ಸಾರಾಂಶ
ಪಟ್ಟಣದ ಶ್ರೀ ರಂಗನಾಥಸ್ವಾಮಿ ದೇವಾಲಯ ಹಾಗೂ ತಾಲೂಕಿನ ಕರೀಘಟ್ಟದಲ್ಲಿನ ಶ್ರೀ ವೆಂಕಟರಮಣ ಸ್ವಾಮಿ ದೇವಾಲಯದಲ್ಲಿ ಬೆಳಗ್ಗೆಯಿಂದಲೇ ಅರ್ಚಕರು ದೇವರಿಗೆ ಹೋಮ, ಹವನ, ಅಭಿಷೇಕ, ನೈವೇದ್ಯ ಸೇರಿದಂತೆ ವಿಶೇಷ ಪೂಜಾ ಕೈಂಕರ್ಯಗಳನ್ನು ನಡೆಸಿ, ವಿವಿಧ ಬಗೆಯ ಹೂಗಳಿಂದ ಅಲಂಕರಿಸಿದ್ದರು. ನಂತರ ಮಹಾಮಂಗಳಾರತಿ ನೆರವೇರಿಸಿ ತೀರ್ಥ ಪ್ರಸಾದ ವಿತರಣೆ ಮಾಡಿದರು.
ಚಿಕ್ಕತಿರುಪತಿ ಕರೀಘಟ್ಟದ ಶ್ರೀ ವೆಂಕಟರಮಣ ಸ್ವಾಮಿಗೂ ಪೂಜೆ ಸಲ್ಲಿಕೆ
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ಶ್ರೀರಂಗನಾಥನ ದರ್ಶನಕ್ಕೆ ಭಕ್ತರ ಮಹಾಪೂರವೇ ಹರಿದು ಬಂದು ಬೆಳಗ್ಗೆಯಿಂದ ಸಂಜೆವರೆಗೆ ದೇವರ ದರ್ಶನ ಪಡೆದರು.
ಪಟ್ಟಣದ ಶ್ರೀ ರಂಗನಾಥಸ್ವಾಮಿ ದೇವಾಲಯ ಹಾಗೂ ತಾಲೂಕಿನ ಕರೀಘಟ್ಟದಲ್ಲಿನ ಶ್ರೀ ವೆಂಕಟರಮಣ ಸ್ವಾಮಿ ದೇವಾಲಯದಲ್ಲಿ ಬೆಳಗ್ಗೆಯಿಂದಲೇ ಅರ್ಚಕರು ದೇವರಿಗೆ ಹೋಮ, ಹವನ, ಅಭಿಷೇಕ, ನೈವೇದ್ಯ ಸೇರಿದಂತೆ ವಿಶೇಷ ಪೂಜಾ ಕೈಂಕರ್ಯಗಳನ್ನು ನಡೆಸಿ, ವಿವಿಧ ಬಗೆಯ ಹೂಗಳಿಂದ ಅಲಂಕರಿಸಿದ್ದರು. ನಂತರ ಮಹಾಮಂಗಳಾರತಿ ನೆರವೇರಿಸಿ ತೀರ್ಥ ಪ್ರಸಾದ ವಿತರಣೆ ಮಾಡಿದರು.ದೇವಾಲಯದ ಮುಖ್ಯ ಅರ್ಚಕ ವಿಜಯಸಾರಥಿ ನೇತೃತ್ವದಲ್ಲಿ ಪೂಜಾ ಕಾರ್ಯಗಳ ನಂತರ ಭಕ್ತರಿಗೆ ಒಳ ಪ್ರವೇಶಕ್ಕೆ ಅವಕಾಶ ಮಾಡಲಾಗಿತ್ತು. ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದ ಭಕ್ತರು, ತಮ್ಮ ಇಷ್ಟಾರ್ಥಗಳನ್ನು ನೆರವೇರಿಸುವಂತೆ ವಿಶೇಷ ಪೂಜೆ ಸಲ್ಲಿಸಿದರು.
ಬೆಳಗ್ಗೆ ತಿರುವಳಾರ ಪೂಜೆ ಹಾಗೂ ಸಂಜೆ ಸಮಯದಲ್ಲಿ ಏಕಾದಶಿ ಪೂಜೆಯನ್ನು ವಿಶೇಷವಾಗಿ ನೆರವೇರಿಸಲಾಯಿತು. ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ತಂಡೋಪತಂಡವಾಗಿ ಸಾವಿರಾರು ಭಕ್ತರು ಆಗಮಿಸಿ ಪೂಜೆ ಸಲ್ಲಿಸಿ ಭಕ್ತಿ ಮೆರೆದರು.ಚಿಕ್ಕತಿರುಪತಿ ಎಂದೇ ಹೆಸರಾದ ಕರೀಘಟ್ಟ ಶ್ರೀವೆಂಕಟರಮಣಸ್ವಾಮಿ ದೇವಾಲಯದಲ್ಲೂ ಸಹ ವಿಶೇಷ ಪೂಜೆ ನೆರವೇರಿಸಲಾಗಿತ್ತು. ಸಾವಿರಾರು ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು. ದೇವಾಲಯದ ಇಒ ಉಮಾ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದು, ಹಿರಿಯ ಅಧಿಕಾರಿಗಳು ಹಾಗೂ ವಿವಿಧ ಗಣ್ಯರು ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.