'ಕಾಂಗ್ರೆಸ್ ನಿಂದಲೂ ಅನೇಕ ನಾಯಕರು ಬಿಜೆಪಿಗೆ ಸೇರ್ಪಡೆ'

| Published : Apr 18 2024, 02:27 AM IST / Updated: Apr 18 2024, 12:32 PM IST

ಸಾರಾಂಶ

ಚುನಾವಣೆ ಸಂದರ್ಭದಲ್ಲಿ ಟಿಕೆಟ್ ಸಿಗದವರು ಬೇಸರ ಮಾಡಿಕೊಳ್ಳುವುದು ಸಹಜ. ಕಾಂಗ್ರೆಸ್ ನಿಂದಲೂ ಅನೇಕ ನಾಯಕರು ಬಿಜೆಪಿಗೆ ಸೇರ್ಪಡೆ ಆಗುತ್ತಿದ್ದಾರೆ.

ಗದಗ: ಏ. 19 ರಂದು ಹಾವೇರಿ ಕ್ಷೇತ್ರದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಲಿದ್ದು, ಅಂದು ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲ ವಿಧಾನಸಭಾ ಕ್ಷೇತ್ರಗಳಿಂದ ಸಾವಿರಾರು ಜನರು ಬರುವ ನಿರೀಕ್ಷೆ ಇದೆ ಎಂದು ಮಾಜಿ ಮುಖ್ಯಮಂತ್ರಿ, ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದರು.

ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾವು ಎಂಟು ಕ್ಷೇತ್ರದ ಜನರು, ಕಾರ್ಯಕರ್ತರಿಗೆ ಬರಲು ಸೂಚನೆ ನೀಡಿದ್ದೇವೆ. ಸಾವಿರಾರು ಜನರು ಬರುತ್ತಾರೆ. ಅಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಪ್ರತಿಪಕ್ಷದ ನಾಯಕ ಆರ್. ಅಶೋಕ್, ಮಾಜಿ ಸಚಿವರಾದ ಬೈರತಿ ಬಸವರಾಜ, ಮುರುಗೇಶ್ ನಿರಾಣಿ ಬರಲಿದ್ದಾರೆ ಎಂದರು.

ಇದೇ ವೇಳೆ ಸಂಸದ ಕರಡಿ ಸಂಗಣ್ಣ ಬಿಜೆಪಿ ತೊರೆದಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸಂಗಣ್ಣ ಕಾಂಗ್ರೆಸ್ ಸೇರ್ಪಡೆ ಆಗುತ್ತಿರುವುದು ದುರದುಷ್ಟಕರ, ನಾವು ಅವರ ಮನವೊಲಿಸುವ ಕೆಲಸ ಮಾಡಿದ್ದೇವು ಕಾಂಗ್ರೆಸ್ ನವರು ಅವರಿಗೆ ಪ್ರಚೋದನೆ ಮಾಡಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಟಿಕೆಟ್ ಸಿಗದವರು ಬೇಸರ ಮಾಡಿಕೊಳ್ಳುವುದು ಸಹಜ. ಇದು ರಾಷ್ಟ್ರೀಯ ಚುನಾವಣೆ, ರಾಷ್ಟ್ರೀಯ ವಿಚಾರಗಳ ಮೇಲೆ ಆಗಿರುವುದರಿಂದ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದು ಹೇಳಿದರು.

ಕಾಂಗ್ರೆಸ್ ನಿಂದಲೂ ಅನೇಕ ನಾಯಕರು ಬಿಜೆಪಿಗೆ ಸೇರ್ಪಡೆ ಆಗುತ್ತಿದ್ದಾರೆ. ಬೆಳ್ಳಟ್ಟಿ ಗ್ರಾಮದಲ್ಲಿ ನೂರಾರು ಜನರು ಬಿಜೆಪಿ ಸೇರ್ಪಡೆಯಾಗಿದ್ದಾರೆ. ಸ್ಥಳೀಯವಾಗಿ ಸಣ್ಣಪುಟ್ಟ ಭಿನ್ನಾಭಿಪ್ರಾಯ ಇದ್ದರೂ ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗುವ ಕೆಲಸ ಮಾಡುತ್ತೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ರಾಜು ಕುರುಡಗಿ ಮುಂತಾದವರು ಹಾಜರಿದ್ದರು.

ಚುನಾವಣೆಯ ಕಾವಿನ ನಡುವೆ ಬಿಸಿಲು ಹೆಚ್ಚಾಗಿದ್ದು, ಗುರುವಾರ ಗದಗನಲ್ಲಿ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಸ್ಟೇಷನ್ ರಸ್ತೆಯಲ್ಲಿರುವ ಕೂಲ್ಡ್ರಿಂಕ್ಸ್ ಅಂಗಡಿಗೆ ತೆರಳಿ ಐಸ್ ಕ್ರೀಂ ತಿಂದು ಜ್ಯೂಸ್ ಕುಡಿದರು. ಈ ಸಂದರ್ಭದಲ್ಲಿ ಅಂಗಡಿಯಲ್ಲಿದ್ದ ಸಾರ್ವಜನಿಕರನ್ನು ಭೇಟಿ ಮಾಡಿ ಕುಶಲೋಪರಿ ವಿಚಾರಿಸಿ, ಚರ್ಚಿಸಿದರು.