ಮೇಕೆದಾಟು ಯೋಜನೆ ಅನುಷ್ಠಾನ ಆಗಬೇಕು ಎಂದು ಒತ್ತಾಯಿಸಿ ಪಾದಯಾತ್ರೆ ಮಾಡಿದ್ದ ಈಗಿನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈಗ ನಿಮ್ಮದೇ ಸರ್ಕಾರವಿದೆ, ಯೋಜನೆ ಅನುಷ್ಠಾನಗೊಳಿಸಿ ಎಂದು ಕನ್ನಡ ಚಳವಳಿ ನಾಯಕ ವಾಟಾಳ್ ನಾಗರಾಜು ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ, ತುಮಕೂರುಮೇಕೆದಾಟು ಯೋಜನೆ ಅನುಷ್ಠಾನ ಆಗಬೇಕು ಎಂದು ಒತ್ತಾಯಿಸಿ ಪಾದಯಾತ್ರೆ ಮಾಡಿದ್ದ ಈಗಿನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈಗ ನಿಮ್ಮದೇ ಸರ್ಕಾರವಿದೆ, ಯೋಜನೆ ಅನುಷ್ಠಾನಗೊಳಿಸಿ ಎಂದು ಕನ್ನಡ ಚಳವಳಿ ನಾಯಕ ವಾಟಾಳ್ ನಾಗರಾಜು ಒತ್ತಾಯಿಸಿದರು. ಮಂಗಳವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾವೇರಿ ನೀರು ಹಂಚಿಕೆ ವಿವಾದ, ಮೇಕೆದಾಟು ಯೋಜನೆ ಅನುಷ್ಠಾನ, ಮಹದಾಯಿ, ಕಳಸಾ-ಬಂಡೂರಿ ಯೋಜನೆ, ಬೆಳಗಾವಿ ಗಡಿ ವಿವಾದ, ಎಂಇಎಸ್ ನಿಷೇಧ, ಖಾಸಗಿ ಹಾಗೂ ಸರ್ಕಾರಿ ರಂಗದಲ್ಲಿ ಕನ್ನಡಿಗರಿಗೆ ಉದ್ಯೋಗ, ಕನ್ನಡ ಶಾಲೆಗಳ ಉಳಿವು ಸೇರಿದಂತೆ ಸಮಸ್ಯೆಗಳನ್ನು ನೆಲ, ಜಲ, ನುಡಿ ಸಮಸ್ಯೆಗಳನ್ನು ಬಗೆಹರಿಸಲು ಕನ್ನಡಿಗರ ಹಕ್ಕುಗಳ ರಕ್ಷಣೆಗಾಗಿ ಈ ತಿಂಗಳ 13 ರಂದು ಅಖಂಡ ಕರ್ನಾಟಕ ಬಂದ್‌ ಕರೆ ನೀಡಲಾಗಿದೆ. ರಾಜ್ಯಾದ್ಯಂತ ಸುಮಾರು ಎರಡು ಸಾವಿರ ಸಂಘಟನೆಗಳು ಬಂದ್ ಬೆಂಬಲಿಸಿ ಹೋರಾಟದಲ್ಲಿ ಭಾಗವಹಿಸಲಿವೆ. ಅಂದು ಬೆಳಿಗ್ಗೆ 6 ರಿಂದ ಸಂಜೆ 6ರವರೆಗೆ ಸಂಪೂರ್ಣ ಬಂದ್‌ ಆಚರಿಸಲಾಗುವುದು ಎಂದು ಹೇಳಿದರು. ಕಾವೇರಿ ನೀರಿನ ವಿವಾದವನ್ನು ಸರ್ಕಾರ ಸಮರ್ಪಕವಾಗಿ ನಿವಾರಣೆ ಮಾಡುವ ಕಾಳಜಿ ತೋರಿಸುತ್ತಿಲ್ಲ. ಮೊನ್ನೆ ಸರ್ಕಾರ ಕರೆದ ಸರ್ವಪಕ್ಷಗಳ ಸಭೆಯಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳ ಒಬ್ಬೊಬ್ಬರು ಭಾಗವಹಿಸಿದ್ದು ದುರಾದೃಷ್ಟಕರ, ನಮ್ಮ ರಾಜಕಾರಣಿಗಳಿಗೆ ನಾಡಿನ ಬಗ್ಗೆ ಅದೆಷ್ಟು ಕಳಕಳಿ ಇದೆ ಎಂದು ಅರ್ಥವಾಗುತ್ತದೆ. ರಾಜಕೀಯ ಪಕ್ಷಗಳೇ ಏಕೆ ನಾಡಿನಲ್ಲಿ ಹಲವಾರು ಸಂಘ ಸಂಸ್ಥೆಗಳಿವೆ, ಅವುಗಳ ಪ್ರತಿನಿಧಿಗಳನ್ನು ಸಭೆಗೆ ಕರೆದು ಚರ್ಚಿಸಬಹುದಿತ್ತಲ್ಲವೆ ಎಂದು ಮುಖ್ಯಮಂತ್ರಿಗಳನ್ನು ಕೇಳಿದರು. ಕಾವೇರಿ ನೀರಿನ ವಿಚಾರದಲ್ಲಿ ತಮಿಳುನಾಡು ಮೊದಲಿನಿಂದಲೂ ತಕರಾರು ಮಾಡುತ್ತಲೇ ಬಂದಿದೆ.ದೆಹಲಿಯಲ್ಲಿ ಕುಳಿತು ನಿರ್ಧಾರ ತೆಗೆದುಕೊಳ್ಳುವ ಕಾವೇರಿ ನೀರು ನಿರ್ವಹಣಾ ಸಮಿತಿಗೆ ಕೆಆರ್‌ಎಸ್‌ನಲ್ಲಿರುವ ನೈಜ ಪರಿಸ್ಥಿತಿ ಅರ್ಥವಾಗುತ್ತಿಲ್ಲ. ಕೃಷ್ಣರಾಜಸಾಗರ ಜಲಾಶಯದಲ್ಲಿ ಸಂಪೂರ್ಣ ನೀರು ಖಾಲಿಯಾಗಿದ್ದು, ಮೈದಾನದಂತಾಗಿದೆ. ಇಂತಹ ಪರಿಸ್ಥಿತಿಯಲ್ಲೂ ತಮಿಳುನಾಡಿಗೆ ನೀರು ಹರಿಸಲು ಆದೇಶ ನೀಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಬಂದ್ ಬೆಂಬಲಿಸಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಭಾಗವಹಿಸಲು ಎಂದು ಆಹ್ವಾನ ನೀಡಿದ ವಾಟಾಳ್ ನಾಗರಾಜ್, ಬಂದ್ ಹಿನ್ನೆಲೆಯಲ್ಲಿ ಪೊಲೀಸರನ್ನು ಬಳಿಸಿಕೊಂಡು ಹೋರಾಟ ಹತ್ತಿಕ್ಕುವ, ಹೋರಾಟಗಾರ ಮೇಲೆ ಕೇಸು ಹಾಕಿದರೆ ಹೋರಾಟ ತೀವ್ರಗೊಳಿಸುತ್ತೇವೆ, ಜೈಲಿಗೂ ಹೋಗಲೂ ಸಿದ್ಧ ಎಂದುಎಚ್ಚರಿಕೆ ನೀಡಿದರು.ಕನ್ನಡ ಸೇನೆ ರಾಜ್ಯಾಧ್ಯಕ್ಷ ಕೆ.ಆರ್.ಕುಮಾರ್ ಮಾತನಾಡಿ, ಮೊದಲು ಕುಡಿಯುವ ನೀರಿಗೆಆದ್ಯತೆ ನೀಡಬೇಕು, ರಾಜ್ಯದ ಜನರ ಹಿತ ಕಾಪಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು. ಕನ್ನಡ ಸೇನೆ ಜಿಲ್ಲಾಧ್ಯಕ್ಷಡಾ.ಧನಿಯಾಕುಮಾರ್ ಮಾತನಾಡಿ, ನಾಮಫಲಕಗಳಲ್ಲಿ ಶೇಕಡ 60 ರಷ್ಟು ಕನ್ನಡ ಅಕ್ಷರಗಳಿರಬೇಕು ಎಂಬ ಸರ್ಕಾರದ ಆದೇಶವಿದ್ದರೂ ತುಮಕೂರಿನಲ್ಲಿ ಪಾಲನೆ ಆಗುತ್ತಿಲ್ಲ, ಇಲ್ಲಿನ ಅಧಿಕಾರಿಗಳೂ ಅದರ ವಿರುದ್ಧ ಕ್ರಮ ತೆಗೆದುಕೊಂಡಿಲ್ಲ. ಕೈಗಾರಿಕಾ ಪ್ರದೇಶಗಳಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡದೆ ನಿರ್ಲಕ್ಷ ಮಾಡಲಾಗುತ್ತಿದೆ. ಕನ್ನಡ ಮಾಧ್ಯಮ ಶಾಲೆಗಳಿಗೆ ಹೆಚ್ಚಿನ ಅನುದಾನ ನೀಡಿ ಶಾಲೆಗಳನ್ನು ಉಳಿಸುವ ಕೆಲಸ ಮಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ವಿವಿಧ ಸಂಘಟನೆಗಳ ಮುಖಂಡರಾದ ಗಿರೀಶ್, ಆರ್.ಎನ್. ವೆಂಕಟಾಚಲ, ಅರುಣ್‌ಕುಮಾರ್, ಹೊಸಕೋಟೆ ನಟರಾಜು, ಮೀಸೆ ಸತೀಶ್, ರಕ್ಷಿತ್‌ ಕರಿಮಣ್ಣೆ, ಬಸವರಾಜು, ಶೈಲೇಂದ್ರ, ವಿಠಲ್, ನಟರಾಜ್, ಶಬ್ಬೀರ್‌ಅಹ್ಮದ್, ಇಮ್ರಾನ್, ರಫಿಕ್‌ಅಹಮದ್ ಮೊದಲಾದವರು ಭಾಗವಹಿಸಿದ್ದರು.