ತುಂಗಭದ್ರಾ ಜಲಾಶಯದಿಂದ ನದಿಗೆ ಸಾವಿರ ಕ್ಯುಸೆಕ್‌ ನೀರು

| Published : Jul 02 2025, 12:23 AM IST

ತುಂಗಭದ್ರಾ ಜಲಾಶಯದಿಂದ ನದಿಗೆ ಸಾವಿರ ಕ್ಯುಸೆಕ್‌ ನೀರು
Share this Article
  • FB
  • TW
  • Linkdin
  • Email

ಸಾರಾಂಶ

ತುಂಗಭದ್ರಾ ಜಲಾಶಯದ ಒಳ ಹರಿವು 33,916 ಕ್ಯುಸೆಕ್ ಇರುವ ಹಿನ್ನೆಲೆ ಜಲಾಶಯದಿಂದ ನದಿಗೆ ಒಂದು ಸಾವಿರ ಕ್ಯುಸೆಕ್‌ ನೀರು ಹರಿಸಲಾಗಿದೆ.

ತಗ್ಗಿದ ಒಳ ಹರಿವು

ಕನ್ನಡಪ್ರಭ ವಾರ್ತೆ ಹೊಸಪೇಟೆ

ತುಂಗಭದ್ರಾ ಜಲಾಶಯದ ಒಳ ಹರಿವು 33,916 ಕ್ಯುಸೆಕ್ ಇರುವ ಹಿನ್ನೆಲೆ ಜಲಾಶಯದಿಂದ ನದಿಗೆ ಒಂದು ಸಾವಿರ ಕ್ಯುಸೆಕ್‌ ನೀರು ಹರಿಸಲಾಗಿದೆ. ವಿದ್ಯುತ್‌ ಉತ್ಪಾದನಾ ಘಟಕದ ಮಾರ್ಗವಾಗಿ ನದಿಗೆ ಮಂಗಳವಾರ ಕೂಡ ನೀರು ಹರಿಸಲಾಗಿದೆ.

ಜಲಾಶಯದ ಸಂಗ್ರಹ ಸಾಮರ್ಥ್ಯ 105.788 ಟಿಎಂಸಿ ಇದ್ದು, ಜಲಾಶಯದಲ್ಲಿ ಈಗ 74.486 ಟಿಎಂಸಿ ನೀರು ಸಂಗ್ರಹವಾಗಿದೆ. ಜಲಾಶಯದ ಕ್ರಸ್ಟ್‌ ಗೇಟ್‌ಗಳು ಮುಕ್ಕಾಗಿವೆ ಎಂದು ವರದಿ ಬಂದಿರುವ ಹಿನ್ನೆಲೆ ತಜ್ಞರ ಸಲಹೆ ಮೇರೆಗೆ ಈ ವರ್ಷ 80 ಟಿಎಂಸಿ ನೀರು ಮಾತ್ರ ಜಲಾಶಯದಲ್ಲಿ ಸಂಗ್ರಹ ಮಾಡಲು ನಿರ್ಧರಿಸಲಾಗಿದೆ.

ಜಲಾಶಯದ ಎಡದಂಡೆ ಕಾಲುವೆ ಮಾರ್ಗವಾಗಿ ವಿದ್ಯುತ್‌ ಉತ್ಪಾದನಾ ಘಟಕದ ಮೂಲಕ ಜೂ.30ರಂದು 2 ಸಾವಿರ ಕ್ಯುಸೆಕ್‌ ನೀರು ಹರಿಸಲಾಗಿತ್ತು. ಈಗ ಒಳ ಹರಿವು ತಗ್ಗಿರುವ ಹಿನ್ನೆಲೆ ಮಂಗಳವಾರ ಒಂದು ಸಾವಿರ ಕ್ಯುಸೆಕ್‌ ನೀರು ನದಿಗೆ ಹರಿಸಲಾಗಿದೆ.

ಜಾತ್ಯತೀತತೆ ಈ ದೇಶದ ಜನರ ಉಸಿರು-ಕರುಣಾನಿಧಿ:

ಕನ್ನಡಪ್ರಭ ವಾರ್ತೆ ಹೊಸಪೇಟೆಸಂವಿಧಾನದ ಪೀಠಿಕೆಯಲ್ಲಿರುವ ಜಾತ್ಯತೀತ ಮತ್ತು ಸಮಾಜವಾದಿ ಪದಗಳನ್ನು ತೆಗೆಯಬೇಕೆನ್ನುವ ಆರೆಸ್ಸೆಸ್‌ ಹೇಳಿಕೆಯನ್ನು ಅಖಿಲ ಭಾರತ ವಕೀಲರ ಸಂಘ ತೀವ್ರವಾಗಿ ಖಂಡಿಸಿದೆ. ಅಲ್ಲದೇ ಸಂಘ ಪರಿವಾರದ ಈ ಹೇಳಿಕೆಯು ಭಾರತದಲ್ಲಿ ಜನಾಂಗೀಯ ದ್ವೇಷವನ್ನು ಪ್ರಚೋದಿಸುವ ಉದ್ದೇಶದಿಂದ ಕೂಡಿದ್ದು, ಭಾರತದ ಜನತೆ ಸಂಘ ಪರಿವಾರದ ಈ ಹೇಳಿಕೆಯನ್ನು ಅತ್ಯಂತ ತೀವ್ರವಾಗಿ ಖಂಡಿಸಬೇಕು ಎಂದು ಅಖಿಲ ಭಾರತ ವಕೀಲರ ಒಕ್ಕೂಟದ ರಾಜ್ಯ ಸಮಿತಿ ಮುಖಂಡ ಎ. ಕರುಣಾನಿಧಿ ಹೇಳಿದರು.ಹೊಸಪೇಟೆ ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘ ಪರಿವಾರವು ತನ್ನ ಬಚ್ಚಿಟ್ಟ ಅಜೆಂಡಾವನ್ನು ಜಾರಿಗೊಳಿಸಲು ಸಂವಿಧಾನ ಶಿಲ್ಪಿ ಡಾ. ಬಿ.ಆರ್‌. ಅಂಬೇಡ್ಕರ್ ಅವರ ಹೆಸರನ್ನು ಮುಂದೆ ತಂದಿರುವುದು ದಲಿತರನ್ನು ತನ್ನ ಉದ್ದೇಶಕ್ಕೆ ಬಳಸುವ ಹುನ್ನಾರವನ್ನೂ ಬಯಲುಗೊಳಿಸಿದೆ. ಇದು ಅಂಬೇಡ್ಕರ್ ಅವರಿಗೂ ಮಾಡಿದ ಅಪಚಾರವಾಗಿದೆ ಎಂದರು.

ಅಂಬೇಡ್ಕರ್ ರಚಿಸಿದ ಸಂವಿಧಾನದಲ್ಲಿ ಜಾತ್ಯತೀತತೆ ಮತ್ತು ಸಮಾಜವಾದ ಶಬ್ದ ಇರಲಿಲ್ಲ ಎಂದು ಹೇಳಿರುವುದು ಸಂಘ ಪರಿವಾರಕ್ಕೆ ಸಾತಂತ್ರ್ಯ ಚಳವಳಿಯ ಇತಿಹಾಸವೂ ಗೊತ್ತಿಲ್ಲ. ಪೀಠಿಕೆಯ ಕುರಿತ ಚರ್ಚೆಯಲ್ಲಿ ಮಾತನಾಡಿದ ಅಂಬೇಡ್ಕರ್ ಅವರು, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವ ಭಾರತದ ರಾಜಕೀಯ ಆಡಳಿತದಲ್ಲಿ ಉಸಿರಾಗಿರಬೇಕು. ತಮ್ಮ ಜೀವಮಾನದುದ್ದಕ್ಕೂ ಜಾತಿ ವ್ಯವಸ್ಥೆಯ ವಿರುದ್ಧ ಹೋರಾಡಿದ್ದಾರೆ. ಸ್ವಾತಂತ್ರ್ಯ ಹೋರಾಟದಲ್ಲಿ ಜನತೆ ತಮ್ಮ ಧರ್ಮ, ಜಾತಿ, ಭಾಷೆ, ಎಲ್ಲವನ್ನೂ ಮೀರಿ ಭಾಗವಹಿಸಿದ್ದಾರೆ. ಹಾಗಾಗಿ ಜಾತ್ಯತೀತತೆ ಎಂಬುದು 42ನೇ ತಿದ್ದುಪಡಿಯಲ್ಲಿ ಸೇರಿದ ಕೇವಲ ಪದವಲ್ಲ ಬದಲಿಗೆ ಈ ದೇಶದ ಜನರ ಉಸಿರಾಗಿದೆ. ಆದ್ದರಿಂದಲೇ ಜಾತ್ಯತೀತ ಎಂಬುದು ಧರ್ಮರಹಿತ ಪ್ರಭುತ್ವ ಆಗಿದೆ. ಕಾಂಗ್ರೆಸ್ ಈ ಪದಗಳನ್ನು 42ನೇ ತಿದ್ದುಪಡಿಯಲ್ಲಿ ಸೇರಿಸಿದೆ ಎಂಬ ಏಕಮಾತ್ರ ಕಾರಣಕ್ಕಾಗಿ ಇವುಗಳನ್ನು ತೆಗೆಯಬೇಕು ಎನ್ನುವುದು ಸಂಘ ಪರಿವಾರದ ಮೂರ್ಖತನ ಎಂದು ಖಂಡಿಸಿದರು.ಸಮಾಜವಾದ ಪದವನ್ನು ಈ ಹಿಂದಿನ ಸೋವಿಯತ್ ಹಿನ್ನೆಲೆ ನೋಡಬಾರದು ಈಗಾಗಲೇ ಸಂವಿಧಾನದ ಭಾಗ 4 ರಲ್ಲಿ ರಾಜ್ಯ ನಿರ್ದೇಶಕ ತತ್ವ ಹೇಳಲಾಗಿದೆ. ಇವುಗಳಲ್ಲಿ ಶಿಕ್ಷಣ, ಉದ್ಯೋಗ, ವಸತಿ, ಆರೋಗ್ಯ ಮೊದಲಾದವುಗಳನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ತನ್ನ ಆರ್ಥಿಕ ನೀತಿ ರೂಪಿಸಬೇಕೆನ್ನುವುದು ಅವುಗಳ ಸಾಮಾಜಿಕ ಪ್ರಾಮುಖ್ಯತೆ ಬಿಂಬಿಸುತ್ತದೆ. ಆದ್ದರಿಂದ ಸಮಾಜವಾದವೆಂದರೆ ಸಾಮಾಜಿಕ ನ್ಯಾಯದ ಹಂಚಿಕೆಯಾಗಿದೆ. ಒಟ್ಟಾರೆ ಸಂವಿಧಾನದ ಹಿನ್ನೆಲೆ ಸಮಾಜವಾದ ಮತ್ತು ಜಾತ್ಯತೀತ ಪದಗಳನ್ನು ನೋಡಬೇಕು ಎಂದು ಹೇಳಿದರು.

ಮುಖಂಡ ಬಿಸಾಟಿ ಮಹೇಶ್ ಮಾತನಾಡಿ, ಸಂವಿಧಾನ ತಿದ್ದುಪಡಿ ಮಾಡುವ ಅಧಿಕಾರ ಸಂಸತ್ತಿಗೆ 368ನೇ ಕಲಂ ಅಡಿ ಇದೆಯಾದರೂ ಸಂವಿಧಾನವನ್ನು ತೆಗೆದುಹಾಕುವ ಇಲ್ಲವೇ ರದ್ದುಗೊಳಿಸುವ ಅಧಿಕಾರ ಸಂಸತ್ತಿಗೆ ಇಲ್ಲ ಎಂಬುದಕ್ಕೆ ನ್ಯಾಯಾಂಗದ ತೀರ್ಪುಗಳಿವೆ. ಕೇಶವಾನಂದ ಭಾರತಿ ಪ್ರಕರಣದಲ್ಲಿ ಸಂವಿಧಾನದ ಮೂಲ ರಚನೆಗಳನ್ನು ತಿದ್ದುಪಡಿ ಮಾಡುವ ಅಧಿಕಾರ ಸಂಸತ್ತಿಗೆ ಇಲ್ಲ ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಮಿನರ್ವಾ ಮಿಲ್ಸ್‌ ಪ್ರಕರಣದಲ್ಲಿ ಸಂವಿಧಾನ ತಿದ್ದುಪಡಿ ಮಾಡುವುದೆಂದರೆ ಅದನ್ನು ನಾಶ ಪಡಿಸುವುದೆಂದರ್ಥವಲ್ಲ ಎಂದು ಹೇಳಿದೆ. ಜಾತ್ಯತೀತ ಮತ್ತು ಸಮಾನತೆ ಅಂತರ್ ಸಂಬಂಧಿಯಾಗಿವೆ. ಸಮಾನತೆ ಸಂವಿಧಾನದ ಮೂಲ ರಚನೆಯಾಗಿದೆ. ಆದ್ದರಿಂದ ಜಾತ್ಯತೀತ ಪದ ತೆಗೆಯವುದೆಂದರೆ ರಾಜಕೀಯ ಸಮಾನತೆಯ ನಿರಾಕರಣೆಯಾಗಿದೆ ಎಂದರು.ಶರಣರು, ಸಂತರು, ಸೂಫಿಗಳು ಜಾತ್ಯತೀತ ಪರಂಪರೆಯನ್ನು ಭಾರತದಲ್ಲಿ ಹಾಸು ಹೊಕ್ಕಾಗುವಂತೆ ಮಾಡಿದ್ದಾರೆ. ಇಂತಹ ಪರಂಪರೆಯನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಭಾರತೀಯತೆಯೆಂದರೆ, ಕೋಮುವಾದವಲ್ಲ, ಮತೀಯವಾದವಲ್ಲ, ಧಾರ್ಮಿಕ ದ್ವೇಷವಲ್ಲ, ಬದಲಿಗೆ ಭಾರತೀಯತೆಯೆಂದರೆ ಜಾತಿ, ಮತ, ಪಂಥ, ಭಾಷೆಗಳನ್ನು ಮೀರಿದ, ಎಲ್ಲರನ್ನೊಳಗೊಂಡ ದೇಶಾಭಿಮಾನವಾಗಿದೆ. ಇಂತಹ ಧೇಯೋದ್ದೇಶಗಳನ್ನು ಹೊಂದಿರುವ ಭಾರತದ ಸಂವಿಧಾನವನ್ನು ಪ್ರತಿಯೊಬ್ಬ ಭಾರತೀಯನು ರಕ್ಷಿಸಬೇಕಾಗಿದೆ. ಈ ದಿಸೆಯಲ್ಲಿ ವಕೀಲರ ಒಕ್ಕೂಟವು ಕಾರ್ಯಕ್ರಮ ಹಮ್ಮಿಕೊಳ್ಳಲಿದೆ ಎಂದರು. ಮುಖಂಡರಾದ ಕಲ್ಯಾಣಯ್ಯ, ಕೆ.ಬಸವರಾಜ, ವೆಂಕಟೇಶುಲು, ಎ. ಮರಿಯಪ್ಪ ಮತ್ತಿತರರಿದ್ದರು.