಜ ನಿರ್ಮಾಣವಾಗಬೇಕಾದರೆ, ಮಹನೀಯರ ಪ್ರತಿಮೆಗಳನ್ನು ಸ್ಥಾಪಿಸುವುದಷ್ಟೇ ಸಾಲದು, ಅವರ ತತ್ವ, ಆದರ್ಶ ಮತ್ತು ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಪುಸ್ತಕಗಳನ್ನು ಓದಿ, ಇತಿಹಾಸ ಮತ್ತು ಅಂಕಿ-ಅಂಶಗಳನ್ನು ಅಧ್ಯಯನ ಮಾಡಿ ಮಾತನಾಡಬೇಕು. ಈ ನಿಟ್ಟಿನಲ್ಲಿ, ಪ್ರಬುದ್ಧ ಸಮಾಜ ನಿರ್ಮಾಣಕ್ಕೆ ಯುವಕರು ಮುಂದಾಗಬೇಕು ಎಂದವರು ಕರೆ ನೀಡಿದರು.

ಭಗವಾನ್ ಗೌತಮ ಬುದ್ಧರ ಕಾಲದಿಂದ 2,500 ವರ್ಷಗಳು, ಬಸವಣ್ಣನವರ ಕಾಲದಿಂದ ಸುಮಾರು 900 ವರ್ಷಗಳು ಹಾಗೂ ಸಂವಿಧಾನ ಜಾರಿಗೆ ಬಂದು 75 ವರ್ಷಗಳು ಕಳೆದಿವೆ. ಆದರೂ ಸಮಾಜದಲ್ಲಿ ಸಮಾನತೆ ಮತ್ತು ಸಾಮಾಜಿಕ ಬದಲಾವಣೆಯ ಕುರಿತು ಮಾತನಾಡುವ ಪರಿಸ್ಥಿತಿ ಮುಂದುವರಿದಿದೆ ಎಂದ ಅವರು, ಸಂವಿಧಾನವೇ ಸ್ವತಂತ್ರ ಭಾರತದ ಶ್ರೇಷ್ಠ ಶಕ್ತಿ. ಇದರಲ್ಲಿ ಯಾರಿಗೂ ಜಗ್ಗುವುದಿಲ್ಲ, ಬಗ್ಗುವುದೂ ಇಲ್ಲ. ಸಂವಿಧಾನ ಮತ್ತು ಸಾಮಾಜಿಕ ನ್ಯಾಯದ ಪರವಾಗಿ ನನ್ನ ಹೋರಾಟ ನಿರಂತರವಾಗಿರಲಿದೆ ಎಂದರು.

ನಾನು ಹಾರ, ಶಾಲು, ತುರಾಯಿ ಸ್ವೀಕರಿಸುವುದಿಲ್ಲ. ಅದರ ಬದಲಿಗೆ ಪುಸ್ತಕಗಳನ್ನು ಉಡುಗೊರೆಯಾಗಿ ನೀಡುವಂತೆ ಮನವಿ ಮಾಡುತ್ತೇನೆ. ಅವುಗಳನ್ನು ಸಂಗ್ರಹಿಸಿ ಅರಿವು ಕೇಂದ್ರಗಳಿಗೆ ನೀಡಲಾಗುತ್ತದೆ. ವ್ಯಕ್ತಿಪೂಜೆ ಬಿಟ್ಟು ಪುಸ್ತಕ ಓದುವ, ವೈಜ್ಞಾನಿಕ ಮತ್ತು ಸಾಮಾಜಿಕ ಚಿಂತನೆ ಬೆಳೆಸುವ ಸಂಸ್ಕೃತಿ ಬೆಳೆಸಬೇಕು. ಜೆಸಿಬಿ ಮೂಲಕ ಹಾರ ಹಾಕುವುದು, ಎಲ್ಲೆಡೆ ದೊಡ್ಡ ದೊಡ್ಡ ಪೋಸ್ಟರ್‌ಗಳನ್ನು ಹಾಕುವುದು ಮುಖ್ಯವಲ್ಲ. ಮಹನೀಯರ ವಿಚಾರಗಳನ್ನು ಅರಿತುಕೊಂಡು ಅವರ ಆದರ್ಶಗಳನ್ನು ಪಾಲಿಸುವುದು ಮುಖ್ಯ. ಶಿಕ್ಷಣ ಪಡೆದವರು ಪ್ರಶ್ನಿಸಬೇಕು, ಅನ್ಯಾಯದ ವಿರುದ್ಧ ಧ್ವನಿ ಎತ್ತಬೇಕು ಎಂದರು.

ಯಾದಗಿರಿ ಕ್ಷೇತ್ರದ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುರಪುರ ಶಾಸಕ ರಾಜಾ ವೇಣುಗೋಪಾಲ ನಾಯಕ, ಉರಿಲಿಂಗ ಪೆದ್ದಿ ಕೊಡ್ಲಾ ಮಠದ ಪೀಠಾಧಿಪತಿ ಡಾ. ಜ್ಞಾನಪ್ರಕಾಶ ಸ್ವಾಮೀಜಿ, ಹೋರಾಟಗಾರ ಮಾವಳ್ಳಿ ಶಂಕರ ಮಾತನಾಡಿದರು. ಡಾ. ಅಂಬೇಡ್ಕರ್ ಪುತ್ಥಳಿ ಸ್ಥಾಪನೆಗೆ ಸ್ಥಳ ದಾನ ಮಾಡಿದವರ ಸಹಿತ ಸಹಕರಿಸಿದ 25 ಮಂದಿಯನ್ನು ಗೌರವಿಸಲಾಯಿತು.

ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಶರಣಪ್ಪ ಸಲಾದಪುರ, ಕಾಡಾ (ಭೀಮರಾಯನಗುಡಿ) ಅಧ್ಯಕ್ಷ ಬಾಬು ಹೊನ್ನಾ ನಾಯಕ, ದಲಿತ ಮುಖಂಡರಾದ ಡಿ.ಜಿ. ಸಾಗರ, ಜಿಲ್ಲಾಧಿಕಾರಿ ಪಾಂಡ್ವೆ ರಾಹುಲ್ ತುಕಾರಾಮ್, ಸಹಾಯಕ ಆಯುಕ್ತ ಶ್ರೀಧರ ಗೋಟೂರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್, ಯಾದಗಿರಿ ನಗರಸಭೆ ಅಧ್ಯಕ್ಷ ಬಾಬುರಾವ್ ಕಾಡ್ಲೂರ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಬಸರೆಡ್ಡಿ ಅನಪುರ, ಮಹಾರಾಜ್‌ ದಿಗ್ಗಿ, ಸ್ಯಾಂಸನ್‌ ಮಾಳಿಕೇರಿ, ಭೀಮಣ್ಣ ಮೇಟಿ, ಮರೆಪ್ಪ ಕಣಜಿ, ಶರಣಪ್ಪ, ಶಿವರಾಯ ನಾಟೇಕಾರ್, ಮರೆಪ್ಪ ಚಟ್ಟೇರಕರ್ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು. ಅಪರ ಜಿಲ್ಲಾಧಿಕಾರಿ ರಮೇಶ್ ಕೋಲಾರ ಸ್ವಾಗತಿಸಿದರು.

ದೇಶದಲ್ಲಿ ವಿವಿಧ ಜಾತಿ, ಧರ್ಮ, ಭಾಷೆ ಮತ್ತು ಸಂಸ್ಕೃತಿಗಳ ಜನರಿದ್ದಾರೆ. ಇಂತಹ ವೈವಿಧ್ಯತೆಯ ನಡುವೆ ಪರಸ್ಪರ ಗೌರವ ಮತ್ತು ಸಮಾನತೆ ಮುಖ್ಯ. ವ್ಯಕ್ತಿಪೂಜೆ ಬಿಟ್ಟು ಬುದ್ಧ, ಬಸವ ಮತ್ತು ಅಂಬೇಡ್ಕರ್ ಅವರ ತತ್ವಗಳನ್ನು ತಿಳಿದುಕೊಂಡು ಪಾಲಿಸಬೇಕು. ಅವರ ಪ್ರತಿಮೆಗಳು ಕೇವಲ ಅಲಂಕಾರವಾಗದೆ, ಅವರ ವಿಚಾರಧಾರೆಗಳನ್ನು ಅನುಸರಿಸಲು ಪ್ರೇರಣೆಯಾಗಬೇಕು. ಯುವಕರು ಮುಂದಾಗಬೇಕು ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದರು.