ಅಷ್ಟತೀರ್ಥೋತ್ಸವ ಪ್ರಮುಖ ಕೈಂಕರ್ಯಗಳ ಅಂಗವಾಗಿ ಚೆಲುವನಾರಾಯಣಸ್ವಾಮಿಯ ಬಂಗಾರದ ಪಾದುಕೆಯನ್ನು ಪುಟ್ಟಪಲ್ಲಕ್ಕಿಯ ಮೂಲಕ ಬಿಜಯ ಮಾಡಿಸಿ ಯದುಗಿರಿ ಬೆಟ್ಟಗುಡ್ಡಗಳ ಮಧ್ಯೆ ಋಷಿಮುನಿಗಳು ತಪಸ್ಸು ಮಾಡಿದ ಸ್ಥಳದಲ್ಲಿರುವ ವೇದ ಪುಷ್ಕರಣಿ, ಧನುಷ್ಕೋಟಿ, ಯಾದವಾತೀರ್ಥ, ದರ್ಬತೀರ್ಥ, ಪಲಾಶರತೀರ್ಥ ಪದ್ಮತೀರ್ಥ, ನರಸಿಂಹತೀರ್ಥ, ನಾರಾಯಣ ತೀರ್ಥವೆಂಬ ಎಂಟು ತೀರ್ಥಗಳಲ್ಲಿ ವೇದ ಘೋಷದೊಂದಿಗೆ ಅಭಿಷೇಕ ನೆರವೇರಿಸಲಾಯಿತು.

ಕನ್ನಡಪ್ರಭ ವಾರ್ತೆ ಮೇಲುಕೋಟೆ

ಪ್ರಕೃತಿ ಆರಾಧನೆ ಹಾಗೂ ವನಬೋಜನದ ಮಹತ್ವವಿರುವ ಚೆಲುವನಾರಾಯಣಸ್ವಾಮಿಯವರ ಮಕ್ಕಳ ಭಾಗ್ಯ ಕರುಣಿಸುವ ತೊಟ್ಟಿಲಮಡು ಜಾತ್ರಾ ಮಹೋತ್ಸವ ಹಿನ್ನೆಲೆ ಪ್ರಖ್ಯಾತವಾದ ಅಷ್ಟತೀರ್ಥೋತ್ಸವ ಗುರುವಾರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವೈಭವದಿಂದ ನೆರವೇರಿತು.

ವಜ್ರಖಚಿತ ರಾಜಮುಡಿ ಕಿರೀಟಧರಿಸಿ ಶ್ರೀದೇವಿಭೂದೇವಿ ಸಮೇತನಾದ ಚೆಲುವನಾರಾಯಣಸ್ವಾಮಿಯ ಉತ್ಸವ ಬೆಳಗ್ಗೆ 9 ಗಂಟೆಗೆ ಕಲ್ಯಾಣಿಗೆ ತೆರಳಿದ ನಂತರ ಗಜೇಂದ್ರವರದನ ಸನ್ನಿಧಿಯ ಮುಂಭಾಗ ಭಕ್ತರ ಇಷ್ಟಾರ್ಥ ನೆರವೇರಿ ಲೋಕ ಕಲ್ಯಾಣವಾಗಿ, ಆಡಳಿತ ನಡೆಸುವವವರಲ್ಲಿ ಧಾರ್ಮಿಕ ಭಾವನೆ ಬೆಳೆಯಲಿ ಎಂದು ಸಾಂಪ್ರದಾಯಿಕ ಮಂತ್ರೋಚ್ಚಾರಣೆ ಮಾಡಿ ಪ್ರಾರ್ಥಿಸಿ ಸ್ವಾಮಿಯ ಪಾದುಕೆಗೆ ಹರಿಶಿಣ ಮತ್ತು ಮಂಗಳದ್ರವ್ಯಗಳಿಂದ ಅಭಿಷೇಕ ನೆರವೇರಿಸಲಾಯಿತು.

ಪೂಜೆ ನಂತರ ಚೆಲುವನಾರಾಯಣಸ್ವಾಮಿಯ ಬಂಗಾರದ ಪಾದುಕೆಗೆ ಕಲ್ಯಾಣಿಯಲ್ಲಿ ಪ್ರಥಮ ಅಭಿಷೇಕ ನೆರವೇರಿಸಲಾಯಿತು. ಈ ವೇಳೆ ದೇವಾಲಯದ ಕೈಂಕರ್ಯ ಪರರ ಪತ್ನಿಯರು ಮಕ್ಕಳಭಾಗ್ಯ ಅಪೇಕ್ಷಿಸಿ ಹರಕೆಯಲ್ಲಿ ಭಾಗವಹಿಸಲು ಬಂದ ಗೃಹಿಣಿಯರಿಗೆ ಮಡಿಲು ತುಂಬುವ ಕಾರ್ಯಮಾಡಿ ಶುಭ ಹಾರೈಸಿದರು. ಕಲ್ಯಾಣಿಯಲ್ಲಿ ಪ್ರಥಮ ಅಭಿಷೇಕ ನಡೆದ ನಂತರ ಸ್ವಾಮಿಯ ಉತ್ಸವ ದೇವಾಲಯಕ್ಕೆ ಮರಳಿತು.

ಅಷ್ಟತೀರ್ಥೋತ್ಸವ ಪ್ರಮುಖ ಕೈಂಕರ್ಯಗಳ ಅಂಗವಾಗಿ ಚೆಲುವನಾರಾಯಣಸ್ವಾಮಿಯ ಬಂಗಾರದ ಪಾದುಕೆಯನ್ನು ಪುಟ್ಟಪಲ್ಲಕ್ಕಿಯ ಮೂಲಕ ಬಿಜಯ ಮಾಡಿಸಿ ಯದುಗಿರಿ ಬೆಟ್ಟಗುಡ್ಡಗಳ ಮಧ್ಯೆ ಋಷಿಮುನಿಗಳು ತಪಸ್ಸು ಮಾಡಿದ ಸ್ಥಳದಲ್ಲಿರುವ ವೇದ ಪುಷ್ಕರಣಿ, ಧನುಷ್ಕೋಟಿ, ಯಾದವಾತೀರ್ಥ, ದರ್ಬತೀರ್ಥ, ಪಲಾಶರತೀರ್ಥ ಪದ್ಮತೀರ್ಥ, ನರಸಿಂಹತೀರ್ಥ, ನಾರಾಯಣ ತೀರ್ಥವೆಂಬ ಎಂಟು ತೀರ್ಥಗಳಲ್ಲಿ ವೇದ ಘೋಷದೊಂದಿಗೆ ಅಭಿಷೇಕ ನೆರವೇರಿಸಲಾಯಿತು.

ಕಲ್ಯಾಣಿಯಿಂದ ವೈಕುಂಠ ಗಂಗೆಯವರೆಗೆ ಎಲ್ಲ ತೀರ್ಥಗಳಲ್ಲಿ ನೂರಾರು ಭಕ್ತರು ಪವಿತ್ರ ಸ್ನಾನ ಮಾಡಿದರು. ಸಂಜೆ ಕಣಿವೆ ಬಳಿ ಇರುವ ವೈಕುಂಠ ಗಂಗೆಯಲ್ಲಿ ಪಾದುಕೆಗೆ ಕೊನೆ ಅಭಿಷೇಕ ಮಾಡಿದ ನಂತರ ಪಾದುಕಾಸಮೇತವಾದ ಪಲ್ಲಕ್ಕಿ ಯೋಗಾನರ ಸಿಂಹಸ್ವಾಮಿ ಬೆಟ್ಟದ ಗಿರಿ ಪ್ರದಕ್ಷಿಣೆ ಮಾಡಿ ಒಟ್ಟಾರೆ 20 ಕಿಮೀಗೂ ಹೆಚ್ಚು ದೂರವನ್ನು ಕ್ರಮಿಸಿ ರಾಯಗೋಪುರದ ಮೂಲಕ ರಾತ್ರಿ 9 ಗಂಟೆ ವೇಳೆಗೆ ದೇವಾಲಯ ತಲುಪುವುದರೊಂದಿಗೆ ತೊಟ್ಟಿಲಮಡು ಜಾತ್ರೆ ಸಂಪನ್ನವಾಯಿತು.

ಈ ವೇಳೆ ದೇಗುಲದ ಇಒ, ತಹಸೀಲ್ದಾರ್ ಆದರ್ಶ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕನಗೋನಹಳ್ಳಿ ಪರಮೇಶಗೌಡ ಮತ್ತು ಸದಸ್ಯರು ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು. ಪಾರುಪತ್ತೇಗಾರರಾದ ಸ್ಥಾನಾಚಾರ್ಯ ಶ್ರೀನಿವಾಸ ನರಸಿಂಹನ್‌ ಗುರೂಜಿ ಮತ್ತು ಎಂ.ಎನ್ ಪಾರ್ಥಸಾರಥಿ ಸಿಬ್ಬಂದಿ ಮತ್ತು ಕೈಂಕರ್ಯ ಪರರ ಸಹಕಾರದಲ್ಲಿ ಧಾರ್ಮಿಕ ವಿಧಿವಿಧಾನಗಳನ್ನು ಶಾಸ್ತ್ರೋಕ್ತವಾಗಿ ನಿರ್ವಹಿಸಿದರು.

ತೊಟ್ಟಿಲಮಡು ವೈಕುಂಠಗಂಗೆಯ ಬಳಿ ರಾತ್ರಿ ನಡೆದ ಜಾತ್ರೆ ವೇಳೆ 25 ಸಾವಿರಕ್ಕೂ ಅಧಿಕ ಭಕ್ತಾದಿಗಳಿಗೆ ವಿವಿಧ ಜನಾಂಗಗಳ ವತಿಯಿಂದ ಮೇಲುಕೋಟೆ ವಿಶಿಷ್ಟ ಪ್ರಸಾದವಾದ ಕದಂಬ ಮತ್ತು ದದಿಯೋದನ ಪ್ರಸಾದ ವಿತರಿಸಲಾಯಿತು.

ಗ್ರಾಪಂನಿಂದ ಕುಡಿಯುವ ನೀರು ಮತ್ತು ವಿದ್ಯುತ್‌ ದೀಪಗಳ ವ್ಯವಸ್ಥೆ ಮಾಡಲಾಗಿತ್ತು. ರಾತ್ರಿ 11ಗಂಟೆವರೆಗೆ ಭಕ್ತರು ವೈಕುಂಠನಾಥನಿಗೆ ಪೂಜೆ ನೆರವೇರಿಸಿದರು. ತೊಟ್ಟಲುಮುಡು ಬಳಿಗೆ ವಾಹನಗಳ ಪ್ರವೇಶವನ್ನು ನಿಷೇಧಿಸಿದ್ದ ಪೊಲೀಸರು ವ್ಯವಸ್ಥಿತವಾಗಿ ಸಂಚಾರದಟ್ಟಣೆ ನಿಯಂತ್ರಿಸಿದರು.

ಸಮಿತಿ ಅಧ್ಯಕ್ಷ ಕನಗೋನಹಳ್ಳಿ ಪರಮೇಶಗೌಡ ಸ್ವಂತ ಖರ್ಚಿನಿಂದ ಮಾಡಿದ್ದ ಆಕರ್ಷಕ ದೀಪಾಲಂಕಾರ ಭಕ್ತರ ಮೆಚ್ಚುಗೆಗೆ ಕಾರಣವಾಗಿತ್ತು. ಮಂಟಪಗಳು, ಮರಗಳು, ಬಂಡೆಗಳಿಗೆ ಮಾಡಿದ ದೀಪಾಲಂಕಾರ ಮತ್ತು ಕಣಿವೆ ಬಳಿಯಿಂದ ವೈಕುಂಠನಾಥನ ಸಾನ್ನಿಧ್ಯದವರೆಗೆ ಹಾಕಿದ್ದ ವಿದ್ಯುತ್ ದೀಪದ ತೋರಣಗಳು ತೊಟ್ಟಿಲಮಡು ಜಾತ್ರೆಯ ಪ್ರಮುಖ ಆಕರ್ಷಣೆಯಾಗಿತ್ತು.