ಫೆಂಗಲ್ ಕಾಟಕ್ಕೆ ಸಾವಿರಾರು ಎಕರೆ ರಾಗಿ ಬೆಳೆ ಹಾನಿ

| Published : Dec 03 2024, 12:34 AM IST

ಸಾರಾಂಶ

ಈ ಬಾರಿ ಉತ್ತಮ ಮಳೆಯಿಂದ ಭರ್ಜರಿ ಫಸಲು ಬಂದಿದೆ. ಈಗಾಗಲೇ ಕೊಯ್ಲು ಕಾರ್ಯ ಪ್ರಾರಂಭವಾಗಿದೆ. ಆದರೆ, ಫೆಂಗಲ್​​ ಚಂಡಮಾರುತದಿಂದ ಕಳೆದ ಮೂರು ದಿನಗಳಿಂದ ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹೊಲಗಳಲ್ಲೇ ರಾಗಿ ಬೆಳೆ ಹಾಳಾಗುತ್ತಿದೆ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಫೆಂಗಲ್ ಚಂಡಮಾರುತದಿಂದ ಕಳೆದ ಮೂರು ದಿನಗಳಿಂದ ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹೊಲದಲ್ಲೇ ರಾಗಿ ಬೆಳೆ ನೆಲಕಚ್ಚಿದ್ದು ರೈತರು ಆತಂಕಗೊಂಡಿದ್ದಾರೆ. ಜಿಲ್ಲೆಯ ಪ್ರಮುಖ ಆಹಾರ ಬೆಳೆಯಾದ ರಾಗಿ ಮಳೆಯಿಂದಾಗಿ ಪೂರ್ಣ ನಾಶವಾಗುವ ಸ್ಥಿತಿ ಉಂಟಾಗಿದೆ.

ಜಿಲ್ಲೆಯಲ್ಲಿ ಕಳೆದ ಬಾರಿ ಬಿತ್ತಿದ್ದ ರಾಗಿಯಲ್ಲಿ ಶೇ. 30 ರಷ್ಟು ಫಸಲು ಸಿಗದೆ, ಜಾನುವಾರುಗಳ ಮೇವಿಗೂ ಪರದಾಡುವಂತಾಗಿತ್ತು. ಈ ಬಾರಿ ಉತ್ತಮ ಮಳೆಯಿಂದ ಭರ್ಜರಿ ಫಸಲು ಬಂದಿದೆ. ಈಗಾಗಲೇ ಕೊಯ್ಲು ಕಾರ್ಯ ಪ್ರಾರಂಭವಾಗಿದೆ. ಆದರೆ, ಫೆಂಗಲ್​​ ಚಂಡಮಾರುತದಿಂದ ಕಳೆದ ಮೂರು ದಿನಗಳಿಂದ ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹೊಲಗಳಲ್ಲೇ ರಾಗಿ ಬೆಳೆ ಹಾಳಾಗುತ್ತಿದೆ.

ಕಟಾವಿಗೆ ಬಂದಿದ್ದ ರಾಗಿ

ಮಳೆಯಿಂದ ರಾಗಿ ಬೆಳೆ ಕಟಾವಿಗೆ ಅಡ್ಡಿಯಾಗಿದೆ. ಈಗ ರಾಗಿ ಬೆಳೆ ಕೊಯ್ಲಿಗೆ ಬಂದಿದೆ. ಕೆಲವೆಡೆ ತೆನೆ ಕೊಯ್ದು ಹೊಲದಲ್ಲಿ ರಾಶಿ ಹಾಕಲಾಗಿದೆ. ಈಗ ಮಳೆ ಬರುತ್ತಿರುವುದರಿಂದ, ರೈತರು ತೆನೆ ರಾಶಿ ಮೇಲೆ ಟಾರ್ಪಾಲು ಹೊದಿಸಿದ್ದಾರೆ. ಬೆಳೆ ಕಟಾವಾಗದ ಹೊಲಗಳಲ್ಲಿ ತೆನೆ ಉದುರುತ್ತಿದೆ. ಇನ್ನು ಕೆಲವಡೆ ರಾಗಿ ತೆನೆಯ ತುಂಬಾ ನೀರು ತುಂಬಿದ್ದು, ಈ ನೀರಿನಿಂದ ನೆನೆದ ರಾಗಿ ಮುಂದಿನ ನಾಲ್ಕೈದು ದಿನಗಳಲ್ಲಿ ತೆನೆಯಲ್ಲಿಯೇ ಮೊಳಕೆ ಯೊಡೆದು ಹಾಳಾಗಲಿದೆ.ಜಿಲ್ಲೆಯಲ್ಲಿ ಸಾವಿರಾರು ಎಕರೆಯ ರಾಗಿ ಹೊಲ ಮಳೆಗೆ ಹಾನಿಯಾಗಿದೆ. ರಾಗಿ ಹೊಲಗಳು ಮಳೆಯಿಂದ ಸಂಪೂರ್ಣ ನೆಲಕಚ್ಕಿವೆ. ಮಳೆ ನಿಂತರೆ ರಾಗಿ ಕಟಾವ್ ಕಾರ್ಯ ಪ್ರಾರಂಭವಾಗುತ್ತೆ. ಹೀಗೆ ಮಳೆ ಮುಂದುವರಿದರೆ ಅತಿಯಾದ ತೇವಾಂಶದಿಂದ ರಾಗಿ ಬೆಳೆ ಹೊಲದಲ್ಲಿಯೇ ಮೊಳಕೆ ಬರಲು ಪ್ರಾರಂಭಿಸುತ್ತದೆ.ಇದರಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ ಎಂದು ರೈತರು ಆತಂಕಗೊಂಡಿದ್ದಾರೆ. ಸದ್ಯ ರೈತರು ರಾಗಿ ಕಟಾವ್ ಮಾಡಲು ಬಿಸಿಲಿಗಾಗಿ ಎದುರು ನೋಡುತ್ತಿದ್ದಾರೆ. ಅಕ್ಟೋಬರ್ ತಿಂಗಳಾಂತ್ಯದಲ್ಲಿ ನಿರಂತರವಾಗಿ ಮಳೆ ಸುರಿದ ಕಾರಣ, ಹಲವೆಡೆ ರಾಗಿ ಪೈರು ನೆಲಕ್ಕುರುಳಿತ್ತು. ಇದು ತುಸು ಇಳುವರಿ ಕುಂಠಿತವಾಗಲು, ಹುಲ್ಲು ಹಾಳಾಗಲು ಕಾರಣವಾಯಿತು.

ರಾಗಿ ಕೊಯ್ಲಿಗೆ ಮಳೆ ಅಡ್ಡಿ

ರಾಗಿ ತೆನೆ ಒಣಗಿದ ಮೇಲೆ ರಾಗಿ ಕೊಯ್ಲಿಗೆ ರೈತರು ಮುಂದಾಗಿದ್ದರು. ಒಂದಷ್ಟು ರೈತರು ಕೊಯ್ದು ಮುಗಿಸಿದ್ದರು. ಇನ್ನೂ ಹೆಚ್ಚಿನ ರೈತರು ಕೊಯ್ದು ಮಾಡಲು ಸಿದ್ಧತೆ ಮಾಡಿಕೊಂಡಿದ್ದರು. ಈಗ ಜಡಿ ಮಳೆಯಿಂದಾಗಿ ಕೊಯ್ಲಿಗೆ ತೊಂದರೆ ಆಗಿದೆ. ಕೃಷಿ ಕಾರ್ಮಿಕರ ಕೊರತೆ ಹಾಗೂ ಲಭ್ಯವಿರುವ ಕಾರ್ಮಿಕರು ಹೆಚ್ಚು ಕೂಲಿ ಕೇಳುತ್ತಿರುವುದರಿಂದ, ಹಲವು ರೈತರು ಯಂತ್ರಗಳ ಮೊರೆ ಹೋಗಿದ್ದಾರೆ. ಆದರೂ, ಕಟಾವು ಮಾಡಿದ ರಾಗಿಯ ತೆನೆಗಳನ್ನು ಮಳೆಯಿಂದ ರಕ್ಷಿಸಿಕೊಳ್ಳುವುದೇ ರೈತರಿಗೆ ಕಷ್ಟವಾಗಿದೆ.

ತರಕಾರಿ ಬೆಳೆಗಳಿಗೂ ಹಾನಿ

ಈಗ ಸುರಿಯುತ್ತಿರುವ ಜಿಟಿ ಜಿಟಿ ಮಳೆಯಿಂದ ತೋಟಗಾರಿಕಾ ಬೆಳೆಗಳಾದ ಕ್ಯಾರೆಟ್, ಬೀಟ್‌ರೂಟ್, ಹೂಕೋಸು, ಆಲೂಗಡ್ಡೆಯೂ ಕೊಳೆಯುವ ಸ್ಥಿತಿಗೆ ಬಂದಿದೆ. ಹಿರೇಕಾಯಿ, ಹಾಗಲಕಾಯಿ, ಸೊರೇಕಾಯಿ, ಬದನೆಕಾಯಿ ಮತ್ತು ಬೀನ್ಸ್‌ಗೆ ರೋಗಬಾಧೆ ತಟ್ಟುವ ಆತಂಕ ಎದುರಾಗಿದೆ. ಸೊಪ್ಪುಗಳಂತು ತೋಟಗಳಲ್ಲಿಯೇ ಸಂಪೂರ್ಣ ಕೊಳೆಯುತ್ತಿವೆ. ದ್ರಾಕ್ಷಿ, ದಾಳಿಂಬೆ ಬೆಳೆಗಾರರ ಪಾಡಂತೂ ಹೇಳತೀರದಾಗಿದೆ. ತಂಪಾದ ವಾತಾವರಣ ಇರುವುದರಿಂದ ಔಷಧ ಸಿಂಪಡಣೆಗೂ ಅಡ್ಡಿಯಾಗುತ್ತಿದೆ. ಹೂವಿನ ತೋಟಗಳು ಜಲಮಯವಾಗಿದ್ದು, ಗುಲಾಭಿ, ಸೇವಂತಿ, ಚೆಂಡು ಹೂವು ಬೆಳೆ ಮಳೆಯಿಂದ ನಾಶವಾಗಿವೆ.

ಜಿಲ್ಲೆಯಲ್ಲಿ ಅಧಿಕಾರಿಗಳ ಪರಿಶೀಲನೆ ಬಳಿಕವಷ್ಟೇ ರಾಗಿ ಬೆಳೆ ಹಾನಿ ನಷ್ಟದ ಪ್ರಮಾಣ ತಿಳಿಯಲಿದೆ. ಮಾಡಿದ ಬಳಿಕವಷ್ಟೇ ಫೆಂಗಲ್ ಚಂಡಮಾರುತದಿಂದಾಗಿ ಮಳೆಗೆ ತಮಿಳುನಾಡು, ಆಂಧ್ರಪ್ರದೇಶ ಹಾಗೂ ರಾಜ್ಯದ ಹಲವು ಜಿಲ್ಲೆಗಳು ನಲುಗಿವೆ.