ಕೊಟ್ಟೂರು: ಬಾಯಾರಿ ಬಂದವರಿಗೆ ಎಳನೀರು, ಐಸ್, ಶರಬತ್ತು, ಶುದ್ಧ ನೀರು, ಹಸಿದವರಿಗೆ ಮೃಷ್ಟಾನ್ನ ಭೋಜನ, ತಿನಿಸು. ಬಳಲಿ ಬೆಂಡಾದವರಿಗೆ ಶುಶ್ರೂಷೆ, ವಿಶ್ರಾಂತಿಗೆ ಹಾಸಿಗೆ.... ಇದು ಕೊಟ್ಟೂರೇಶ್ವರ ಸ್ವಾಮಿಯ ರಥೋತ್ಸವನ್ನು ಕಣ್ತುಂಬಿಸಿಕೊಳ್ಳಲು ಬುಧವಾರ ಪಟ್ಟಣಕ್ಕೆ ಪಾದಯಾತ್ರೆ ಮೂಲಕ ಆಗಮಿಸುತ್ತಿರುವ ಭಕ್ತರಿಗೆ ಕೊಟ್ಟೂರು ನಾಗರಿಕರು ಸಲ್ಲಿಸುತ್ತಿರುವ ಸೇವೆಯ ಪರಿ ಇದು.ಗುರುವಾರ ನಡೆಯಲಿರುವ ಕೊಟ್ಟೂರೇಶ್ವರ ಸ್ವಾಮಿಯ ರಥೋತ್ಸವದಲ್ಲಿ ಪಾಲ್ಗೊಳ್ಳಲೆಂದೇ ದಾವಣಗೆರೆಯಿಂದ ಒಂದು ಲಕ್ಷಕ್ಕೂ ಅಧಿಕ ಭಕ್ತರು ಪಾದಯಾತ್ರೆ ಮೂಲಕ ಬುಧವಾರ ಆಗಮಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿದರು. ಪ್ರತಿವರ್ಷದ ಸ್ವಾಮಿಯ ರಥೋತ್ಸವಕ್ಕೆ ದಾವಣಗೆರೆಯಿಂದ ಪಾದಯಾತ್ರಿಗಳು ಅಧಿಕ ಸಂಖ್ಯೆಯಲ್ಲಿ ಬರುವುದು ಕಳೆದ ೩೭ ವರ್ಷಗಳಿಂದ ನಿರಂತರವಾಗಿ ನಡೆದುಕೊಂಡು ಬಂದಿದೆ. ಈ ವರ್ಷ ಈ ಸಂಖ್ಯೆ ಲಕ್ಷಕ್ಕೂ ಹೆಚ್ಚು ದಾಟಿದ್ದು, ಧಾರ್ಮಿಕ ರಂಗದಲ್ಲಿ ಗಮನ ಸೆಳೆಯುವಂತಹ ಸಂಗತಿ.

ತುಮಕೂರು, ಚಿತ್ರದುರ್ಗ, ಶಿವಮೊಗ್ಗ, ಹುಬ್ಬಳ್ಳಿ, ಹಾಸನ, ಮುಂಡರಗಿ, ಗದಗ, ರಾಣಿಬೆನ್ನೂರು, ಹಾವೇರಿ, ಬ್ಯಾಡಗಿ, ಕೊಪ್ಪಳ, ಚಿತ್ರದುರ್ಗ,ಹೊಸಪೇಟೆ, ಹರಪನಹಳ್ಳಿ, ಹರಿಹರ, ಮತ್ತಿತರ ಕಡೆಗಳಿಂದಲೂ ಭಕ್ತರು ಪಾದಯಾತ್ರೆಯ ಮೂಲಕ ಆಗಮಿಸುವುದು ಮಂಗಳವಾರ ಮಧ್ಯರಾತ್ರಿಯಿಂದಲೇ ನಡೆದಿದೆ. ಈ ಸಂಖ್ಯೆ ಬುಧವಾರದ ಮಧ್ಯಾಹ್ನದ ವೇಳೆಗೆ ಮತ್ತಷ್ಟು ಅಧಿಕವಾಗತೊಡಗಿದೆ. ಈ ಬಗೆಯ ಪಾದಯಾತ್ರೆಯ ಮೂಲಕ ಆಗಮಿಸುವವರನ್ನು ಸ್ವಾಗತಿಸಲೆಂದು ಪಟ್ಟಣದ ವಿವಿಧ ವರ್ಗದ ಮತ್ತು ಸಂಘ ಸಂಸ್ಥೆಗಳ ಜನತೆ ಟೊಂಕಕಟ್ಟಿ ನಿಂತು ಅವರುಗಳ ಸೇವೆ ನೀಡುವಲ್ಲಿ ಒಬ್ಬರಿಗಿಂತ ಒಬ್ಬರು ಮೇಲೆಂಬತೆ ನಿರಂತರ ತೊಡಗಿಸಿಕೊಂಡಿದ್ದಾರೆ.

ಧಾರ್ಮಿಕ ಕ್ರಿಯೆ ಮತ್ತು ಭಕ್ತರ ಸಮ್ಮಿಲನದಿಂದಾಗಿ ಪಟ್ಟಣದಲ್ಲಿ ಎಲ್ಲಿ ನೋಡಿದರಲ್ಲಿ ಜನಜಂಗುಳಿ ಸಡಗರ ಸಂಭ್ರಮಗಳೊಂದಿಗೆ ಭಕ್ತಿ ಪರಾಕಾಷ್ಠೆಯಲ್ಲಿ ಮಿಂದೇಳುತ್ತಿದ್ದುದು ಕಂಡು ಬಂದಿತು.