ಓಟ್ ಮಾಡಿದವರೇ ಹೀರೋ, ಇಲ್ಲದಿದ್ದರೆ ಜೀರೋ: ಜಿಲ್ಲಾಧಿಕಾರಿ ಸಿ.ಸತ್ಯಭಾಮ

| Published : Apr 03 2024, 01:31 AM IST

ಓಟ್ ಮಾಡಿದವರೇ ಹೀರೋ, ಇಲ್ಲದಿದ್ದರೆ ಜೀರೋ: ಜಿಲ್ಲಾಧಿಕಾರಿ ಸಿ.ಸತ್ಯಭಾಮ
Share this Article
  • FB
  • TW
  • Linkdin
  • Email

ಸಾರಾಂಶ

‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಓಟ್ ಮಾಡಿದವನೇ ಹೀರೋ ಮತ್ತು ಮತ ಹಾಕಿದ ಮಹಿಳೆಯೇ ಹೀರೋಯಿನ್. ಓಟ್ ಮಾಡದವರು ಜೀರೋ’ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಸಿ. ಸತ್ಯಭಾಮ ತಿಳಿಸಿದರು. ಹಾಸನದಲ್ಲಿ ಆಯೋಜಿಸಿದ್ದ ಬೈಕ್ ರ್‍ಯಾಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಹಸಿರು ನಿಶಾನೆ । ಸ್ವೀಪ್‌ ಸಮಿತಿಯಿಂದ ಬೈಕ್ ರ್‍ಯಾಲಿ

ಕನ್ನಡಪ್ರಭ ವಾರ್ತೆ ಹಾಸನ

‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಓಟ್ ಮಾಡಿದವನೇ ಹೀರೋ ಮತ್ತು ಮತ ಹಾಕಿದ ಮಹಿಳೆಯೇ ಹೀರೋಯಿನ್. ಓಟ್ ಮಾಡದವರು ಜೀರೋ’ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಸಿ. ಸತ್ಯಭಾಮ ತಿಳಿಸಿದರು.

ನಗರದ ಜಿಲ್ಲಾ ಪಂಚಾಯತ್ ಆವರಣದಲ್ಲಿ ಲೋಕಸಭಾ ಚುನಾವಣೆ ೨೦೨೪, ಭಾರತ ಚುನಾವಣಾ ಆಯೋಗ, ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ ಜಂಟಿಯಾಗಿ ಮಂಗಳವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಬೈಕ್ ರ್‍ಯಾಲಿ ಕಾರ್ಯಕ್ರಮವನ್ನು ಹಸಿರು ಬಾವುಟ ಪ್ರದರ್ಶಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿ, ‘ನಗರ ಪ್ರದೇಶದ ಕೆಲವರು ನಮ್ಮದೊಂದು ಮತ ಹಾಕದಿದ್ದರೆ ಏನು ಆಗುವುದಿಲ್ಲ ಎಂದು ಸುಮ್ಮನಾಗುವುದುಂಟು. ಮತಾದರರ ಪಟ್ಟಿಯಲ್ಲಿರುವ ಎಲ್ಲಾ ಮತದಾರರು ಕೂಡ ಓಟು ಮಾಡಬೇಕೆಂದು ಸರ್ಕಾರಿ ನೌಕರರು ಜಾಗೃತಿ ಮೂಡಿಸುತ್ತಿದ್ದು, ಈ ಮೂಲಕವಾದರೂ ನೂರರಷ್ಟು ಮತ ಚಲಾಯಿಸಲಿ’ ಎಂದು ಹೇಳಿದರು.

‘ಓಟು ಮಾಡಿದವನೇ ಹೀರೋ, ಓಟು ಮಾಡದವನು ಜೀರೋ, ಹಾಗೆಯೇ ಮತ ಹಾಕಿದ ಮಹಿಳೆ ಹೀರೋಯಿನ್, ಮಾಡದವರು ಏನೆಂದು ನೀವೆ ತಿಳಿಯಬೇಕು. ವರ್ಗಾವಣೆಯಾಗಿ ಬಂದಂತಹ ಅಧಿಕಾರಿಗಳು ಸಹ ಯಾವುದೇ ಕಾರಣಕ್ಕೂ ತಪ್ಪದೆ ಮತವನ್ನು ಇಲ್ಲಿಯೇ ಮಾಡಬೇಕು. ಮತದಾನ ಎಂದರೆ ಕೈಲಿ ಇರುವ ಶಕ್ತಿ. ಅದನ್ನು ಕಳೆದುಕೊಂಡರೆ ಪ್ರಜಾಪ್ರಭುತ್ವದ ಅಂತರಾತ್ಮವೇ ಕಳೆದುಕೊಂಡಂತೆ’ ಎಂದು ಹೇಳಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪೂರ್ಣಿಮಾ ಮಾತನಾಡಿ, ಮತದಾನ ಜಾಗೃತಿಗಾಗಿ ಜಿಲ್ಲಾ ಪಂಚಾಯತ್ ಮತ್ತು ನಗರಸಭೆಯಿಂದ ಬೈಕ್ ರಾಲಿಯನ್ನು ಹಮ್ಮಿಕೊಳ್ಳಲಾಗಿದೆ. ಪ್ರಜಾಪ್ರಭುತ್ವವನ್ನು ಗಟ್ಟಿಗೊಳ್ಳಿಸುವ ಕೆಲಸವನ್ನು ಎಲ್ಲರೂ ಮತದಾನ ಮಾಡುವ ಮೂಲಕ ನಿರ್ವಹಿಸಬೇಕು. ನಗರ ಪ್ರದೇಶದ ೮೪ ಮತಗಟ್ಟೆಗಳಲ್ಲಿ ರಾಷ್ಟ್ರೀಯ ಸರಾಸರಿಗಿಂತ ಕಡಿಮೆ ಇದೆ ಎಂದು ಬೇಸರ ವ್ಯಕ್ತಪಡಿಸಿದರು.

ಮನೆ ಮನೆಗಳಿಗೆ ಭೇಟಿ ಕೊಡುವುದರ ಮೂಲಕ ಮತಗಟ್ಟೆಗಳಲ್ಲಿ ಶೇಕಡವಾರು ಮತ ಚಲಾಯಿಸಲು ಪ್ರೋತ್ಸಾಹಿಸುವ ಕೆಲಸ ಮಾಡಲಾಗುತ್ತಿದೆ. ಹಾಸನ ಜಿಲ್ಲೆಯಲ್ಲಿ ಎಲ್ಲರೂ ಮತ ಹಾಕುವುದರ ಮೂಲಕ ನೂರರಷ್ಟು ಮತದಾನ ಆಗಲು ಸಹಕರಿಸಿ ಎಂದು ಮನವಿ ಮಾಡಿದರು.

ಜಿಲ್ಲಾ ಪಂಚಾಯಿತಿಯ ಪರಪ್ಪಸ್ವಾಮಿ, ಯುವಜನ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಸಿ.ಕೆ. ಹರೀಶ್, ನಗರಸಭೆ ಆಯುಕ್ತ ಯೋಗೇಂದ್ರ, ಹಿರಿಯ ಕಲಾವಿದ ಬಿ.ಟಿ. ಮಾನವ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಮತದಾನ ಕುರಿತು ಜನಜಾಗೃತಿ ಮೂಡಿಸುವ ಬೈಕ್‌ ರ್‍ಯಾಲಿಗೆ ಜಿಲ್ಲಾಧಿಕಾರಿ ಸತ್ಯಭಾಮ ಹಸಿರು ನಿಶಾನೆ ತೋರಿಸಿದರು.