20 ಕ್ವಿಂಟಲ್‌ ಹೆಸರು ಖರೀದಿಗೆ ಚಿಂತನೆ: ಶಾಸಕ ವಿನಯ ಕುಲಕಣಿಧ

| Published : Sep 20 2024, 01:35 AM IST

20 ಕ್ವಿಂಟಲ್‌ ಹೆಸರು ಖರೀದಿಗೆ ಚಿಂತನೆ: ಶಾಸಕ ವಿನಯ ಕುಲಕಣಿಧ
Share this Article
  • FB
  • TW
  • Linkdin
  • Email

ಸಾರಾಂಶ

ಧಾರವಾಡ ಜಿಲ್ಲೆಯಲ್ಲಿ ಉತ್ತಮ ಮಳೆಯಿಂದಾಗಿ ಹೆಚ್ಚಿನ ಪ್ರಮಾಣದಲ್ಲಿ ಹೆಸರು ಕಾಳು ಇಳುವರಿ ಬಂದಿದೆ. ಹೀಗಾಗಿ ರೈತರಿಂದ ಕನಿಷ್ಠ 20 ಕ್ವಿಂಟಲ್ ಖರೀದಿಸುವಂತೆ ಕೃಷಿ ಸಚಿವರ ಮತ್ತು ಸರ್ಕಾರದ ಗಮನ ಸೆಳೆಯುವುದಾಗಿ ವಿನಯ ಕುಲಕರ್ಣಿ ಹೇಳಿದರು.

ಧಾರವಾಡ:

ಸರ್ಕಾರ ಹೆಸರು ಖರೀದಿ ಕೇಂದ್ರ ತೆರೆದಿದೆ. ಶೀಘ್ರವೇ ಖರೀದಿ ಪ್ರಕ್ರಿಯೆಯೂ ಪ್ರಾರಂಭಿಸಲಿದೆ. ಒಬ್ಬ ರೈತನಿಂದ 10 ಕ್ವಿಂಟಲ್ ಮಾತ್ರ ಖರೀದಿಸುವ ಆದೇಶ ಅವೈಜ್ಞಾನಿಕ. ಕನಿಷ್ಠ 20 ಕ್ವಿಂಟಲ್ ಖರೀದಿಸುವಂತೆ ರೈತರ ಬೇಡಿಕೆಯಾಗಿದೆ ಎಂದು ಶಾಸಕ ವಿನಯ ಕುಲಕರ್ಣಿ ಹೇಳಿದರು.

ಸಮೀಪದ ಕಿತ್ತೂರಿನ ಪ್ರವಾಸಿ ಮಂದಿರದಲ್ಲಿ ಗುರುವಾರ ಧಾರವಾಡ ತಾಲೂಕು ಕೆಡಿಪಿ ಪ್ರಗತಿ ಪರಿಶೀಲನೆಯ ಸಭೆಗೂ ಮುಂಚೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಉತ್ತಮ ಮಳೆಯಿಂದಾಗಿ ಹೆಚ್ಚಿನ ಪ್ರಮಾಣದಲ್ಲಿ ಇಳುವರಿ ಬಂದಿದೆ. ಹೀಗಾಗಿ ರೈತರಿಂದ ಕನಿಷ್ಠ 20 ಕ್ವಿಂಟಲ್ ಖರೀದಿಸುವಂತೆ ಕೃಷಿ ಸಚಿವರ ಮತ್ತು ಸರ್ಕಾರದ ಗಮನ ಸೆಳೆಯುವುದಾಗಿ ಹೇಳಿದರು.

ಜಿಲ್ಲೆಯ ನಿರೀಕ್ಷಿತ ಜಲಜೀವನ ಮಿಷನ್ (ಜೆಜೆಎಂ) ಯೋಜನೆ ಯಶಸ್ವಿಯಾಗಿಲ್ಲ. ಈ ಬಗ್ಗೆ ಜನರಿಂದ ಸಾಕಷ್ಟು ದೂರುಗಳು ಬಂದಿವೆ. ಜೆಜೆಎಂ ಯೋಜನೆ ಜನರಿಗೆ ತೊಂದರೆ ಉಂಟು ಮಾಡಿದ್ದಾಗಿ ದೂರಿದರು. ಜಿಲ್ಲೆಯ ಕೆಲವು ಗ್ರಾಮಗಳಲ್ಲಿ ಜೆಜೆಎಂ ಅನುಷ್ಠಾನಿಸಿದೆ. ಇನ್ನೂ ಕೆಲ ಭಾಗದಲ್ಲಿ ಅನುಷ್ಠಾನವಾಗಿಲ್ಲ. ಇದರಿಂದ ಗ್ರಾಮೀಣ ಭಾಗದ ರಸ್ತೆಗಳು ಹಾಳಾಗಿವೆ. ಅಲ್ಲದೇ, ನೀರು ಪೂರೈಸುವ ನಳಕ್ಕೆ ಮಷಿನ್ ಅಳವಡಿಕೆ ಅವೈಜ್ಞಾನಿಕವಾಗಿದೆ ಎಂದು ಆಪಾದಿಸಿದರು. ಕೆಲ ಮನೆಗೆ ನೀರು ಪೂರೈಕೆ ಆದರೆ, ಇನ್ನೂ ಕೆಲ ಮನೆಗಳಿಗೆ ನೀರು ಪೂರೈಕೆ ಆಗುತ್ತಿಲ್ಲ. ಈ ಯೋಜನೆ ಮೂಲ ಗುತ್ತಿಗೆದಾರರು ತುಂಡು ಗುತ್ತಿಗೆ ನೀಡಿದ ಹಿನ್ನಲೆ ಯೋಜನೆ ಹಳ್ಳ ಹಿಡಿದೆ. ಶೀಘ್ರವೇ ಗುತ್ತಿಗೆದಾರರ ಸಭೆ ನಡೆಸುವುದಾಗಿ ಹೇಳಿದರು.

ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದೆ. ಇದರಿಂದ ಗ್ರಾಮೀಣ ಭಾಗದ ಬಹುತೇಕ ರಸ್ತೆಗಳು ಹಾಳಾಗಿವೆ. ಇವುಗ ದುರಸ್ತಿಗೆ ಸರ್ಕಾರದ ಮಟ್ಟದಲ್ಲಿ ಅನುದಾನ ಕೇಳಲಾಗಿದೆ. ಅನುದಾನ ಬಂದಾಕ್ಷಣ ಹದೆಗೆಟ್ಟ ರಸ್ತೆಗಳ ದುರಸ್ತಿಗೆ ಕ್ರಮಕೈಗೊಳ್ಳಲಿದೆ ಎಂದು ತಿಳಿಸಿದರು.

ಲೈ ಟ್ರಾಮ್‌ ಒಳ್ಳೆಯದು:

ಹುಬ್ಬಳ್ಳಿ-ಧಾರವಾಡ ಮಧ್ಯದ ಬಿಆರ್‌ಟಿಎಸ್ ಯೋಜನೆ ಯಶಸ್ವಿ ಆಗಿಲ್ಲ. ಚಿಗರಿ ಪಥ ಹಾಳಾಗಿದೆ ಎಂದ ಶಾಸಕ ವಿನಯ ಕುಲಕರ್ಣಿ, ಯೋಜನೆಯಿಂದ ಜನರಿಗೆ ಒಳ್ಳೆಯದಾಗಿಲ್ಲ. ₹ 1,200 ಕೋಟಿ ಪೋಲಾಗಿದೆ. ಬಿಆರ್‌ಟಿಎಸ್ ಸುಧಾರಣೆಗೆ ಲೈ ಟ್ರಾಮ್ ಒಳ್ಳೆಯದು ಎಂದರು.ನಾನು ಕ್ಷೇತ್ರದಲ್ಲಿ ಇಲ್ಲ. ಆದರೂ ಸಾಕಷ್ಟು ಅಭಿವೃದ್ಧಿ ಕೆಲಸ ಆಗಿವೆ. ಜಿಲ್ಲೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಸುರಿದ ಮಳೆಯಿಂದ ರಸ್ತೆಗಳು ಹಾಳಾಗಿವೆ. ಮನೆಗಳು ಬಿದ್ದಿವೆ. ತಹಸೀಲ್ದಾರ್, ತಾಪಂ ಇಒ, ಎಂಜನಿಯರ್‌ಗಳಿ ಮಾಹಿತಿ ಪಡೆದುಕೊಳ್ಳಲಾಗುವುದು ಎಂದು ವಿನಯ ಕುಲಕರ್ಣಿ ಹೇಳಿದರು.