ಸಾರಾಂಶ
ಬಳ್ಳಾರಿ: ಉನ್ನತ ಸ್ಥಾನಮಾನದ ಉದ್ಯೋಗದ ಕನಸು ಹೊಂದಿರುವವರು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವುದು ಬಹುಮುಖ್ಯ ಎಂದು ಜಿಲ್ಲಾಧಿಕಾರಿ ಪ್ರಶಾಂತಕುಮಾರ್ ಮಿಶ್ರಾ ಹೇಳಿದರು.ನಗರದ ಹೊರವಲಯದ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ರಾಷ್ಟ್ರೀಯ ಸೇವಾ ಯೋಜನೆ ಘಟಕ ಬಳ್ಳಾರಿ, ಬೆಂಗಳೂರಿನ ಉನ್ನತಿ ಫೌಂಡೇಶನ್, ಧಾರವಾಡ ಸಿಡಾಕ್‌ನ ಉದ್ಯೋಗ- ಕೌಶಲ್ಯ ಅಭಿವೃದ್ಧಿ ಘಟಕದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ‘ವಿದ್ಯಾರ್ಥಿಗಳೊಂದಿಗೆ ಮಾತು-ಮಂಥನ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಐಎಎಸ್, ಐಪಿಎಸ್‌ಗಳಂತ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪ್ರಿಲಿಮ್ಸ್, ಮೇನ್ಸ್ ಮತ್ತು ಸಂದರ್ಶನದ ಮೂರು ಹಂತಗಳಿರುತ್ತವೆ. ಸತತ ಅಧ್ಯಯನ ಹಾಗೂ ಸಹಜ ಕೌಶಲ್ಯಗಳನ್ನು ಅಳವಡಿಸಿಕೊಂಡು ಉತ್ತೀರ್ಣಗೊಳ್ಳಬಹುದು. ವಿದ್ಯಾರ್ಥಿಗಳು ಸಾಧನೆಯ ಹಾದಿಯತ್ತ ಮುನ್ನುಗ್ಗಿದರೆ ಯಾವುದೇ ಕಷ್ಟವಲ್ಲ. ಆದರೆ, ಗುರಿಯನ್ನು ಮುಟ್ಟೇ ಮುಟ್ಟುತ್ತೇನೆ ಎಂಬ ಛಲವಿರಬೇಕು. ಆಗ ಮಾತ್ರ ಯಶಸ್ಸು ಸಾಧ್ಯ ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ. ಎಂ. ಮುನಿರಾಜು ಮಾತನಾಡಿ, ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು ಮತ್ತು ಸಮಯ ನಿರ್ವಹಣೆ ಪ್ರಜ್ಞೆ ಬೆಳೆಸಿಕೊಳ್ಳಬೇಕು. ಸ್ಪರ್ಧಾತ್ಮಕ ಪರೀಕ್ಷೆಗೆ ಪಠ್ಯಕ್ರಮ ಅಧ್ಯಯನದ ಜತೆಗೆ ದಿನ-ಪತ್ರಿಕೆ ಓದುವ ಹವ್ಯಾಸ ವೃದ್ಧಿಸಿಕೊಳ್ಳಬೇಕು. ಪದವಿ ಹಂತದಲ್ಲಿ ಅನೇಕ ಹೊಸ ಕೋರ್ಸ್‌ಗಳನ್ನು ಆರಂಭಿಸಲು ವಿಶ್ವವಿದ್ಯಾಲಯವು ಮುನ್ನುಡಿ ಬರೆದಿದೆ. ವಿದ್ಯಾರ್ಥಿಗಳಿಗೆ ಕೌಶಲ್ಯ ತರಬೇತಿ ನೀಡಿ ಅಭಿವೃದ್ಧಿಪಡಿಸುವುದು ವಿವಿಯ ಗುರಿಯಾಗಿದೆ ಎಂದು ಹೇಳಿದರು.ಕುಲಸಚಿವ ರುದ್ರೇಶ ಎಸ್.ಎನ್. ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಜಿಲ್ಲಾ ಕೌಶಲ್ಯ ಅಭಿವೃದ್ಧಿ ಅಧಿಕಾರಿ ಪ್ರಾಣೇಶ್ ಎಸ್., ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಸೋಮಶೇಖರ್ ಹಾಜರಿದ್ದರು.