ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರಕರ್ನಾಟಕ ರಾಜ್ಯ ಉದಯವಾಗಿ ೫೦ ವರ್ಷ ಪೂರೈಸಿದ ಸಂಭ್ರಮದ ಹಿನ್ನೆಲೆಯಲ್ಲಿ ಕನ್ನಡ ಜ್ಯೋತಿ ರಥಯಾತ್ರೆ ಹಮ್ಮಿಕೊಳ್ಳಲಾಗಿದ್ದು, ನಾಗರಿಕರು, ಕನ್ನಡ ಪರ ಹೋರಾಟಗಾರರು ಹಾಗೂ ಸಂಘಟನೆಗಳ ಮುಖಂಡರು ಈ ಸಂಭ್ರಮದಲ್ಲಿ ಪಾಲ್ಗೊಂಡಿರುವುದು ಹರ್ಷ ತಂದಿದೆ ಎಂದು ಜಿಲ್ಲಾಧಿಕಾರಿ ಅಕ್ರಂಪಾಷ ತಿಳಿಸಿದರು.ನಗರಕ್ಕೆ ಆಗಮಿಸಿದ ಕನ್ನಡ ಜ್ಯೋತಿ ರಥಯಾತ್ರೆಯನ್ನು ಸ್ವಾಗತಿಸಿದ ನಂತರ ಮುಖ್ಯ ರಸ್ತೆಗಳಲ್ಲಿ ಸಂಚರಿಸಲು ರಥಕ್ಕೆ ಚಾಲನೆ ನೀಡಿ ಮಾತನಾಡಿದರು.ಕನ್ನಡವನ್ನು ಬೆಳೆಸಬೇಕು
ಪ್ರತಿ ತಾಲೂಕಿನಲ್ಲೂ ಒಂದೊಂದು ದಿನ ಸಂಚಾರ ನಡೆಸಿ, ಮುಂದಿನ ತಾಲೂಕಿಗೆ ಸಾಗಲಿದೆ ಈ ವರ್ಷದ ಕನ್ನಡ ರಾಜ್ಯೋತ್ಸವ ದಿನಕ್ಕೆ ಕರ್ನಾಟಕ ರಾಜ್ಯ ಉದಯವಾಗಿ ೫೦ ವರ್ಷ ಪೂರ್ಣ ಆಗುವುದರಿಂದ ಕನ್ನಡ ನಾಡು ನುಡಿಯ ಬಗ್ಗೆ ಇಂದಿನ ಹಾಗೂ ಮುಂದಿನ ಪೀಳಿಗೆಗೆ ನಮ್ಮ ನಾಡುನುಡಿಯನ್ನು ಪರಿಚಯಿಸುವ ಜೊತೆಗೆ ಸಂಭ್ರಮ ಆಚರಿಸಲು ಈ ರಥಯಾತ್ರೆಯನ್ನು ಸರ್ಕಾರ ಆಯೋಜಿಸಿದೆ. ಕನ್ನಡ ಜ್ಯೋತಿ ರಥಯಾತ್ರೆ ರಾಜ್ಯಾದ್ಯಂತ ಸಂಚರಿಸುತ್ತಿದ್ದು, ನಾಡು ನುಡಿ ಏಳಗೆಯ ಪಥದಲ್ಲಿ ಸಾಗಲು, ಕನ್ನಡ ಭಾಷೆಯನ್ನು ಮಹೋನ್ನತ ಮಟ್ಟಕ್ಕೆ ಬೆಳೆಸಬೇಕು ಎಂದು ಕರೆ ನೀಡಿದರು.ಕನ್ನಡ ಭಾಷೆ ಉಳಿವಿಗಾಗಿ ಶ್ರಮಪಟ್ಟ ಸಾಹಿತಿಗಳು ಮತ್ತು ಹೋರಾಟಗಾರರನ್ನು ಸ್ಮರಿಸಬೇಕು. ಈ ಸಂದೇಶ ಎಲ್ಲ ಕನ್ನಡ ಪ್ರೇಮಿಗಳಿಗೂ ತಲುಪಿಸಬೇಕು. ಆ ನಿಟ್ಟಿನಲ್ಲಿ ರಥಯಾತ್ರೆಯನ್ನು ತುಂಬು ಹೃದಯದಿಂದ ಸ್ವಾಗತಿಸಿ ಗೌರವ ಸಮರ್ಪಣೆ ಮಾಡಬೇಕು. ಜೊತೆಗೆ ಕನ್ನಡ ನಾಡು ನುಡಿಯ ಮಹತ್ವವನ್ನು ಎಲ್ಲರಿಗೂ ತಿಳಿಸಿಕೊಡಬೇಕು ಎಂದು ಅವರು ಮನವಿ ಮಾಡಿದರು.ಕನ್ನಡದ ಪ್ರತಿಭೆಗಳನ್ನು ಪ್ರೋತ್ಸಾಹಿಸಿತಹಸೀಲ್ದಾರ್ ಬಿ.ನಯನ ಮಾತನಾಡಿ, ಕನ್ನಡ ಭಾಷೆಯ ಉಳಿವಿಗಾಗಿ ಒಗ್ಗಟ್ಟಿನಿಂದ ಹೋರಾಡಲು ಹೆಚ್ಚು ಆದ್ಯತೆ ನೀಡಬೇಕು. ಕನ್ನಡಭಾಷೆಯನ್ನು ಮುಂದಿನ ಪೀಳಿಗೆಗೆ ಕಾಣಿಕೆಯನ್ನಾಗಿ ನೀಡುವ ಕಾರ್ಯವಾಗಬೇಕು. ಕನ್ನಡ ನೆಲದ ಪ್ರತಿಭೆಗಳು ಪ್ರಪಂಚದಾದ್ಯಂತ ಬೆಳೆಯಬೇಕು ಎಂದರು.ಕಸಾಪ ಜಿಲ್ಲಾಧ್ಯಕ್ಷ ಗೋಪಾಲ್ ಗೌಡ ಮಾತನಾಡಿ, ಕರ್ನಾಟಕದಲ್ಲಿರುವ ನಾವೆಲ್ಲರೂ ಒಂದೇ, ಎಲ್ಲರೂ ಸಹೋದರ ಭಾವನೆ ಹೊಂದಿರಬೇಕು. ಕರ್ನಾಟಕದ ಕನ್ನಡ ಭಾಷೆಯ ಸಾಹಿತ್ಯ, ಸಂಸ್ಕೃತಿ. ಕಲೆಯನ್ನು ಗೌರವಿಸಬೇಕು. ಕರ್ನಾಟಕದ ಬಹುತೇಕ ಜನರಿಗೆ ಕನ್ನಡ ಮಾತೃಭಾಷೆಯಾಗಿದೆ ಎಂದರು.
ವಿಶ್ವಮಾನವ ರಾಜ್ಯವಾಗಬೇಕುಆಂಧ್ರ ಪ್ರದೇಶ, ತಮಿಳುನಾಡು ಗಡಿಯಲ್ಲಿ ಕನ್ನಡವನ್ನು ಮಾತೃ ಭಾಷೆಯಾಗಿ ಬಳಸುವ ಗಣನೀಯ ಸಂಖ್ಯೆಯ ಕನ್ನಡಿಗ ಜನರಿದ್ದಾರೆ. ಕನ್ನಡವನ್ನು ಬೆಳೆಸುವ ಹಲವಾರು ಕವಿಗಳು, ನಾಯಕರು ಮತ್ತು ಮಾಧ್ಯಮಗಳು ಕನ್ನಡ ಅಭಿವೃದ್ಧಿಯ ಕಾರ್ಯದಲ್ಲಿ ಪ್ರವೃತ್ತವಾಗಿವೆ. ಕರ್ನಾಟಕ ಸರ್ವ ಜನಾಂಗದ. ಸರ್ವೋದಯದ ವಿಶ್ವಮಾನವರ ರಾಜ್ಯವಾಗಬೇಕು ಎಂದರು.ರಥಯಾತ್ರೆ ನಗರದ ರಾಜಬೀದಿಗಳಲ್ಲಿ ಕಲಾತಂಡಗಳೊಂದಿಗೆ ಅದ್ಧೂರಿಯಾಗಿ ಸಾಗಿತು. ಕಲಾತಂಡಗಳ ಕಲಾವಿದರ ಡೊಳ್ಳುಕುಣಿತ, ಸೋಮನ ಕುಣಿತ, ಶಾಲಾ ಮಕ್ಕಳು ಕನ್ನಡ ಬಾವುಟ ಹಿಡಿದು, ಕನ್ನಡಪರ ಘೋಷಣೆಗಳು ಸಾರ್ವಜನಿಕರ ಗಮನ ಸೆಳೆದವು.
ಅಪರ ಜಿಲ್ಲಾಧಿಕಾರಿ ಮಂಗಳ, ಉಪ ವಿಭಾಗಾಧಿಕಾರಿ ಮೈತ್ರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ವಿಜಯಲಕ್ಷ್ಮಿ, ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆ ಸಹಾಯಕ ನಿರ್ದೇಶಕಿ ಗೀತಾ, ನಗರಸಭೆ ಆಯುಕ್ತ ಶಿವಾನಂದ್ ಇದ್ದರು.