ಕಸ ಚೆಲ್ಲಿದವರಿಗೆ ಗ್ರಾಪಂನಿಂದ ದಂಡ

| Published : Jun 01 2024, 12:46 AM IST

ಸಾರಾಂಶ

ದೀವಗಿ ಪಂಚಾಯಿತಿ ಕಾರ್ಯಾಲಯಕ್ಕೆ ಕರೆದೊಯ್ದು ₹೫೦೦ ದಂಡ ವಿಧಿಸಿ ವಾಹನ ಬಿಡಲಾಯಿತು.

ಕುಮಟಾ: ಹೊನ್ನಾವರದಿಂದ ತ್ಯಾಜ್ಯವನ್ನು ಸರಕು ವಾಹನದಲ್ಲಿ ತಂದು ತಾಲೂಕಿನ ದೀವಗಿ ಪಂಚಾಯಿತಿ ವ್ಯಾಪ್ತಿಯ ಮಣಕಿ- ಮಾನೀರ ಬಳಿ ರಾಷ್ಟ್ರೀಯ ಹೆದ್ದಾರಿ ೬೬ರ ಚತುಷ್ಪಥದ ಅಂಚಿಗೆ ಸುರಿಯುತ್ತಿದ್ದವರನ್ನು ಹಿಡಿದ ಯುವ ಬ್ರಿಗೇಡ್ ತಂಡದವರು ಸ್ಥಳೀಯ ಪಂಚಾಯಿತಿಗೆ ಒಪ್ಪಿಸಿದ ಘಟನೆ ಶುಕ್ರವಾರ ನಡೆದಿದೆ.

ಹೊನ್ನಾವರದಿಂದ ಹುಬ್ಬಳ್ಳಿಗೆ ಹೋಗುತ್ತಿದ್ದ ವಾಹನದಲ್ಲಿ ಯಾರೋ ತುಂಬಿ ಕಳುಹಿಸಿದ ದೊಡ್ಡ ಪ್ರಮಾಣದ ಕಸವನ್ನು ಮಾನೀರ ಬಳಿ ಚೆಲ್ಲುತ್ತಿದ್ದನ್ನು ಕಂಡ ಯುವ ಬ್ರಿಗೇಡ್ ಮಹಾರಕ್ಷಕ ಪ್ರಕಲ್ಪದ ರಾಜ್ಯ ಸಹಸಂಚಾಲಕ ರಾಮದಾಸ ನಾಯ್ಕ ಹಳದಿಪುರ ಅವರು ಕಸ ಎಸೆಯುವುದನ್ನು ತಡೆದು ಕುಮಟಾ ಪುರಸಭೆ ಅಧಿಕಾರಿಗಳಿಗೆ ತಿಳಿಸಿದರು. ಆದರೆ ಕಸ ಚೆಲ್ಲುತ್ತಿದ್ದ ಸ್ಥಳ ಪುರಸಭಾ ವ್ಯಾಪ್ತಿಗೆ ಒಳಪಡದೇ ದಿವಗಿ ಪಂಚಾಯಿತಿ ವ್ಯಾಪ್ತಿಗೆ ಸೇರಿದ್ದರಿಂದ ಬಳಿಕ ದೀವಗಿ ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ಹಾಗೂ ಸದಸ್ಯರಿಗೆ ಮಾಹಿತಿ ನೀಡಿದರು. ಜತೆಗೆ ೧೧೨ಕ್ಕೆ ಕರೆ ಮಾಡಿದ್ದರಿಂದ ಪೊಲೀಸರು ಕೂಡಾ ಸ್ಥಳಕ್ಕೆ ಬಂದರು.

ಸ್ಥಳಕ್ಕೆ ಬಂದ ದೀವಗಿ ಪಂಚಾಯಿತಿ ಅಧ್ಯಕ್ಷ ಜಗದೀಶ ಭಟ್ಟ, ಸದಸ್ಯರಾದ ಶ್ರೀಧರ ಗೌಡ, ಶಿವಾನಂದ ಅಂಬಿಗ, ಪಿಡಿಒ ವಿನಾಯಕ ಮೋರೆ ಇತರರು ಪೊಲೀಸರ ಸಹಾಯದಿಂದ ಕಸ ಚೆಲ್ಲಿದ ವಾಹನದವರಿಂದಲೇ ಎಲ್ಲ ಕಸವನ್ನೂ ಮರಳಿ ವಾಹನಕ್ಕೆ ತುಂಬಿಸಿದರು. ಸುತ್ತಮುತ್ತ ಬಿದ್ದಿದ್ದ ಕಸವನ್ನೂ ಸ್ವಚ್ಛಗೊಳಿಸಿದರು. ಬಳಿಕ ದೀವಗಿ ಪಂಚಾಯಿತಿ ಕಾರ್ಯಾಲಯಕ್ಕೆ ಕರೆದೊಯ್ದು ₹೫೦೦ ದಂಡ ವಿಧಿಸಿ ಬಿಡಲಾಯಿತು. ಯುವ ಬ್ರಿಗೇಡ್ ಸದಸ್ಯ ಅಣ್ಣಪ್ಪ ನಾಯ್ಕ ಇತರರು ಇದ್ದರು.500 ದಂಡ: ಯುವ ಬ್ರಿಗೇಡ್‌ನವರು ನಮ್ಮ ದಿವಗಿ ಪಂಚಾಯಿತಿ ವ್ಯಾಪ್ತಿಯ ಮಾನೀರ ಬಳಿ ಕಸ ಚೆಲ್ಲುತ್ತಿದ್ದವರನ್ನು ಹಿಡಿದು ನಮಗೆ ಮಾಹಿತಿ ನೀಡಿದ್ದರಿಂದ ತಕ್ಷಣ ಸ್ಥಳಕ್ಕೆ ಹೋಗಿ ಕ್ರಮ ಕೈಗೊಳ್ಳಲು ಅನುಕೂಲವಾಯಿತು. ಚೆಲ್ಲಿದ ಕಸವನ್ನು ಕಸ ಚೆಲ್ಲಿದವರಿಂದಲೇ ಸ್ವಚ್ಛಗೊಳಿಸಿದ್ದೇವೆ. ₹೫೦೦ ದಂಡವನ್ನೂ ಆಕರಿಸಿದ್ದೇವೆ ಎಂದು ದೀವಗಿ ಗ್ರಾಪಂ ಅಧ್ಯಕ್ಷ ಜಗದೀಶ ಭಟ್ಟ ತಿಳಿಸಿದರು.