- ಸಂಪುಟ ವಿಸ್ತರಣೆಯಲ್ಲಿ ಎಸ್ಸೆಸ್ಸೆಂಗೆ ಸಚಿವಪಟ್ಟ: ಎಚ್.ಬಿ.ಮಂಜಪ್ಪ, ದಿನೇಶ ಕೆ.ಶೆಟ್ಟಿ ವಿಶ್ವಾಸ
- - -ದಾವಣಗೆರೆ: ಬೆಂಗಳೂರಿನ ಅರಮನೆ ಮೈದಾನದಲ್ಲಿ ಜೂ.21ರಂದು ಕೆಪಿಸಿಸಿ ನೂತನ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಅಧಿಕಾರ ಸ್ವೀಕಾರ ಸಮಾರಂಭಕ್ಕೆ ದಾವಣಗೆರೆ ಜಿಲ್ಲೆಯಿಂದ ಸಾವಿರಾರು ಮುಖಂಡರು, ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ, ಬಯಲುಸೀಮೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್.ಬಿ. ಮಂಜಪ್ಪ ತಿಳಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಸಚಿವ ಎಸ್‌ಎಸ್ ಮಲ್ಲಿಕಾರ್ಜುನ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಸೇರಿದಂತೆ ಜಿಲ್ಲೆಯ ಹಾಲಿ- ಮಾಜಿ ಶಾಸಕರು, ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ ಎಂದರು.ಜಿಲ್ಲೆಯ ಎಲ್ಲ ಹಂತದ ಜನಪ್ರತಿನಿಧಿಗಳು, ಪಾಲಿಕೆ ಮಾಜಿ ಸದಸ್ಯರು, ಬ್ಲಾಕ್ ಅಧ್ಯಕ್ಷರು, ವಿವಿಧ ಅಂಗ ಸಂಸ್ಥೆಗಳ ಪದಾಧಿಕಾರಿಗಳು, ಗ್ಯಾರಂಟಿ ಸಮಿತಿ ಪದಾಧಿಕಾರಿಗಳು ಸೇರಿದಂತೆ ದಾವಣಗೆರೆ ಲೋಕಸಭಾ ಕ್ಷೇತ್ರದ ಎಲ್ಲ ವಿಧಾನಸಭಾ ಕ್ಷೇತ್ರಗಳಿಂದಲೂ ಅಪಾರ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಬೆಂಗಳೂರಿನ ಸಮಾರಂಭಕ್ಕೆ ತೆರಳುವರು ಎಂದು ಹೇಳಿದರು.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ನೇತೃತ್ವದ ನೂತನ ಸಚಿವ ಸಂಪುಟದಲ್ಲಿ ಎಸ್.ಎಸ್. ಮಲ್ಲಿಕಾರ್ಜುನ ಅವರಿಗೆ ಸಚಿವ ಸ್ಥಾನ ಸಿಗುವ ವಿಶ್ವಾಸವಿದೆ. ಸಂಪುಟ ವಿಸ್ತರಣೆಯಲ್ಲಿ 3-4 ಸಲ ಸಚಿವರಾದ ಎಸ್.ಎಸ್. ಮಲ್ಲಿಕಾರ್ಜುನರಿಗೆ ಸಚಿವಪಟ್ಟ ನಿಶ್ಚಿತ. ನಮ್ಮ ಜಿಲ್ಲೆಗೆ ಎರಡು ಸಚಿವ ಸ್ಥಾನ ಕೊಟ್ಟರೂ ನಮಗೆ ಸಂತೋಷ. ಅಂತಿಮವಾಗಿ ತೀರ್ಮಾನವು ಹೈಕಮಾಂಡ್‌ಗೆ ಬಿಟ್ಟಿದ್ದು ಎಂದು ಅವರು ತಿಳಿಸಿದರು.
ಬಯಲುಸೀಮೆ ಅಭಿವೃದ್ಧಿ ಮಂಡಳಿ ಕಾರ್ಯದರ್ಶಿ ಮನೆ, ಕಚೇರಿ ಮೇಲೆ ಲೋಕಾಯುಕ್ತ ದಾಳಿ ಆದ ವಿಚಾರ ಈಗಷ್ಟೇ ತಮ್ಮ ಗಮನಕ್ಕೆ ಬಂದಿದೆ. ಮಂಡಳಿ ಅಧ್ಯಕ್ಷನಾಗಿ 4 ತಿಂಗಳ ಹಿಂದಷ್ಟೇ ತಾವು ಅಧಿಕಾರ ವಹಿಸಿಕೊಂಡಿದ್ದು, ದಾಳಿ ಬಗ್ಗೆ ನನಗೆ ಈಗ ತಾನೇ ಮಾಧ್ಯಮಗಳಿಂದ ತಿಳಿಯಿತು. ಆ ಅಧಿಕಾರಿ ಹಿಂದೆ ಜಿಪಂನಲ್ಲಿ ಎಇಇ ಆಗಿದ್ದರು. ಮಂಡಳಿಯಲ್ಲಿ ನನಗಿಂತಲೂ ಮುಂಚೆಯಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಮಂಡಳಿ ಅಧ್ಯಕ್ಷರೂ ಆದ ಎಚ್.ಬಿ.ಮಂಜಪ್ಪ ಪ್ರತಿಕ್ರಿಯಿಸಿದರು.
ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ದೂಡಾ ಅಧ್ಯಕ್ಷ ದಿನೇಶ ಕೆ.ಶೆಟ್ಟಿ, ಉತ್ತರ ಅಧ್ಯಕ್ಷ ಕೆ.ಜಿ.ಶಿವಕುಮಾರ, ದಕ್ಷಿಣ ಅಧ್ಯಕ್ಷ ಅಯೂಬ್ ಪೈಲ್ವಾನ್, ಮಾಜಿ ಮೇಯರ್‌ಗಳಾದ ಕೆ.ಚಮನ್ ಸಾಬ್, ಅನಿತಾ ಬಾಯಿ ಮಾಲತೇಶ, ಪಾಲಿಕೆ ಮಾಜಿ ಸದಸ್ಯ ಎ.ನಾಗರಾಜ, ಎಂ.ಕೆ. ಲಿಯಾಖತ್ ಅಲಿ, ಮಂಜುಳಮ್ಮ, ಗ್ಯಾರಂಟಿ ಸಮಿತಿಯ ಎಸ್.ಎಸ್.ಗಿರೀಶ, ಸುರೇಶ ಜಾಧವ್ ಇತರರು ಇದ್ದರು.- - -
-16ಕೆಡಿವಿಜಿ10: