ಕ್ಷೇತ್ರದ ಸಮಗ್ರ ಅಭಿವೃದ್ದಿಗೆ ಚಿಂತನೆ: ಬಾಲರಾಜು

| Published : Mar 27 2024, 01:04 AM IST

ಸಾರಾಂಶ

ಕ್ಷೇತ್ರದಲ್ಲಿ ಪ್ರವಾಸೋದ್ಯಮ, ಶಿಕ್ಷಣ, ಆರೋಗ್ಯ ಸೇರಿದಂತೆ ಕ್ಷೇತ್ರದ ಸಮಗ್ರ ಅಭಿವೃದ್ದಿಗೆ ನನ್ನದೇ ಆದ ಚಿಂತನೆಯೊಂದಿಗೆ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ಕನಸಾದ ವಿಕಸಿತ ಭಾರತದ ಯೋಜನೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಿ ಅವುಗಳ ಜಾರಿಯ ಪ್ರಯತ್ನದೊಂದಿಗೆ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ ಎಂದು ಅಭ್ಯರ್ಥಿ ಎಸ್.ಬಾಲರಾಜು ಹೇಳಿದರು.

ಈ ಬಾರಿ ಸಂಸತ್ ಸದಸ್ಯನಾಗಿ ಆಯ್ಕೆಯಾದರೆ ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶಕನ್ನಡಪ್ರಭ ವಾರ್ತೆ ಚಾಮರಾಜನಗರ ಕ್ಷೇತ್ರದಲ್ಲಿ ಪ್ರವಾಸೋದ್ಯಮ, ಶಿಕ್ಷಣ, ಆರೋಗ್ಯ ಸೇರಿದಂತೆ ಕ್ಷೇತ್ರದ ಸಮಗ್ರ ಅಭಿವೃದ್ದಿಗೆ ನನ್ನದೇ ಆದ ಚಿಂತನೆಯೊಂದಿಗೆ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ಕನಸಾದ ವಿಕಸಿತ ಭಾರತದ ಯೋಜನೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಿ ಅವುಗಳ ಜಾರಿಯ ಪ್ರಯತ್ನದೊಂದಿಗೆ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ ಎಂದು ಅಭ್ಯರ್ಥಿ ಎಸ್.ಬಾಲರಾಜು ಹೇಳಿದರು.

ಪತ್ರಕರ್ತರ ಭವನದಲ್ಲಿ ಹಮ್ಮಿಕೊಂಡಿದ್ದ ಪತ್ರಕರ್ತರೊಂದಿಗಿನ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಮ್ಮ ಗುರು ದಿ.ರಾಜಶೇಖರಮೂರ್ತಿ ಅವರ ರಾಜಕೀಯ ಗರಡಿಯಲ್ಲಿ ಪಳಗಿದ ನಾನು ನನ್ನ ೩೨ ವರ್ಷಗಳ ರಾಜಕೀಯ ಜೀವನದಲ್ಲಿ ಕೊಳ್ಳೇಗಾಲ ವಿಧಾನಸಭಾ ಸದಸ್ಯನಾಗಿ ಸಿಕ್ಕಿದ ೩ ವರ್ಷಗಳ ಅವಧಿಯಲ್ಲಿ ನೆನಪಿನಲ್ಲಿ ಉಳಿಯುವಂತಹ ಕುಂತೂರು ಸಕ್ಕರೆ ಕಾರ್ಖಾನೆ ಸಮಸ್ಯೆ, ಕಬಿನಿಯಿಂದ ಪೂರ್ಣಾವಧಿ ಬೆಳೆಗೆ ನೀರು, ಕುಡಿಯುವ ನೀರು, ಯಳಂದೂರಿನಲ್ಲಿ ಪದವಿ ಕಾಲೇಜು, ಹೀಗೆ ಹಲವಾರು ಅಭಿವೃದ್ದಿ ಕಾರ್ಯಗಳನ್ನು ಮಾಡಿದ್ದು ಇವೆಲ್ಲವೂ ನನ್ನ ಗೆಲುವಿಗೆ ಸಹಕಾರಿಯಾಗಲಿದೆ ಎಂದರು.

ಈ ಬಾರಿ ನಾನು ಸಂಸತ್ ಸದಸ್ಯನಾಗಿ ಆಯ್ಕೆಯಾದರೆ ಶೇ. ೫೦ರಷ್ಟು ಅರಣ್ಯ ಪ್ರದೇಶ ಹೊಂದಿರುವ ಈ ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶವಿದೆ, ಕೇಂದ್ರ ಸರ್ಕಾರದ ಜೊತೆಗೆ ನಿಕಟ ಸಂಪರ್ಕವಿಟ್ಟುಕೊಂಡು ಈ ಬಗ್ಗೆ ಕಾರ್ಯಪ್ರವೃತ್ತನಾಗುತ್ತೇನೆ ಎಂದರು. ಕ್ಷೇತ್ರದಲ್ಲಿ ಇನ್ನಷ್ಟು ಶಿಕ್ಷಣ ಸಂಸ್ಥೆಗಳನ್ನು ತೆರೆಯುವ ಜೊತಗೆ, ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರಗಳು, ಆರೋಗ್ಯ ಕ್ಷೇತ್ರ, ಪ್ರಧಾನಿ ನರೇಂದ್ರಮೋದಿಯವರ ಕನಸಾದ ವಿಕಸಿತ ಭಾರತದ ಯೋಜನೆಗಳಲ್ಲಿ ಶೇ.೧೫ ರಷ್ಟು ಬಡವರನ್ನು ಮೇಲೆತ್ತುವ ಯೋಜನೆಗಳಿದ್ದು, ಅವಗಳ ಬಗ್ಗೆ ಅರಿವು ಮೂಡಿಸಿ, ಅವುಗಳ ಜಾರಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಕೈಗಾರಿಕಾ ವಸಾಹತುಗಳಿಗೆ ಹೆಚ್ಚಿನ ಆದ್ಯತೆ ನೀಡಿ, ಉದ್ಯೋಗ ಸೃಷ್ಟಿಗೆ ಹೆಚ್ಚಿನ ಆದ್ಯತೆ ನೀಡುತ್ತೇನೆ ಎಂದರು.ಕಾಡಂಚಿನ ಗ್ರಾಮಗಳಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಗಮನಹರಿಸಲಾಗುವುದು. ಇದರೊಂದಿಗೆ ಎಸ್ಸಿ, ಎಸ್ಟಿ, ಹಿಂದುಳಿದ ವರ್ಗಗಳು ಹಾಗೂ ಬಡವರ ಪರಯೋಜನೆಗಳನ್ನು ತರುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ ಎಂದರು. ಲೋಕಸಭಾ ಚುನಾವಣೆಯು ರಾಷ್ಟ್ರೀಯ ವಿಚಾರವಾಗಿರುವುದರಿಂದ ಕ್ಷೇತ್ರದಲ್ಲಿ ಹೆಚ್ಚು ಕಾಂಗ್ರೆಸ್ ಶಾಸಕರಿದ್ದರೂ ಮೋದಿಯವರ ಅಭಿವೃದ್ದಿ ಕಾರ್ಯಗಳು, ಮತ್ತು ಮತದಾರರಿಗೆ ಮೋದಿಯವರ ಬಗ್ಗೆ ವಿಶೇಷವಾದ ಅಭಿಮಾನ ಇರುವುದರಿಂಂದ, ನನ್ನ ಗೆಲುವಿಗೆ ಕಾಂಗ್ರೆಸ್‌ನಿಂದ ಯಾವುದೇ ಪರಿಣಾಮ ಬೀರುವುದಿಲ್ಲ ಎಂದರು. ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಬೇಕು. ಜಾತ್ಯಾತೀತ ಜನತಾದಳ ಕೂಡ ನಮಗೆ ಸಂಪೂರ್ಣ ಬೆಂಬಲ ನೀಡಿರುವುದರಿಂದ ಕ್ಷೇತ್ರದಲ್ಲಿ ಬಿಜೆಪಿ ಗೆಲುವಿಗೆ ಪೂರಕವಾದ ವಾತಾವರಣ ಇದೆ.ಕ್ಷೇತ್ರದಲ್ಲಿ ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದು ಅವರಲ್ಲಿ ಅನೇಕರಿಗೆ ಕಾಂಗ್ರೆಸ್‌ನ ಗ್ಯಾರಂಟಿಗಳಲ್ಲಿ ಶಕ್ತಿ ಯೋಜನೆಯೊಂದನ್ನು ಬಿಟ್ಟರೆ ಉಳಿದವು ಪೂರ್ಣವಾಗಿ ಸಿಕ್ಕಿಲ್ಲ, ಇದರಿಂದ ಅನೇಕ ಮಹಿಳೆಯರು ನನ್ನನ್ನು ಬೆಂಬಲಿಸಲಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಬಿಜೆಪಿ-ಜೆಡಿಎಸ್ ನಾಯಕರ ನಡುವೆ ಸಮನ್ವಯತೆ ಕೊರತೆ ಸಂಬಂಧ ಆರೋಪ ಗಳಿದ್ದು ಬುಧವಾರ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಸಮ್ಮುಖದಲ್ಲಿ ಸಮನ್ವಯ ಸಮಿತಿ ಸಭೆ ಇದೆ. ಇದರಲ್ಲಿ ಎರಡು ಪಕ್ಷಗಳ ನಾಯಕರು ಭಾಗವಹಿಸಲಿದ್ದು ಸಭೆ ಬಳಿಕ ಎರಡು ಪಕ್ಷಗಳ ನಾಯಕರು ಒಗ್ಗಟ್ಟಿನಿಂದ ಕೆಲಸ ಮಾಡಲಿದ್ದಾರೆ ಎಂದು ಹೇಳಿದರು.ಸಂವಿಧಾನ ಬದಲಾವಣೆ ಸಾಧ್ಯವಿಲ್ಲ:ನರೇಂದ್ರ ಮೋದಿ ಅವರ ಬಗ್ಗೆ ಕೆಲವರು ತಪ್ಪು ತಿಳಿದುಕೊಂಡಿದ್ದಾರೆ. ಮೋದಿ ಅವರು ಗುಜರಾತ್ ಸಿಎಂ ಆಗಿದ್ದಾಗ ಸಂವಿಧಾನ ದಿನಾಚರಣೆ ಮಾಡಿದ್ದಾರೆ. ಅಂಬೇಡ್ಕರರ ಜೀವನದೊಂದಿಗಿನ ಸಂಬಂಧಿಸಿದ ಸ್ದಳಗಳನ್ನು ಪಂಚ ತೀರ್ಥ ಕ್ಷೇತ್ರಗಳನ್ನಾಗಿ ಅಭಿವೃದ್ಧಿಪಡಿಸಿದ್ದಾರೆ. ಆದರೆ, ಕಾಂಗ್ರೆಸ್ ಪಕ್ಷ ಅಂಬೇಡ್ಕರ್ ಸಮಾಧಿಗೆ ಜಾಗ ಕೊಡಲಿಲ್ಲ, ಸಂವಿಧಾನದ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೇಸ್‌ಗೆ ಇಲ್ಲ ಎಂದರು. ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದು ಯಾರೋ ಹೇಳಿದ್ದಾರೆ ಎಂದರೆ ಅದು ಮೋದಿ ಅಥವಾ ಬಿಜೆಪಿ ತೀರ್ಮಾನವಲ್ಲ. ಈ ರೀತಿಯ ಹೇಳಿಕೆ ನೀಡಿರುವವರನ್ನು ಪಕ್ಷ ಹೊರಗಿಟ್ಟಿದೆ ಎಂದರು. ಏ.೩ ರಂದು ನಾನು ನಮ್ಮ ನಾಯಕರು, ಕಾರ್ಯಕರ್ತರೊಡಗೂಡಿ ನಾಮಪತ್ರ ಸಲ್ಲಿಸುತ್ತೇನೆ ಎಂದರು. ಸಂವಾದದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ದೇವರಾಜು ಕಪ್ಪಸೋಗೆ, ಪ್ರಧಾನ ಕಾರ್ಯದರ್ಶಿ ಲಕ್ಕೂರು ಪ್ರಸಾದ್ ಇದ್ದರು.